ಅಕಾಲಿಕವಾಗಿ ಅಗಲಿದ ನಟ ಚಿರಂಜೀವಿ ಸರ್ಜಾ ಅಭಿನಯದ ಕೊನೆಯ ಸಿನಿಮಾ ‘ರಾಜಮಾರ್ತಾಂಡ’ ನಿನ್ನೆ (ಅ. 7) ತೆರೆಕಂಡಿದೆ. ಪಿ ಎಚ್ ವಿಶ್ವನಾಥ್ ನಿರ್ದೇಶನದ ‘ಆಡೇ ನಮ್ God’, ನಾಗೇಂದ್ರ ಗಾಣಿಗ ನಿರ್ದೇಶನದ ‘ಅಭಿರಾಮಚಂದ್ರ’ ಈ ವಾರದ ಮತ್ತೆರೆಡು ಪ್ರಮುಖ ಕನ್ನಡ ಸಿನಿಮಾಗಳು.
ರಾಜಮಾರ್ತಾಂಡ | ಕನ್ನಡ | ಅಕಾಲಿಕವಾಗಿ ಅಗಲಿದ ಚಿರಂಜೀವಿ ಸರ್ಜಾ ಅಭಿನಯದ ಕೊನೆಯ ಸಿನಿಮಾ. ‘ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ. ರಾಜನ ಸ್ನೇಹಿತನೊಬ್ಬ ತಾನೇ ಆ ಊರಿಗೆ ರಾಜ ಆಗಬೇಕು ಎಂದು ಹೊಂಚು ಹಾಕಿ ಸಂಚು ಮಾಡಿದ. ಮುಂದೆ ಏನಾಯ್ತು ಹೇಳು ಅಜ್ಜಿ’ ಎಂದು ಶುರುವಾಗುವ ಟ್ರೈಲರ್ ಪುನರ್ಜನ್ಮದ ಕತೆಯ ಸೂಚನೆ ನೀಡುತ್ತದೆ. ದೇವರಾಜ್, ಶಂಕರ್ ಅಶ್ವಥ್, ಚಿಕ್ಕಣ್ಣ, ಸುಮಿತ್ರ, ವಿನೀತ್ ಕುಮಾರ್ ಪ್ರಮುಖ ಪಾತ್ರಧಾರಿಗಳು. ‘ಭಜರಂಗಿ’ ಲೋಕಿ ಖಳನಟ. ಚಿತ್ರಕ್ಕೆ ದೀಪ್ತಿ ಸಾಥಿ, ಮೇಘಶ್ರೀ, ರುಷಿಕಾ ರಾಜ್ ನಾಯಕಿಯರು. ಕೆ ರಾಮ್ ನಾರಾಯಣ್ ಕತೆ, ಚಿತ್ರಕಥೆ ಮತ್ತು ಸಂಭಾಷಣೆಯಿದೆ. ಪ್ರಣವ್ ಗೌಡ ಎನ್, ನಿವೇದಿತಾ ಮತ್ತು ಶಿವಕುಮಾರ್ ನಿರ್ಮಾಣದ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ, ಧನು ವಿಶ್ ಹಿನ್ನೆಲೆ ಸಂಗೀತ, ಕೆ ಗಣೇಶ್ ಛಾಯಾಗ್ರಹಣ ಚಿತ್ರಕ್ಕಿದೆ.
