ಈ ಸರಣಿ ನೋಡಲು ಸ್ವಲ್ಪ ತಾಳ್ಮೆ ಹೆಚ್ಚೇ ಬೇಕು. ಅತಿ ವೇಗದ ಘಟನಾವಳಿಗಳಿಲ್ಲ. ಆದರೆ ತಾರ್ಕಿಕ ಎಳೆಯೊಂದಿಗೆ ಗಮನ ಸೆಳೆಯುತ್ತದೆ. ವಿಪರೀತ ಆಕ್ಷನ್‌ ಸನ್ನಿವೇಶಗಳು ಬೇಡ ಎನ್ನುವವರಿಗೆ ‘ದಿ ನೈಟ್ ಏಜೆಂಟ್’ ರುಚಿಸುತ್ತದೆ. ಸರಣಿ Netflixನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ಮುಖ್ಯ ಕಥಾವಸ್ತು ಗಟ್ಟಿಯಾಗಿದ್ದು, ತಾರ್ಕಿಕವಾಗಿ ಮೊದಲಿನಿಂದ ಕೊನೆಯವರೆಗೂ ಹರಿದರೆ ಅದನ್ನು ಸ್ಲೋ-ಬರ್ನ್ (ನಿಧಾನ ಗತಿಯ) ಸರಣಿಯಾದರೂ ತಾಳ್ಮೆಯಿಂದ ನೋಡುವವ ನಾನು. ಅಂಥದೇ ಒಂದು ಗೂಢಚರ್ಯ ಮೂಲದ ಅಮೆರಿಕನ್ ಪ್ರೆಸಿಡೆಂಟ್ ಮತ್ತು ಉಗ್ರವಾದಿ ಪಿತೂರಿ ಸಂಬಂಧಿತ ಕಥೆ – ದಿ ನೈಟ್ ಏಜೆಂಟ್ (ಸೀಸನ್ 1, 10 ಎಪಿಸೋಡ್).

ಇದರ ನಾಯಕ ( ಗೇಬ್ರಿಯಲ್ ಬಾಸೋ) ಒಂದು ಬೋರಿಂಗ್ ಡೆಸ್ಕ್ ಜಾಬ್‌ನಲ್ಲಿ ವೈಟ್‌ಹೌಸ್‌ನಲ್ಲಿ ಕಾಲ ಕಳೆಯುತ್ತಿರುತ್ತಾನೆ. ಅಲ್ಲಿಗೆ ಒಮ್ಮೆಯೂ ಫೋನ್ ಕರೆಯೂ ಬರುವುದಿಲ್ಲ ಎಂಬ ಪ್ರತೀತಿ. ಆದರೆ ಆಕಸ್ಮಿಕವಾಗಿ ಅವನಿಗೆ ಬಂದ ಮೊದಲನೆಯ ಅಪಾಯ ಸೂಚಕ ಕಾಲ್ ಅವನ ಇಡೀ ಜೀವನವನ್ನೇ ಬದಲಿಸುತ್ತದೆ. ಆ ಕಾಲ್ ಮಾಡಿದ ಮುಗ್ಧ ಸೈಬರ್ ಸೆಕ್ಯುರಿಟಿ ಪರಿಣಿತೆ ನಾಯಕಿಯ (ಲೂಸಿಯನ್ ಬ್ಯುಕನನ್) ಜೊತೆ ಊರೂರು ಸುತ್ತಿ ಕೊಲೆಗಡುಕರಿಂದ, ತಮ್ಮವರಿಂದ ತಪ್ಪಿಸಿಕೊಳ್ಳುವಂಥ ಸಂಧರ್ಭ ತಂದಿಡುತ್ತದೆ. ಇದೊಂದು ಹೈ ಆಕ್ಟೇನ್ ಥ್ರಿಲ್ಲರ್‌ ಅಲ್ಲದಿದ್ದರೂ ಕಥೆಯಲ್ಲಿ ಸಾಕಷ್ಟು ಪಂಚ್ ಇದೆ, ಹೆಚ್ಚಾಗಿ ಪತ್ತೇದಾರಿ ತನಿಖೆ ಕೂಲಂಕುಷವಾಗಿದೆ.

