ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಗಂಗೂಭಾಯಿ ಕಥೈವಾಡಿ’ ಹಿಂದಿ ಸಿನಿಮಾ 2022ರ ಫೆಬ್ರವರಿಯಲ್ಲಿ ನಡೆಯಲಿರುವ ಬರ್ಲಿನ್ ಫಿಲ್ಮ್ ಫೆಸ್ಟಿವಲ್‌ಗೆ ಆಯ್ಕೆಯಾಗಿದೆ. ಅರವತ್ತರ ದಶಕದಲ್ಲಿ ಮುಂಬಯಿ ಕಾಮಾಟಿಪುರದ ಪ್ರಭಾವಶಾಲಿ ಮಹಿಳೆ ಗಂಗೂಭಾಯಿ ಕತೆಯಿದು.
ಬರಲಿರುವ 2022ರ ಫೆಬ್ರವರಿಯಲ್ಲಿ ನಡೆಯಲಿರುವ ಪ್ರತಿಷ್ಠಿತ ಬರ್ಲಿನ್ ಫಿಲ್ಮ್ ಫೆಸ್ಟಿವಲ್‌ಗೆ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಗಂಗೂಭಾಯಿ ಕಥೈವಾಡಿ’ ಹಿಂದಿ ಸಿನಿಮಾ ಆಯ್ಕೆಯಾಗಿದೆ. ಖ್ಯಾತ ಲೇಖಕ ಹುಸೇನ್ ಝೈದಿ ಅವರ ‘ಮಾಫಿಯಾ ಕ್ವೀನ್ಸ್ ಆಫ್ ಮುಂಬೈ’ ಕೃತಿಯಲ್ಲಿನ ಒಂದು ಚಾಪ್ಟರ್ ಆಧರಿಸಿ ತಯಾರಾಗಿರುವ ಚಿತ್ರವಿದು. ಫಿಲ್ಮ್ ಫೆಸ್ಟ್‌ನ ‘ಬರ್ಲಿನೇಲ್ ಸ್ಪೆಷಲ್ ಗಾಲಾ ಸೆಕ್ಷನ್’ನಲ್ಲಿ ಈ ಸಿನಿಮಾ ಪ್ರದರ್ಶನಗೊಳ್ಳಲಿದೆ. ಅರವತ್ತರ ದಶಕದಲ್ಲಿ ಮುಂಬಯಿ ಕಾಮಾಟಿಪುರದ ಪ್ರಭಾವಶಾಲಿ ಮತ್ತು ಗೌರವಾನ್ವಿತ ಮಹಿಳೆ ಗಂಗೂಭಾಯಿ ಕಥೈವಾಡಿ ಬದುಕಿನ ಕತೆಯಿದು. ನಟಿ ಅಲಿಯಾ ಭಟ್ ಶೀರ್ಷಿಕೆ ಪಾತ್ರದಲ್ಲಿ ನಟಿಸಿದ್ದಾರೆ. “ಅತ್ಯುತ್ತಮ ತಂಡದೊಂದಿಗೆ ಕೆಲಸ ಮಾಡಿದ್ದು, ಸಿನಿಮಾ ಪ್ರತಿಷ್ಠಿತ ಫಿಲ್ಮ್ ಫೆಸ್ಟಿವಲ್‌ಗೆ ಆಯ್ಕೆಯಾಗಿರುವುದು ಸಂಭ್ರಮ ಹೆಚ್ಚಿಸಿದೆ” ಎಂದು ಅಲಿಯಾ ಟ್ವೀಟ್ ಮೂಲಕ ತಮ್ಮ ಸಂತಸ ಹಂಚಿಕೊಂಡಿದ್ದಾರೆ.
ಬರ್ಲಿನ್ ಫಿಲ್ಮ್ ಫೆಸ್ಟಿವಲ್ 2022ರ ಫೆಬ್ರವರಿ 10ರಿಂದ 20ರವರೆಗೆ ನಡೆಯಲಿದೆ. ಈ ಹಿಂದೆ 2019ರಲ್ಲಿ ಅಲಿಯಾ ಭಟ್ ನಟನೆಯ ‘ಗಲ್ಲಿ ಬಾಯ್’ ಸಿನಿಮಾ ಬರ್ಲಿನ್ ಫೆಸ್ಟಿವಲ್‌ನಲ್ಲಿ ಪದರ್ಶನ ಕಂಡಿತ್ತು. ಈ ಚಿತ್ರದ ಮತ್ತೊಂದು ಪ್ರಮುಖ ಪಾತ್ರದಲ್ಲಿ ಸೀಮಾ ಪಾಹ್ವಾ ನಟಿಸಿದ್ದರೆ, ಅಜಯ್ ದೇವಗನ್ ಮತ್ತು ಹ್ಯೂಮಾ ಖುರೇಷಿ ಅತಿಥಿ ಪಾತ್ರಗಳಲ್ಲಿದ್ದಾರೆ. ಬನ್ಸಾಲಿ ಮತ್ತು ಪೆನ್ ಇಂಡಿಯಾ ಲಿಮಿಟೆಡ್‌ನ ಜಯಂತಿಲಾಲ್ ಗಡಾ ಜೊತೆಗೂಡಿ ನಿರ್ಮಿಸಿರುವ ಸಿನಿಮಾ 2022ರ ಫೆಬ್ರವರಿ 18ರಂದು ತೆರೆಕಾಣಲಿದೆ.