ನಿರ್ದೇಶಕರು ಇಡೀ ಚಿತ್ರದಲ್ಲಿ ಮೈಕೆಲ್ ಪಾತ್ರದ ನಿರ್ವಿಕಾರ ಮನೋಭಾವವನ್ನು ಎತ್ತಿ ಹಿಡಿಯಬೇಕೆಂಬ ಪ್ರಯತ್ನ ಮಾಡಿರುವುದು ಸ್ಪಷ್ಟವಾಗಿದೆ. ಆದರೆ ಆ ಪ್ರಯತ್ನದಲ್ಲಿ ಮುಖ್ಯಪಾತ್ರಕ್ಕೆ ಕೊಡಬೇಕಾದ ಆಳವನ್ನು ನಿರ್ದೇಶಕರು ಮರೆತಂತಿದೆ. ಹಂತಕನಿಗೆ ತನ್ನ ಬಗ್ಗೆಯೇ ಅನೇಕ ಗೊಂದಲಗಳಿದ್ದಂತೆ ಕಂಡಾಗ ತನ್ನ ಅಂತರಂಗಕ್ಕೆ ತಾನೇ ಇಳಿಯಲು ಅಶಕ್ತನಾದಾಗ ಆ ಕೊರತೆಗಳು ವೀಕ್ಷಕರಿಗೂ ಕಾಣದೇ ಹೋಗುವುದಿಲ್ಲ. ‘ದಿ ಕಿಲ್ಲರ್’ ಇಂಗ್ಲಿಷ್‌ ಸಿನಿಮಾ Netflixನಲ್ಲಿ ಲಭ್ಯವಿದೆ.

ಡೇವಿಡ್ ಫಿಂಚರ್ ನಿರ್ದೇಶನದ ‘ಕಿಲ್ಲರ್’ ಸಿನಿಮಾ ಬಿಡುಗಡೆಯಾಗಿದೆ. ಡೇವಿಡ್ ಎಂದಿಗೂ ಭಾವುಕ ಚಿತ್ರಗಳಿಗೆ ಹೆಸರು ಮಾಡಿದವರಲ್ಲ. ಥ್ರಿಲ್ಲರ್ ಮಾದರಿಯ ಮನುಷ್ಯನ ಅಂತರಂಗದ ಕರಾಳತೆಯನ್ನು ಚಿತ್ರಗಳ ಮೂಲಕ ತೋರಿಸುವುದಕ್ಕೆ ಅವರು ಹೆಸರುವಾಸಿ. ಅದೇ ಅವರ ಪರಿಣತಿ ಕೂಡ. Netflixನಲ್ಲಿ ಕಳೆದ ಬಾರಿ ಬಿಡುಗಡೆಯಾದ ಅವರ ನಿರ್ದೇಶನದ ‘ಮೈಂಡ್ ಹಂಟರ್’ ಸರಣಿ ನೆನಪಿಸಿಕೊಳ್ಳಿ. ಈಗ ‘ದಿ ಕಿಲ್ಲರ್’ ಚಿತ್ರ ಕೂಡ ಅವರದೇ ಅದೇ ಮಾದರಿಯಲ್ಲಿ ಸಿದ್ಧವಾಗಿದೆ.

ಅಲೆಕ್ಸಿಸ್ ನೋಲೆಂಟ್ ಮತ್ತು ಲ್ಯೂಕ್ ಜಾಕ್‌ಮ್ಯಾನ್‌ ಅವರ ‘ಕಿಲ್ಲರ್’ ಕಾದಂಬರಿಯ ಮೇಲೆ ಈ ಚಿತ್ರ ಆಧಾರಿತವಾಗಿದೆ. ಮೈಕೆಲ್ ಫಾಸ್ಬೆಂಡರ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದು ಹಂತಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಂತಕನ ಮುಖ್ಯ ನಿಲುವು ಎಂದರೆ ಈ ಕೆಲಸದಲ್ಲಿ ಎಂದಿಗೂ ವೈಯಕ್ತಿಕ ನಿಲುವನ್ನು ಹೊಂದಬಾರದು ಎಂದು. ಆದರೆ ಇಲ್ಲಿ ನಾಯಕ ಒಂದು ಸೇಡಿನ ಬೆನ್ನು ಹತ್ತಿ ತನ್ನದೇ ನಿಯಮ ಮುರಿದು ಒಬ್ಬ ವ್ಯಕ್ತಿಯ ಹಿಂದೆ ಹೊರಡುತ್ತಾನೆ. ಒಬ್ಬ ಹಂತಕನಿಗೆ ಇರಬೇಕಾದ ತಣ್ಣನೆಯ ಕ್ರೌರ್ಯ, ನಿರ್ವಿಕಾರ ಮನೋಭಾವ ಇವೆಲ್ಲವನ್ನೂ ತೆರೆಯ ಮೇಲೆ ಪರಿಪೂರ್ಣವಾಗಿ ತೋರುವುದರಲ್ಲಿ ಮೈಕೆಲ್ ಎತ್ತಿದ ಕೈ.