ನಾಯಕ ಮತ್ತು ನಾಯಕಿ ಜೀವ ಉಳಿಸಿಕೊಳ್ಳಲು ಮತ್ತು ದೇಶಕ್ಕೆ ಬಂದ ದೊಡ್ಡ ಅಪಾಯವನ್ನು ತಡೆಗಟ್ಟಲು ಹೆಚ್ಚೆಚ್ಚು ಕೆದಕಿದಂತೆಲ್ಲ, ರಾಷ್ಟ್ರಾಧ್ಯಕ್ಷ, ಉಪಾಧ್ಯಕ್ಷ ಕಚೇರಿಯ ದೊಡ್ಡ ದೊಡ್ಡ ತಲೆಗಳೇ ಅನುಮಾನಾಸ್ಪದವಾಗಿ ಕಂಡು ಬರುತ್ತವೆ. ಅವರ ಜೀವ ತೆಗೆಯಲು ಬಂದ ವಿಲನ್ ಜೋಡಿ ಬೇರೆ ಮಹಾ ಚಾಣಾಕ್ಷರು. ಹಾಗಾಗಿ, ಯಾರು ಹಿತವರು ಈ ಅಮಾಯಕ ಜೋಡಿಗೆ? ಇದರಲ್ಲಿ ಎರಡನೇ ಸೀಕ್ರೆಟ್ ಸರ್ವೀಸ್ ಜೋಡಿಯೂ ಇದೆ, ಆ ಕಪ್ಪು ಅಮೆರಿಕನ್ ಜೋಡಿ ಏಜೆಂಟರು (ಫೋಲಾ ಎವನ್ಸ್ ಮತ್ತು ವುಡ್‌ಸೈಡ್‌) ಈಗ ಒಂದಾಗಿದ್ದಾರೆ. ಆದರೆ ಅವರಿಗೊಂದು ಬ್ಯಾಕ್ ಸ್ಟೋರಿ ಇದೆ. ಈಗ ಅವರು ಉಪಾಧ್ಯಕ್ಷರ ಮಗಳ ಎಸ್ಕಾರ್ಟ್ ಆಗಿರುವಾಗ ಅವಳ ಅಪಹರಣವಾಗುತ್ತದೆ.

ಮೊದಲನೆಯ ಜೋಡಿ ಮತ್ತು ಈ ಎರಡನೇ ಜೋಡಿಯ ಕಥೆಗಳ ಎಳೆಗಳು ಎಲ್ಲೋ ಸಂಗಮವಾಗಿ ನಾಲ್ವರೂ ಒಟ್ಟಾಗಬೇಕಾಗುತ್ತದೆ. ಅಲ್ಲಿಂದ ಕಥೆ ಸರಾಗವಾಗಿ ಹರಿಯುತ್ತದೆ. ಈ ಸರಣಿ ನೋಡಲು ಸ್ವಲ್ಪ ತಾಳ್ಮೆ ಹೆಚ್ಚೇ ಬೇಕು. ಅತಿ ವೇಗದ ಘಟನಾವಳಿ ಇಲ್ಲವಾದರೂ, ಆದರೆ ಮೊದಲೇ ಹೇಳಿದಂತೆ ಹಲವು ಎಳೆಗಳ ಮಂದಗತಿಯ ಸರಣಿ ಎನ್ನಬಹುದು. ವಿಪರೀತ ಆಕ್ಷನ್ ಸೀನ್‌ಗಳಿಲ್ಲ. ಅದೇಕೋ ಅಂಥವನ್ನು ನೋಡಿ ನೋಡಿ ಚರ್ವಿತಚರ್ವಣವಾಗಿತ್ತು. ಹಾಗಾಗಿ ಇಂಥ ಕಥೆ ಅಪೇಕ್ಷಿಸುವವರಿಗೆ ಸರಣಿ ಇಷ್ಟವಾಗುತ್ತದೆ.

LEAVE A REPLY

Connect with

Please enter your comment!
Please enter your name here