ಅಭಿರಾಮಚಂದ್ರ | ಕನ್ನಡ | ಬಾಲ್ಯದ ಸ್ನೇಹ, ಪ್ರೀತಿ ಹಾಗೂ ತ್ರಿಕೋನ ಪ್ರೇಮಕಥಾಹಂದರ ಒಳಗೊಂಡಿರುವ ‘ಅಭಿರಾಮಚಂದ್ರ’ ಸಿನಿಮಾವನ್ನು ನಾಗೇಂದ್ರ ಗಾಣಿಗ ನಿರ್ದೇಶಿಸಿದ್ದಾರೆ. ‘ಕಿರಿಕ್ ಪಾರ್ಟಿ’ ಸಿನಿಮಾದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ನಾಗೇಂದ್ರ ಗಾಣಿಗ ‘ಅಭಿರಾಮಚಂದ್ರ’ ಸಿನಿಮಾಕ್ಕೆ ಕತೆ, ಚಿತ್ರಕಥೆ ಬರೆದು ಮೊದಲ ಬಾರಿಗೆ ಸ್ವತಂತ್ರ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಸಿನಿಮಾದಲ್ಲಿ ರಥ ಕಿರಣ, ಸಿದ್ದು ಮೂಲಿಮನಿ, ನಾಟ್ಯರಂಗ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಶಿವಾನಿ ರೈ ಸಿನಿಮಾದ ನಾಯಕಿ. ವೀಣಾ ಸುಂದರ್, ಸುಂದರ್, ಎಸ್ ನಾರಾಯಣ್, ಪ್ರಕಾಶ್ ತುಮ್ಮಿನಾಡು, ಪವನ್ ಚಿತ್ರದ ಪ್ರಮುಖ ಪಾತ್ರಧಾರಿಗಳು.
ಆಡೇ ನಮ್ God | ಕನ್ನಡ | ಹಿರಿಯ ಚಿತ್ರನಿರ್ದೇಶಕ ಪಿ ಎಚ್ ವಿಶ್ವನಾಥ್ ನಿರ್ದೇಶನದ ವಿಶಿಷ್ಟ ಶೀರ್ಷಿಕೆಯ ‘ಅಡೇ ನಮ್ God’ ಈ ವಾರ ಥಿಯೇಟರ್‌ಗೆ ಬಂದಿದೆ. ಆಡನ್ನು ದೇವರನ್ನಾಗಿ ಮಾಡಿದಾಗ ಏನೆಲ್ಲಾ ಆಗುತ್ತದೆ ಎನ್ನುವುದು ಚಿತ್ರದ ಕಥಾವಸ್ತು. ‘ರಾಮಾ ರಾಮಾ ರೇ’ ಸಿನಿಮಾ ಖ್ಯಾತಿಯ ನಟರಾಜ್ ಚಿತ್ರದ ಹೀರೋ. ತೆಳು ಹಾಸ್ಯದ ನಿರೂಪಣೆಯಲ್ಲಿ ಗಂಭೀರ ವಿಚಾರವನ್ನು ಪ್ರಸ್ತಾಪ ಮಾಡಿರುವುದಾಗಿ ಹೇಳುತ್ತದೆ ಚಿತ್ರತಂಡ. ಮಂಜುನಾಥ್ ಜಂಬೆ, ಅಜಿತ್ ಬೊಪ್ಪನಹಳ್ಳಿ, ಅನೂಪ್ ಶೂನ್ಯ, ಸಾರಿಕಾ ರಾವ್, ಬಿ ಸುರೇಶ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಆರ್ ಕೆ ಸ್ವಾಮಿನಾಥನ್ ಸಂಗೀತ ಚಿತ್ರಕ್ಕಿದೆ.
