ಕತೆಯ ಮೊದಲರ್ಧ ಯಾವುದೇ ಹೊಸತನವಿಲ್ಲದೆ, ತಾಜಾತನವಿಲ್ಲದೆ, ಹೆಚ್ಚೇನೂ ಸಂಭವಿಸದೆ ಮುಗಿದರೆ, ದ್ವಿತೀಯಾರ್ಧ ಹೊಸ ಪ್ರದೇಶ, ಹೊಸ ವ್ಯಕ್ತಿಗಳನ್ನು ತುಂಬಿಕೊಂಡು ಕೊಂಚ ಸಾಹಸಮಯವಾಗಲು ಯತ್ನಿಸುತ್ತದೆ. ಕನ್ನಡ ಚಿತ್ರಗಳಲ್ಲಿ ಹೆಚ್ಚು ಕಂಡಿಲ್ಲದ ಕೀನ್ಯಾವನ್ನು ದ್ವಿತೀಯಾರ್ಧದಲ್ಲಿ ನೋಡಬಹುದು. ಆದರೆ, ನಿರ್ದೇಶಕರು ಕೀನ್ಯಾವನ್ನು ಕತೆಯೊಳಗೆ ಹೆಣೆಯುವ ಬದಲು ಕೀನ್ಯಾದೊಳಗೆ ಕತೆ ಹೆಣೆದಿದ್ದಾರೆ.

ಪ್ರೀತಂ ಗುಬ್ಬಿ ಮತ್ತು ಗಣೇಶ್ ಒಂದಾದರೆ ಅಲ್ಲಿ ಹುಟ್ಟುವುದು ಪ್ರೇಮ ಕತೆ ಎಂದು ಯಾರೇ ಆದರೋ ಊಹಿಸಬಹುದು. ಆದರೆ, ‘ಬಾನದಾರಿಯಲ್ಲಿ’ ಪ್ರೇಮ ಕತೆಯಲ್ಲ, ಪ್ರೇಮದ ಕುರಿತ ಕತೆ ಎಂದು ಚಿತ್ರತಂಡ ಟ್ರೈಲರ್‌ನಲ್ಲೇ ಹೇಳಿತ್ತು. ಹಾಗೇ ನೋಡಿದರೆ, ಈ ಸಿನಿಮಾದಲ್ಲಿ ಲವ್ ಸ್ಟೋರಿ, ಸ್ಪೋರ್ಟ್ಸ್ ಮೂವಿ, ಟ್ರಾವೆಲ್ ಮೂವಿ, ಎಮೋಷನಲ್ ಡ್ರಾಮಾ ಈ ಎಲ್ಲದರ ಝಲಕ್ ಇದೆ. ಇಷ್ಟೆಲ್ಲಾ ಅಂಶಗಳನ್ನು ಸಿನಿಮಾದೊಳಗೆ ಸಹಜವಾಗಿ ತಂದು, ಅದನ್ನು ಸೊಗಸಾಗಿ ಹೊಂದುವಂತೆ ಹೆಣೆದಿದ್ದಾರೆಯೇ ಎಂಬುದು ನಿಜವಾದ ಪ್ರಶ್ನೆ.

ಸಿದ್ (ಗಣೇಶ್) ಕ್ರಿಕೆಟರ್. ರಾಜ್ಯ ತಂಡಕ್ಕೆ ಆಯ್ಕೆಯಾಗಲು ಶ್ರಮಿಸುತ್ತಿದ್ದರೆ, ಲೀಲಾ (ರುಕ್ಮಿಣಿ ವಸಂತ್) ಈಜು ಪಟು ಮತ್ತು ಪ್ರಕೃತಿಯ ಬಗ್ಗೆ ಅಪಾರ ಕಾಳಜಿ ಇರುವವಳು. ಸಿದ್‌ಗೆ ಲೀಲಾ ಮೇಲೆ ಮೊದಲ ನೋಟದಲ್ಲೇ (ಮುಂಗಾರು ಮಳೆಯ ನಡುವೆ) ಪ್ರೇಮವಾಗುತ್ತದೆ. ಲೀಲಾ ಕೂಡ ಹೆಚ್ಚು ತೊಂದರೆಯಿಲ್ಲದೆ, ಹಳೆಯ ರೀತಿಯಲ್ಲಿ ಸಿದ್‌ಗೆ ಒಲಿಯುತ್ತಾಳೆ. ಹಳೆಯ ರೀತಿಯಲ್ಲಿ ಏಕೆಂದರೆ ಈ ಪ್ರಕ್ರಿಯೆಯಲ್ಲಿ ಸಿದ್, ನಾಯಕಿಯನ್ನು ಕಾಡುತ್ತಿದ್ದ ಒಂದಷ್ಟು ಗೂಂಡಾಗಳ ಜೊತೆ ಬಡಿದಾಡುತ್ತಾನೆ. ಕತೆಗೆ ಅಗತ್ಯವೇ ಇಲ್ಲದ, ತೀರಾ ಕ್ಲೀಷೆ ಎನಿಸುವ ಈ ಒಂದು ಫೈಟ್, ಒಂದಷ್ಟು ವೀಕೆಂಡ್ ಔಟಿಂಗ್, ಒಂದಷ್ಟು ಕಾಮಿಡಿ, ಒಂದು ಪ್ರೇಮಗೀತೆಯ ನಡುವೆ ನಾಯಕಿ – ನಾಯಕರ ಪ್ರೇಮ ಕಥಾನಕ ಮುಂದುವರಿದು, ಲೀಲಾಳ ತಂದೆಯ (ರಂಗಾಯಣ ರಘು) ಅಸಮಾಧಾನದ ಮಧ್ಯೆಯೇ ಮದುವೆಯ ಹಂತ ತಲುಪುತ್ತದೆ.

