ಕರೋನಾ ಕಾರಣದಿಂದ ಭಾರತೀಯ ಸಿನಿಮಾಗಳು ಚಿತ್ರಮಂದಿರಗಳಿಗೆ ಬದಲಾಗಿ OTTಗಳಲ್ಲಿ ಬಿಡುಗಡೆ ಆಗುವ ಟ್ರೆಂಡ್ ಹೆಚ್ಚುತ್ತಿದೆ. ಆದರೆ ಹಲವಾರು ವರ್ಷಗಳಿಂದ ಚಾಲ್ತಿಯಲ್ಲಿದ್ದ ಡಬ್ಬಿಂಗ್ ಬೇಕೋ, ಬೇಡವೋ ಎನ್ನುವ ಇಬ್ಬಂದಿತನಕ್ಕೆ ಈ ಟ್ರೆಂಡ್ ಒಂದು ಸ್ಪಷ್ಟ ದಾರಿ ತೋರಿಸಿದೆ ಎನ್ನಬಹುದು. ಆದರೆ, ಅದೇಕೋ ಈ ಡಬ್ಬಿಂಗ್ ಗುಣಮಟ್ಟದ ಬಗ್ಗೆ ಮಾತ್ರ ಹೆಚ್ಚು ಚರ್ಚೆ ಆಗುತ್ತಿಲ್ಲ.

ಈಗೀಗ ಬಾಲಿವುಡ್ ಸಿನಿಮಾಗಳು ಮತ್ತು ಸೌತ್ ಇಂಡಿಯನ್ ಸಿನಿಮಾಗಳು OTTಯಲ್ಲಿ ತೆರೆಕಾಣುತ್ತಿವೆ. ಆದರೆ ಅವು ತಮ್ಮ ಮೂಲ ಭಾಷೆಯ ಹೊರತಾಗಿ ಅನೇಕ ಭಾಷೆಗಳಲ್ಲಿ ಡಬ್ ಆಗಿ ಬರುತ್ತಿವೆ. ಕೆಲವು ಸಮಯದ ಹಿಂದೆ ‘ದಿ ಗ್ರೇಟ್ ಇಂಡಿಯನ್ ಕಿಚನ್’ನಂಥ ಸೆನ್ಸಿಬಲ್ ಚಿತ್ರಗಳೂ ಬಿಡುಗಡೆ ಆಗಿದ್ದವು. ಇದು ಕಿಚನ್ ಸ್ಟೋರಿ ಆಗಿರುವುದರಿಂದ ಇದನ್ನು ‘ಸೌಟ್ ಇಂಡಿಯನ್’ ಸಿನಿಮಾ ಎಂದರೂ ತಪ್ಪಿಲ್ಲ ಬಿಡಿ. ಆದರೆ ಇವುಗಳ ಜೊತೆಗೆ ಅನೇಕ ಚಿತ್ರಗಳು ಇಂದು ಬಹುಭಾಷೆಗಳಲ್ಲಿ OTTಯಲ್ಲಿ ಕಾಟಾಚಾರಕ್ಕೆ ಪ್ರೇಕ್ಷಕರನ್ನು ತಲುಪುತ್ತಿವೆ. ಈ ಚಿತ್ರಗಳು ತಮ್ಮ ಮೂಲಭಾಷೆಯಲ್ಲಿ ಎಷ್ಟೇ ಚೆನ್ನಾಗಿದ್ದರೂ ಇತರ ಭಾಷೆಗಳಿಗೆ ಡಬ್ ಆದಾಗ ಅವುಗಳಲ್ಲಿ ಕ್ವಾಲಿಟಿ ಉಳಿದುಕೊಳ್ಳುತ್ತಿದೆಯೇ ಎಂಬ ಅನುಮಾನ ಮೂಡುತ್ತದೆ. ಇದಕ್ಕೆ ಲೇಟೆಸ್ಟ್ ಉದಾಹರಣೆ ಕಂಗನಾ ರಣಾವತ್ ಅಭಿನಯದ ತಮಿಳುನಾಡಿನ ಅಮ್ಮ ಎಂದೇ ಖ್ಯಾತರಾಗಿದ್ದ ಜಯಲಲಿತಾ ಬಯೋಪಿಕ್‌ ‘ತಲೈವಿ’. ಈ ಚಿತ್ರ ಕೂಡ ಅನೇಕ ಭಾಷೆಗಲಿಗೆ ಡಬ್ ಆಗಿದೆ. ಹಾಗಾಗಿ ‘ತಲೈವಿ’ ಕನ್ನಡದಲ್ಲೂ ಲಭ್ಯವಿದೆ.

