ಹಲವು ವರ್ಷಗಳಿಂದ ಕಿರುತೆರೆ ಹಾಗು ಹಿರಿತೆರೆಯ ಸಾಕಷ್ಟು ಧಾರಾವಾಹಿ ಹಾಗೂ ಚಲನಚಿತ್ರಗಳಲ್ಲಿ ಅಭಿನಯಿಸಿರುವ ಶಶಿಕುಮಾರ್ ಹಾಗೂ ನಂದಿತ ಯಾದವ್ ಪುತ್ರ ಸುಮುಖ.

ಈ ಹಿಂದೆ ಅವರ ತಾಯಿ ನಂದಿತಾ ಯಾದವ್ ನಿರ್ದೇಶನದ ‘ರಾಜಸ್ಥಾನ್ ಡೈರೀಸ್’ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದ ಅನುಭವ ಸುಮುಖ ಅವರಿಗಿದೆ. ಅದರ ಜೊತೆ ವಿಜಯಲಕ್ಷ್ಮೀ ಸಿಂಗ್ ಅವರ ‘ಯಾನ’ ಚಿತ್ರದಲ್ಲೂ ಕಾಲೇಜು ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಸುಮುಖ. ಈಗ ಸುಮುಖ ‘ಫಿಸಿಕ್ಸ್ ಟೀಚರ್’ ಎಂಬ ವಿಭಿನ್ನ ಕಥೆಯ ಚಿತ್ರವನ್ನು ನಿರ್ದೇಶಿಸಲು ಹೊರಟಿದ್ದಾರೆ. ನಾಯಕನಾಗಿಯೂ ಅವರೇ ಅಭಿನಯಿಸುತ್ತಿದ್ದಾರೆ.

ಮಂಡ್ಯ ರಮೇಶ್‌, ದತ್ತಣ್ಣ, ಪ್ರೇರಣಾ, ಸುಮುಖ

ಈ ಚಿತ್ರದ ಬಗ್ಗೆ ಮಾಹಿತಿ ನೀಡಲು ಚಿತ್ರತಂಡ ಪತ್ರಿಕಾಗೋಷ್ಠಿ ಆಯೋಜಿಸಿತ್ತು. ಮೊದಲಿಗೆ ಚಿತ್ರದಲ್ಲಿ ನಟಿಸುತ್ತಿರುವ ಮಂಡ್ಯ ರಮೇಶ್ ಮಾತನಾಡಿ, “ಸುಮುಖ ನನ್ನ ಗೆಳೆಯ ಶಶಿಕುಮಾರ್ ಮಗ. ಅವನನ್ನು ಚಿಕ್ಕಂದಿನಿಂದಲೂ ಬಲ್ಲೆ. ಅದರೆ ಮೊನ್ನೆ ಒಂದು ದಿನ ಮೈಸೂರಿನ ನನ್ನ ಮನೆಗೆ ಬಂದು, ಈ ಚಿತ್ರದ ಟೀಸರ್ ತೋರಿಸಿ, ಕಥೆ ಹೇಳಿದ. ಕಥೆ ಕೇಳಿ ನನಗೆ ಆಶ್ಚರ್ಯವಾಯಿತು. ತುಂಬಾ ಚೆನ್ನಾಗಿರುವ ಕಥೆ ಇದು. ಚಿತ್ರದ ಬಗ್ಗೆ ಅವನ ತಯಾರಿ ಕೇಳಿ ಸಂತೋಷವಾಯಿತು. ಈಗಿನ ಯುವಜನತೆ ತುಂಬಾ ಅಪ್‌ಡೇಟ್ ಆಗಿರುತ್ತಾರೆ. ಅವರಿಂದ ನಮ್ಮ ಕಾಲಘಟ್ಟದವರು ತಿಳಿಯುವುದು ಸಾಕಷ್ಟಿದೆ” ಎಂದು ಹೇಳಿ ಚಿತ್ರತಂಡಕ್ಕೆ ಶುಭ ಕೋರಿದರು.