ಆಗಲೇ, ಕತೆಗೊಂದು ತಿರುವು ಸಿಕ್ಕು, ದಿಕ್ಕು ಬದಲಾಗುತ್ತದೆ. ಕತೆಯ ಈ ಮೊದಲರ್ಧ ಯಾವುದೇ ಹೊಸತನವಿಲ್ಲದೆ, ತಾಜಾತನವಿಲ್ಲದೆ, ಹೆಚ್ಚೇನೂ ಸಂಭವಿಸದೆ ಮುಗಿದರೆ, ದ್ವಿತೀಯಾರ್ಧ ಹೊಸ ಪ್ರದೇಶ, ಹೊಸ ವ್ಯಕ್ತಿಗಳನ್ನು ತುಂಬಿಕೊಂಡು ಕೊಂಚ ಸಾಹಸಮಯವಾಗಲು ಯತ್ನಿಸುತ್ತದೆ. ಕನ್ನಡ ಚಿತ್ರಗಳಲ್ಲಿ ಹೆಚ್ಚು ಕಂಡಿಲ್ಲದ ಕೀನ್ಯಾವನ್ನು ಆಯ್ದುಕೊಂಡಿರುವ ನಿರ್ದೇಶಕರು, ಕನ್ನಡ ಸಿನಿಮಾದಲ್ಲಿ ಅಪ್ರಿಕಾವನ್ನು ತೋರಿಸುವ ಸಾಹಸವನ್ನು ಮೊದಲಬಾರಿಗೆ ಮಾಡಿದ ‘ಆಫ್ರಿಕಾದಲ್ಲಿ ಶೀಲ’ ಚಿತ್ರವನ್ನು, ಸ್ಮರಿಸಿರುವುದು ಖುಷಿ ಕೊಡುತ್ತದೆ. ಆದರೆ, ಕೀನ್ಯಾವನ್ನು ಕತೆಯೊಳಗೆ ಹೆಣೆಯುವ ಬದಲು ಕೀನ್ಯಾದೊಳಗೆ ಕತೆ ಹೆಣೆದಿದ್ದಾರೆ.