‘ತಲೈವಿ’ಯನ್ನು ತಮಿಳು, ಹಿಂದಿ ಭಾಷೆಗಳಲ್ಲಿ ನೋಡಿದವರಿಗೆ ಇದು ಒಟ್ಟಾರೆ ಒಂದು ಡೀಸೆಂಟ್ ಸಿನಿಮಾ ಎನಿಸುತ್ತದೆ. ಜಯಲಲಿತಾ ಅವರು ನಟಿಯಾಗಿದ್ದ ಕಾಲದಿಂದ ಮುಖ್ಯಮಂತ್ರಿ ಆಗುವವರೆಗೆ ನಡೆದು ಬಂದ ದಾರಿಯನ್ನು ಹೇಳುವ ಯಶಸ್ವಿ ಪ್ರಯತ್ನ ಎನ್ನಬಹುದು. ಜೊತೆಗೆ, ಕಂಗನಾ ರಣಾವತ್ ತಾನು ಉತ್ತಮ ನಟಿ ಅನ್ನೋದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ. ಅರವಿಂದ್ ಸ್ವಾಮಿ ಕಂಗನಾ ಅವರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ, ಎಂಜಿಆರ್ ಪಾತ್ರದಲ್ಲಿ ಮಿಂಚಿದ್ದಾರೆ.

ಆದರೆ ಕನ್ನಡದಲ್ಲಿ ಈ ಚಿತ್ರ ನೋಡಿದರೆ ಇದರ ಡಬ್ಬಿಂಗ್ ಗುಣಮಟ್ಟದ ಬಗ್ಗೆ ಒಂದೆರಡು ಮಾತು ಹೇಳಲೇಬೇಕು ಎನಿಸುತ್ತದೆ. ಚಿತ್ರದ ಒಂದು ಘಟ್ಟದಲ್ಲಿ, ಪಾತ್ರವೊಂದು ಇನ್ನೊಂದು ಪಾತ್ರಕ್ಕೆ ಹೇಳುವ ಡೈಲಾಗ್ ಇಲ್ಲಿದೆ ನೋಡಿ – ‘ಇಂದಿರಮ್ಮ ಅವ್ರನ್ನ ಸಾಯಿಸಿಬಿಟ್ರಂತೆ. ಈಗ ಅವರು ಜೀವಂತವಾಗಿ ಇಲ್ವಂತೆ’. ಇಲ್ಲಿ, ‘ಸಾಯಿಸಿಬಿಟ್ರಂತೆ’ ಎಂದು ಹೇಳಿದ ಮೇಲೆ, ಎರಡನೇ ಸಾಲು ಬೇಕಿತ್ತಾ?, ಸಾಯಿಸಿದ ಮೇಲೆ ಅವರು ಅದು ಹೇಗೆ ಜೀವಂತವಾಗಿರುತ್ತಾರೆ ಎಂಬ ಪ್ರಶ್ನೆ ಮೂಡುತ್ತದೆ. ಆದರೆ, ಇದು ಸಣ್ಣ ವಿಷಯ, ಹೋಗಲಿ ಬಿಡಿ  ಅಂತ ಸುಮ್ಮನಾಗುವ ಹಾಗಿಲ್ಲ.

