ಹಿಂದಿ-ಇಂಗ್ಲೀಷಲ್ಲಿ ಉತ್ತಮ ವೆಬ್ ಸರಣಿಗಳು ಸಾಕಷ್ಟಿದ್ದರೂ ಅಷ್ಟೇ ಕೆಟ್ಟ ಸರಕೂ ಬೇಕಾದಷ್ಟಿವೆ. ಕನ್ನಡದಲ್ಲಿ ಕಡಿಮೆ ಸಂಖ್ಯೆಯಲ್ಲಿ ನಿರ್ಮಾಣವಾಗುತ್ತಿದ್ದರೂ ‘ಹನಿಮೂನ್’ ಎಂಬ ಆರು ಕಂತಿನ ಸರಣಿ ಭರವಸೆ ಮೂಡಿಸಿದೆ. Vootನಲ್ಲಿ ಸ್ಟ್ರೀಮ್ ಆಗುತ್ತಿರುವ ಈ ಸರಣಿ ಕೂತಲ್ಲೇ ಹೋಗಿಬರಬಹುದಾದ ಆಹ್ಲಾದಕರ ಮಧುಚಂದ್ರ.
ಸಿನಿಮಾ ರಂಗದಲ್ಲಿ ಉತ್ತಮ ಬರಹಗಾರರಿದ್ದಾರೆ. ಉತ್ತಮೋತ್ತಮ ನಟರೂ ಇದ್ದಾರೆ. ಆದರೆ ಬರಹ-ನಟನೆ ಎರಡರಲ್ಲೂ ಮನಗೆಲ್ಲುವವರು ಅಪರೂಪ. ನಾಗಭೂಷಣ್ ಅಂಥ ಅಪರೂಪದ ಕಲಾವಿದ. ಸದ್ಯ ‘ಹನಿಮೂನ್’ ಮುಗಿಸಿ ವಾಪಸ್ಸಾಗಿದ್ದಾರೆ. ಆರು ಎಪಿಸೋಡುಗಳ ಪುಟ್ಟ ವೆಬ್ ಸರಣಿಯಿದು.
ಹಳೆ ಮೈಸೂರು ಕಡೆಯ ಪ್ರವೀಣ, ಜಗತ್ತಿಗೇ ತೆರೆದುಕೊಂಡ ಬೆಂಗಳೂರ ತೇಜಸ್ವಿನಿ ಮದುವೆ ಗುರುಹಿರಿಯರ ಉಪಸ್ಥಿತಿಯಲ್ಲಿ ನಡೆಯುತ್ತದೆ. ಅವರ ಹನಿಮೂನು ಕಥನ ಈ ಸರಣಿಯ ಚೌಕಟ್ಟು. ಆರಂಭದಲ್ಲೇ ಬರುವ ಸುದೀರ್ಘ ಸೂಚನೆಯಲ್ಲಿ ‘ಕಾರ್ಯಕ್ರಮ ಕಟುವಾದ ಭಾಷೆಯಿಂದ ಕೂಡಿದ್ದು ವೀಕ್ಷಕರ ವಿವೇಚನೆ’ಗೆ ಸಲಹೆ ನೀಡುತ್ತದೆ. ಹೆಸರು ಸೂಚನೆ ನೋಡಿ ಈ ವೆಬ್ ಸೀರೀಸ್ ನೋಡುವುದು ಬೇಡವೆಂಬ ತೀರ್ಮಾನಕ್ಕೆ ಬಂದರೆ ಒಂದಷ್ಟು ಮನರಂಜನೆಗೆ ಖೋತಾ. ಕುಟುವಾದ ಭಾಷೆಯ ಬದಲಿಗೆ ಹಿತವಾದ ಭಾಷೆ ಮತ್ತು ಖಾಸಗಿ ಮಾತುಕತೆಗಳಿವೆಯಷ್ಟೆ. ಹಾಸ್ಯಕ್ಕಾಗಿ ಅಶ್ಲೀಲತೆಗೆ ಜೋತುಬೀಳದೆ ನಾಗಭೂಷಣ್ ಒಂದಷ್ಟು ಸಾಂಸಾರಿಕ ಗುಟ್ಟುಗಳ ಮೊರೆ ಹೋಗಿದ್ದಾರೆ ಎನ್ನಬಹುದು.