ಮಿಷನ್ ರಾಣಿಗಂಜ್ | ಹಿಂದಿ | ‘The Great Indian Rescue’ ಅಡಿಬರಹ ಹೊಂದಿರುವ ಈ ಚಿತ್ರವು ಕಲ್ಲಿದ್ದಲು ಗಣಿಯ ಅಡಿಯಲ್ಲಿ ಸಿಕ್ಕಿಹಾಕಿಕೊಂಡಿರುವ ಗಣಿಗಾರರನ್ನು ತೆರವುಗೊಳಿಸದ ಕಾರಣ ಗ್ರಾಮಸ್ಥರು ಇಲಾಖೆಯ ವಿರುದ್ದ ಕೋಪಗೊಂಡು ಆಕ್ರಮಣಕಾರಿ ಸ್ಥಿತಿಗೆ ಮರಳುತ್ತಾರೆ. ಸ್ಥಳೀಯರು ನಿಯಂತ್ರಣ ತಪ್ಪಿ ಪರಿಸ್ಥಿತಿಯ ಉಸ್ತುವಾರಿ ವಹಿಸುವ ರಕ್ಷಣಾ ತರಬೇತಿ ಪಡೆದ ಅಧಿಕಾರಿ ಜಸ್ವಂತ್ ಸಿಂಗ್ ಗಿಲ್ (ಅಕ್ಷಯ್ ಕುಮಾರ್) ಇದನ್ನು ನಿಭಾಯಿಸುತ್ತಾನೆ. ಇದರ ನಂತರ ಅಕ್ಷಯ್ ಕುಮಾರ್ ನಾಪತ್ತೆಯಾಗಿರುವ
65 ಗಣಿಗಾರರ ಹುಡುಕಾಟದ ಕಾರ್ಯಾಚರಣೆಯನ್ನು ಪ್ರಸ್ತಾಪಿಸುತ್ತಾನೆ. ಗಣಿಗಾರರು ಜೀವಂತವಾಗಿಲ್ಲದಿರಬಹುದು ಮತ್ತು ಅವರು ನೆಲದಡಿಯ ಗಣಿಯಲ್ಲಿ ಸತ್ತಿರಬಹುದು ಎಂದು ಅನೇಕರು ನಂಬಿರುತ್ತಾರೆ. ಆದರೆ ಭೂಗರ್ಭದಡಿ ಸಿಲುಕಿರುವ ಕಾರ್ಮಿಕರನ್ನು ನಾಯಕ ಹೇಗೆ ರಕ್ಷಿಸುತ್ತಾನೆ ಎಂಬುದನ್ನು ಸಿನಿಮಾ ತೋರಿಸಲಿದೆ. 1989ರಲ್ಲಿ ಒಬ್ಬ ವ್ಯಕ್ತಿ ಧೈರ್ಯ ಮತ್ತು ದೃಢ ನಿರ್ಧಾರದಿಂದ ಅನೇಕರ ಜೀವ ಉಳಿಸಿ ರಿಯಲ್ ಹೀರೋ ಆದ ಕತೆ. A Pooja Entertainment Production ಬ್ಯಾನರ್ ಅಡಿಯಲ್ಲಿ ವಶು ಭಗ್ನಾನಿ ಚಿತ್ರ ನಿರ್ಮಿಸಿದ್ದಾರೆ. ವಿಪುಲ್ ಕೆ ರಾವಲ್ ಚಿತ್ರಕಥೆ, ಆರಿಫ್ ಶೇಖ್ ಸಂಕಲನ, ಅಸೀಮ್ ಮಿಶ್ರಾ ಛಾಯಾಗ್ರಹಣ ಸಿನಿಮಾಗಿದೆ. ಈ ಚಲನಚಿತ್ರವನ್ನು ಆರಂಭದಲ್ಲಿ
‘ಕ್ಯಾಪ್ಸುಲ್ ಗಿಲ್’ ಎನ್ನುವ ಶೀರ್ಷಿಕೆಯಿಂದ ಕರೆಯಲಾಗಿತ್ತು.