ತಾಳ್ಮೆ, ನಿಖರತೆ ಮತ್ತು ದೈಹಿಕ ಸಾಮರ್ಥ್ಯ ಒಬ್ಬ ಹಂತಕನಿಗೆ ಬಹಳ ಮುಖ್ಯ. ಮೈಕೆಲ್ ಈ ಎಲ್ಲ ಗುಣಗಳನ್ನೂ ಆವಾಹಿಸಿಕೊಂಡು ಪಾತ್ರದೊಳಗೆ ಇಳಿದಿದ್ದಾರೆ. ಕರುಣೆಯ ಲವಲೇಶವೂ ಇಲ್ಲದ ತಣ್ಣನೆಯ ಮನೋಭಾವವನ್ನು ನಿಖರವಾಗಿ ಅಭಿನಯಿಸಿದ್ದಾರೆ. ಚಿತ್ರದ ಬಹುತೇಕ ಭಾಗ ನಾಯಕನ ಮನಸ್ಸಿನ ಮಾತುಗಳಂತೆ ಹಿನ್ನೆಲೆ ಧ್ವನಿಯಲ್ಲಿ ನಿರೂಪಣೆ ಆಗುತ್ತಾ ಹೋಗುತ್ತದೆ. ನಾಯಕ ಬಹಳ ಮಿತಭಾಷಿ. ನಿತ್ಯದ ಚಟುವಟಿಕೆಗಳಿಗೆ ಎಷ್ಟು ಬೇಕೋ ಅಷ್ಟೇ ಮಾತು. ತೆರೆಯ ಮೇಲಂತೂ ಅವನು ನೇರವಾಗಿ ಮಾತನಾಡೋದು ಬಹಳ ಕಡಿಮೆ ಸನ್ನಿವೇಶಗಳಲ್ಲಿ. ಪಾತ್ರದ ನಿರ್ವಿಕಾರ ಗುಣವನ್ನು ಎತ್ತಿಹಿಡಿಯುವುದಕ್ಕೆ ಈ ಅಂಶ ಬಹಳ ಸಹಕಾರಿಯಾಗಿದೆ.

ಹಿನ್ನೆಲೆಯ ನಿರೂಪಣೆಯೊಂದಿಗೆ ನಾಯಕನ ಬಗ್ಗೆ ನಮಗೆ ಆತನಿಗೆ ಅದೃಷ್ಟ, ಕರ್ಮ ಮತ್ತು ನ್ಯಾಯದಲ್ಲಿ ನಂಬಿಕೆ ಇಲ್ಲವೆಂದು ತಿಳಿದುಬರುತ್ತದೆ. ‘ಕರುಣೆಯೇ ನಮ್ಮ ದೌರ್ಬಲ್ಯ’ ಎಂಬ ಮಂತ್ರವನ್ನು ಪ್ರತಿ ಸಲ ಕೊಲ್ಲುವ ಘಳಿಗೆ ಹತ್ತಿರ ಬಂದಾಗ ನಾಯಕ ಪದೇ ಪದೇ ಹೇಳಿಕೊಳ್ಳುವುದನ್ನು ಗಮನಿಸಬಹುದು. ಆದರೆ ಅವನ ಜೊತೆಗಾರನ ಜೊತೆಗಾದ ಕ್ರೂರ ಘಟನೆ ಆತನನ್ನು ಅವನ ನಿಲುವುಗಳಿಂದ ಬೇರ್ಪಡಿಸಿ ಆ ಘಟನೆಗೆ ಕಾರಣರಾದವರ ಮೇಲೆ ಸೇಡು ತೀರಿಸಿಕೊಳ್ಳಲು ಹೋರಾಡುತ್ತಾನೆ. ಇಷ್ಟು ದಿನ ತನ್ನನ್ನು ತಾನು ನಿರ್ವಿಕಾರಿ, ವೈಯಕ್ತಿಕ ಭಾವನೆಗಳು ಇಲ್ಲದವ ಎಂದು ಬಿಂಬಿಸಿಕೊಳ್ಳುತ್ತಿದ್ದಿದ್ದು ಆತ ತನಗೆ ತಾನೇ ಹೇಳಿಕೊಳ್ಳುತ್ತಿದ್ದ ಸುಳ್ಳು ಎಂದು ವೀಕ್ಷಕರಿಗೆ ಎನಿಸುತ್ತದೆ.