ಮೊದಲ ಬಾರಿಗೆ ಮಸಾಯ್ ಮಾರಾದ ಸೊಬಗು ಕನ್ನಡ ಚಿತ್ರರಂಗದಲ್ಲಿ ಕಂಡು ಬಂದಿದೆ ಎಂಬುದು ನಿಜವಾದರೂ, ಅದನ್ನು ಹೆಚ್ಚು ತೋರಿಸುವ ಭರದಲ್ಲಿ ಕತೆಯನ್ನು ಎಳೆದು, ಅಗತ್ಯವೇ ಇಲ್ಲದ ಭಾಗಗಳನ್ನು ಸೇರಿಸಲಾಗಿದೆ. ಕೆಲವು ಭಾಗಗಳು, ಕೀನ್ಯಾದಲ್ಲಿ ಗಣೇಶ್ ಮತ್ತು ರಂಗಾಯಣ ರಘುವಿಗೆ ಜೊತೆಯಾಗುವ ಟ್ರಾವೆಲ್ ಬ್ಲಾಗರ್ ಕನ್ನಡತಿ ಕಾದಂಬರಿಯ (ರೀಷ್ಮಾ ನಾಣಯ್ಯ) ಟ್ರಾವೆಲ್ ವಿಡಿಯೋದಂತೆ ಸಿನಿಮಾ ಕಂಡು ಬಂದರೂ ಅಚ್ಚರಿಯಿಲ್ಲ. ಮೇಕಿಂಗ್‌ನಲ್ಲಿ ಸಿನಿಮಾ ಗಮನಸೆಳೆದರೂ ಚಿತ್ರಕಥೆಯಲ್ಲಿ ಸೋಲುತ್ತದೆ. ಕೆಲವು ಭಾಗಗಳು ಸಿನಿಮಾದಲ್ಲಿ ಏಕಿದೆ ಎಂಬುದೇ ಅರ್ಥವಾಗುವುದಿಲ್ಲ. ಅವು ಕತೆಗಾಗಲೀ, ಒಟ್ಟು ಸಿನಿಮ್ಯಾಟಿಕ್ ಅನುಭವಕ್ಕಾಗಲೀ ಯಾವುದೇ ಕೊಡುಗೆ ನೀಡದೆ ಚಿತ್ರದ ಉದ್ದವನ್ನು ಹಿಗ್ಗಿಸಿವೆ. ಜೊತೆಗೆ ಕತೆಯಲ್ಲಿ ಕೆಲವು ಅತಾರ್ಕಿಕ ಅಂಶಗಳು ನುಸುಳಿ ಮನಸ್ಸನ್ನು ಕೊರೆಯುತ್ತದೆ. ಕೆಲವು ಸಣ್ಣ ಪುಟ್ಟ ಪಾತ್ರಗಳ ಚಿತ್ರಣ ತೀರಾ ಕೆಟ್ಟದಾಗಿದೆ. ಮೊದಲಿಗೇ ಬರುವ ಕ್ಯಾಬ್ ಡ್ರೈವರ್ ಪಾತ್ರ ಮತ್ತು ಆತನಿಂದ ನಿರ್ದೇಶಕರು ಆಡಿಸುವ ಭಾಷೆ, ಹಳೆಯ ಸ್ಟೀರಿಯೋಟೈಪ್‌ಗಳನ್ನೇ ನಾಚಿಸುವಂತಿದೆ.

ಇನ್ನು, ಆಸಕ್ತಿ ಮೂಡಿಸುವ ಅಜ್ಜಿಯರ ಪಾತ್ರಗಳು ಎರಡೇ ದೃಶ್ಯಕ್ಕೆ, ಒಂದರೆಡು ತಮಾಷೆಯ ಡೈಲಾಗ್‌ಗಳಿಗೆ ಸೀಮಿತವಾಗುತ್ತದೆ. ಎರಡನೇ ನಾಯಕಿಯ ಸ್ಥಾನದಲ್ಲಿರುವ ಕಾದಂಬರಿಯ ಪಾತ್ರವನ್ನೂ ಸರಿಯಾಗಿ ಕಟ್ಟಿ ಕೊಟ್ಟಿಲ್ಲ. ಗಣೇಶ್ – ರುಕ್ಮಿಣಿ ಕೆಮಿಸ್ಟ್ರಿ ಚೆನ್ನಾಗಿದೆ. ರುಕ್ಮಿಣಿ ವಸಂತ್ ತಮ್ಮ ಎರಡನೇ ಚಿತ್ರದಲ್ಲೇ ಕನ್ನಡ ಚಿತ್ರರಂಗದಲ್ಲಿ ಉತ್ತಮ ನಟಿಯಾಗಿ ಬೆಳೆಯುವ ಮತ್ತು ದೊಡ್ಡ ಅಭಿಮಾನಿ ಬಳಗವನ್ನು ಗಳಿಸುವ ಎಲ್ಲಾ ಮುನ್ಸೂಚನೆ ನೀಡಿದ್ದಾರೆ. ಗಣೇಶ್ ತಾವು ಸಾಕಷ್ಟು ಬಾರಿ ನಟಿಸಿರುವ ತರಹದೇ ಮತ್ತೊಂದು ಪಾತ್ರದಲ್ಲಿ ಲೀಲಾಜಾಲವಾಗಿ ಅಭಿನಯಿಸಿದ್ದಾರೆ. ಆದರೆ, ನಟನೆಯಿಂದ ಮನಸ್ಸನ್ನು ಪೂರ್ತಿಯಾಗಿ ಆವರಿಸಿಕೊಳ್ಳುವುದು ರಂಗಾಯಣ ರಘು. ಗಣೇಶ್ ಮತ್ತು ರಂಗಾಯಣ ರಘು ಎಂದಾಕ್ಷಣ ಸಾಕಷ್ಟು ಕಾಮಿಡಿ ನಿರೀಕ್ಷಿಸುವವರಿಗೆ ಇಲ್ಲಿ ಅಚ್ಚರಿ ಕಾದಿದೆ. ಇವರಿಬ್ಬರ ನಡುವಣ ಹೊಸ ರೀತಿಯ ಭಾಂದವ್ಯ ಸೊಗಸಾಗಿ ಮೂಡಿಬಂದಿದೆ. ದೊಡ್ಡ ದುರಂತವೊಂದರ ಸಮಪಾಲುದಾರರಾಗಿ ಇವರಿಬ್ಬರ ನಟನೆ ಭಾವಪೂರ್ಣವಾಗಿದೆ. ಕಾಮಿಡಿ, ಸಾಹಸಗಳಿಗಿಂತ ಹೆಚ್ಚಾಗಿ ಸಿನಿಮಾ ಕಣ್ಣೀರು ತರಿಸುವ ದೃಶ್ಯಗಳಿಂದಲೇ ತುಂಬಿದೆ ಮತ್ತು ಅದು ಪ್ರೇಕ್ಷಕರಲ್ಲಿ ಮನ ತಟ್ಟುವುದರಲ್ಲಿ ಯಶಸ್ವಿಯಾಗುತ್ತದೆ. ಮತ್ತು ಅದರ ಬಹುತೇಕ ಶ್ರೇಯ ರಂಗಾಯಣ ರಘು ಅವರಿಗೆ ಸಲ್ಲುತ್ತದೆ.

