ವಿಜಯ್ ದೇವರಕೊಂಡ ಮತ್ತು ಸಮಂತಾ ನಟನೆಯ ‘ಖುಷಿ’ ಸಿನಿಮಾ ಸೆಪ್ಟೆಂಬರ್ 24ರಿಂದ Netflixನಲ್ಲಿ ಸ್ಟ್ರೀಮ್ ಆಗಲಿದೆ. ದುಲ್ಕರ್ ಸಲ್ಮಾನ್ ನಟನೆಯ ‘ಕಿಂಗ್ ಆಫ್ ಕೋಥಾ’, ನಿತ್ಯ ಮೆನನ್ ಅವರ ‘ಕುಮಾರಿ ಶ್ರೀಮತಿ’, ವರುಣ್ ತೇಜ್ ನಟನೆಯ ‘ಗಾಂಢೀವಧಾರಿ ಅರ್ಜುನ’ ಓಟಿಟಿಯ ಇತರೆ ಪ್ರಮುಖ ಕಂಟೆಂಟ್‌ಗಳು.
ಖುಷಿ | ತೆಲುಗು | Netflix | ಸೆಪ್ಟೆಂಬರ್ 24 | ವಿಜಯ್ ದೇವರಕೊಂಡ ಹಾಗೂ ಸಮಂತಾ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಸಿನಿಮಾ. ರೊಮ್ಯಾಂಟಿಕ್ ಲವ್‌ಸ್ಟೋರಿ. ಪ್ರೀತಿಸಿ ಪೋಷಕರ ಒಪ್ಪಿಗೆ ಸಿಗದೇ ಸ್ನೇಹಿತರ ಸಮ್ಮುಖದಲ್ಲಿ ಮದುವೆಯಾದ ನವದಂಪತಿಯ ನೋವು ನಲಿವಿನ ಕತೆ ಚಿತ್ರದಲ್ಲಿದೆ. ಚಿತ್ರವನ್ನು Mythri Movie Makers ಬ್ಯಾನರ್ ಅಡಿ ರವಿ ಶಂಕರ್ ಮತ್ತು ನವೀನ್ ಯೆರ್ನೇನಿ ನಿರ್ಮಿಸಿದ್ದಾರೆ. ಹೇಶಮ್ ಅಬ್ದುಲ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಜಯರಾಮ್, ಸಚಿನ್ ಖೇಡೇಕರ್, ಮುರಳಿ ಶರ್ಮಾ, ಬೇಬಿ ಲಕ್ಷ್ಮಿ, ಅಲಿ, ರೋಹಿಣಿ, ವೆನ್ನೆಲ ಕಿಶೋರ್, ರಾಹುಲ್ ರಾಮಕೃಷ್ಣ, ಶ್ರೀಕಾಂತ್ ಅಯ್ಯಂಗಾರ್ ಮತ್ತು ಶರಣ್ಯ ಪ್ರದೀಪ್ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಮೂಲ ತೆಲುಗು ಸೇರಿದಂತೆ ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಿತ್ತು.
ಗಾಂಡೀವಧಾರಿ ಅರ್ಜುನ | ತೆಲುಗು | Netflix | ಸೆಪ್ಟೆಂಬರ್ 24 | ವರುಣ್ ತೇಜ್ ನಟನೆಯ ‘ಗಾಂಡೀವಧಾರಿ ಅರ್ಜುನ’ ಪ್ರವೀಣ್ ಸತ್ತಾರು ನಿರ್ದೇಶನದ ಆಕ್ಷನ್ ಥ್ರಿಲ್ಲರ್. ಸಾಕ್ಷಿ ವೈದ್ಯ ನಾಯಕಿ. ನಾಸರ್, ವಿನಯ್ ರಾಯ್, ವಿಮಲಾ ರಾಮನ್ ತಾರಾಗಣದಲ್ಲಿದ್ದಾರೆ. ವರುಣ್ ತೇಜ್, ನಾಸರ್‌ನನ್ನು (ರಾಜಕೀಯ ವ್ಯಕ್ತಿ) ರಾಜಕೀಯ ಬೆದರಿಕೆಗಳಿಂದ ರಕ್ಷಿಸುವ ರಕ್ಷಣಾಧಿಕಾರಿಯ ಪಾತ್ರ ನಿರ್ವಹಿಸಿದ್ದಾರೆ. ಹವಾಮಾನ ಬದಲಾವಣೆಯ ಕುರಿತು ಪಿತೂರಿ ನಡೆಸುವ ವಿವಿಧ ಘಟನೆಗಳ ಮೇಲೆ ಕೇಂದ್ರಿಕೃತವಾಗಿರುವ ಚಿತ್ರದಲ್ಲಿ ಅನೇಕ ಕಾರ್ಯಾಚರಣೆಯನ್ನು ನಡೆಸುವ ಪೊಲೀಸ್ ಅಧಿಕಾರಿಗಳ ಸಾಹಸವನ್ನು ತೋರಿಸಲಾಗಿದೆ. ಚಿತ್ರವನ್ನು ಶ್ರೀ ವೆಂಕಟೇಶ್ವರ ಸಿನಿ ಚಿತ್ರ ಬ್ಯಾನರ್ ಅಡಿ BVSN ಪ್ರಸಾದ್ ನಿರ್ಮಿಸಿದ್ದಾರೆ. ವಿಮಲಾ ರಾಮನ್, ವಿನಯ್ ರೈ, ನರೇನ್, ರೋಶಿನಿ ಪ್ರಕಾಶ್, ಮನೀಶ್ ಚೌಧರಿ, ಅಭಿನವ್ ಗೋಮತಮ್, ರವಿವರ್ಮ, ಕಲ್ಪಲತಾ, ಬೇಬಿ ವೇದಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮಿಕ್ಕಿ ಮೇಯರ್ ಸಿನಿಮಾ ಸಂಗೀತ ಸಂಯೋಜಿಸಿದ್ದು, ಮುಖೇಶ್ ಜಿ ಛಾಯಾಗ್ರಹಣ ಚಿತ್ರಕ್ಕಿದೆ.