ಮೈಕೆಲ್ ಪಾತ್ರ ಹೇಗೆ ವೃತ್ತಿಯ ವಿಷಯ ಬಂದಾಗ ತಾನು ಯಾರ ಬಗ್ಗೆಯೂ ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳುವುದಿಲ್ಲ ಎನ್ನುವ ನಿಲುವಿನಿಂದ ತನಗೆ ಸಂಬಂಧ ಪಟ್ಟವರಿಗೆ ಏನಾದರೂ ಆದಾಗ ತನ್ನನ್ನು ಅದು ಬಾಧಿಸುತ್ತದೆ ಎನ್ನುವ ನಿಲುವಿಗೆ ಸರಿಯುವ ಪಯಣ ಬಹಳ ಚೆನ್ನಾಗಿ ನಿರೂಪಿತವಾಗಿದೆ. ಆದರೂ ಚಿತ್ರದಲ್ಲಿ ನಡೆಯುವ ಘಟನೆಗಳನ್ನು ನೋಡಿದಾಗ ಆರಂಭದಲ್ಲಿ ನಿರೂಪಿತವಾದ ಮೈಕೆಲ್ ಪಾತ್ರ ಎಷ್ಟು ಗಟ್ಟಿಯಾಗಿ ಕಂಡಿತೋ ಹೋಗುತ್ತಾ ಹೋಗುತ್ತಾ ಒಂದು ಸೇಡಿನ ಕಥೆಯಾಗಿ ಆತನ ಪಾತ್ರ ಬಹಳ ಟೊಳ್ಳು ಎಂದು ಎನಿಸಿಬಿಡುತ್ತದೆ. ತನ್ನ ಮಿತಿಗಳನ್ನು ಹಾಕಿಕೊಳ್ಳಲು ತಿಳಿಯದ, ವಸಾಹತುಶಾಹಿ ಬಲೆಗೆ ಸಿಕ್ಕಿಬಿದ್ದ ಅಸಹಾಯಕ ಪಾತ್ರದಂತೆ ಗೋಚರಿಸುತ್ತದೆ.