ತಾಯಿ ಇಂದಿರಾಗಾಂಧಿ ಅವರ ಸಾವಿಗಂತೂ ನ್ಯಾಯ ಕೊಡ್ಲಿಲ್ಲ, ಕನಿಷ್ಟ ಮಗ ರಾಜೀವ್ ಗಾಂಧಿ ಅವರ ಸಾವಲ್ಲಾದ್ರೂ ಸರಿ ಮಾಡ್ಕೋತಾರೆ ಅಂದ್ರೆ ಅದೂ ಇಲ್ಲ. ಇನ್ನೂ ಅಧ್ವಾನ. ರಾಜೀವ್ ಗಾಂಧಿ ಅವರ ಸಾವಿನ ಸುದ್ದಿ ದೂರದರ್ಶನದಲ್ಲಿ ಪ್ರಸಾರವಾಗುವಾಗ ನ್ಯೂಸ್ ರೀಡರ್ ಅದನ್ನು ಈ ರೀತಿ ಓದುತ್ತಾರೆ – ‘ಪೆರಂಬದೂರಿನಲ್ಲಿ ರಾಜೀವ್ ಗಾಂಧಿ ಅವರನ್ನು ‘ಗುಂಡು ಹಾರಿಸಿ’ ಹತ್ಯೆ ಮಾಡಲಾಗಿದೆ ಎಂದು ವಿಚಾರಣೆಯಿದ ತಿಳಿದು ಬಂದಿದೆ’. ಇದೇ ಡೈಲಾಗ್ ಅನ್ನು ಹಿಂದಿಯಲ್ಲಿ ಮತ್ತು ತಮಿಳಿನಲ್ಲಿ ಚೆಕ್ ಮಾಡಿದಾಗ ರಾಜೀವ್ ಹತ್ಯೆ ಆಗಿದ್ದು ‘ಬಾಂಬ್ ಬ್ಲಾಸ್ಟ್‌ನಿಂದ’ ಎಂದೇ ಇದೆ. ಜೊತೆಗೆ ಅಲ್ಲಿನ ವಾಕ್ಯ ರಚನೆ ಕೂಡಾ ಸರಿಯಾಗಿದೆ. ಆದರೆ ಕನ್ನಡಕ್ಕೆ ಬರುವ ಹೊತ್ತಿಗೆ ಇತಿಹಾಸದ ಅಸಲಿ ಸತ್ಯವೇ ಬದಲಾಗಿದೆ. ಇವೆರಡೇ ಅಲ್ಲ, ಇಡೀ ಚಿತ್ರದಲ್ಲಿ ಹಲವಾರು ಕಡೆ ಕನ್ನಡ ವಾಕ್ಯ ರಚನೆಯೇ ಸರಿ ಇಲ್ಲ. ಇನ್ನು ಕೆಲವು ಕಡೆ ಕೇವಲ ಲಿಪ್ ಸಿಂಕ್ ಗಮನದಲ್ಲಿಟ್ಟುಕೊಂಡು ಸಂಭಾಷಣೆ ಬರೆಯಲಾಗಿದೆ. ಕೆಲವು ಪ್ರಮುಖ ಸನ್ನಿವೇಶಗಳಲ್ಲಿ ಜೀವವೇ ಇಲ್ಲ ಅನ್ನಿಸೋದು ನಿಜ. ಒಟ್ಟಾರೆ, ಇಲ್ಲಿ ಎದ್ದು ಕಾಣುವುದು ಕೇವಲ ಭಾಷಾ ಸಮಸ್ಯೆ ಅಲ್ಲ, ಡಬ್ಬಿಂಗ್ ಮಾಡಿದವರ ಅಜ್ಞಾನ ಮತ್ತು ಮಾಡಿಸಿದವರ ಅವಸರದ ಅಡಿಗೆ. ಡಬ್ಬಿಂಗ್ ಸಿನಿಮಾಗಳ ಕ್ವಾಲಿಟಿ ಬಗ್ಗೆ ಇವರಿಗಿರುವ ಕಾಳಜಿ ಇದು.

