ಸತ್ಯ ಹೆಗಡೆ ಸ್ಟುಡಿಯೋಸ್‌ ಯೂಟ್ಯೂಬ್‌ ಚಾನೆಲ್‌ ಪ್ರತಿಭಾವಂತ ತಂತ್ರಜ್ಞರು ಹಾಗೂ ಕಲಾವಿದರಿಗೆ ಒಂದೊಳ್ಳೆಯ ವೇದಿಕೆ. ಇದೀಗ ಮಾಧ್ಯಮ ಅನೇಕ ಮೀಡಿಯಾ ಹೌಸ್‌, ಸತ್ಯ ಹೆಗಡೆ ಸ್ಟುಡಿಯೋಸ್‌ ಜೊತೆ ಕೈಜೋಡಿಸಿದೆ. ಸತ್ಯ ಹೆಗಡೆ ಸ್ಟುಡಿಯೋಸ್‌ ಚಾನೆಲ್‌ನಲ್ಲಿ ಕಿರುಚಿತ್ರಗಳ ಮೂಲಕ ಗಮನಸೆಳೆದ ಸೃಜನಶೀಲರಿಗೆ ತಮ್ಮ ‘AnekaPlus’ ಓಟಿಟಿ ಪ್ಲಾಟ್‌ಫಾರ್ಮ್‌ ಪ್ರಾಜೆಕ್ಟ್‌ಗಳಲ್ಲಿ ಅವಕಾಶ ಕಲ್ಪಿಸಲು ‘ಮಾಧ್ಯಮ ಅನೇಕ’ ಉದ್ದೇಶಿಸಿದೆ.

ಸತ್ಯ ಹೆಗಡೆ ಸ್ಟುಡಿಯೋಸ್‌ ಯೂಟ್ಯೂಬ್‌ ಚಾನೆಲ್‌ನಲ್ಲಿ ನಿನ್ನೆ ಹೊಸ ಕಿರುಚಿತ್ರ ‘ಟ್ರೈನ್‌’ ಬಿಡುಗಡೆಯಾಗಿದೆ. ವಿನಯ್‌ ಕುಮಾರ್‌ ಎಂ ಜಿ ನಿರ್ದೇಶನದ 9 ನಿಮಿಷಗಳ ಈ ಕಿರುಚಿತ್ರ ನಿನ್ನೆ ನಡೆದ ಕಾರ್ಯಕ್ರಮದಲ್ಲಿ ರಿಲೀಸ್‌ ಆಯ್ತು. ಇದೇ ವೇಳೆ ಯೂಟ್ಯೂಬ್‌ ಚಾನೆಲ್‌ನಲ್ಲಿ ಮುಂಬರುವ ದಿನಗಳಲ್ಲಿ ಬರುವ ‘ಅವಳು’, ‘ನೊ ಶೇಮ್‌’ ಮತ್ತು ‘ದಿ ಎಂಡ್‌’ ಕಿರುಚಿತ್ರಗಳ ಬಗ್ಗೆ ಸತ್ಯ ಹೆಗಡೆ ಮಾಹಿತಿ ನೀಡಿದರು. ಈ ಶಾರ್ಟ್‌ ಫಿಲ್ಮ್‌ಗಳ ಟೀಸರ್‌ ಕೂಡ ಬಂದಿದೆ. ಸಿನಿಮಾ, ಸೀರಿಯಲ್‌, ವೆಬ್‌ ಸರಣಿಗಳನ್ನು ರೂಪಿಸಲು ಹೊರಡುವ ಸೃಜನಶೀಲರು ತಮ್ಮ ಪ್ರತಿಭೆ ಸಾಬೀತು ಮಾಡಲು ಶಾರ್ಟ್‌ಫಿಲ್ಮ್‌ಗಳು ಉತ್ತಮ ವೇದಿಕೆ. ಸಿನಿಮಾ ಛಾಯಾಗ್ರಾಹಕ ಸತ್ಯ ಹೆಗಡೆ ಅವರು ಇದೇ ಉದ್ದೇಶದಿಂದಲೇ ಸತ್ಯ ಹೆಗಡೆ ಸ್ಟುಡಿಯೋಸ್‌ ಯೂಟ್ಯೂಬ್‌ ಚಾನೆಲ್‌ ಆರಂಭಿಸಿದ್ದು. ಸ್ವತಃ ತಾವೂ ಕಿರುಚಿತ್ರಗಳನ್ನು ನಿರ್ಮಿಸುತ್ತಾ, ಕಿರುಚಿತ್ರಗಳನ್ನು ನಿರ್ಮಿಸುವ ಇತರರಿಗೂ ಚಾನೆಲ್‌ನಲ್ಲಿ ಜಾಗ ಕಲ್ಪಿಸಿದ್ದಾರೆ.