ಡೇವಿಡ್ ಫಿಂಚರ್ ನಿರ್ದೇಶನವಾದ್ದರಿಂದ ಆಕ್ಷನ್ ದೃಶ್ಯಗಳು ಕಣ್ಣಿಗೆ ಹಬ್ಬ ನೀಡುತ್ತವೆ. ಇದರಲ್ಲಿ ಛಾಯಾಗ್ರಾಹಕ ಎರಿಕ್ ಅವರ ಅದ್ಭುತ ಕೈಚಳಕವೂ ಕೆಲಸ ಮಾಡಿದೆ. ಚಿತ್ರದ ಪ್ರತಿಯೊಂದು ಫ್ರೀಮಿನಲ್ಲೂ ಅವರ ಅಚ್ಚುಕಟ್ಟುತನ ಎದ್ದು ಕಾಣುತ್ತದೆ. ಚಿತ್ರದ ಕೇಂದ್ರಪಾತ್ರದ ಚಲನವಲನಗಳು, ಭಾವಾಭಿನಯ ಯಾವುದೂ ವೀಕ್ಷಕರಿಗೆ ಒಂದಿನಿತೂ ತಪ್ಪಿಹೋಗದಂತೆ ಎಲ್ಲ ಸೂಕ್ಷ್ಮಗಳನ್ನೂ ಸೆರೆಹಿಡಿದು ಎರಿಕ್ ಕಟ್ಟಿಕೊಟ್ಟಿದ್ದಾರೆ. ಆದರೂ ಎಲ್ಲೋ ಏನೋ ಮಿಸ್ ಆಗುತ್ತಿದೆ ಎಂದು ಎನಿಸಿದರೆ ತಾಂತ್ರಿಕತೆಯ ಅಚ್ಚುಕಟ್ಟಿನ ಅಬ್ಬರದಲ್ಲಿ ಕೆಲವೊಮ್ಮೆ ಭಾವುಕತೆ ಮತ್ತು ಆಳ ಇಲ್ಲವಾಗಿ ಕಥೆಯಲ್ಲಿ ಆತ್ಮವೇ ಇಲ್ಲದಂತೆ ಕೆಲವು ಕಡೆ ಭಾಸವಾಗುತ್ತದೆ. ಕೆಲವು ಸನ್ನಿವೇಶಗಳಂತೂ ಉದ್ದೇಶಪೂರ್ವಕವಾಗಿ ತುರುಕಿದಂತೆ ಎನಿಸಿ ಮನಸ್ಸಿಗೆ ನಾಟುವುದಿಲ್ಲ. ಮತ್ತೆ ಕೆಲವು ಸನ್ನಿವೇಶಗಳು ಬಹಳ ಅದ್ಭುತವಾಗಿ ಮೂಡಿಬಂದಿವೆ. ಉದಾಹರಣೆಗೆ ಮೈಕೆಲ್ ಮತ್ತು ಟಿಲ್ಡಾ ಔತಣದ ಸನ್ನಿವೇಶ. ಇಲ್ಲಿ ಇಬ್ಬರೂ ನಟರು ಪೈಪೋಟಿಗೆ ಬಿದ್ದಂತೆ ಅಭಿನಯಿಸಿದ್ದಾರೆ.

ಇಲ್ಲಿ ಹಂತಕನ ಅಂತರಂಗ ಬಹಳ ಕುತೂಹಲ ಮೂಡಿಸುತ್ತದೆಯಾದರೂ ಯಾವುದೂ ಪರಸ್ಪರ ಜೋಡಣೆಯಾಗದೆ ವೀಕ್ಷಕರ ಮೇಲೆ ಅಂದುಕೊಂಡ ಪರಿಣಾಮ ಬೀರುವುದಿಲ್ಲ. ಹಂತಕ ತನಗೆ ವಹಿಸಿದ ಒಂದೊಂದು ಕೊಲೆಯನ್ನೂ ತನ್ನ ನಿಖರತೆಯಲ್ಲಿ ನಿರ್ವಿಕಾರವಾಗಿ ಮಾಡಿಕೊಂಡು ಹೋಗುವ ಸನ್ನಿವೇಶಗಳು ಬಿಡಿಬಿಡಿಯಾಗಿ ಬಹಳ ಅಚ್ಚುಕಟ್ಟಾಗಿವೆ. ಆತನ ಕೆಲಸದಲ್ಲಿನ ನೈಪುಣ್ಯ ವೀಕ್ಷಕರನ್ನು ಚಕಿತಗೊಳಿಸುತ್ತದೆ. ಆತನು ತನ್ನ ಕೆಲಸಕ್ಕೆ ಮಾಡಿಕೊಳ್ಳುವ ತಯಾರಿ, ನಿರ್ವಹಿಸುವ ರೀತಿ ವಿಸ್ಮಯ ಮೂಡಿಸುತ್ತದೆ. ಆದರೂ ಆತನ ಅಂತರಂಗದಲ್ಲಿ ನಿಜವಾಗಿ ಏನು ನಡೆಯುತ್ತಿದೆ ಎಂಬ ರಹಸ್ಯವನ್ನು ಬೇಧಿಸಲು ವೀಕ್ಷಕರಿಗೆ ಆಗುವುದೇ ಇಲ್ಲ. ಇದು ನಿರ್ದೇಶಕರ ವೈಫಲ್ಯ ಎನ್ನಬಹುದು.

