ಹಾಲಿವುಡ್ ನಟ ಅಲನ್ ಅರ್ಕಿನ್ (89 ವರ್ಷ) ಇಹಲೋಕ ತ್ಯಜಿಸಿದ್ದಾರೆ. ‘ಲಿಟಲ್ ಮಿಸ್ ಸನ್‍ಶೈನ್’, ‘ದಿ ಹಾರ್ಟ್ ಈಸ್ ಲೋನ್ಲಿ ಹಂಟರ್’ ಚಿತ್ರಗಳಲ್ಲಿನ ಉತ್ತಮ ನಟನೆಗಾಗಿ ಅವರು ಅಕಾಡೆಮಿ ಪ್ರಶಸ್ತಿಗೆ ಪಾತ್ರರಾಗಿದ್ದರು.
ಹಾಸ್ಯ ಪಾತ್ರಗಳಿಗೆ ಹೆಸರುವಾಸಿಯಾಗಿದ್ದ ಆಸ್ಕರ್ ಪ್ರಶಸ್ತಿ ಪುರಸ್ಕೃತ ಹಾಲಿವುಡ್ ನಟ ಅಲನ್ ಅರ್ಕಿನ್ (89) ನಿಧನರಾಗಿದ್ದಾರೆ. ಪೀಪಲ್ ಮ್ಯಾಗಜೀನ್ ವರದಿ ಪ್ರಕಾರ ಅವರ ಪುತ್ರರು ವಿಷಯವನ್ನು ದೃಡಪಡಿಸಿದ್ದು, ಅಲನ್ ಕ್ಯಾಲಿಫೋರ್ನಿಯಾದ ಅವರ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅರ್ಕಿನ್ ಪುತ್ರರಾದ ಮ್ಯಾಥ್ಯೂ ಮತ್ತು ಆಡಂ, ‘ಪ್ರತಿಭಾವಂತ ಕಲಾವಿದರಾಗಿದ್ದ ನಮ್ಮ ತಂದೆ ನಮಗೆಲ್ಲ ಶಕ್ತಿಯಾಗಿದ್ದರು. ಅವರು ಪ್ರೀತಿಯ ಪತಿ, ತಂದೆ, ತಾತ, ಮತ್ತು ಮುತ್ತಾತನಾಗಿ ಎಲ್ಲರಿಗೂ ಅಚ್ಚುಮೆಚ್ಚಿನವರಾಗಿದ್ದರು’ ಎಂದಿದ್ದಾರೆ. ನ್ಯೂಯಾರ್ಕ್ ನಗರದಲ್ಲಿ 1934ರಲ್ಲಿ ಜನಿಸಿದ ಇವರು ನಾಲ್ಕು ಬಾರಿ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು. ಅಲನ್ 1957ರಲ್ಲಿ ‘ಕ್ಯಾಲಿಪ್ಸೋ ಹೀಟ್ ವೇವ್’ ಚಿತ್ರದ ಮೂಲಕ ಹಾಲಿವುಡ್‍ಗೆ ಪಾದಾರ್ಪಣೆ ಮಾಡಿದರು. ಅವರ ಅತ್ಯಂತ ಪ್ರಸಿದ್ದ ಚಿತ್ರಗಳಲ್ಲಿ ‘ಲಿಟಲ್ ಮಿಸ್ ಸನ್‍ಶೈನ್’ ಸಹ ಒಂದು. ಈ ಚಿತ್ರದಲ್ಲಿ ಅವರು ಕೇವಲ 15 ನಿಮಿಷಗಳ ರನ್‍ಟೈಮ್‍ನೊಂದಿಗೆ ಅತ್ಯುತ್ತಮ ಪೋಷಕ ಪಾತ್ರ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಗೆದ್ದಿದ್ದರು. 1967ರಲ್ಲಿ ಆಡ್ರೆ ಹೆಪ್‌ಬರ್ನ್ ನಟಿಸಿದ ‘ವೇಟ್ ಅಂಟಿಲ್ ಡಾರ್ಕ್’ ಸಿನಿಮಾದಲ್ಲಿ ಮನೋರೋಗದ ಕೊಲೆಗಾರನಾಗಿ ಪಾತ್ರ ನಿರ್ವಹಣೆಯಿಂದ ಜನಪ್ರಿಯರಾಗಿದ್ದರು.
1968ರಲ್ಲಿ ಕರ್ಸನ್ ಮೆಕಲರ್ಸ್ ಚಲನಚಿತ್ರ ‘ದಿ ಹಾರ್ಟ್ ಈಸ್ ಲೋನ್ಲಿ ಹಂಟರ್’ನಲ್ಲಿನ ಅರ್ಕಿನ್ ಅಭಿನಯಕ್ಕಾಗಿ ಆಸ್ಕರ್ ಪ್ರಶಸ್ತಿ ಲಭಿಸಿತು. 2012ರ ಥ್ರಿಲ್ಲರ್ ಸಿನಿಮಾ ‘ಆರ್ಗೋ’ ಚಿತ್ರದಲ್ಲಿ ಹಾಗೂ ‘ಮಾರ್ಲಿ & ಮಿ’ ಚಿತ್ರದಲ್ಲಿ ಕಾಣಿಸಿಕೊಂಡರು. ‘ಮಿನಿಯನ್ಸ್ ದಿ ರೈಸ್ ಆಫ್ ಗ್ರು’ ಚಿತ್ರದಲ್ಲಿ ವೈಲ್ಡ್ ನಕಲ್ಸ್ ಪಾತ್ರಕ್ಕೆ ಕೊನೆಯದಾಗಿ ಧ್ವನಿ ನೀಡಿದ್ದರು. ಅರ್ಕಿನ್ ದೂರದರ್ಶನ ಸೀರೀಸ್‌ಗಳಲ್ಲೂ ನಟಿಸಿದ್ದು, ‘ಎಸ್ಕೇಪ್ ಫ್ರಮ್ ಸೋಬಿಬೋರ್’ನಲ್ಲಿ (1987) ಲಿಯಾನ್ ಫೆಲ್ಹೆಂಡ್ಲರ್ ಮತ್ತು ‘ದಿ ಪೆಂಟಗನ್ ಪೇಪರ್ಸ್’ನಲ್ಲಿ (2003) ಹ್ಯಾರಿ ರೋವೆನ್ ಪಾತ್ರಗಳನ್ನು ನಿರ್ವಹಿಸಿದ್ದರು. ಇದಕ್ಕಾಗಿ ಅತ್ಯುತ್ತಮ ನಾಯಕನಟ ಪ್ರೈಮ್‌ಟೈಮ್ ಎಮ್ಮಿ ಪ್ರಶಸ್ತಿ ಪಡೆದುಕೊಂಡಿದ್ದರು. 2015-2016ರಲ್ಲಿ ನೆಟ್‌ಫ್ಲಿಕ್ಸ್ ಅನಿಮೇಟೆಡ್ ಸರಣಿಯಾದ ‘ಬೊಜಾಕ್ ಹಾರ್ಸ್‌ಮ್ಯಾನ್’ನಲ್ಲಿ ಜೆಡಿ ಸಲಿಂಗರ್ ಪಾತ್ರಕ್ಕೆ ಧ್ವನಿ ನೀಡಿದ್ದಾರೆ. 2018 – 2019ರಲ್ಲಿ ನೆಟ್‌ಫ್ಲಿಕ್ಸ್ ಹಾಸ್ಯ ಸರಣಿಯಾದ ‘ದಿ ಕೊಮಿನ್ಸ್ಕಿ ಮೆಥಡ್‌ನಲ್ಲಿ’ನಲ್ಲಿ ಟ್ಯಾಲೆಂಟ್ ಏಜೆಂಟ್ ಆಗಿ ನಟಿಸಿದ್ದರು.