ಖ್ಯಾತ ಹಿಂದಿ ತಾರೆ ಅಮಿತಾಭ್ ಬಚ್ಚನ್ ಚೊಚ್ಚಲ ಸಿನಿಮಾ ‘ಸಾಥ್ ಹಿಂದೂಸ್ತಾನಿ’ ತೆರೆಕಂಡು ಇಂದಿಗೆ (ನವೆಂಬರ್ 07) 52 ವರ್ಷ. ಹಿರಿಯ ನಟ ಇನ್ಸ್ಟಾಗ್ರಾಮ್ನಲ್ಲಿ ತಮ್ಮ ಮೊದಲ ಸಿನಿಮಾದ ಫೋಟೋ ಹಾಕಿ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
ಕಳೆದ ಐದು ದಶಕಗಳಿಂದ ನಟಿಸುತ್ತಿರುವ ಅಮಿತಾಭ್ ಬಚ್ಚನ್ ಹಿಂದಿ ಚಿತ್ರರಂಗ ಕಂಡ ಅಪರೂಪದ ಕಲಾವಿದ. ಎಪ್ಪತ್ತರ ದಶಕದ ಸೂಪರ್ಸ್ಟಾರ್. ‘ಸಾಥ್ ಹಿಂದೂಸ್ತಾನಿ’ (1969) ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾದ ಬಚ್ಚನ್ ಮುಂದೆ ಬಾಲಿವುಡ್ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದರು. ಅವರ ಸಿನಿಮಾ ಅಭಿಯಾನಕ್ಕೆ ಮುನ್ನುಡಿ ಬರೆದ ‘ಸಾಥ್ ಹಿಂದೂಸ್ತಾನಿ’ ಸಿನಿಮಾ ತೆರೆಕಂಡು ಇಂದಿಗೆ (ನವೆಂಬರ್ 07) ಐವತ್ತೆರೆಡು ವರ್ಷ. ಅಮಿತಾಬ್ ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ನಲ್ಲಿ, “1969ರ ಫೆಬ್ರವರಿ 15ರಂದು ಮೊದಲ ಸಿನಿಮಾ ‘ಸಾಥ್ ಹಿಂದೂಸ್ತಾನಿ’ಗೆ ಸಹಿ ಹಾಕಿದ್ದೆ. 1969ರ ನವೆಂಬರ್ 07ರಂದು ಸಿನಿಮಾ ತೆರೆಕಂಡಿತ್ತು. ಇಂದಿಗೆ ಸಿನಿಮಾ ತೆರೆಕಂಡು 52 ವರ್ಷ!” ಎಂದು ಬರೆದಿದ್ದಾರೆ. ಅವರ ಪೋಸ್ಟ್ಗೆ ಅಭಿಮಾನಿಗಳು ಹಾಗೂ ಬಾಲಿವುಡ್ನ ಕೆಲ ತಾರೆಯರು ಪ್ರೀತಿಯ ಕಾಮೆಂಟ್ಗಳನ್ನು ಹಾಕಿದ್ದಾರೆ.
‘ಸಾಥ್ ಹಿಂದೂಸ್ತಾನಿ’ ಚಿತ್ರದಲ್ಲಿ ಅಮಿತಾಭ್ ಬಚ್ಚನ್, ಮಧು, ಉತ್ಪಲ್ ದತ್, ಅನ್ವರ್ ಅಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಪೋರ್ಚುಗೀಸ್ ಒಡೆತನದಲ್ಲಿದ್ದ ಗೋವಾವನ್ನು ಸ್ವತಂತ್ರಗೊಳಿಸುವ ಏಳು ವೀರ ಭಾರತೀಯ ಕತೆಯಿದು. ಖ್ವಾಜಾ ಅಹ್ಮದ್ ಅಬ್ಬಾಸ್ ಚಿತ್ರ ನಿರ್ದೇಶಿಸಿದ್ದರು. ಈ ಚಿತ್ರದ ನಂತರ ‘ಆನಂದ್’ ಚಿತ್ರದಲ್ಲಿ ವೈದ್ಯನ ಪಾತ್ರ ನಿರ್ವಹಿಸಿದ ಬಚ್ಚನ್ ಚಿತ್ರಪ್ರೇಮಿಗಳಿಗೆ ಆಪ್ತರಾದರು. ಮುಂದೆ ‘ಜಂಜೀರ್’ (1973) ಅವರ ವೃತ್ತಿ ಬದುಕಿಗೆ ದೊಡ್ಡ ತಿರುವು ನೀಡಿತು. ಸದ್ಯ ಬಚ್ಚನ್ ತಮ್ಮ ವಯಸ್ಸಿಗೊಪ್ಪುವ ವಿಶಿಷ್ಟ ಕತೆಗಳಲ್ಲಿ ನಟಿಸುತ್ತಿದ್ದಾರೆ. ಅವರ ನಿರೂಪಣೆಯ ಜನಪ್ರಿಯ ‘ಕೌನ್ ಬನೇಗಾ ಕರೋಡ್ಪತಿ’ ಕ್ವಿಝ್ ಶೋನ ಹದಿಮೂರನೇ ಸೀಸನ್ ಮೂಡಿಬರುತ್ತಿದೆ.