ಇನ್ನು ಈ ರೀತಿಯ ಹಂತಕರ ಬಗೆಗಿನ ಕಥೆಗಳಲ್ಲಿ ನೈತಿಕ ಮೌಲ್ಯಗಳನ್ನು ಹುಡುಕುವುದು ಅನಗತ್ಯ ಆದರೂ ಮುಖ್ಯಪಾತ್ರದ ಜೊತೆಗೆ ನಾವು ಗುರುತಿಸಿಕೊಳ್ಳಲು, ಅದರ ಜೊತೆಗೆ ಸಾಗಿ ಅದರ ಅನುಭವವನ್ನು ಪಡೆಯಲು ಆಗುವುದಕ್ಕೆ, ಅದನ್ನು ಸಮರ್ಥಿಸುವುದಕ್ಕೆ ಏನಾದರೂ ಒಂದು ಗಟ್ಟಿಯಾದ ಕಾರಣವನ್ನು ನಿರ್ದೇಶಕರು ಕೊಡಬೇಕಾಗುತ್ತದೆ. ಇಲ್ಲಿ ಮುಖ್ಯಪಾತ್ರದ ನೈಪುಣ್ಯ ಹೊರತುಪಡಿಸಿ ಬೇರೆ ಯಾವ ಕಾರಣಗಳೂ ಕಾಣುವುದಿಲ್ಲ. ಪಾತ್ರದೊಂದಿಗೆ ವೀಕ್ಷಕರನ್ನು ಬೆಸೆಯಬೇಕಿರುವ ಕೊಂಡಿ ಇಲ್ಲಿ ನಾಪತ್ತೆಯಾಗಿದೆ.

ನಿರ್ದೇಶಕರು ಇಡೀ ಚಿತ್ರದಲ್ಲಿ ಮೈಕೆಲ್ ಪಾತ್ರದ ನಿರ್ವಿಕಾರ ಮನೋಭಾವವನ್ನು ಎತ್ತಿ ಹಿಡಿಯಬೇಕೆಂಬ ಪ್ರಯತ್ನ ಮಾಡಿರುವುದು ಸ್ಪಷ್ಟವಾಗಿದೆ. ಆದರೆ ಆ ಪ್ರಯತ್ನದಲ್ಲಿ ಮುಖ್ಯಪಾತ್ರಕ್ಕೆ ಕೊಡಬೇಕಾದ ಆಳವನ್ನು ನಿರ್ದೇಶಕರು ಮರೆತಂತಿದೆ. ಹಂತಕನಿಗೆ ತನ್ನ ಬಗ್ಗೆಯೇ ಅನೇಕ ಗೊಂದಲಗಳಿದ್ದಂತೆ ಕಂಡಾಗ ತನ್ನ ಅಂತರಂಗಕ್ಕೆ ತಾನೇ ಇಳಿಯಲು ಅಶಕ್ತನಾದಾಗ ಆ ಕೊರತೆಗಳು ವೀಕ್ಷಕರಿಗೂ ಕಾಣದೇ ಹೋಗುವುದಿಲ್ಲ. ಮನುಷ್ಯನ ಅಂತರಂಗದ ಕರಾಳತೆಯನ್ನು ಎತ್ತಿಹಿಡಿಯುವುದರಲ್ಲಿ ಫಿಂಚರ್ ನಿಪುಣನಾದರೂ ಒಂದು ಮಟ್ಟಕ್ಕೆ ಈ ಚಿತ್ರದಲ್ಲಿ ಅವರ ಆ ಪ್ರಯತ್ನ ಸೋತಿದೆ ಎಂದೇ ಹೇಳಬಹುದು. ಆದರೂ ತಾಂತ್ರಿಕವಾಗಿ ಮತ್ತು ಅಭಿನಯದ ವಿಚಾರದಲ್ಲಿ ಚಿತ್ರ ಅತ್ಯುತ್ತಮವಾಗಿದೆ. ‘ದಿ ಕಿಲ್ಲರ್’ Netflixನಲ್ಲಿ ಲಭ್ಯವಿದೆ.

LEAVE A REPLY

Connect with

Please enter your comment!
Please enter your name here