ಮರುದಿನ ಹನಿಮೂನಿಗೆ ಹೊರಡುವ ನವದಂಪತಿಗಳನ್ನು ಪೋಟೋಗ್ರಾಫರ್ ಹನಿಮೂನಿಗೂ ಮೊದಲೇ ಹೈರಾಣು ಮಾಡುವಲ್ಲಿಂದ ಸರಣಿ ಆರಂಭವಾಗುತ್ತದೆ. ಫೋಟೋಗ್ರಾಫರ್ ರೂಪದಲ್ಲಿ ಅತಿಥಿ ಕಲಾವಿದನಾಗಿ ಬರುವ ವಾಸುಕಿ ವೈಭವ್ ಇದೊಂದು ಕಾಮಿಡಿ ಸೀರೀಸ್ ಎಂಬ ಸಿಗ್ನೇಚರ್ ಹಾಕಿ ಬಿಡುತ್ತಾರೆ. ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದರೂ ಹಳೆಯ ಸಾಲ ತೀರಿಸಿ ಮದುವೆಗೆಂದು ಒಂದಷ್ಟು ಕಟ್ಟಿಟ್ಟ ಪ್ರವೀಣನಿಗೆ ಹನಿಮೂನಿಗೆ ಬೇರೆಯದೇ ಕಂಟ್ರಿ ನೋಡುವ ಆಸೆ. ಆದರೆ ಬಜೆಟ್ಟಲ್ಲಿರಬೇಕು ಎಂಬ ಕಾರಣಕ್ಕೆ ಸ್ವತಃ ಟ್ರಾವೆಲ್ ಏಜೆಂಟ್ ಆದ ಆತ್ಮೀಯ ಗೆಳೆಯ ಸಾಥ್ ನೀಡುತ್ತಾನೆ. ಗಾಡ್ಸ್ ಓನ್ ಕಂಟ್ರಿಗೆ ದಬ್ಬುತ್ತಾನೆ. ಹಾಗಾಗಿ ಪಕ್ಕದ ಕೇರಳದಲ್ಲಿ ಅವರ ಹನಿಮೂನು.
ಹಾಸ್ಯದ ಉದ್ದೇಶದಿಂದಲೇ ನಟರು ಹಾಸ್ಯ ಮಾಡಿದರೆ ಅಪಹಾಸ್ಯ ಆಗುತ್ತದೆ. ಹಾಗಾಗಿ ಹನಿಮೂನಲ್ಲಿ ನಟ-ನಟಿಯರು ಸೀರಿಯಸ್ಸಾಗಿದ್ದು ನಗಿಸಲು ಸೂಕ್ತ ಸನ್ನಿವೇಶಗಳನ್ನು ಹೆಣೆದಿದ್ದಾರೆ. ಅದಕ್ಕೆ ಪೂರಕವಾಗಿ ಸಂಭಾಷಣೆ ಸಾಗುತ್ತದೆ. ದೋಷಗಳು ಇಲ್ಲವೆಂದೇನಿಲ್ಲ. ಟಿವಿಯಲ್ಲಿ ನೋಡಿದರೆ ಕೆಲವು ದೃಶ್ಯಗಳ ವೇಳೆ ಸ್ವಲ್ಪ ಹೊತ್ತು ವಾಟ್ಸಾಪು ನೋಡಲು ಪ್ರೇರೇಪಿಸುತ್ತದೆ. ಆದರೆ ಮುಂದಿನ ದೃಶ್ಯ ಒಳ್ಳೆಯದಿದ್ದೇ ಇರುತ್ತದೆ ಎಂದು ಹಿಂದಿನ ಕೆಲವು ದೃಶ್ಯ ನಂಬಿಸುವಲ್ಲಿ ಸಫಲವಾಗಿರುತ್ತದೆ. ಹಾಗಾಗಿ ಅಲ್ಲಲ್ಲಿ ವಿಚಲಿತವಾದರೂ ಮತ್ತೆ ಹನಿಮೂನು ಎಳೆದು ತರುತ್ತದೆ.
