ವೆಂಕಟೇಶ್‌ ಅಭಿನಯದ ‘ದೃಶ್ಯಂ 2’ ತೆಲುಗು ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಇದು ಮೋಹನ್‌ಲಾಲ್‌ ಅವರ ‘ದೃಶ್ಯಂ 2’ ಮಲಯಾಳಂ ಚಿತ್ರದ ರೀಮೇಕ್‌. ಅಮೇಜಾನ್ ಪ್ರೈಮ್‌ನಲ್ಲಿ ಇದೇ ನವೆಂಬರ್‌ 25ರಂದು ಸಿನಿಮಾ ಸ್ಟ್ರೀಮ್ ಆಗಲಿದೆ.

ಮೋಹನ್ ಲಾಲ್‌ ಅಭಿನಯದ ಯಶಸ್ವೀ ‘ದೃಶ್ಯಂ 2’ ಮಲಯಾಳಂ ಸಿನಿಮಾದ ತೆಲುಗು ರೀಮೇಕ್‌ ‘ದೃಶ್ಯಂ 2’  ಟ್ರೈಲರ್ ಬಿಡುಗಡೆಯಾಗಿದೆ. ಟ್ರೈಲರ್‌ ನೋಡಿದರೆ ಮಲಯಾಳಂನ ‘ದೃಶ್ಯಂ 2’ ಚಿತ್ರವನ್ನು ನಿರ್ದೇಶಕರು ತೆಲುಗಿಗೆ ಯಥಾವತ್ತಾಗಿ ಇಳಿಸಿದ್ದಾರೆ ಎನ್ನಬಹುದು. ಇನ್ನು ‘ದೃಶ್ಯಂ 2’ ಚಿತ್ರದಲ್ಲಿ ರಾಮ್‌ ಬಾಬು ಈ ಮುಂಚೆ ತಾನು, ತನ್ನ ಕುಟುಂಬ ಪಟ್ಟ ಕಷ್ಟಗಳಣ್ನು ಮರೆಯಲು ಅಥವಾ ನೆಮ್ಮದಿಯ ಜೀವನ ನಡೆಸಲು ಮುಂದಾಗುತ್ತಾನೆ. ಇದರ ನಡುವೆ ತನ್ನದೇ ಸ್ವಂತ ಚಿತ್ರಮಂದಿರ ಕಟ್ಟಿಸುತ್ತಾಎ. ಜೊತೆಗೆ ಚಿತ್ರ ನಿರ್ಮಾಣ ಮಾಡುವ ಕನಸು ಕಾಣುತ್ತಾನೆ. ಹಳೆಯ ಕಷ್ಟಗಳನ್ನು ಮರೆಯಲು ತನ್ನನ್ನು ತಾನು ಕೆಲಸಗಳಲ್ಲಿ ತೊಡಗಿಸಿಕೊಂಡರೆ, ವಿಧಿ ಆತನನ್ನು ನೆಮ್ಮದಿಯಾಗಿರಲು ಬಿಡುವುದಿಲ್ಲ.

ಆದರೆ ರಾಮ್‌ ಬಾಬು ಛಲ ಬಿಡದೇ ಮತ್ತೆ ತನ್ನ ಕುಟುಂಬವನ್ನು ರಕ್ಷಣೆ ಮಾಡಲು ಮುಂದಾಗುತ್ತಾನೆ ಅನ್ನೋದೇ ‘ದೃಶ್ಯಂ 2’ ಚಿತ್ರದ ಮುಖ್ಯ ಕಥೆ. ಈ ಚಿತ್ರದಲ್ಲೂ ಟ್ವಿಸ್ಟ್ ಮೇಲೆ ಟ್ವಿಸ್ಟ್ ಇದ್ದು, ನೋಡುಗರನ್ನು ಕೊನೆತನಕ ಕ್ಯೂರಿಯಾಸಿಟಿ ಇರಿಸುತ್ತದೆ ಎನ್ನುವುದು ಚಿತ್ರತಂಡದ ಹೇಳಿಕೆ. ‘ದೃಶ್ಯಂ’ ಮೊದಲ ಭಾಗದಲ್ಲಿ ವೆಂಕಟೇಶ್‌ಗೆ ಜೊತೆಯಾಗಿದ್ದ ಮೀನಾ ಸರಣಿಯಲ್ಲೂ ನಾಯಕಿ. ಭರಣಿ, ನದಿಯಾ, ನರೇಶ್‌, ಸಂಪತ್‌ರಾಜ್‌, ಎಸ್ತರ್‌ ಅನಿಲ್‌ ಇತರರು ಚಿತ್ರದ ಪ್ರಮುಖ ಪಾತ್ರಗಳಲ್ಲಿದ್ದಾರೆ. ಮೂಲ ಮಲಯಾಳಂ ಸಿನಿಮಾ ನಿರ್ದೇಶಿಸಿದ್ದ ಜೀತು ಜೋಸೆಫ್ ಅವರೇ ತೆಲುಗು ರೀಮೇಕ್‌ಗೆ ಆಕ್ಷನ್‌ – ಕಟ್‌ ಹೇಳಿದ್ದಾರೆ. ಚಿತ್ರ ಇದೇ ನವೆಂಬರ್ 25ರಂದು ಅಮೇಜಾನ್ ಪ್ರೈಮ್‌ನಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ.

LEAVE A REPLY

Connect with

Please enter your comment!
Please enter your name here