ಖ್ಯಾತ ಸಂಗೀತ ಸಂಯೋಜಕ, ಗೀತರಚನೆಕಾರ ಹಂಸಲೇಖ ಅವರು ಈ ಬಾರಿಯ ಮೈಸೂರು ದಸರಾ ಉದ್ಘಾಟಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಈ ಮಾಹಿತಿ ಹಂಚಿಕೊಂಡಿದ್ದಾರೆ. ಅಕ್ಟೋಬರ್‌ 15ರಂದು ಬೆಳಗ್ಗೆ ದಸರಾಗೆ ಚಾಲನೆ ಸಿಗಲಿದೆ.

ದೇಸಿ ಹಾಡುಗಳ ಮೂಲಕ ಕನ್ನಡಿಗರ ಮನಸೂರೆಗೊಂಡಿರುವ ಗೀತರಚನೆಕಾರ, ಸಂಗೀತ ಸಂಯೋಜಕ ಹಂಸಲೇಖ ಅವರು ಈ ಬಾರಿಯ ದಸರಾ ಉದ್ಘಾಟಿಸಲಿದ್ದಾರೆ. ಇಂದು ಮೈಸೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ವಿಷಯ ತಿಳಿಸಿದ್ದಾರೆ. ಅಕ್ಟೋಬರ್‌ 15ರಂದು ಬೆಳಗ್ಗೆ 10.15ರಿಂದ 10.30ರೊಳಗೆ ಸಲ್ಲುವ ಮುಹೂರ್ತದಲ್ಲಿ ದಸರಾಗೆ ಚಾಲನೆ ಸಿಗಲಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರ ಉಪಸ್ಥಿತಿ ಇರಲಿದೆ. ಈ ಬಾರಿ ಅಕ್ಟೋಬರ್ 15ರಿಂದ ಅಕ್ಟೋಬರ್ 24ರವರೆಗೆ ದಸರಾ ಉತ್ಸವ ಆಚರಿಸಲಾಗುವುದು. ನವರಾತ್ರಿ ಆಚರಣೆಗಳು ಅಕ್ಟೋಬರ್ 15 (ಭಾನುವಾರ) ಆರಂಭವಾಗಲಿದೆ. ಆಯುಧಪೂಜೆ ಅಕ್ಟೋಬರ್ 23 (ಸೋಮವಾರ) ಮತ್ತು ಅಕ್ಟೋಬರ್ 24 ರಂದು (ಮಂಗಳವಾರ) ವಿಜಯದಶಮಿ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು, ಚಲನಚಿತ್ರೋತ್ಸವ, ರೈತ ದಸರಾ, ಯುವ ದಸರಾ ಆಯೋಜನೆಗೊಳ್ಳಲಿವೆ. ದಸರಾ ಉದ್ಘಾಟನೆಯಾದ ದಿನದಿಂದ ದಸರಾ ಮುಗಿಯುವವರೆಗೂ ಹಾಗೂ ನಂತರ ಒಂದು ವಾರದವರೆಗೆ ದೀಪಾಲಂಕಾರ ಇರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.

LEAVE A REPLY

Connect with

Please enter your comment!
Please enter your name here