ಮಂಡ್ಯ ರಮೇಶ್‌, ಶಶಿಕುಮಾರ್‌

ಚಿತ್ರದ ನಟ, ನಿರ್ದೇಶಕ ಸುಮುಖ ಮಾತನಾಡಿ, “ನಾನು ಈ ಹಿಂದೆ ‘ಯಾನ’ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮದವರನ್ನು ಭೇಟಿಯಾಗಿದ್ದೆ. ನಾನು ನಾಯಕನಾಗಿ ನಟಿಸಿರುವ ‘ರಾಜಸ್ಥಾನ್ ಡೈರೀಸ್’ ಸಹ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಇನ್ನೂ ಈ ಚಿತ್ರದ ಕುರಿತು ಹೇಳಬೇಕೆಂದರೆ, ಶೀರ್ಷಿಕೆ ಹೇಳುವಂತೆ ಇದು ಟೀಚರ್ ಮತ್ತು ಶಾಲೆಗಷ್ಟೇ ಮೀಸಲಾದ ಕಥೆಯಲ್ಲ. ಒಬ್ಬ ಬ್ಯಾಚ್ಯುಲರ್ ಫಿಸಿಕ್ಸ್ ಟೀಚರ್ ಜೀವನದಲ್ಲಿ ನಡೆಯುವ ಕಥಾಹಂದರವಿದು. ಫಿಸಿಕ್ಸ್ ನಮ್ಮ ಜೀವನದ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂಬುದನ್ನು ಹೇಳ ಹೊರಟಿದ್ದೇನೆ. ಬ್ರಾಹ್ಮಣರ ಮನೆಯಲ್ಲಿ  ಈ ಫಿಸಿಕ್ಸ್ ಟೀಚರ್ ಬೆಳೆದಿರುತ್ತಾನೆ. ಅಗಾಗ ಅವರ ಮನೆಯಲ್ಲಿ ಕೇಳಿ ಬರುತ್ತಿರುವ ಕರ್ನಾಟಕ ಶಾಸ್ತ್ರೀಯ ಸಂಗೀತ ಕೂಡ ಈ ಚಿತ್ರದ ಒಂದು ಭಾಗವಾಗಿರುತ್ತದೆ. ಇದೇ ಏಳರಿಂದ ಚಿತ್ರೀಕರಣ ಆರಂಭವಾಗುತ್ತಿದೆ. ಮಾಸಾಂತ್ಯಕ್ಕೆ ಮುಗಿಯುತ್ತದೆ. ಈ ವರ್ಷದ ಕೊನೆಗೆ ಅಥವಾ ಹೊಸವರ್ಷದ ಆಗಮನದ ವೇಳೆ ‘ಫಿಸಿಕ್ಸ್ ಟೀಚರ್’ ನಿಮ್ಮ ಮುಂದೆ ಹಾಜರಾಗುತ್ತಾನೆ” ಎಂದರು.

ಪ್ರೇರಣಾ, ಸುಮುಖ

ಚಿತ್ರದ ನಾಯಕಿ ಪ್ರೇರಣಾ ಕಂಬಂ. ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿರುವ ಅನುಭವ ಅವರ ಬೆನ್ನಿಗಿದೆ. “ನಾನು ಈ ಚಿತ್ರದಲ್ಲಿ ಜಲಜ ಪಾತ್ರ ಮಾಡುತ್ತಿದ್ದೇನೆ. ಸುಮುಖ ‘ಫಿಸಿಕ್ಸ್ ಟೀಚರ್’ ಆದರೆ, ನಾನು ಸೈಕಾಲಜಿ ಟೀಚರ್. ಇದರಲ್ಲಿ ‌ಬರೀ ಫಿಸಿಕ್ಸ್ ಅಷ್ಟೇ ಅಲ್ಲದೇ ಪ್ರೇಮಕಥೆಯೂ ಇದೆ. ಕಥೆ ಕೇಳಿ ತುಂಬಾ ಉತ್ಸುಕಳಾಗಿದ್ದೇನೆ” ಎಂದರು. ಸ್ಕಂಧ ಸುಬ್ರಹ್ಮಣ್ಯ ಅವರು ಚಿತ್ರದ ಮೂರು ಹಾಡುಗಳಿಗೆ ಸಂಗೀತ ನೀಡಿರುವುದಲ್ಲದೆ ಕತೆ ರಚನೆಯಲ್ಲಿ ಸುಮುಖ ಅವರಿಗೆ ನೆರವಾಗಿದ್ದಾರೆ. ಸುಮುಖ ಅವರ ತಂದೆ, ನಟ ಶಶಿಕುಮಾರ್, “ಸುಮುಖ ಚಿಕ್ಕವಯಸ್ಸಿನಲ್ಲೇ ತುಂಬಾ ಹಠಮಾರಿ‌. ಅವನ ಹಠ ಈ ರೀತಿ ತಿರುಗಿರುವುದು ಸಂತಸ ತಂದಿದೆ” ಎಂದರೆ, “ಈ ತಂಡ ಯಾವುದೇ ಹೆದರಿಕೆ ಇಲ್ಲದೆ ಪತ್ರಿಕಾಗೋಷ್ಠಿ ಎದುರಿಸುತ್ತಿರುವುದು ನೋಡಿದರೆ ಚಿತ್ರತಂಡದಿಂದ ಉತ್ತಮವಾದದ್ದನ್ನು ಬಯಸಬಹುದು ಎಂಬ ನಂಬಿಕೆ ಬರುತ್ತಿದೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ” ಎಂದು ಹೇಳಿದ್ದು ಮುಖ್ಯ ಅತಿಥಿಯಾಗಿ ಆಗಮಿಸಿದ ಹಿರಿಯ ನಟ ದತ್ತಣ್ಣ. ಪಾಸಿಂಗ್ ಶಾಟ್ ಫಿಲ್ಮ್ ಈ ಚಿತ್ರ ನಿರ್ಮಾಣ ಮಾಡುತ್ತಿದೆ. ಸುಮುಖ, ಪ್ರೇರಣ ಕಂಬಂ, ಮಂಡ್ಯ ರಮೇಶ್ ಹಾಗೂ ರಾಜೇಶ್ ನಟರಂಗ ಚಿತ್ರದ ಇತರೆ ತಾರಾಬಳಗದಲ್ಲಿದ್ದಾರೆ.

ಚಿತ್ರತಂಡ

LEAVE A REPLY

Connect with

Please enter your comment!
Please enter your name here