ಅತಿಥಿ ಪಾತ್ರ ವಾಸುಕಿ ವೈಭವ್‌ಗೆ ಮಾತ್ರ ಸೀಮಿತವಾಗಿಲ್ಲ. ಸೆಕ್ಸ್ ಗುರುವಿನ ಅವತಾರದಲ್ಲಿ ಬರುವ ಪವನ್ ಕುಮಾರ್, ಡೈಸಿ ಹೆಸರಿನ ಅಪೂರ್ವ ಪಾತ್ರದಲ್ಲಿ ಕಾಣಿಸಿಕೊಂಡ ಅಪೂರ್ವ ಭಾರಧ್ವಾಜ್ ಕೂಡ ಇದ್ದಾರೆ. ಅವರ ಪಾತ್ರ ಉಳಿದೆಲ್ಲರಿಗಿಂತ ಗಟ್ಟಿಯಾಗಿದೆ. ವಾಸುಕಿ ವೈಭವ್ ಪಾತ್ರ ಬಂದು ಹೋದರೂ ಸಂಗೀತದಲ್ಲಿ ಕೊನೆಯವರೆಗೂ ನಿಲ್ಲುತ್ತಾರೆ. ಸ್ಪ್ಯಾನಿಷ್ – ಕನ್ನಡ ಮಿಶ್ರಿತ ಹಾಡಿನಲ್ಲಿ ಹೊಸತನವಿದೆ, ವಿವಾಹಿತರ ಬವಣೆಯೂ ಇದೆ, ಆಗುತ್ತಾ ಆಗುತ್ತಾ? ಎಂಬ ಪ್ರೇಕ್ಷಕನ ಕುತೂಹಲವೂ ಇದೆ.
ಇವೆಲ್ಲವುಗಳ ಮಧ್ಯೆ ಪ್ರವೀಣನಾಗಿ ನಾಗಭೂಷಣ್ ಟೈಮಿಂಗು, ಟೆನ್ಷನ್ನುಗಳ ನಿಭಾವಣೆಯಲ್ಲಿ ಪ್ರಾವೀಣ್ಯ ಮೆರೆದಿದ್ದಾರೆ. ಕಡಿಮೆ ಸಂಭಾಷಣೆಯಿಂದ ಆರಂಭವಾಗುವ ತೇಜಸ್ವಿನಿ ಪಾತ್ರಧಾರಿ ಸಂಜನಾ ಆನಂದ್ ನಟನಾ ಸಾಮರ್ಥ್ಯ ನಿಧನಿಧಾನವಾಗಿ ಅನಾವರಣವಾಗಿ ಇಷ್ಟವಾಗುತ್ತಾರೆ. ಹನಿಮೂನಿಗೆ ಹೋದ ಮುಖ್ಯ ಕಾರ್ಯವೇ ಮುಂದೂಡಲ್ಪಡುವುದು ಸರಣಿಯ ಪಾಲಿಗೆ ಒಳ್ಳೆಯ ಸೂತ್ರ. ಆದರೆ ಅಲ್ಲಲ್ಲಿ ಬರುವ ಕೇರಳದ ಬಿಡಿ ದೃಶ್ಯಗಳು ಕಡಿಮೆ ಇರಬೇಕಿತ್ತು. ಕ್ಯಾಮರಾ ಕೆಲಸ ಅತ್ಯುತ್ತಮವೇ ಆದರೂ ನಾಗಭೂಷಣ್, ಗೆಳೆಯನ ಪಾತ್ರದ ಮಹದೇವ್ ಕಾಣದಿದ್ದಾಗ ಚುರುಕುತನ ಮರೆಯಾಗುವ ಕಾರಣ ನೋಡುಗನಿಗೆ ಆ ಹೊತ್ತಿಗೆ ಒಮ್ಮೆ ವಾಟ್ಸಾಪು ಮುಟ್ಟಿ ಬರುವ ಅನಿವಾರ್ಯತೆ.
