ನಟ ಪುನೀತ್ ರಾಜಕುಮಾರ್‌ರಿಗೆ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರು ಮರಣೋತ್ತರ ‘ಕರ್ನಾಟಕ ರತ್ನ’ ಗೌರವ ಘೋಷಿಸಿದರು. ಇಂದು ಅರಮನೆ ಮೈದಾನದಲ್ಲಿ ನಡೆದ ‘ಪುನೀತ್ ನಮನ’ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸೇರಿದಂತೆ ವಿವಿಧ ಪಕ್ಷಗಳ ರಾಜಕೀಯ ಮುಖಂಡರು ಹಾಗೂ ಚಿತ್ರರಂಗದ ಪ್ರಮುಖರು ಪುನೀತ್‌ರನ್ನು ಆತ್ಮೀಯವಾಗಿ ಸ್ಮರಿಸಿದರು.

ಅಕಾಲಿಕವಾಗಿ ಅಗಲಿದ ಕನ್ನಡಿಗರ ಪ್ರೀತಿಯ ನಟ ಪುನೀತ್ ರಾಜಕುಮಾರ್ ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಇಂದು ಅರಮನೆ ಮೈದಾನದಲ್ಲಿ ನಡೆದ ‘ಪುನೀತ್ ನಮನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಪುನೀತ್‌ ಅಕಾಲಿಕ ನಿಧನ ಕನ್ನಡ ನಾಡು ಕಂಡ ಬಹುದೊಡ್ಡ ದುರ್ಘಟನೆ. ಶರಣರ ಗುಣ ಮರಣದಲ್ಲಿ  ನೋಡು ಎನ್ನುವಂತೆ ಪುನೀತ್‌ ಅಗಲಿಕೆಯ ನಂತರ ಅವರ ಕುರಿತಾಗಿ ಜನರಲ್ಲಿನ ಉತ್ತಮ ಭಾವನೆಗಳು  ವ್ಯಕ್ತವಾಗುತ್ತಿವೆ. ಅಪ್ಪು ನೆನಪು ಚಿರಸ್ಥಾಯಿಯಾಗಬೇಕು. ಸರ್ಕಾರಕ್ಕೂ ಕೂಡ ಇದೇ ಒತ್ತಾಸೆ ಇದೆ. ಪುನೀತ್ ಸಮಾಧಿಸ್ಥಳವನ್ನು ಅಭಿವೃದ್ಧಿ ಪಡಿಸುತ್ತೇವೆ. ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸುತ್ತೇವೆ” ಎಂದು ಮುಖ್ಯಮಂತ್ರಿಗಳು ಹೇಳಿದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ವರನಟ ರಾಜಕುಮಾರ್ ಅವರೊಂದಿಗೆ ಆತ್ಮೀಯತೆ ಇತ್ತು. ಪುನೀತ್‌ರನ್ನು ಸ್ಮರಿಸಿಕೊಂಡ ಅವರು, “ಪುನೀತ್ ಒಬ್ಬ ನಟನಾಗಿ ಮಾತ್ರ ಕನ್ನಡಿಗರಿಗೆ ಪರಿಚಯವಾಗಿರಲಿಲ್ಲ. ಒಬ್ಬ ಮಾನವೀಯ ಗುಣವುಳ್ಳ ವ್ಯಕ್ತಿಯಾಗಿದ್ದುದರಿಂದಲೇ ಎಲ್ಲರ ಪ್ರೀತಿಪಾತ್ರರಾಗಿದ್ದರು. ಹಾಗಾಗಿಯೇ ಅವರು ಅಗಲಿದಾಗ, ಕನ್ನಡಿಗರಿಗೆ ತಮ್ಮ ಮನೆಯ ಸದಸ್ಯರೊಲ್ಲಬರನ್ನು ಕಳೆದುಕೊಂಡ ಭಾವನೆ ಮೂಡಿತ್ತು. ಮುಖ್ಯಮಂತ್ರಿ ಬೊಮ್ಮಾಯಿ ಅವರು ಪುನೀತ್‌ ಅವರಿಗೆ ಮರಣೋತ್ತರ ಪದ್ಮಶ್ರೀ ಪುರಸ್ಕಾರಕ್ಕೆ ಶಿಫಾರಸು ಮಾಡಬೇಕು” ಎಂದು ಮನವಿ ಮಾಡಿದರು. ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಅವರು ಪುನೀತ್ ರಾಜಕುಮಾರ್ ಹೆಸರಿನಲ್ಲಿ ಶೂಟಿಂಗ್ ಸ್ಟುಡಿಯೋ ನಿರ್ಮಾಣವಾಗಬೇಕು ಎಂದು ಆಶಿಸಿದರು.

