‘ಗಾಳಿಪಟ 2’ ಚಿತ್ರೀಕರಣ ಮುಗಿದಿದೆ. ಚಿತ್ರತಂಡ ಈ ಖುಷಿಯನ್ನು ಸಂಭ್ರಮಿಸಿದೆ. ಯೋಗರಾಜ್ ಭಟ್ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಶುರುವಾಗುತ್ತಿವೆ.

ಯಶಸ್ವೀ ‘ಗಾಳಿಪಟ’ ಸಿನಿಮಾದ ಸೀಕ್ವೆಲ್‌ ‘ಗಾಳಿಪಟ 2’ ಸಿನಿಮಾದ ಶೂಟಿಂಗ್ ಪೂರ್ಣಗೊಂಡಿದೆ. ನಿನ್ನೆ ಕನಕಪುರ ಸಮೀಪ ಅಂತಿಮ ಹಂತದ ಚಿತ್ರೀಕರಣ ಮುಗಿಸಿದ ನಿರ್ದೇಶಕ ಯೋಗರಾಜ್ ಭಟ್ಟರು ಚಿತ್ರತಂಡದ ಗ್ರೂಪ್ ಫೋಟೋ ಶೇರ್ ಮಾಡಿದ್ದಾರೆ. ಹೀರೋ ಗಣೇಶ್, ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ ಸೇರಿದಂತೆ ಚಿತ್ರತಂಡದ ಎಲ್ಲರೂ ಈ ಫೊಟೋದಲ್ಲಿದ್ದಾರೆ. ಒಟ್ಟು ನಾಲ್ಕು ಶೆಡ್ಯೂಲ್‌ಗಳಲ್ಲಿ ಚಿತ್ರೀಕರಣ ನಡೆದಿದೆ. ಅಫ್‌ಕೋರ್ಸ್‌, ಕೋವಿಡ್‌ನಿಂದಾಗಿ ಚಿತ್ರೀಕರಣ ವಿಳಂಬವಾಗಿದ್ದು ಹೌದು. ಲಾಕ್‌ಡೌನ್‌ ನಂತರ ಚಿತ್ರೀಕರಣಕ್ಕೆಂದು ವಿದೇಶಕ್ಕೆ (ಯೂರೋಪ್‌) ಮೊದಲು ಹಾರಿದ್ದೇ ‘ಗಾಳಿಪಟ 2’ ಚಿತ್ರತಂಡ. ಅಲ್ಲಿಂದ ಬಂದ ನಂತರ ಇನ್ನುಳಿದ ಸನ್ನಿವೇಶಗಳನ್ನು ಚಿತ್ರಿಸಿ ಶೂಟಿಂಗ್ ಮುಗಿಸಿದ್ದೇ ಕುಂಬಳಕಾಯಿ ಒಡೆದಿದ್ದಾರೆ.

‘ಗಾಳಿಪಟ 2’ ಚಿತ್ರೀಕರಣ ಶುರುವಾಗಿದ್ದು 2019ರ, ಡಿಸೆಂಬರ್‌ನಲ್ಲಿ. ಕೋವಿಡ್‌ ಸಂಕಷ್ಟದಿಂದಾಗಿ ಅಂದುಕೊಂಡ ಅವಧಿಯಲ್ಲಿ ಶೂಟಿಂಗ್ ಮುಗಿಸಲು ಸಾಧ್ಯವಾಗಲಿಲ್ಲ. “ಹೌದು ಕೋವಿಡ್‌ನಿಂದಾಗಿ ಸಿನಿಮಾ ವಿಳಂಬವಾಯ್ತು. ಆದರೂ ಅಂದುಕೊಂಡತೆಯೇ ಚಿತ್ರೀಕರಣ ಚೆನ್ನಾಗಿ ಆಗಿದೆ. ಇನ್ನು ಮುಂದೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯಲಿದ್ದು, ರಿಲೀಸ್‌ ದಿನಾಂಕವನ್ನು ನಿರ್ದೇಶಕರು ನಿರ್ಧರಿಸಬೇಕು” ಎನ್ನುತ್ತಾರೆ ನಿರ್ಮಾಪಕ ರಮೇಶ್‌ ರೆಡ್ಡಿ. ‘ಗಾಳಿಪಟ’ ಚಿತ್ರದಲ್ಲಿ ನಟಿಸಿದ್ದ ಗಣೇಶ್ ಮತ್ತು ದಿಗಂತ್ ಅವರೊಂದಿಗೆ ಮೂರನೇ ಹೀರೋ ಅಗಿ ಇಲ್ಲಿ ನಿರ್ದೇಶಕ ಪವನ್ ಕುಮಾರ್ ಇದ್ದಾರೆ. ವೈಭವಿ ಶಾಂಡಿಲ್ಯ, ಸಂಯುಕ್ತಾ ಮೆನನ್‌ ಮತ್ತು ಶರ್ಮಿಳಾ ಮಾಂಡ್ರೆ ನಾಯಕಿಯರು. ಅರ್ಜುನ್ ಜನ್ಯಾ ಸಂಗೀತ ಸಂಯೋಜನೆ, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಚಿತ್ರಕ್ಕಿದೆ.

LEAVE A REPLY

Connect with

Please enter your comment!
Please enter your name here