ಸಮರ್ಜಿತ್‌ ಲಂಕೇಶ್‌ ಮತ್ತು ಸಾನ್ಯಾ ಅಯ್ಯರ್‌ ಜೋಡಿಯ ‘ಗೌರಿ’ ಸಿನಿಮಾದ ಪ್ರೀ ಟೀಸರ್‌ ರಿಲೀಸ್‌ ಆಗಿದೆ. ಇಂದ್ರಜಿತ್‌ ಲಂಕೇಶ್‌ ನಿರ್ಮಿಸಿ, ನಿರ್ದೇಶಿಸುತ್ತಿರುವ ಚಿತ್ರವಿದು. ಕ್ರಿಕೆಟರ್‌ ಅನಿಲ್‌ ಕುಂಬ್ಳೆ ಮತ್ತು ಚಿತ್ರನಿರ್ಮಾಪಕಿ ಅಶ್ವಿನಿ ಪುನೀತ್‌ ರಾಜಕುಮಾರ್‌ ಅತಿಥಿಗಳಾಗಿ ಪಾಲ್ಗೊಂಡು ಸಿನಿಮಾಗೆ ಶುಭಹಾರೈಸಿದರು.

ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಅವರ ಮಗ ಸಮರ್ಜಿತ್‌ ಲಂಕೇಶ್‌ ನಾಯಕನಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಡಲು ಸಜ್ಜಾಗಿದ್ದಾರೆ. ಲಾಫಿಂಗ್ ಬುದ್ದ ಫಿಲಂಸ್ ಲಾಂಛನದಡಿ ಇಂದ್ರಜಿತ್ ಲಂಕೇಶ್ ನಿರ್ಮಿಸಿ, ನಿರ್ದೇಶಿಸಿರುವ ಸಿನಿಮಾ ‘ಗೌರಿ’. ಇತ್ತೀಚೆಗೆ ಈ ಚಿತ್ರದ ಪ್ರೀ ಟೀಸರ್ ಬಿಡುಗಡೆ ಸಮಾರಂಭ ನೆರವೇರಿತು. ಭಾರತೀಯ ಕ್ರಿಕೆಟ್‌ನ ಜಂಬೊ ಅನಿಲ್ ಕುಂಬ್ಳೆ ಹಾಗೂ ಚಿತ್ರನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್ ‘ಗೌರಿ’ ಚಿತ್ರದ ಪ್ರೀ ಟೀಸರ್ ಬಿಡುಗಡೆ ಮಾಡಿ ಶುಭ ಕೋರಿದರು. ಚಿತ್ರನಿರ್ಮಾಪಕ ರಮೇಶ್ ರೆಡ್ಡಿ, ಪತ್ರಕರ್ತ ಸದಾಶಿವ ಶೆಣೈ, ಚಿತ್ರನಿರ್ದೇಶಕಿ ಕವಿತಾ ಲಂಕೇಶ್ ಸೇರಿದಂತೆ ಇತರೆ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಪ್ರೀ ಟೀಸರ್‌ ಬಿಡುಗಡೆ ಮಾಡಿ ಮಾತನಾಡಿದ ಅನಿಲ್ ಕುಂಬ್ಳೆ, ‘ನಾನು ಹಾಗೂ ಅಜಿತ್ ಹಲವು ವರ್ಷಗಳ ಗೆಳೆಯರು. ಅವರ ಮಗ ಸಮರ್ಜಿತ್ ನನ್ನ ಜೊತೆ ಜಾಹೀರಾತೊಂದರಲ್ಲಿ ಅಭಿನಯಿಸಿದ್ದರು. ಈಗ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಸಾನ್ಯಾ ಅಯ್ಯರ್ ನಾಯಕಿಯಾಗಿ ನಟಿಸಿದ್ದಾರೆ. ಇಬ್ಬರು ಯುವ ಪ್ರತಿಭೆಗಳ ಭವಿಷ್ಯ ಉಜ್ವಲವಾಗಲಿ’ ಎಂದು ಹಾರೈಸಿದರು.