ಇಲ್ಲಿಯವರೆಗೆ ಚಾನೆಲ್‌ನಲ್ಲಿ ಹಲವಾರು ಶಾರ್ಟ್‌ಫಿಲ್ಮ್‌ಗಳು ಸ್ಟ್ರೀಮ್‌ ಆಗಿವೆ. ಸತ್ಯ ಹೆಗಡೆ ಮತ್ತು ಅವರ ಸಮಾನ ಮನಸ್ಕ ಸ್ನೇಹಿತರ ಸಲಹೆ – ಮಾರ್ಗದರ್ಶನದಿಂದಾಗಿ ಇವೆಲ್ಲವೂ ಗುಣಮಟ್ಟದ ಕಿರುಚಿತ್ರಗಳೇ ಆಗಿವೆ. ಈ ಬಗ್ಗೆ ಮಾತನಾಡುವ ಸತ್ಯ ಹೆಗಡೆ, ‘ಕಿರುಚಿತ್ರಗಳ ಮೂಲಕ ಕಂಟೆಂಟ್‌, ತಾಂತ್ರಿಕ ವಿಷಯದಲ್ಲಿ ನಾವು ಸಾಕಷ್ಟು ಹೇಳಬಹುದು. ದುಬಾರಿ ಕ್ಯಾಮೆರಾ, ದೊಡ್ಡ ಇನ್‌ಫ್ರಾಸ್ಟ್ರಕ್ಚರ್‌ ಇಲ್ಲಿ ಅಗತ್ಯವಿಲ್ಲ. ವಾವ್‌ ಎನಿಸುವಂತಹ ಕತೆ ಇದ್ದು, ಅದು ನೋಡುಗನಿಗೆ ಹೊಸತೇನನ್ನೋ ಕನ್ವೇ ಮಾಡಬೇಕು. ಈ ಮೂಲಕ ದೃಶ್ಯಮಾಧ್ಯಮದ ಸಾಧ್ಯತೆಗಳನ್ನು ಎಕ್ಸ್‌ಪ್ಲೋರ್‌ ಮಾಡುವುದು ನಮ್ಮ ಪ್ರಮುಖ ಉದ್ದೇಶವಾಗಿತ್ತು. ನಮ್ಮ ಆಶಯಕ್ಕೆ ಇಂಬು ನೀಡುವಂತೆ ಯೂಟ್ಯೂಬ್‌ ಚಾನೆಲ್‌ನಲ್ಲೀಗ ವಿಭಿನ್ನ ವಸ್ತು – ವಿಷಯಗಳ ಕಿರುಚಿತ್ರಗಳು ಸ್ಟ್ರೀಮ್‌ ಆಗುತ್ತಿವೆ’ ಎನ್ನುತ್ತಾರೆ.