‘ಬಾನದಾರಿಯಲ್ಲಿ’ ಎಂಬ ಶೀರ್ಷಿಕೆಯನ್ನು ಬಳಸಿಕೊಂಡಿರುವ ರೀತಿಗೆ ಮಾತ್ರ ನಿರ್ದೇಶಕರಿಗೆ ಪೂರ್ತಿ ಅಂಕ ನೀಡಲೇಬೇಕು. ಚಿತ್ರದ ಮೊದಲಿಂದ ಕೊನೆಯವರೆಗೂ ಬಾನದಾರಿಯಲ್ಲಿ ಹಾಡನ್ನು, ತಂಬಾ ಭಾವನಾತ್ಮಕ ರೀತಿಯಲ್ಲಿ ಬಳಸಿಕೊಂಡಿದ್ದಾರೆ. ಅದು ಕತೆಯುದ್ದಕ್ಕೂ ಪಾತ್ರಗಳನ್ನು, ಘಟನೆಗಳನ್ನು ಜೋಡಿಸುತ್ತಾ, ಕೆಲವು ಕಡೆ ಕಣ್ಣೀರಿಗೂ ಕಾರಣವಾಗುತ್ತದೆ. ಪುನೀತ್ ದನಿಯಲ್ಲಿರುವ ಹಾಡನ್ನು ಬಳಸಿಕೊಂಡಿರುವ ರೀತಿಯೂ ಸಮರ್ಪಕವಾಗಿದೆ. ಅಭಿಲಾಷ್ ಕಲಾಟಿ ಅವರ ಸಿನಿಮಟೋಗ್ರಫಿ ಚೆನ್ನಾಗಿದೆ. ಅರ್ಜುನ್ ಜನ್ಯಾ ಸಂಗೀತದಲ್ಲಿ ಒಂದರೆಡು ಮಧುರ ಗೀತೆಗಳಿವೆ. ಆದರೆ, ಇಂತಹ ಸಿನಿಮಾಗಳಲ್ಲಿ ಹಾಡುಗಳ ಮಧುರತೆ ಮತ್ತು ಜನಪ್ರಿಯತೆಯೂ ಅತೀ ಮುಖ್ಯವಾದ್ದರಿಂದ, ಆ ದೃಷ್ಚಿಯಲ್ಲಿ ನೋಡಿದಾಗ ನೆನಪಿಡುವಂತಹ ಸಂಗೀತ ಇಲ್ಲ. ಸಂಭಾಷಣೆ ಕೆಲವು ಕಡೆ ಮಿಂಚುತ್ತದೆ. ಆದರೆ, ಎಲ್ಲ ಪ್ರಯತ್ನಗಳ ಹೊರತಾಗಿ, ಪ್ರೀತಂ ಗುಬ್ಬಿ ತಮ್ಮ ಹಳೆಯ ಸಿನಿಮಾಗಳ ಹ್ಯಾಂಗೋವರ್‌ನಲ್ಲೇ ಇದ್ದಾರೆ ಎನಿಸುವಂತೆ ‘ಬಾನದಾರಿಯಲ್ಲಿ’ ಮೂಡಿಬಂದಿದೆ.

LEAVE A REPLY

Connect with

Please enter your comment!
Please enter your name here