ಇತ್ತೀಚೆಗೆ ಡ್ರಗ್ಸ್ ಪ್ರಕರಣದಲ್ಲಿ ಸುದ್ದಿಯಾಗಿದ್ದ ಸಂಜನಾ ಇದೀಗ ಕ್ಯಾಬ್‌ ‘ಎಸಿ’ ವಿಚಾರದಲ್ಲಿ ತಲೆಬಿಸಿ ಮಾಡಿಕೊಂಡಿದ್ದಾರೆ. ಕ್ಯಾಬ್‌ ಚಾಲಕ ತಮ್ಮ ಮಾತು ಕೇಳ್ಲಿಲ್ಲ ಎನ್ನುವುದು ಅವರ ತಕರಾರು.

ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾಣಿ ಇತ್ತೀಚೆಗೆ ಡ್ರಗ್ಸ್ ಪ್ರಕರಣದಲ್ಲಿ ಸಾಕಷ್ಟು ಸುದ್ದಿಯಾಗಿದ್ದರು. ಸಂಜನಾ ಮೊದಲಿನಿಂದಲೂ ಸಣ್ಣಪುಟ್ಟ ಕಿರಿಕ್‌ಗಳಿಗೆ ಹೆಸರುವಾಸಿ ಆದವರು. ಅದರಲ್ಲಿ ಅವರ ತಪ್ಪಿರುತ್ತಿತ್ತೋ ಅಥವಾ ಇನ್ನೊಂದು ಪಾರ್ಟಿಯ ತಪ್ಪು ಇರುತ್ತಿತ್ತೋ ಗೊತ್ತಿಲ್ಲ. ಆದರೆ ಸಂಜನಾ ಅಂತೂ ಸದಾ ವಿವಾದಗಳಿಗೆ ಹತ್ತಿರವಾದವರು. ಆದರೆ ಈಗ ಸಂಜನಾ ಸುದ್ದಿ ಮಾಡಿರೋ ವಿಷಯದಲ್ಲಿ ಇನ್ನೊಂದು ಪಾರ್ಟಿಯನ್ನು ನೋಡಿದರೆ ಇದು ತೀರಾ ಇಗ್ನೋರ್ ಮಾಡುವಂಥ ವಿಷಯ ಅನ್ನಿಸಬಹುದು. ಹಾಗಂತ ಪಾರ್ಟಿ ಅನ್ನೋ ಪದ ಕೇಳಿ, ಮತ್ತೆ ಸಂಜನಾ ಡ್ರಗ್ಸ್ ಪಾರ್ಟಿ ಮಾಡಿದ್ರಾ ಅಂತೆಲ್ಲ ಸಂದೇಹ ಪಡೋದು ಬೇಡ. ಇಲ್ಲಿ ಹೇಳೋಕೆ ಹೊರಟಿರುವ ಇನ್ನೊಂದು ಪಾರ್ಟಿ ಅಂದ್ರೆ ಅದು ಓಲಾ ಕ್ಯಾಬ್ ಡ್ರೈವರ್.

ಹೌದು ಇತ್ತೀಚೆಗೆ ಬೆಂಗಳೂರಿನಲ್ಲಿ ಓಲಾ ಕಂಪನಿಯ ಕ್ಯಾಬ್‌ನಲ್ಲಿ ಪ್ರಯಾಣ ಮಾಡುವಾಗ ಅದರ ಡ್ರೈವರ್ ಜೊತೆ ಕಿರಿಕ್ ಮಾಡಿಕೊಂಡಿದ್ದಾರೆ. ಮತ್ತು ಅದನ್ನು ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಹೇಳಿಕೊಂಡಿದ್ದಾರೆ. ಸಂಜನಾ ಚಿತ್ರೀಕರಣಕ್ಕೆ ಅಂತ ತೆರಳುವಾಗ ಕ್ಯಾಬ್‌ನಲ್ಲಿದ್ದ ಡ್ರೈವರ್ ಗೆ ಎಸಿ ಹೆಚ್ಚು ಮಾಡುವಂತೆ ಹೇಳಿದ್ದಾರೆ. ಆದರೆ ಹೆಚ್ಚು ಮಾತನಾಡದೇ ನನ್ನ ಮಾತು ಕೇಳುತ್ತಾನೆ ಎಂದುಕೊಂಡಿದ್ದ ಡ್ರೈವರ್,“ಇಲ್ಲ ಮೇಡಂ ಇಷ್ಟ್ ಮಾಡಿದ್ದೇ ಹೆಚ್ಚು” ಅನ್ನೋ ರೀತಿಯಲ್ಲಿ ಮಾತನಾಡಿದನಂತೆ. ಅದಕ್ಕೆ, ಏನೋ ತುಂಬಾ ಹೆಚ್ಚು ಕಮ್ಮಿ ಆಗಿಬಿಡ್ತು ಅನ್ನೋ ರೀತಿ, ಸಂಜನಾ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ತಮಗೆ ದೊಡ್ಡ ಅನ್ಯಾಯ ಆಗಿದೆ ಎನ್ನುವಂತೆ ಹೇಳಿಕೊಂಡಿದ್ದಾರೆ. ಆದರೆ ವಿಶೇಷ ಅಂದ್ರೆ ಅದಕ್ಕೆ ಇತರ ನಾಗರಿಕರಿಂದ ಬೆಂಬಲವೂ ಸಿಕ್ಕಿದೆ. ಸಿಕ್ಕಿದ್ದೇ ಅವಕಾಶ ಎನ್ನುವಂತೆ ನೆಟ್ಟಿಗರೆಲ್ಲ ಕ್ಯಾಬ್‌ಗಳಲ್ಲಿ ಪ್ರಯಾಣಿಸುವಾಗ ತಮಗಾದ ಅನಾನುಕೂಲಗಳನ್ನೆಲ್ಲಾ ಪಟ್ಟಿ ಮಾಡಿ, ಸಂಜನಾ ಅವರ ಬೆಂಬಲಕ್ಕೆ ನಿಂತಿದ್ದಾರೆ. ಆದರೆ ಬಹುಷಃ, ಕ್ಯಾಬ್ ಪ್ರಯಾಣದಲ್ಲಿ ಸ್ಟ್ಯಾಂಡಿಂಗ್ ಇರೋದಿಲ್ಲ ಅನ್ನೋ ಕಾರಣಕ್ಕೋ ಏನೋ, ಇನ್ನೂ ಯಾರೂ ಈವರೆಗೆ “ಐ ಸ್ಟ್ಯಾಂಡ್ ವಿತ್ ಸಂಜನಾ” ಅಂತ ಪೋಸ್ಟ್ ಹಾಕಿಲ್ಲ.

LEAVE A REPLY

Connect with

Please enter your comment!
Please enter your name here