ಕಾಲಿವುಡ್‌ನ ಖ್ಯಾತ ಚಿತ್ರನಿರ್ಮಾಪಕ ‘ಜಂಟಲ್‌ಮ್ಯಾನ್‌2’ ಸಿನಿಮಾ ಆರಂಭಿಸಿದ್ದಾರೆ. ಚೇತನ್ ಚೀನು, ನಯನತಾರಾ ಚಕ್ರವರ್ತಿ ಹಾಗೂ ಪ್ರಿಯಾ ಲಾಲ್ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಚಿತ್ರಕ್ಕೆ ಎಂ ಎಂ ಕೀರವಾಣಿ ಸಂಗೀತ ಸಂಯೋಜಿಸುತ್ತಿದ್ದಾರೆ.

‘ಜಂಟಲ್ ಮ್ಯಾನ್’, ‘ಕಾದಲನ್’, ‘ಕಾದಲ್ ದೇಶಂ’ ಸೇರಿದಂತೆ ದೊಡ್ಡ ಬಜೆಟ್‌ನ ಹಲವು ಯಶಸ್ವೀ ತಮಿಳು ಚಿತ್ರಗಳನ್ನು ನಿರ್ಮಿಸಿದ್ದ ಕೆ ಟಿ ಕುಂಜುಮೋನ್ ‘ಜಂಟಲ್ ಮ್ಯಾನ್ 2’ ಸಿನಿಮಾ ಆರಂಭಿಸಿದ್ದಾರೆ. ಮೊನ್ನೆ ಚೆನ್ನೈನಲ್ಲಿ ನಡೆದ ಸಮಾರಂಭದಲ್ಲಿ ನಿರ್ದೇಶಕ ಗೋಕುಲ್ ಕೃಷ್ಣ ಅವರಿಗೆ ನಿರ್ಮಾಪಕ ಕುಂಜುಮೋನ್ ಚಿತ್ರದ ಸ್ಕ್ರಿಪ್ಟ್ ಹಸ್ತಾಂತರಿಸುವ ಮೂಲಕ ಚಿತ್ರಕ್ಕೆ ಚಾಲನೆ ಸಿಕ್ಕಿದೆ. ‘RRR’ ಚಿತ್ರದ ‘ನಾಟ್ಟು ನಾಟ್ಟು’ ಸಂಗೀತಕ್ಕೆ ಆಸ್ಕರ್ ಪ್ರಶಸ್ತಿ ಪಡೆದ ಪದ್ಮಶ್ರೀ ಎಂ ಎಂ ಕೀರವಾಣಿ ಅವರು ಈ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ. ಖ್ಯಾತ ಚಿತ್ರಸಾಹಿತಿ ವೈರಮುತ್ತು ಹಾಡುಗಳನ್ನು ಬರೆಯುತ್ತಿದ್ದಾರೆ.

ತಮ್ಮ ನೂತನ ಸಿನಿಮಾ ಕುರಿತು ಮಾತನಾಡುವ ಕುಂಜುಮೋನ್‌, ‘ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಜೆಂಟಲ್‌ಮ್ಯಾನ್‌ಗಳಾಗಿರಬೇಕು ಎಂಬುದು ಈ ಚಿತ್ರದ ಆಶಯ. ನಾನು ಹಲವು ಚಿತ್ರಗಳನ್ನು ನಿರ್ಮಾಣ ಮಾಡಿದ್ದೇನೆ. 200ಕ್ಕೂ ಹೆಚ್ಚು ಚಿತ್ರಗಳನ್ನು ವಿತರಿಸಿದ್ದೇನೆ. ನನಗೆ ಪ್ರೇಕ್ಷಕರ ನಾಡಿಮಿಡಿತ ಗೊತ್ತಿದೆ. ಅದಕ್ಕೆ ತಕ್ಕ ಹಾಗೆ ಸಿನಿಮಾ ಮಾಡುತ್ತಿದ್ದೇವೆ. ನನಗೆ ಪ್ರೇಕ್ಷಕರು ಗುರುಸಮಾನರು. ಅವರು ಚಿತ್ರ ನೋಡಿ ಆಶೀರ್ವಾದ ಮಾಡಿದರಷ್ಟೇ ನಾವು ಗೆಲ್ಲುವುದಕ್ಕೆ ಸಾಧ್ಯ. ಹಾಗಾಗಿ, ಅವರಿಗೆ ಇಷ್ಟವಾಗುವಂತಹ ಚಿತ್ರ ಮಾಡುವುದು ನನ್ನ ಮೊದಲ ಆದ್ಯತೆ’ ಎನ್ನುತ್ತಾರೆ.

