ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದಲ್ಲಿ ಅಲಿಯಾ ಭಟ್ ನಟಿಸಿದ್ದ ‘ಗಂಗೂಬಾಯಿ ಕಥೈವಾಡಿ’ ಸಿನಿಮಾ ಫೆಬ್ರವರಿ 25ರಂದು ಥಿಯೇಟರ್‌ಗೆ ಬಂದಿತ್ತು. ವಿಶ್ಲೇಷಕರು ಮತ್ತು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದ ಸಿನಿಮಾ ಇದೀಗ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ.
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಗಂಗೂಭಾಯಿ ಕಥೈವಾಡಿ’ ಹಿಂದಿ ಸಿನಿಮಾ ಬಿಡುಗಡೆಗೆ ಮುನ್ನವೇ 2022ರ ಫೆಬ್ರವರಿಯಲ್ಲಿ ನಡೆದ ಪ್ರತಿಷ್ಠಿತ ಬರ್ಲಿನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರದರ್ಶನಗೊಂಡಿತ್ತು. ಖ್ಯಾತ ಲೇಖಕ ಹುಸೇನ್ ಝೈದಿ ಅವರ ‘ಮಾಫಿಯಾ ಕ್ವೀನ್ಸ್ ಆಫ್ ಮುಂಬೈ’ ಕೃತಿಯಲ್ಲಿನ ಒಂದು ಚಾಪ್ಟರ್ ಆಧರಿಸಿ ತಯಾರಾಗಿರುವ ಚಿತ್ರವಿದು. ಅರವತ್ತರ ದಶಕದಲ್ಲಿ ಮುಂಬಯಿ ಕಾಮಾಟಿಪುರದ ಪ್ರಭಾವಶಾಲಿ ಮತ್ತು ಗೌರವಾನ್ವಿತ ಮಹಿಳೆ ಗಂಗೂಭಾಯಿ ಕಥೈವಾಡಿ ಬದುಕಿನ ಕತೆಯಿದು. ಫೆಬ್ರವರಿ 25ರಂದು ಥಿಯೇಟರ್‌ನಲ್ಲಿ ತೆರೆಕಂಡಿದ್ದ ಚಿತ್ರಕ್ಕೆ ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು. ಶೀರ್ಷಿಕೆ ಪಾತ್ರಕ್ಕೆ ಜೀವ ತುಂಬಿದ್ದ ಅಲಿಯಾ ಭಟ್‌ಗೆ ಪ್ರಶಂಸೆ ವ್ಯಕ್ತವಾಗಿತ್ತು.
ಸುಮಾರು 150 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣವಾದ ಸಿನಿಮಾ 197 ಕೋಟಿ ರೂಪಾಯಿ ಗಳಿಸಿದೆ ಎನ್ನುವುದು ಅಂದಾಜು. ಇದೀಗ ಸಿನಿಮಾ ಓಟಿಟಿಗೆ ಬಂದಿದೆ. ನಿನ್ನೆಯಿಂದ (ಏಪ್ರಿಲ್ 26) ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ಸ್ಟ್ರೀಮ್ ಆಗುತ್ತಿದೆ. ಈ ಮಧ್ಯೆ ಚಿತ್ರತಂಡ ಸಿನಿಮಾದ ಎರಡು ಮೇಕಿಂಗ್ ವೀಡಿಯೋಗಳನ್ನು ರಿಲೀಸ್ ಮಾಡಿದೆ. ಚಿತ್ರದ ಮತ್ತೊಂದು ಪ್ರಮುಖ ಪಾತ್ರದಲ್ಲಿ ಸೀಮಾ ಪಾಹ್ವಾ ನಟಿಸಿದ್ದರೆ, ಅಜಯ್ ದೇವಗನ್ ಮತ್ತು ಹ್ಯೂಮಾ ಖುರೇಷಿ ಅತಿಥಿ ಪಾತ್ರಗಳಲ್ಲಿದ್ದಾರೆ. ಬನ್ಸಾಲಿ ಮತ್ತು ಪೆನ್ ಇಂಡಿಯಾ ಲಿಮಿಟೆಡ್‌ನ ಜಯಂತಿಲಾಲ್ ಗಡಾ ಜೊತೆಗೂಡಿ ನಿರ್ಮಿಸಿರುವ ಚಿತ್ರವಿದು.