‘ಚುರುಳಿ’ ಮಲಯಾಳಂ ಸಿನಿಮಾ SonyLIVನಲ್ಲಿ ಸ್ಟ್ರೀಮ್ ಆಗುತ್ತಿದೆ. ಈ ಸಿನಿಮಾದಲ್ಲಿ ಅಸಹ್ಯಕರ ಪದಗಳಕೆ ಇದ್ದು, ಸಿನಿಮಾವನ್ನು SonyLIV ಓಟಿಟಿ ಪ್ಲಾಟ್‌ಫಾರ್ಮ್‌ನಿಂದ ತೆಗೆಯಬೇಕೆಂದು ವಕೀಲರೊಬ್ಬರು ದೂರು ಸಲ್ಲಿಸಿದ್ದರು. ಕೇರಳ ಹೈಕೋರ್ಟ್ ಈ ದೂರನ್ನು ವಜಾ ಮಾಡಿದೆ.
ಮಲಯಾಳಂ ಸಿನಿಮಾ ‘ಚುರುಳಿ’ 2021ರ ನವೆಂಬರ್‌ನಿಂದ SonyLIVನಲ್ಲಿ ಸ್ಟ್ರೀಮ್ ಆಗುತ್ತಿದೆ. “ಚಿತ್ರದಲ್ಲಿ ಅತಿ ಹೆಚ್ಚು ಅಸಹ್ಯಕರ ಪದಬಳಕೆ ಮಾಡಲಾಗಿದೆ. ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಈ ಚಿತ್ರವನ್ನು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ನಿಂದ ತೆಗೆಯಬೇಕು” ಎಂದು ವಕೀಲ ಪೆಗ್ಗಿ ಫೆನ್ ನ್ಯಾಯಾಲಕ್ಕೆ ದೂರು ದಾಖಲಿಸಿದ್ದರು. ಇಂದು ಜಸ್ಟೀಸ್ ಪಿ.ವಿ.ಕುನ್ಹಿಕೃಷ್ಣನ್ ಈ ದೂರನ್ನು ವಜಾಗೊಳಿಸಿದ್ದಾರೆ. “ಪ್ರೇಕ್ಷಕರು ಸಿನಿಮಾವನ್ನು ಸಂಪೂರ್ಣವಾಗಿ ವೀಕ್ಷಿಸಿ ನಿರ್ಧಾರಕ್ಕೆ ಬರಬೇಕು. ಚಿತ್ರದ ಕತೆಗೆ ಪೂರಕವಾಗಿ ಸಂಭಾಷಣೆಗಳು ಇರುತ್ತವೆ. ವಾಟ್ಸ್‌ಅಪ್‌ನಲ್ಲಿ ಬಿಡಿಬಿಡಿಯಾಗಿ ಬಂದ ಸಿನಿಮಾದ ವೀಡಿಯೋಗಳನ್ನು ನೋಡಿ ಚಿತ್ರವನ್ನು ಆಕ್ಷೇಪಿಸುವುದು ಸರಿಯಲ್ಲ. ಹೀಗೆ ಸಿನಿಮಾವನ್ನು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ನಿಂದ ತೆಗೆದರೆ ಇದಕ್ಕಾಗಿ ಕೆಲಸ ಮಾಡಿದ ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು, ಕಲಾವಿದರಿಗೆ ಅನ್ಯಾಯಾ ಮಾಡಿದಂತಾಗುತ್ತದೆ” ಎಂದು ಜಸ್ಟೀಸ್ ಈ ಕೇಸನ್ನು ವಜಾ ಮಾಡಿದ್ದಾರೆ. ಲಿಜೊ ಜೋಸ್ ಪೆಲ್ಲಿಸರಿ ನಿರ್ದೇಶನದ ‘ಚುರುಳಿ’ ಮಿಸ್ಟರಿ – ಹಾರರ್ ಮಲಯಾಳಂ ಸಿನಿಮಾ SonyLIVನಲ್ಲಿ ನವೆಂಬರ್ 19ರಿಂದ ಸ್ಟ್ರೀಮ್ ಆಗುತ್ತಿದೆ.