ಮ್ಯಾಡ್ (Mad) | ತೆಲುಗು | ಕಾಲೇಜು, ಕ್ಯಾಂಪಸ್ ಮತ್ತು ಅಲ್ಲಿನ ಸಿಬ್ಬಂದಿಗಳ ನಡುವಿನ ಸಂಭಾಷಣೆಗಳನ್ನು ಚಿತ್ರದ ಟ್ರೈಲರ್‌ನಲ್ಲಿ ತೋರಿಸಲಾಗಿದೆ. ಆ ಕಾಲೇಜನ್ನು ಅದ್ಭುತ ಕಾಲೇಜು, ಇಲ್ಲಿನ ರೀತಿ ಸೌಲಭ್ಯಗಳು ಇನ್ನೆಲ್ಲೂ ಇಲ್ಲವೆಂದು 4 ಜನ ಸ್ನೇಹಿತರ ಗುಂಪು ಆಡಿಕೊಳ್ಳುತ್ತಿರುತ್ತದೆ. ಅದಕ್ಕೆ ಸರಿಯಾಗಿ ಅಲ್ಲಿನ ಸಿಬ್ಬಂದಿಗಳು ಬಿಲ್ಡಪ್ ತೆಗೆದುಕೊಳ್ಳುತ್ತಿರುತ್ತಾರೆ. ಚಿತ್ರವನ್ನು ಕಲ್ಯಾಣ್ ಶಂಕರ್ ನಿರ್ದೇಶಿಸಿದ್ದು, ನಿತಿನ್, ಸಂಗೀತ್ ಶೋಭನ್, ರಾಮ್ ನಿತಿನ್, ಶ್ರೀ ಗೌರಿ ಪ್ರಿಯಾ ರೆಡ್ಡಿ, ಅನಾನಾತಿಕಾ ಸನಿಲ್ಕುಮಾರ್, ಗೋಪಿಕಾ ಉದ್ಯಾನ್ ರಘು ಬಾಬು, ರಾಚ ರವಿ, ಮುರಳೀಧರ್ ಗೌಡ್, ವಿಷ್ಣು, ಅಂತೋನಿ, ಶ್ರೀಕಾಂತ್ ರೆಡ್ಡಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.
GTA (Guns Trance Action) | ತೆಲುಗು | ರಾಹು, ಕೇತು, ಶನಿ, ಅಂಗಾರ ಎಂಬ ನಾಲ್ಕು ಜನ ರೌಡಿ ಸ್ನೇಹಿತರು ತಮ್ಮ ಬಾಲ್ಯದಿಂದಲೇ ಕ್ರೈಮ್ ಮಾಡಿಕೊಂಡು ಮೈಗೆಲ್ಲ ರಕ್ತ ಮೆತ್ತಿಕೊಂಡು ಊರಿನ ತುಂಬಾ ಓಡಾಡಿಕೊಂಡಿರುತ್ತಾರೆ. ಅವರಿಗೆ ಕರುಣೆ, ಸಹನೆ, ಪ್ರೀತಿ, ಪ್ರೇಮದ ಗಂಧ -ಗಾಳಿ ತಿಳಿದಿರುವುದಿಲ್ಲ. ನಂತರದ ದಿನಗಳಲ್ಲಿ ಡ್ರಗ್ಸ್ ಮಾರಾಟ ದಂಧೆಯಲ್ಲಿ ತೊಡಗಿಸಿಕೊಳ್ಳುವ ಇವರು ಕಾಲೇಜು ವಿದ್ಯಾರ್ಥಿಗಳ ಗುಂಪಿನೊಂದಿಗೆ ವ್ಯವಹಾರ ಶುರುಮಾಡುತ್ತಾರೆ. ಕೆಲವು ಡ್ರಗ್ಸ್‌ಗೆ ಸಂಬಂಧ ಪಟ್ಟ ಹುಡುಗರಿಗೂ ಮತ್ತು ಇವರ ಮಧ್ಯೆ ವಾಗ್ವಾದವಾಗಿ ಆ ಜಗಳ ವಿಕೋಪಕ್ಕೆ ತಲುಪುತ್ತದೆ. ಇದು ಪೋಲೀಸರಿಗೆ ತಿಳಿದು ಅವರು ಹೇಗೆ ಈ ಸಮಸ್ಯೆಯನ್ನು ಪರಿಹರಿಸುತ್ತಾರೆ ಎಂಬುದನ್ನು ಸಿನಿಮಾ ತೋರಿಸಲಿದೆ. Ashwatthama Productions ಬ್ಯಾನರ್ ಅಡಿಯಲ್ಲಿ ದೀಪಕ್ ಸಿದ್ದಾಂತ್ ಚಿತ್ರ ನಿರ್ದೇಶಿಸಿದ್ದಾರೆ. ಮಾರ್ಕ್ ಕೆ ರಾಬಿನ್ ಸಂಗೀತ ಸಂಯೋಜಿಸಿದ್ದಾರೆ. ಚೈತನ್ಯ ಮತ್ತು ಹೀನಾ ರೈ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಮಂತ್ ಆಫ್ ಮಧು (Month of Madhu) | ತೆಲುಗು | ಪರಸ್ಪರ ಪ್ರೀತಿಸಿ ವಿವಾಹವಾಗಿದ್ದ ದಂಪತಿಗಳಿಬ್ಬರು ಅನೇಕ ಮನಸ್ತಾಪಗಳಿಂದ ವಿಚ್ಛೇದನ ಪಡೆದು ದೂರಾಗುತ್ತಾರೆ. ನಂತರ ಕಂಪನಿಯೊಂದರಲ್ಲಿ ಮತ್ತೆ ಭೇಟಿಯಾಗುವ ಇವರು ಪರಸ್ಪರ ಅರ್ಥ ಮಾಡಿಕೊಳ್ಳಲು ಮುಂದಾಗುತ್ತಾರೆ. ಇದರಿಂದ ಅವರಿಬ್ಬರ ನಡುವೆ ಉತ್ತಮ ಸ್ನೇಹ ಭಾಂದವ್ಯ ಉಂಟಾಗುತ್ತದೆ ಮುಂದೇನಾಗಲಿದೆ ಎಂದು ಸಿನಿಮಾ ತೋರಿಸಲಿದೆ. ಈ ಚಿತ್ರವನ್ನು ಶ್ರೀಕಾಂತ್ ನಾಗೋತಿ ನಿರ್ದೇಶಿಸಿದ್ದು, ಯಶವಂತ್ ಮುಲುಕುಟ್ಲ ನಿರ್ಮಿಸಿದ್ದಾರೆ. ಚಿತ್ರಕ್ಕೆ ಅಚ್ಚು ರಾಜುಮಣಿ ಸಂಗೀತ ಸಂಯೋಜಿಸಿದ್ದಾರೆ. ನವೀನ್ ಚಂದ್ರ, ಸ್ವಾತಿ ರೆಡ್ಡಿ, ಶ್ರೇಯಾ ನವಿಲೆ, ಮಂಜುಳಾ ಘಟ್ಟಮನೇನಿ, ಹರ್ಷ ಚೆಮುಡು, ಜ್ಞಾನೇಶ್ವರಿ ಕಂಡ್ರೇಗುಳ, ರಾಜಾ ಚೆಂಬೋಲು, ರಾಜಾ ರವೀಂದ್ರ, ರುದ್ರ ರಾಘವ್, ರುಚಿತಾ ಸಾದಿನೇನಿ, ಮೌರ್ಯ ಸಿದ್ದಾವರಂ, ಕಂಚೆರಪಾಲೆಂ ಕಿಶೋರ್ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಚಿನ್ನ (Chinna) | ತೆಲುಗು | ಕಳೆದುಹೋದ ತನ್ನ ಅಣ್ಣನ ಮಗಳನ್ನು ಹುಡುಕುವ ಕಾರ್ಯಾಚರಣೆಯಲ್ಲಿರುವ ಚಿಕ್ಕಪ್ಪನ ಕುರಿತ ಭಾವನೆಗಳನ್ನು ಈ ಸಿನಿಮಾ ತೆರೆದಿಡಲಿದೆ. ಚಿಕ್ಕಪ್ಪ ಮತ್ತು ಅಣ್ಣನ ಮಗಳ ನಡುವಿನ ಬಾಂಧವ್ಯದ ಕಿರುನೋಟವನ್ನು ತೋರಿಸಲಾಗಿದೆ. ಸಿನಿಮಾದಲ್ಲಿ ಸಿದ್ಧಾರ್ಥ್‌ಗೆ ಜೋಡಿಯಾಗಿ ನಿಮಿಷಾ ಸಜಯನ್ ಕಾಣಿಸಿಕೊಂಡಿದ್ದಾರೆ. ಸಿದ್ಧಾರ್ಥ್ ಅವರ Etaki Entertainment ನಿರ್ಮಿಸಿರುವ ಈ ಚಿತ್ರವನ್ನು Red Giant movies ಮೂವೀಸ್ ನಿರ್ಮಿಸಿದೆ. ‘ಕಾದಲಿಲ್ ಸೋದಪ್ಪುವದು ಯೆಪ್ಪಡಿ’, ‘ಜಿಲ್ ಜಂಕ್ ಜುಕ್’ಮತ್ತು ‘ಅವಳ್’ ಸಿನಿಮಾಗಳ ನಂತರ Etaki Entertainment ನಿರ್ಮಿಸಿರುವ ನಾಲ್ಕನೇ ಚಿತ್ರವಿದು.