ಯಾಕೆ ಹೀಗಾಗುತ್ತದೆ ಎಂದು ಸ್ವಲ್ಪ ಕೆದಕಿದರೆ ಗಾಂಧಿನಗರದ ಮೂಲಗಳಿಂದಲೇ ಕೆಲವು ಶಾಕಿಂಗ್ ಉತ್ತರಗಳು ಸಿಗುತ್ತವೆ. ಅವುಗಳಲ್ಲಿ ಪ್ರಮುಖವಾದುದು ಅಂದ್ರೆ, ಡಬ್ಬಿಂಗ್ ಮಾಡಿಸುವವರಿಗೆ ಇದರ ಬಗ್ಗೆ ಇರುವ ಅನಾಸಕ್ತಿ ಮತ್ತು ಭಾಷೆಯ ತಲೆಬುಡ ಗೊತ್ತಿಲ್ಲದವರಿಂದ, ಕಡಿಮೆ ಖರ್ಚಿನಲ್ಲಿ ತರ್ಜುಮೆ ಮಾಡಿಸುವ ಯೋಚನೆ. ಕನ್ನಡದ ಬರಹಗಾರರೊಬ್ಬರು ಹೇಳುವಂತೆ, ಡಬ್ಬಿಂಗ್ ಸ್ಕ್ರಿಪ್ಟ್ ಮಾಡಿಕೊಡಲು 30 ಸಾವಿರ ರುಪಾಯಿ ಸಂಭಾವನೆ ಕೇಳಿದ್ದಕ್ಕೆ, ‘ಅಯ್ಯೋ, ಈ ಕೆಲಸವನ್ನು ಮೂರ್ನಾಲ್ಕು ಸಾವಿರಕ್ಕೆ ಮಾಡಿಕೊಡೋರು ಬೇಕಾದಷ್ಟಿದ್ದಾರೆ’ ಎಂಬ ಉತ್ತರ ಸಿಕ್ಕಿತಂತೆ. ಹಾಗೆಂದ ಮೇಲೆ… ಪಾಪ, ಮೂರ್ನಾಲ್ಕು ಸಾವಿರಕ್ಕೆ ಕೆಲಸ ಮಾಡುವವರು ಇನ್ಯಾವ ಮಟ್ಟದ ಕ್ವಾಲಿಟಿ ಕೊಡೋಕೆ ಸಾಧ್ಯ ಅಲ್ಲವೇ. ಆದರೆ, ಕೆಲವು ಡಬ್ಬಿಂಗ್ ಪರ ಒಲವು ಇರುವ ಮಂದಿ ಇಂಥ ಹಳಸಿದ ಚಿತ್ರಾನ್ನವನ್ನೇ ಮೃಷ್ಠಾನ್ನ ಎನ್ನುವಂತೆ ‘ತಲೈವಿ’ ಚಿತ್ರ ಕನ್ನಡ ಚಿತ್ರವೇನೋ ಅನ್ನುವಷ್ಟು ಚೆನ್ನಾಗಿ ಡಬ್ ಆಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹಬ್ಬಿಸುತ್ತಿದ್ದಾರೆ. ಇದನ್ನೆಲ್ಲಾ ನೋಡಿದ ನಂತರವೂ, ಯಾರಾದ್ರೂ ಕನ್ನಡ ‘ತಲೈವಿ’ ಡಬ್ಬಿಂಗ್ ಅದ್ಭುತ ಅಂದ್ರೆ, ‘ನಾವು ಕನ್ನಡಿಗರು, ವಿಶಾಲ ಹೃದಯದವರಲ್ಲವೋ’ ಅಂದ್ಕೊಂಡು ಸುಮ್ನೆ ಆಗ್ಬೇಕು ಅಷ್ಟೇ.

LEAVE A REPLY

Connect with

Please enter your comment!
Please enter your name here