‘ಲವ್‌ ಯೂ ರಚ್ಚು’ ಸಿನಿಮಾದ್ದು ಲವ್‌ಸ್ಟೋರಿಯಷ್ಟೇ ಅಲ್ಲ ಎನ್ನುವುದನ್ನು ಟ್ರೈಲರ್‌ ಬಿಚ್ಚಿಟ್ಟಿದೆ. ಪ್ರೀತಿಯ ಕತೆಯ ಜೊತೆ ಮರ್ಡರ್‌ ಮಿಸ್ಟರಿಯನ್ನು ಹೆಣೆದಿರುವ ಸೂಚನೆ ನೀಡಿದ್ದಾರೆ ನಿರ್ದೇಶಕ ಶಂಕರ್‌ ರಾಜ್‌.

ಅಜಯ್‌ ರಾವ್‌ ಮತ್ತು ರಚಿತಾ ರಾಮ್‌ ಜೋಡಿಯ ‘ಲವ್‌ ಯೂ ರಚ್ಚು’ ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದೆ. ಇದು ಲವ್‌ಸ್ಟೊರಿಯಷ್ಟೇ ಅಲ್ಲ ಎಂದು ಕಳೆದ ಸುದ್ದಿಗೋಷ್ಠಿಯಲ್ಲಿ ನಟಿ ರಚಿತಾ ರಾಮ್‌ ಹೇಳಿದ್ದರು. ಚಿತ್ರದ ವೀಡಿಯೋ ಸಾಂಗ್‌ ಬಿಡುಗಡೆಯಾದ ಸಂದರ್ಭದಲ್ಲಿ ಅವರು ಹೀಗೆ ಹೇಳಿದಾಗ ಚಿತ್ರದ ಕತೆಯ ಬಗ್ಗೆ ಕುತೂಹಲ ಮೂಡಿತ್ತು. ಇದೀಗ ಟ್ರೈಲರ್‌ ನೋಡಿದಾಗ ಇದೊಂದು ಲಬ್‌ ಮತ್ತು ಮರ್ಡರ್‌ ಮಿಸ್ಟರಿ ಎನ್ನುವ ಸೂಚನೆ ಸಿಗುತ್ತದೆ. ಪ್ರೀತಿಸಿ ಮದುವೆಯಾದ ದಂಪತಿ ಕೊಲೆಯೊಂದರ ಪ್ರಕರಣದಲ್ಲಿ ಸಿಲುಕುವ ಸನ್ನಿವೇಶಗಳು ಅಲ್ಲಿ ಕಾಣಿಸುತ್ತವೆ. ಆಕ್ಷನ್‌ ದೃಶ್ಯಗಳೂ ಇದ್ದು, ರಚಿತಾ ಪಾತ್ರದ ಸುತ್ತ ಕತೆ ನಡೆಯುತ್ತದೆ. ಈ ವರ್ಷದ ಕೊನೆಯ ಚಿತ್ರವಾಗಿ ಡಿಸೆಂಬರ್‌ 31ರಂದು ಸಿನಿಮಾ ತೆರೆಕಾಣಲಿದೆ. ಗುರು ದೇಶಪಾಂಡೆ ನಿರ್ಮಾಣದ ಚಿತ್ರವನ್ನು ಶಂಕರ್ ರಾಜ್ ನಿರ್ದೇಶಿಸಿದ್ದಾರೆ. ನಟ ಧ್ರುವ ಸರ್ಜಾ ಅವರು ಚಿತ್ರದ ಟ್ರೈಲರ್‌ ಬಿಡುಗಡೆ ಮಾಡಿ ಶುಭ ಹಾರೈಸಿದರು.

ಚಿತ್ರೀಕರಣ ಆರಂಭಿಸಿದ ದಿನಗಳಲ್ಲೇ ಸಿನಿಮಾ ಸುದ್ದಿಯಾಗಿತ್ತು. ಚಿತ್ರದ ಸಾಹಸ ಸನ್ನಿವೇಶವನ್ನು ಚಿತ್ರಿಸುವ ಸಂದರ್ಭದ ಆಕಸ್ಮಿಕದಲ್ಲಿ ಸ್ಟಂಟ್‌ಮ್ಯಾನ್‌ ಮರಣಹೊಂದಿದ್ದರು. ಈ ವಿಚಾರವಾಗಿ ನಿರ್ಮಾಪಕ ಗುರು ದೇಶಪಾಂಡೆ ಸಾಕಷ್ಟು ಸಂಕಷ್ಟ ಅನುಭವಿಸುವಂತಾಗಿತ್ತು. ಈ ಆಘಾತದಿಂದ ಚೇತರಿಸಿಕೊಂಡ ಚಿತ್ರತಂಡ ಸಿನಿಮಾ ಪೂರ್ಣಗೊಳಿಸಿ ತೆರೆಗೆ ಬರಲು ಸಿದ್ಧತೆ ನಡೆಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಚಿತ್ರದ ವೀಡಿಯೋ ಸಾಂಗ್‌ ದೊಡ್ಡ ಸಂಖ್ಯೆಯಲ್ಲಿ ವೀಕ್ಷಣೆ ಪಡೆದಿದೆ. ನಾಗಾರ್ಜುನ್ ಶರ್ಮಾ ರಚಿಸಿರುವ ಈ ಹಾಡಿಗೆ ಕದ್ರಿ ಮಣಿಕಾಂತ್ ಸಂಗೀತ ಸಂಯೋಜಿಸಿದ್ದು, ಸಿದ್ ಶ್ರೀರಾಮ್ ಮತ್ತು ಸುಪ್ರಿಯಾ ರಾಮ್ ದನಿಯಾಗಿದ್ದಾರೆ. ಅಚ್ಯುತ್ ಕುಮಾರ್, ಬಿ.ಸುರೇಶ, ರಾಘು ಶಿವಮೊಗ್ಗ ಚಿತ್ರದ ಪ್ರಮುಖ ಪಾತ್ರಗಳಲ್ಲಿದ್ದಾರೆ.

Previous articleಬರ್ಲಿನ್‌ ಫಿಲ್ಮ್‌ ಫೆಸ್ಟಿವಲ್‌ಗೆ ‘ಗಂಗೂಭಾಯಿ ಕಥೈವಾಡಿ’; ಬನ್ಸಾಲಿ – ಅಲಿಯಾ ಸಿನಿಮಾ
Next articleವಾಟ್‌ ಹ್ಯಾಪನ್ಡ್‌ ಟು ಮಂಡೇ; ನೆಟ್‌ಫ್ಲಿಕ್ಸ್‌ನಲ್ಲಿ ಸೈನ್ಸ್‌ ಫಿಕ್ಷನ್‌ ಇಂಗ್ಲಿಷ್‌ ಸಿನಿಮಾ

LEAVE A REPLY

Connect with

Please enter your comment!
Please enter your name here