ದಿ ಕ್ರಿಟಿಕ್‌, Puppets, Infinity, ಲಾಸ್ಟ್‌ ಆರ್ಡರ್‌, ಕಾಲ, The la(o)st case, ನಾಟಕದ್‌ company, ರಿಪೇರಿ ರಾಮಣ್ಣ, Unlock, ಕತೆಗಾರನ ಕತೆ… ಹೀಗೆ ಸದ್ಯ ಸತ್ಯ ಹೆಗಡೆ ಯೂಟ್ಯೂಬ್‌ ಚಾನೆಲ್‌ನಲ್ಲೀಗ ಹಲವು ಶಾರ್ಟ್‌ಫಿಲ್ಮ್‌ಗಳು ಸ್ಟ್ರೀಮ್‌ ಆಗುತ್ತಿವೆ. ಇಲ್ಲಿ ಅನುಭವ ಪಡೆದ ಯುವ ತಂತ್ರಜ್ಞರು ಆತ್ಮವಿಶ್ವಾಸದಿಂದ ಸಿನಿಮಾ ಸೇರಿದಂತೆ ಇನ್ನಿತರೆ ಪ್ರಾಜೆಕ್ಟ್‌ಗಳನ್ನು ಕೈಗೆತ್ತಿಕೊಳ್ಳಬಹುದು. ಕಿರುಚಿತ್ರ ಮಾಡುವವರಿಗೆ ಚಾನೆಲ್‌ ಕಡೆಯಿಂದ ಏನಾದರೂ ನಿರ್ದಿಷ್ಟ ಮಾನದಂಡಗಳಿವೆಯೇ? ‘ಹಾಗೇನಿಲ್ಲ, ಕೆಲವು ಬಾರಿ ನಾವೇ ಕತೆ ಕೊಟ್ಟು ನಿರೂಪಿಸುವಂತೆ ಹೇಳುತ್ತೇವೆ. ಹಲವು ಬಾರಿ ಆಸಕ್ತರು ತಾವೇ ನಮ್ಮ ಬಳಿಗೆ ಕಾನ್ಸೆಪ್ಟ್‌ಗಳನ್ನು ತಂದಿರುತ್ತಾರೆ. ನಮ್ಮ ಅನುಭವದ ಹಿನ್ನೆಲೆಯಲ್ಲಿ ಕೆಲವು ಕರೆಕ್ಷನ್ಸ್‌ ಹೇಳುತ್ತೇವಷ್ಟೆ. ಅವರಿಗೆ ಸಂಪೂರ್ಣ ಕ್ರಿಯೇಟಿವ್‌ ಫ್ರೀಡಂ ಇರುತ್ತದೆ’ ಎನ್ನುತ್ತಾರೆ ಸತ್ಯ ಹೆಗಡೆ.

‘ಮಾಧ್ಯಮ ಅನೇಕ’ದ ಸಹಯೋಗ
ಸತ್ಯ ಹೆಗಡೆ ಸ್ಟುಡಿಯೋ ಯೂಟ್ಯೂಬ್‌ ಚಾನೆಲ್‌ನಲ್ಲಿ ನಿನ್ನೆ ‘ಟ್ರೈನ್‌’ ಕಿರುಚಿತ್ರ ಬಿಡುಗಡೆಯಾಯ್ತು. ವಿನಯ್‌ ಕುಮಾರ್‌ ಎಂ ಜಿ ನಿರ್ದೇಶನದ 9 ನಿಮಿಷಗಳ ಚಿತ್ರವಿದು. ಬೆಂಗಳೂರಿನ ಸುಚಿತ್ರಾ ಫಿಲ್ಮ್‌ ಸೊಸೈಟಿ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಮಾಧ್ಯಮ ಅನೇಕ’ ಮೀಡಿಯಾ ಹೌಸ್‌ನ ಮುಖ್ಯಸ್ಥರಾದ ಅರವಿಂದ ಮೋತಿ ಅವರು ಅತಿಥಿಯಾಗಿ ಪಾಲ್ಗೊಂಡಿದ್ದರು. ಕಿರುಚಿತ್ರಗಳ ಮೂಲಕ ಭರವಸೆ ಮೂಡಿಸಿರುವ ಸೃಜನಶೀಲರಿಗೆ ಅವರಿಂದ ಸಾಕಷ್ಟು ಪ್ರಶಂಸೆ ವ್ಯಕ್ತವಾಯ್ತು. ಮುಂದಿನ ದಿನಗಳಲ್ಲಿ ತಮ್ಮ ಮೀಡಿಯಾ ಹೌಸ್‌ನ ‘AnekaPlus’ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಅವಕಾಸ ಕಲ್ಪಿಸುವುದು ಅವರ ಯೋಜನೆ. ಈ ಕುರಿತು ಮಾತನಾಡಿದ ಅರವಿಂದ ಮೋತಿ, ‘ಸಿನಿಮಾ, ವೆಬ್‌ ಸರಣಿ, ಸೀರಿಯಲ್‌ಗಳಲ್ಲಿ ಬರಹಗಾರರು, ಕಲಾವಿದರು, ತಂತ್ರಜ್ಞರಾಗಿ ಕೆಲಸ ಮಾಡಲು ಇಚ್ಛಿಸುವ ಆಸಕ್ತರಿಗೆ ಶಾರ್ಟ್‌ಫಿಲ್ಮ್‌ಗಳು ಮೊದಲ ಹೆಜ್ಜೆ. ಇಲ್ಲಿ ಅನುಭವ ಪಡೆದವರು ನಮ್ಮ AnekaPlus ಓಟಿಟಿ ಪ್ಲಾಟ್‌ಫಾರ್ಮ್‌ ಪ್ರಾಜೆಕ್ಟ್‌ಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು. ಈ ನಿಟ್ಟಿನಲ್ಲಿ ಸತ್ಯ ಹೆಗಡೆ ಸ್ಟುಡಿಯೋಸ್‌ನೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತೇವೆ’ ಎಂದರು.

