ಥಿಯೇಟರ್‌ನಲ್ಲಿ ಬಿಡುಗಡೆಯಾದಾಗ ಸಾಕಷ್ಟು ವಿವಾದಗಳಿಗೆ ಕಾರಣವಾಗಿದ್ದ ‘ಆದಿಪುರುಷ್‌’ ಹಿಂದಿ ಸಿನಿಮಾ ಇದೀಗ Netflixನಲ್ಲಿ ಸ್ಟ್ರೀಮ್‌ ಆಗುತ್ತಿದೆ. ರಾಮಾಯಣ ಆಧರಿಸಿದ ಚಿತ್ರದಲ್ಲಿ ಪ್ರಭಾಸ್‌, ಕೃತಿ ಸನೂನ್‌ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

ಮಹಾಪುರಾಣ ರಾಮಾಯಣ ಆಧರಿಸಿ ಓಂರಾವುತ್‌ ನಿರ್ದೇಶಿಸಿದ್ದ ‘ಆದಿಪುರುಷ್‌’ ಥಿಯೇಟರ್‌ನಲ್ಲಿ ತೆರೆಕಂಡಾಗ ಸಾಕಷ್ಟು ವಿವಾದಗಳಿಗೆ ಕಾರಣವಾಗಿತ್ತು. ಅಗ್ಗದ VFX, ಕಳಪೆ ಸಂಭಾಷಣೆ ಎಂದು ಸಿನಿಮಾ ವಿಶ್ಲೇಷಕರು ಹಾಗೂ ಖ್ಯಾತನಾಮರು ಆಕ್ಷೇಪ ವ್ಯಕ್ತಪಡಿಸಿದ್ದರು. ಬಾಕ್ಸ್‌ ಆಫೀಸ್‌ನಲ್ಲಿ ನೆಲಕಚ್ಚಿದ್ದ ಸಿನಿಮಾ ನಿನ್ನೆಯಿಂದ (ಆಗಸ್ಟ್‌ 11) Netflixನಲ್ಲಿ ಸ್ಟ್ರೀಮ್‌ ಆಗುತ್ತಿದೆ. ಮೂಲ ಹಿಂದಿ ಸೇರಿದಂತೆ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಡಬ್ಬಿಂಗ್‌ ಅವತರಣಿಕೆಗಳು ವೀಕ್ಷಕರಿಗೆ ಲಭ್ಯವಿವೆ. ಚಿತ್ರವು ಶ್ರೀರಾಮನ ವನವಾಸ, ಸೀತಾಪಹರಣ ಮತ್ತು ಲಂಕೆಗೆ ಸೇತುವೆಯ ನಿರ್ಮಾಣ, ರಾವಣನ ಸಂಹಾರ, ಹನುಮಂತನ ಸಾಹಸಗಾಥೆ, ಯುದ್ದದ ಹಲವು ಸನ್ನಿವೇಶಗಳನ್ನು ಒಳಗೊಂಡಿದೆ. ಚಿತ್ರ ನ್ಯೂಯಾರ್ಕ್‌ನ ‘ಟ್ರಿಬೆಕಾ ಫಿಲ್ಮ್ ಫೆಸ್ಟಿವಲ್‌’ನಲ್ಲಿ ಪ್ರಥಮ ಪ್ರದರ್ಶನ ಕಂಡಿತ್ತು. ಭೂಷಣ್ ಕುಮಾರ್, ಓಂ ರಾವುತ್, ಪ್ರಸಾದ್ ಸುತಾರ್ ಮತ್ತು ರಾಜೇಶ್ ನಾಯರ್ ತಮ್ಮ T- Series ಮತ್ತು Retrophiles ಬ್ಯಾನರ್‌ ಅಡಿ ಸಿನಿಮಾ ನಿರ್ಮಿಸಿದ್ದಾರೆ.

ಓಂ ರಾವುತ್ ನಿರ್ದೇಶನದ ಈ ಚಿತ್ರದಲ್ಲಿ ಪ್ರಭಾಸ್ ರಾಮನಾಗಿ, ಕೃತಿ ಸನೂನ್‌ ಸೀತೆಯಾಗಿ, ಸನ್ನಿ ಸಿಂಗ್ ಲಕ್ಷ್ಮಣನಾಗಿ, ಸೈಫ್ ಅಲಿ ಖಾನ್ ಲಂಕಾಧಿಪತಿ ರಾವಣನಾಗಿ ಮತ್ತು ದೇವದತ್ತ ಹನುಮಂತನಾಗಿ ನಟಿಸಿದ್ದಾರೆ. ವತ್ಸಲ್ ಶೇಠ್ (ಇಂದ್ರಜಿತ್), ಸೋನಲ್ ಚೌಹಾಣ್ (ಮಂಡೋದರಿ), ಸಿದ್ಧಾಂತ್ ಕಾರ್ಣಿಕ್ (ವಿಭೀಷಣ) ಕೃಷ್ಣ ಕೋಟ್ಯಾನ್ (ದಶರಥ) ಚಿತ್ರದ ಇತರೆ ಪ್ರಮುಖ ಪಾತ್ರಧಾರಿಗಳು. ವರ್ಷದ ಅತಿ ದೊಡ್ಡ ಚಿತ್ರಗಳಲ್ಲಿ ಒಂದಾದ ಈ ಸಿನಿಮಾ ಜೂನ್ 23ರಂದು ಪ್ರಪಂಚದಾದ್ಯಂತ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿತ್ತು.

Previous articleರಾಷ್ಟ್ರಗೀತೆಗೆ ಸ್ಪೆಷಲ್‌ ಟ್ಯೂನ್‌ | ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತ ರಿಕ್ಕಿ ಕೇಜ್‌ ಪ್ರಯೋಗ
Next articleರೋಹಿತ್‌ ಶೆಟ್ಟಿ ‘Singham Again’ | ದೇವಗನ್‌ ಸಹೋದರಿಯಾಗಿ ದೀಪಿಕಾ ಪಡುಕೋಣೆ

LEAVE A REPLY

Connect with

Please enter your comment!
Please enter your name here