‘ಅನಿಲ್ ಕುಂಬ್ಳೆ ಅವರ ಜೊತೆಗೆ ನನ್ನದು ಮೂವತ್ತು ವರ್ಷಕ್ಕೂ ಮೀರಿದ ಗೆಳೆತನ. ಹಾಗೆ ಪುನೀತ್ ರಾಜಕುಮಾರ್ ಸಹ ಬಹಳ ಆತ್ಮೀಯರು. ಇಂದು ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಅನಿಲ್ ಕುಂಬ್ಳೆ ಅವರು ನಮ್ಮ ‘ಗೌರಿ’ ಚಿತ್ರದ ಪ್ರೀ ಟೀಸರ್ ಬಿಡುಗಡೆ ಮಾಡಿಕೊಟ್ಟಿದ್ದಕ್ಕೆ ಧನ್ಯವಾದ. ನನ್ನ ಮಗ ಸಮರ್ಜಿತ್ ನಾಯಕನಾಗಲು ಬೇಕಾದ ಎಲ್ಲ ತಯಾರಿ ಮಾಡಿಕೊಂಡು ಈ ಚಿತ್ರದಲ್ಲಿ ಅಭಿನಯಿಸಿದ್ದಾನೆ.‌ ಸಾನ್ಯಾ ಅವರ ಅಭಿನಯ ಕೂಡ ಉತ್ತಮವಾಗಿದೆ. ಈ ಸಿನಿಮಾ ಯಾವುದಕ್ಕೂ ಕಡಿಮೆ ಇಲ್ಲದಂತೆ ಅದ್ದೂರಿಯಾಗಿ ಮೂಡಿಬಂದಿದೆ. ನುರಿತ ತಂತ್ರಜ್ಞರ ಕಾರ್ಯವೈಖರಿ ಮತ್ತು ಕಲಾವಿದರ ಉತ್ತಮ ಅಭಿನಯದಿಂದ ಚಿತ್ರ ಚೆನ್ನಾಗಿ ಬಂದಿದೆ’ ಎಂದು ಇಂದ್ರಜಿತ್ ಲಂಕೇಶ್ ತಿಳಿಸಿದರು.

‘ನಮ್ಮ ಚಿತ್ರದ ಪ್ರೀ ಟೀಸರ್ ಬಿಡುಗಡೆ ಮಾಡಿಕೊಟ್ಟ ಅನಿಲ್ ಕುಂಬ್ಳೆ ಹಾಗೂ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ತುಂಬು ಹೃದಯದ ಧನ್ಯವಾದಗಳು.‌ ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ’ ಎಂದು ಸಮರ್ಜಿತ್‌ ಲಂಕೇಶ್ ಮನವಿ ಮಾಡಿದರು. ಚಿತ್ರಕ್ಕೆ ಎ ಜೆ ಶೆಟ್ಟಿ ಹಾಗೂ ಕೆ ಕೆ ಇಬ್ಬರು ಛಾಯಾಗ್ರಾಹಕರಿದ್ದಾರೆ. ಜೆಸ್ಸಿ ಗಿಫ್ಟ್, ಚಂದನ್ ಶೆಟ್ಟಿ, ಶಿವು ಭೇರ್ಗಿ ಹಾಗೂ ಅನಿರುದ್ದ್ ಶಾಸ್ತ್ರಿ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ವಿ ನಾಗೇಂದ್ರಪ್ರಸಾದ್, ಕವಿರಾಜ್, ಕೆ ಕಲ್ಯಾಣ್, ವರದರಾಜ್ ಚಿತ್ರಕ್ಕೆ ಹಾಡುಗಳನ್ನು ರಚಿಸಿದ್ದಾರೆ. ಕೈಲಾಶ್ ಖೇರ್, ಚಂದನ್ ಶೆಟ್ಟಿ, ಅನಿರುದ್ಧ ಶಾಸ್ತ್ರಿ, ಜಾವೇದ್ ಅಲಿ, ಅನನ್ಯ ಭಟ್, ನಿಹಾಲ್ ತೌರೋ , ಅದಿತಿ ಸಾಗರ್, ಬಾಲಸುಬ್ರಹ್ಮಣ್ಯಂ ಹಾಗೂ ಪ್ರಜ್ಞಾ ಮರಾಠೆ, ಸಮರ್ಜಿತ್ ಈ ಚಿತ್ರದ ಹಾಡುಗಳನ್ನು ಹಾಡಿದ್ದಾರೆ. ಗುಬ್ಬಿ, ಮಾಸ್ತಿ, ರಾಜಶೇಖರ್ ಹಾಗೂ ಬಿ.ಎ.ಮಧು ಸಂಭಾಷಣೆ ಬರೆದಿದ್ದಾರೆ. ರವಿವರ್ಮ, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಮಾಡಿದ್ದಾರೆ.

LEAVE A REPLY

Connect with

Please enter your comment!
Please enter your name here