ತಂದೆ-ಮಗಳ ಬಾಂಧವ್ಯದ ಸುತ್ತ ಹೆಣೆದಿರುವ ಕಥಾಹಂದರದ ‘ಹಾಯ್ ನಾನ್ನಾ’ ತೆಲುಗು ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ನಾನಿ, ಮೃಣಾಲ್ ಠಾಕೂರ್ ಮತ್ತು ಬೇಬಿ ಕಿಯಾರಾ ಖನ್ನಾ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಸಿನಿಮಾ ಇದೇ ಡಿಸೆಂಬರ್ 7ರಂದು ತೆರೆಕಾಣುತ್ತಿದೆ.
ನಾನಿ, ಮೃಣಾಲ್ ಠಾಕೂರ್ ಮತ್ತು ಬೇಬಿ ಕಿಯಾರಾ ಖನ್ನಾ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಹಾಯ್ ನಾನ್ನಾ’ ತೆಲುಗು ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಶೌರ್ಯುವ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಟ್ರೇಲರ್ ತಂದೆ-ಮಗಳ ಬಾಂಧವ್ಯದ ಸುತ್ತ ಸುತ್ತುತ್ತದೆ. ಕೇವಲ ತಂದೆಯ ಆಶ್ರಯದಲ್ಲಿ ಬೆಳೆದ, ತಾಯಿ ಪ್ರೀತಿ ತಿಳಿಯದ, ತಾಯಿಗಾಗಿ ಪರಿತಪಿಸುವ ಪುಟ್ಟ ಮಗುವಿಗೆ ಒಂದು ಕಲ್ಪನಾ ಲೋಕವನ್ನು ನಾನಿ ಕಟ್ಟಿ ಕೊಟ್ಟಿರುತ್ತಾನೆ. ತಂದೆ – ಮಗಳು ಯಾವಾಗಲೂ ಕತೆ ಹೇಳಿಕೊಳ್ಳುವ ಮೂಲಕ ತಮ್ಮ ಕನಸಿನ ಲೋಕವನ್ನು ನೆನೆಪಿಸಿಕೊಳ್ಳುತ್ತಿರುತ್ತಾರೆ. ಮೃಣಾಲ್ ಆಕಸ್ಮಿಕವಾಗಿ ಮಗುವನ್ನು ಭೇಟಿಯಾಗುತ್ತಾಳೆ. ಒಂದು ಬಾರಿ ತಾಯಿಯನ್ನು ಯಾವ ರೀತಿ ಕಲ್ಪಿಸಿಕೊಳ್ಳಬೇಕು ಎಂದು ಬೇಬಿ ಕಿಯಾರಾ ಕೇಳಿದಾಗ ಮೃಣಾಲ್ ತನ್ನನ್ನು ಕಲ್ಪಿಸಿಕೊಳ್ಳಲು ಹೇಳುತ್ತಾಳೆ.
ಕ್ರಮೇಣ ಮೃಣಾಲ್, ನಾನಿಯನ್ನು ಪ್ರೀತಿಸಲು ಆರಂಭಿಸುತ್ತಾಳೆ. ಇದನ್ನು ವಿರೋಧಿಸುವ ನಾನಿ ತನ್ನ ಮಗಳಿಗಾಗಿ ಅವಳ ಪ್ರೀತಿಯನ್ನು ಒಪ್ಪಿಕೊಳ್ಳುತ್ತಾನಾ? ಅಥವಾ ತಿರಸ್ಕರಿಸುತ್ತಾನಾ? ಎಂಬುದು ಕುತೂಹಲ ಮೂಡಿಸುತ್ತದೆ. ಸಿನಿಮಾದಲ್ಲಿ ಶೃತಿ ಹಾಸನ್, ಜಯರಾಂ, ಹಿಮಾಯತ್ ರೆಹಮಾನ್, ಅಂಗದ್ ಸಿಂಗ್ ಬೇಡಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. Vyra Entertainments ಬ್ಯಾನರ್ ಅಡಿಯಲ್ಲಿ ಮೋಹನ್ ಚೆರುಕುರಿ (Sivm)ಮತ್ತು ಡಾ ವಿಜಯೇಂದ್ರ ರೆಡ್ಡಿ ಟೀಗಾಲ ಸಿನಿಮಾ ನಿರ್ಮಿಸಿದ್ದಾರೆ. ಸಾನು ಜಾನ್ ವರ್ಗೀಸ್ ಛಾಯಾಗ್ರಹಣ, ಪ್ರವೀಣ್ ಆಂಥೋನಿ ಸಂಕಲನ, ಹೇಶಮ್ ಅಬ್ದುಲ್ ವಹಾಬ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ‘ದಸರಾ’ ಯಶಸ್ಸಿನ ನಂತರ ನಾನಿ ಈ ಚಿತ್ರದ ಮೂಲಕ ತೆರೆಗೆ ಮರಳುತ್ತಿದ್ದಾರೆ. ಕೌಟುಂಬಿಕ ಕಥಾಹಂದರದ ಸಿನಿಮಾ ಮೂಲ ತೆಲುಗು ಸೇರಿದಂತೆ ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಡಿಸೆಂಬರ್ 7ರಂದು ತೆರೆಕಾಣಲಿದೆ.