ಏಜೆಂಟ್ | ತೆಲುಗು | SonyLIV | ಸೆಪ್ಟೆಂಬರ್ 29 | ಅಖಿಲ್ ಅಕ್ಕಿನೇನಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸಾಧಾರಣ ಯಶಸ್ಸು ಕಂಡಿತ್ತು. ಸುರೇಂದರ್ ರೆಡ್ಡಿ ನಿರ್ದೇಶನದ ಆಕ್ಷನ್ – ಪ್ಯಾಕ್ಡ್ ಪತ್ತೇದಾರಿ ಚಿತ್ರದಲ್ಲಿ ಮಮ್ಮುಟ್ಟಿ, ಸಾಕ್ಷಿ ವೈದ್ಯ, ಡಿನೋ ಮೋರಿಯಾ ನಟಿಸಿದ್ದಾರೆ. AK Entertainments ಬ್ಯಾನರ್ ಅಡಿ ರಾಮಬ್ರಹ್ಮ ಸುಂಕರ ನಿರ್ಮಿಸಿದ್ದಾರೆ. ವಕ್ಕಂತಂ ವಂಶಿ ಚಿತ್ರಕಥೆ ರಚಿಸಿದ್ದಾರೆ. ಹಿಪ್ ಹಾಪ್ ತಮಿಝಾ ಸಂಗೀತ ಸಂಯೋಜಿಸಿದ್ದಾರೆ. ನವೀನ್ ನೂಲಿ ಸಂಕಲನ ಮಾಡಿದ್ದಾರೆ. ಅವಿನಾಶ್ ಕೊಲ್ಲಾ ಕಲಾ ನಿರ್ದೇಶನ ಚಿತ್ರಕ್ಕಿದೆ.
ಕುಮಾರಿ ಶ್ರೀಮತಿ | ತೆಲುಗು ಸರಣಿ | PrimeVideo | ಸೆಪ್ಟೆಂಬರ್ 28 | ನಿತ್ಯಾ ಮೆನನ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ತೆಲುಗು ವೆಬ್ ಸರಣಿ. ‘ಕಥಾ ಸಂಗಮ’ ಖ್ಯಾತಿಯ ಛಾಯಾಗ್ರಾಹಕ ಗೋಮಟೇಶ್ ಉಪಾಧ್ಯೆ ಸರಣಿಯ ಕಥೆ ರಚಿಸಿದ್ದು, ನಟ ಶ್ರೀನಿವಾಸ್ ಅವಸರಾಳ ಸರಣಿಯನ್ನು ನಿರ್ದೇಶಿಸಿದ್ದಾರೆ. ಗೋದಾವರಿ ಬ್ಯಾಕ್‌ಡ್ರಾಪ್‌ನಲ್ಲಿ ಫನ್ ಫ್ಯಾಮಿಲಿ ಎಂಟರ್‌ಟೈನರ್ ಆಗಿ ಈ ವೆಬ್ ಸೀರಿಸ್ ಕಟ್ಟಿಕೊಡಲಾಗಿದೆ. ನಿರುಪಮ್ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಯುವತಿಯಾದ ಶ್ರೀಮತಿ (ನಿತ್ಯಾ) ಸಮಾಜದಲ್ಲಿ ಎದುರಿಸುವ ಅನೇಕ ಸಮಸ್ಯೆಗಳನ್ನು ತೋರಿಸಲಾಗಿದೆ. ಆಕೆ ಎಲ್ಲೇ ಹೋದರೂ ಬಂದರೂ ಆಕೆಗೆ ಮದುವೆಯ ಬಗ್ಗೆಯೇ ಪ್ರಸ್ತಾಪಗಳು ನಡೆಯುತ್ತಿರುತ್ತವೆ. ಸರಣಿಯಲ್ಲಿ ನಿರುಪಮ್ ಪರಿಟಾಲ, ತಿರುವೀರ್, ಗೌತಮಿ, ತಲ್ಲೂರಿ ರಾಮೇಶ್ವರಿ, ಪ್ರೇಮ್ ಸಾಗರ್, ಲಕ್ಷ್ಮಿ ವೆನ್ನೆಲಾ, ಉಷಾಶ್ರೀ, ಗವಿರೆಡ್ಡಿ ಶ್ರೀನಿವಾಸ್, ಅಕ್ಷಯ್ ಲಗುಸಾನಿ, ಮಹೇಶ್ ಅಚಂತ, ಮಾಧವಿಲತಾ, ಸುಬ್ಬರಾಯ ಶರ್ಮಾ, ರಾಮ್ ಮತ್ತು ಲಕ್ಷ್ಮಣ್, ಶ್ರೀವಾಣಿ, ವೇಣು ಪೊಲಸಾನಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಣೀತಾ ಪಟ್ನಾಯಕ್, ನರೇಶ್, ತಿರುವೀರ್ ಇತರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಸ್ಟಾಕಾಟೊ ಮತ್ತು ಕಮ್ರಾನ್ ಸಂಗೀತ ಸಂಯೋಜಿಸಿದ್ದಾರೆ. ಮೋಹನ ಕೃಷ್ಣ ಛಾಯಾಗ್ರಹಣವಿದೆ.
ಕಿಂಗ್ ಆಫ್ ಕೋಥಾ | ಮಲಯಾಳಂ | DisneyPlusHotstar | ಸೆಪ್ಟೆಂಬರ್ 29 | ಚಿತ್ರವು ದರೋಡೆಕೋರರ ಮೇಲೆ ಸೇಡು ತೀರಿಸಿಕೊಂಡು ಪತನಗೊಳಿಸುವ ಕಥಾಹಂದರ. ಸಿನಿಮಾದಲ್ಲಿ ದುಲ್ಕಲ್ ಸಲ್ಮಾನ್ ‘ರಾಜಾ’ ಪಾತ್ರವನ್ನು ನಿರ್ವಹಿಸಿದ್ದಾರೆ. ಅವರ ಬಾಲ್ಯದ ಕನಸು ಕೋಥಾ ಪಟ್ಟಣವನ್ನು ಆಳುವುದು. ಆದರೆ ಆಕ್ಷನ್ ಕಿಂಗ್ (ದುಲ್ಕರ್) ಪ್ರೀತಿಯಲ್ಲಿ ಬೀಳುತ್ತಾನೆ. ಇದರಿಂದ ಅವನು ಕೋಥಾ ಪಟ್ಟಣವನ್ನು ಕಳೆದುಕೊಳ್ಳುವ ಭೀತಿಗೆ ತಲುಪುತ್ತಾನೆ.
‘ರಾಜ’ನನ್ನು ಕೆಳಗಿಳಿಸಲು ಶತ್ರುಗಳ ದಂಡು ಹೊಂಚು ಹಾಕುತ್ತಿರುತ್ತದೆ. ಎಲ್ಲರೊಟ್ಟಿಗೂ ಹೋರಾಡಿ ಪಟ್ಟಣವನ್ನು ಉಳಿಸಿಕೊಳ್ಳುತ್ತಾನೆಯೇ ಎಂಬ ಕುತೂಹಲ ಚಿತ್ರದಲ್ಲಿದೆ. ಮಾಸ್ ಎಂಟರ್‌ಟೇನ್‌ಮೆಂಟ್ ಸಿನಿಮಾವನ್ನು ಅಭಿಲಾಷ್ ಜೋಶಿ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ದುಲ್ಕರ್ ಸಲ್ಮಾನ್ ಅವರಿಗೆ ನಾಯಕಿಯಾಗಿ ಐಶ್ವರ್ಯ ಲಕ್ಷ್ಮಿ ನಟಿಸಿದ್ದು, ಶಬೀರ್ ಕಲ್ಲರಕ್ಕಲ್, ಚೆಂಬನ್ ವಿನೋದ್ ಜೋಸ್, ನೈಲಾ ಉಷಾ, ಶಾಂತಿ ಕೃಷ್ಣ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ವೇಫೇರರ್ ಫಿಲ್ಮ್ಸ್ ಮತ್ತು ಝೀ ಸ್ಟುಡಿಯೋಸ್ ಸಿನಿಮಾ ನಿರ್ಮಿಸಿದೆ. ಮೂಲ ಮಲಯಾಳಂ ಸೇರಿದಂತೆ ತಮಿಳು, ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಿತ್ತು.