ತಮಿಳಿನ ಹಿರಿಯ ನಟ ಶರತ್ ಕುಮಾರ್ ಅವರು ‘ರಾಜಕುಮಾರ’ ಚಿತ್ರದಲ್ಲಿ ಪುನೀತ್‌ ಜೊತೆ ನಟಿಸಿದ್ದಾರೆ. ನಟನ ಅಂತಿಮ ಸಿನಿಮಾ ‘ಜೇಮ್ಸ್‌’ನಲ್ಲೂ ಅವರು ಅಭಿನಯಿಸಿದ್ದು, ಪುನೀತ್‌ರನ್ನು ಹತ್ತಿರದಿಂದ ಬಲ್ಲವರು. “ಪುನೀತ್ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡದ್ದ ಅಪರೂಪದ ವ್ಯಕ್ತಿತ್ವ. ಸಾವಿನ ನಂತರ ಕಣ್ಗಳನ್ನು ದಾನ ಮಾಡಿ ಇತರರಿಗೂ ಆದರ್ಶಪ್ರಾಯರಾಗಿದ್ದಾರೆ. ಅವರ ಆಶಯದಂತೆ ಇಂದು ಸಾವಿರಾರು ಜನರು ನೇತ್ರದಾನಕ್ಕೆ ನೋಂದಾಯಿಸಿಕೊಳ್ಳುತ್ತಿದ್ದಾರೆ. ಆ ಮೂಲಕ ಪುನೀತ್ ನೆನಪು ಜನಮಾನಸದಲ್ಲಿ ಸದಾ ಉಳಿಯಲಿದೆ” ಎಂದರು ಶರತ್ ಕುಮಾರ್‌. ಸಹೋದರನ ಅಗಲಿಕೆಯ ದಿನಗಳಲ್ಲಿ ಸ್ಥಿತಪ್ರಜ್ಞರಾಗಿದ್ದ ನಟ, ನಿರ್ಮಾಪಕ ರಾಘವೇಂದ್ರ ರಾಜಕುಮಾರ್ ಅವರು ಇಂದು ದುಃಖ ತಡೆಯಲಾರದೆ ಬಿಕ್ಕಿ ಬಿಕ್ಕಿ ಅತ್ತರು. “ಅಪ್ಪು ಪತ್ನಿ, ಮಕ್ಕಳು ಅಳುತ್ತಾರೆಂದು ನಾನು ದುಃಖ ತಡೆದುಕೊಂಡಿದ್ದೆ. ಇಂದು ನನಗೆ ಸಾಧ್ಯವಾಗುತ್ತಿಲ್ಲ. ನನ್ನನ್ನು ಕ್ಷಮಿಸಿ” ಎಂದು ಅವರು ದುಃಖಿಸಿದರು. ಮೈಸೂರು ಅರಸು ಯದುವೀರ ಒಡೆಯರ್‌, ನಟ ಶಿವರಾಜಕುಮಾರ್‌, ಸಚಿವ ಆರ್.ಅಶೋಕ್‌, ನಟರಾದ ಜಗ್ಗೇಶ್, ದರ್ಶನ್‌, ತಮಿಳು ನಟ ವಿಶಾಲ್‌ ಸೇರಿದಂತೆ ಚಿತ್ರರಂಗದ ಹಲವರು ಕಾರ್ಯಕ್ರಮದಲ್ಲಿ ಪುನೀತ್‌ರನ್ನು ಸ್ಮರಿಸಿಕೊಂಡು ಮಾತನಾಡಿದರು. ಖ್ಯಾತ ಕಲಾನಿರ್ದೇಶಕ ಮೋಹನ್ ಬಿ. ಕೆರೆ ನಿರ್ಮಿಸಿದ ಪುನೀತ್‌ರ ಪುತ್ಥಳಿ ಎಲ್ಲರ ಗಮನ ಸೆಳೆದಿತ್ತು. ಪುನೀತ್ ಸಿನಿಮಾ – ಬದುಕಿನ ಚಿತ್ರಣದ ಕಿರುಚಿತ್ರದೊಂದಿಗೆ ಕಾರ್ಯಕ್ರಮ ಆರಂಭವಾಯ್ತು. ನಟ ಸುದೀಪ್ ಹಿನ್ನೆಲೆ ಧ್ವನಿಯೊಂದಿಗೆ ತಯಾರಾಗಿದ್ದ ಕಿರುಚಿತ್ರ ಹಾಗೂ ವಿ.ನಾಗೇಂದ್ರ ಪ್ರಸಾದ್ ರಚನೆಯಲ್ಲಿ ವಿಜಯಪ್ರಕಾಶ್ ಹಾಡಿದ ‘ಮುತ್ತುರಾಜ ಹೆತ್ತ ಮುತ್ತು..’ ಹಾಡು ಮೂಡಿಬರುತ್ತಿದ್ದಂತೆ ಕಾರ್ಯಕ್ರಮದಲ್ಲಿ ನೆರೆದಿದ್ದವರೆಲ್ಲರೂ ಭಾವುಕರಾದರು. ದೀಪು ಬೆಳಗುವುದರ ಮೂಲಕ ಅಗಲಿದ ನಟನಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

LEAVE A REPLY

Connect with

Please enter your comment!
Please enter your name here