ತಮ್ಮ ಸಿನಿಮಾಗೆ ಎಂ ಎಂ ಕೀರವಾಣಿ ಸಂಗೀತ ಮಾಡಬೇಕೆನ್ನುವುದು ಕುಂಜುಮೋನ್‌ಆಸೆಯಾಗಿತ್ತು. ಅದರಂತೆ ಕೀರವಾಣಿ ಅವರನ್ನು ಸಂಪರ್ಕಿಸಿದ್ದಾರೆ. ಕೀರವಾಣಿ ಮರುಮಾತಿಲ್ಲದೆ ಸಂಗೀತ ಸಂಯೋಜನೆಗೆ ಒಪ್ಪಿಕೊಂಡಿದ್ದಾರೆ. ಕೀರವಾಣಿ ಮತ್ತು ಗೀತಸಾಹಿತಿ ವೈರಮುತ್ತು ಅವರು ಮುಂಗಡ ಹಣ ಪಡೆಯದೆ ತಮ್ಮ ಸಿನಿಮಾಗೆ ಕೆಲಸ ಮಾಡಲು ಒಪ್ಪಿಕೊಂಡಿದ್ದಾರೆ ಎನ್ನುವ ಖುಷಿ ಕುಂಜುಮೋನ್‌ಅವರದ್ದು. ‘ಜಂಟಲ್ ಮ್ಯಾನ್ 2’ ಚಿತ್ರದ ನಾಯಕನಾಗಿ ಚೇತನ್ ಚೀನು ಅಭಿನಯಿಸುತ್ತಿದ್ದಾರೆ. ನಯನತಾರಾ ಚಕ್ರವರ್ತಿ ಹಾಗೂ ಪ್ರಿಯಾ ಲಾಲ್ ಚಿತ್ರದ ಇಬ್ಬರು ನಾಯಕಿಯರು. ಕನ್ನಡ ನಟಿ ಸುಧಾರಾಣಿ, ಸಿತಾರಾ, ಸುಮನ್, ಸತ್ಯಪ್ರಿಯಾ ಇತರೆ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಲಿದ್ದಾರೆ. ಅಜಯನ್ ವಿನ್ಸೆಂಟ್ ಛಾಯಾಗ್ರಹಣ, ತೋಟ ತಾರಿಣಿ ಕಲಾ ನಿರ್ದೇಶನ ಚಿತ್ರಕ್ಕೆ ಇರಲಿದೆ.

Previous article‘ದಿ ವ್ಯಾಕ್ಸಿನ್‌ ವಾರ್‌’ ಟೀಸರ್‌ | ವಿವೇಕ್‌ ಅಗ್ನಿಹೋತ್ರಿ ಸಿನಿಮಾದಲ್ಲಿ ಸಪ್ತಮಿ ಗೌಡ
Next articleರಾಧನಾ ರಾಮ್ ಇನ್ಮುಂದೆ ಆರಾಧನಾ | ಮಾಲಾಶ್ರೀ – ರಾಮು ಪುತ್ರಿ

LEAVE A REPLY

Connect with

Please enter your comment!
Please enter your name here