ರತ್ಥಮ್ (Raththam) | ತಮಿಳು | ನಾಯಕನ ಸ್ನೇಹಿತನೊಬ್ಬ ಹುಚ್ಚು ಅಭಿಮಾನಿಯಿಂದ ಕೊಲೆಯಾದಾಗ ಆ ಸ್ಥಳವನ್ನು ಬದಲಾಯಿಸಿದ ನಾಯಕನಿಗೆ ಅವನ ಸ್ನೇಹಿತನ ಕೊಲೆಯು ಹೆಚ್ಚು ಕಾಡುತ್ತಿರುತ್ತದೆ. ಪುನಃ ಹಳೆಯ ಕೆಲಸದ ಜಾಗಕ್ಕೆ ತೆರಳುವ ಅವನು ತನ್ನ ಸ್ನೇಹಿತನ ಕೊಲೆಗೆ ನ್ಯಾಯ ಒದಗಿಸಲು ತನ್ನ ಪ್ರಾಣವನ್ನು ಪಣಕ್ಕಿಟ್ಟು ಹೋರಾಡುತ್ತಾನೆ. ಈ ಚಿತ್ರವನ್ನು C S ಅಮುಧಾನ್ ಚಿತ್ಕಕತೆ ಬರೆದು -ನಿರ್ದೇಶಿಸಿದ್ದಾರೆ. ಕಣ್ಣನ್ ನಾರಾಯಣ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ. Infiniti Film Ventures ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದೆ. ವಿಜಯ್ ಆಂಟೋನಿ, ಮಹಿಮಾ ನಂಬಿಯಾರ್, ನಂದಿತಾ ಶ್ವೇತಾ, ರಮ್ಯಾ ನಂಬೀಸನ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
800 | ತಮಿಳು | ಶ್ರೀಲಂಕಾ ಕ್ರಿಕೆಟರ್ ಮುತ್ತಯ್ಯ ಮುರಳೀಧರನ್ ಅವರ ಜೀವನಚರಿತ್ರೆ ಆಧರಿತ ‘800’ ಚಿತ್ರವನ್ನು ಎಂ ಎಸ್ ಶ್ರೀಪತಿ ನಿರ್ದೇಶಿಸಿದ್ದಾರೆ. ‘ಸ್ಲಂ ಡಾಗ್ ಮಿಲಿಯನೇರ್’ ಸಿನಿಮಾ ಖ್ಯಾತಿಯ ನಟ ಮಧುರ್ ಮಿತ್ತಲ್ ಅವರು ಚಿತ್ರದಲ್ಲಿ ಮುತ್ತಯ್ಯ ಮುರಳೀಧರನ್ ಪಾತ್ರವನ್ನು ಮಾಡಿದ್ದಾರೆ. ಅವರ ಪತ್ನಿಯ ಪಾತ್ರದಲ್ಲಿ ಮಹಿಮಾ ನಂಬಿಯಾರ್ ಕಾಣಿಸಿಕೊಂಡಿದ್ದಾರೆ. ಮುತ್ತಯ್ಯ ಮುರಳೀಧರನ್ ಅವರ ಹೆಸರಿನಲ್ಲಿ ಅನೇಕ ದಾಖಲೆಗಳಿವೆ. ಟೆಸ್ಟ್ ಕ್ರಿಕೆಟ್ನಲ್ಲಿ ಅವುಗಳ ಅತಿ ಹೆಚ್ಚು, ಅಂದರೆ 800 ವಿಕೆಟ್ಗಳನ್ನು ಪಡೆದ ವಿಶ್ವದ ಮೊದಲ ಬೌಲರ್ ಎನ್ನುವ ಖ್ಯಾತಿಗೆ ಪಾತ್ರರಾಗಿದ್ದಾರೆ. ಆ ಕಾರಣದಿಂದಲೇ ಸಿನಿಮಾಗೆ ‘800’ ಎಂದು ಶೀರ್ಷಿಕೆ ಇಡಲಾಗಿದೆ. ಏಕದಿನ ಪಂದ್ಯಗಳಲ್ಲಿ ಮುತ್ತಯ್ಯ ಮುರಳೀಧರನ್ ಅವರು 530 ವಿಕೆಟ್ ಪಡೆದಿದ್ದಾರೆ. 1996ರಲ್ಲಿ ಶ್ರೀಲಂಕಾ ತಂಡ ವಿಶ್ವಕಪ್ ಗೆದ್ದಾಗ ಆ ಟೀಮ್ನಲ್ಲಿ ಮುತ್ತಯ್ಯ ಮುರಳೀಧರನ್ ಇದ್ದರು.
ರಾಣಿ The Real Story | ಮಲಯಾಳಂ | ಸಸ್ಪೆನ್ಸ್ – ಥ್ರಿಲ್ಲರ್ ಸಿನಿಮಾದಲ್ಲಿ ಶಾಸಕ ಧರ್ಮರಾಜನ್ ಎಂಬುವವರನ್ನು ಮನೆಕೆಲಸದ ಮಹಿಳೆಯೊಬ್ಬಳು ನಿಗೂಢವಾಗಿ ಕೊಂದಿರುತ್ತಾಳೆ. ಇದನ್ನು ಮುಚ್ಚಿ ಹಾಕಲು ಆಕೆಯ ಕುಟುಂಬದವರು ಹರಸಾಹಸ ಪಡುತ್ತಿರುತ್ತಾರೆ. ನಿಗೂಢ ಕತೆಯ ಸಿನಿಮಾದಲ್ಲಿ ಸಾಕಷ್ಟು ತಿರುವುಗಳಿವೆ ಎನ್ನುತ್ತಾರೆ ಚಿತ್ರದನಿರ್ದೇಶಕ ಶಂಕರ್ ರಾಮಕೃಷ್ಣನ್. ವಿನೋದ್ ಮೆನನ್, ಶಂಕರ್ ರಾಮಕೃಷ್ಣನ್ ಮತ್ತು ಜಿಮ್ಮಿ ಜೇಕಬ್ ಚಿತ್ರವನ್ನು ನಿರ್ಮಿಸಿದ್ದಾರೆ. ಅಪ್ಪು ಭಟ್ಟತಿರಿ ಸಂಕಲನ, ಮೇನಾ ಮೇಲಾತ್ ಸಂಗೀತ ಸಂಯೋಜಿಸಿದ್ದಾರೆ. ಭಾವನಾ ಮೆನನ್, ಊರ್ವಶಿ, ಮಾಲಾ ಪಾರ್ವತಿ, ಹನಿ ರೋಸ್, ಇಂದ್ರನ್ಸ್, ಗುರು ಸೋಮಸುಂದರಂ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.