ಈ ಅಶಯವನ್ನು ಸ್ವಾಗತಿಸುವ ಸತ್ಯ ಹೆಗಡೆ, ‘ಕಿರುಚಿತ್ರಗಳನ್ನು ಮಾಡಿ ಕಾನ್ಫಿಡೆನ್ಸ್‌ ಬಂದರೆ ಯುವ ಸೃಜನಶೀಲರು ದೊಡ್ಡ ಯೋಜನೆಗಳಿಗೆ ಕೈಹಾಕುತ್ತಾರೆ. ಅಗತ್ಯ ತಯಾರಿ, ಬರವಣಿಗೆ ಮಾಡಿಕೊಂಡು ನಿರ್ಮಾಪಕರನ್ನು ಅಪ್ರೋಚ್‌ ಮಾಡುತ್ತಾರೆ, ಯಶಸ್ವಿಯೂ ಆಗುತ್ತಾರೆ. ಈ ಹಿನ್ನೆಲೆಯಲ್ಲಿ ಮಾಧ್ಯಮ ಅನೇಕ ಮೀಡಿಯಾ ಹೌಸ್‌ ತಮ್ಮ ಯೋಜನೆಗಳಿಗೆ ಅವರಿಗೆ ಅವಕಾಶ ಕಲ್ಪಿಸಲು ಮುಂದಾಗಿರುವುದು ಉತ್ತಮ ಬೆಳವಣಿಗೆ. ಪ್ರತಿಭಾವಂತರು AnekaPlus ಓಟಿಟಿ ವೇದಿಕೆಯನ್ನು ಸೂಕ್ತ ರೀತಿಯಲ್ಲಿ ಬಳಕೆ ಮಾಡಿಕೊಳ್ಳುವಂತಾಗಲಿ’ ಎನ್ನುತ್ತಾರೆ. ಅವರು ಸದ್ಯ ಧ್ರುವ ಸರ್ಜಾ ಅಭಿನಯದ ‘ಮಾರ್ಟಿನ್‌’ ಸಿನಿಮಾದ ಕೊನೆಯ ಹಂತದ ಚಿತ್ರೀಕರಣದಲ್ಲಿದ್ದಾರೆ. ಇದಾದ ನಂತರ ಶಿವರಾಜಕುಮಾರ್‌, ಉಪೇಂದ್ರ, ರಾಜ್‌ ಬಿ ಶೆಟ್ಟಿ ಅಭಿನಯದ ’45’ ಸಿನಿಮಾದ ಶೂಟಿಂಗ್‌. ಸಿನಿಮಾಗಳ ಮಧ್ಯೆ ಬಿಡುವು ಮಾಡಿಕೊಂಡು ಸತ್ಯ ಹೆಗಡೆ ಸ್ಟುಡಿಯೋಸ್‌ ಚಾನಲ್‌ನಲ್ಲಿ ತೊಡಗಿಸಿಕೊಳ್ಳುತ್ತಾರೆ.

LEAVE A REPLY

Connect with

Please enter your comment!
Please enter your name here