ಬಾಬ್ಬಿ ನಿರ್ದೇಶನದಲ್ಲಿ ನಟ ಚಿರಂಜೀವಿ ಅವರ 154ನೇ ಸಿನಿಮಾ ಸೆಟ್ಟೇರಲಿದೆ. ಚಿತ್ರದ ಶೀರ್ಷಿಕೆಯಿನ್ನೂ ನಿಗದಿಯಾಗಿಲ್ಲ. ಫಸ್ಟ್‌ಲುಕ್ ಬಿಡುಗಡೆಯಾಗಿದ್ದು, ಚಿರಂಜೀವಿ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

“ನಾನು ಬಹುವರ್ಷಗಳಿಂದ ಎದುರು ನೋಡುತ್ತಿದ್ದ ಸಮಯ ಕೊನೆಗೂ ಬಂದಿದೆ. ನನ್ನ ಆಲ್‌ಟೈಂ ಫೇವರೆಟ್‌ ಹೀರೋ ಚಿರಂಜೀವಿ ಅವರನ್ನು ನಿರ್ದೇಶಿಸಲಿದ್ದೇನೆ” ಎಂದು ನಿರ್ದೇಶಕ ಬಾಬ್ಬಿ ಹೊಸ ಸಿನಿಮಾದ ಫಸ್ಟ್‌ಲುಕ್ ಪೋಸ್ಟರ್‌ನೊಂದಿಗೆ ಟ್ವೀಟ್ ಮಾಡಿದ್ದಾರೆ. ತೆಲುಗು ಮೆಗಾಸ್ಟಾರ್ ಚಿರಂಜೀವಿ ಅವರ 154ನೇ ಚಿತ್ರವನ್ನು ಅವರು ನಿರ್ದೇಶಿಸಲಿದ್ದು, ದೇವಿಶ್ರೀ ಪ್ರಸಾದ್ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರದ ಇತರೆ ತಂತ್ರಜ್ಞರು ಹಾಗೂ ಕಲಾವಿದರ ಬಗ್ಗೆ ಸದ್ಯದಲ್ಲೇ ಮಾಹಿತಿ ಹೊರಬೀಳಲಿದೆ. ಲೈಟರ್‌ನಲ್ಲಿ ಬೀಡಿ ಹೊತ್ತಿಸುತ್ತಿರುವ, ಕೊರಳಿಗೆ ಚೈನ್‌, ಮುಂಗೈಗೆ ಬ್ರೇಸ್‌ಲೆಟ್‌ ತೊಟ್ಟ ಚಿರಂಜೀವಿ ಮಾಸ್‌ ಲುಕ್‌ನಲ್ಲಿ ಗೋಚರಿಸುತ್ತಿದ್ದಾರೆ. ನವೀನ್ ಯೆರ್ನೇನಿ ಮತ್ತು ರವಿಶಂಕರ್ ಈ ಚಿತ್ರದ ನಿರ್ಮಾಪಕರು.

ಇನ್ನು ಚಿರಂಜೀವಿ ಅಭಿನಯದ ‘ಆಚಾರ್ಯ’ ಸಿನಿಮಾ ತೆರೆಗೆ ಸಿದ್ಧವಾಗಿದೆ. ಚಿತ್ರದಲ್ಲಿ ಅವರ ತಾರಾಪುತ್ರ ರಾಮ್ ಚರಣ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಹಿಂದಿನ ಚಿರಂಜೀವಿ ಅವರ ‘ಖಿಲಾಡಿ 150’ ಚಿತ್ರದಲ್ಲಿ ರಾಮ್ ಚರಣ್‌ ಅತಿಥಿ ಪಾತ್ರದಲ್ಲಿದ್ದರೆ, ರಾಮ್ ಚರಣ್‌ರ ‘ಮಗಧೀರ’ (2009) ಚಿತ್ರದಲ್ಲಿ ಚಿರಂಜೀವಿ ಅತಿಥಿಯಾಗಿ ಕಾಣಿಸಿಕೊಂಡಿದ್ದರು. ಇದೀಗ ‘ಆಚಾರ್ಯ’ ಚಿತ್ರದಲ್ಲಿ ರಾಮ್ ಚರಣ್‌ಗೆ ದೊಡ್ಡ ಪಾತ್ರವೇ ಇದ್ದಂತಿದೆ. ಈ ಬಗ್ಗೆ ಮಾತನಾಡುವ ಚಿತ್ರದ ನಿರ್ದೇಶಕ ಕೊರಟಾಲ ಸಿವಾ, “ಚಿತ್ರದ ಸಿಧಾ (ರಾಮ್‌ ಚರಣ್‌) ಪಾತ್ರದಲ್ಲಿ ರಾಮ್‌ ಚರಣ್‌ ಅವರನ್ನಲ್ಲದೆ ಬೇರೆ ಯಾರನ್ನೂ ನಾನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಈ ಪಾತ್ರಕ್ಕೆ ಅವರು ಅತ್ಯಂತ ಸೂಕ್ತವಾಗಿ ಹೊಂದಿಕೆಯಾಗುತ್ತಾರೆ” ಎನ್ನುತ್ತಾರೆ. ಕಾಜಲ್ ಅಗರ್‌ವಾಲ್ ಮತ್ತು ಸೋನು ಸೂದ್‌ ಚಿತ್ರದ ಪ್ರಮುಖ ಪಾತ್ರಧಾರಿಗಳು. 2022ರ ಫೆಬ್ರವರಿಯಲ್ಲಿ ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here