ಅಪ್ಪಟ ಕನ್ನಡಿಗ ಮಲಯಾಳ ಭಾಷೆ ಅರ್ಥಮಾಡಿಕೊಳ್ಳಲು ಹೊಣೆದಾಡುವುದು ವಾಸ್ತವಕ್ಕೆ ಹತ್ತಿರದ ಪ್ರತಿಬಿಂಬ. ಹೋಟೆಲ್ ರಿಸೆಪ್ಷನ್‌ನಲ್ಲಿ ಅದಕ್ಕೆ ಅಡಿಪಾಯ ಹಾಕಿದರೆ ಅದು ಭದ್ರವಾಗುವುದು ಚಿಂತಾಕ್ರಾಂತ ಪ್ರವೀಣನ ಏಕಾಂತ ದೋಣಿ ಪಯಣದಲ್ಲಿ. ತಲೆಕೆಟ್ಟ ಪ್ರವೀಣ ನಡುನೀರಲ್ಲಿ ಮಾತಾಡಲು ಬೇರಾರೂ ಇಲ್ಲದೆ ಅಂಬಿಗನ ಎದುರು ಇವನ ತಲೆಬಿಸಿ ಹೇಳಿಕೊಂಡಾಗ ಅದಕ್ಕೆ ಅಂಬಿಗನ ಪ್ರತಿಕ್ರಿಯೆ ಆಸ್ವಾದಿಸಲು ಸ್ವಲ್ಪ ಮಟ್ಟಿಗೆ ಮಲಯಾಳ ಅರ್ಥವಾದರೆ ಒಳಿತು. ಕೊನೆಗೆ ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬ ಸಂದೇಶ ಸಾರುವ ‘ಹನಿಮೂನ್’ ಅಂತಿಮ ಅಂಕದಲ್ಲಿ ಸ್ವಲ್ಪ ಬೋಧನಾಪೂರ್ವಕ ಅನಿಸಿದೆ ಎಂಬುದೊಂದು ಪುಟ್ಟ ಕೊರತೆ. ಆದರೆ ಸರಣಿಯನ್ನು ಮಹಿಳಾ ದೃಷ್ಟಿಕೋನದ ಕಡೆಯಿಂದಲೂ ಕಂಡ ನಾಗಭೂಷಣ್ ಸ್ವತಃ ಮಹಿಳೆಯೇ ರಚಿಸಿದಂತೆ ಕಾಣುವಂತೆ ಯೋಚಿಸಿರುವುದು ಶ್ಲಾಘನೀಯ.
ಅಂದಹಾಗೆ ಶಿವರಾಜ್‌ಕುಮಾರ್ ಪುತ್ರಿ ನಿವೇದಿತಾ ಈ ಸರಣಿಯ ಸಹ ನಿರ್ಮಾಣದ ಮೂಲಕ ಅಧಿಕೃತವಾಗಿ ಸಿನಿ ವ್ಯವಹಾರಕ್ಕೆ ಇಳಿದಿದ್ದಾರೆ ಎಂಬುದು ಪೂರಕ ಮಾಹಿತಿ. Vootನಲ್ಲಿ ಮೂಲಭಾಷೆ ಕನ್ನಡದಲ್ಲಿರುವ ‘ಹನಿಮೂನ್’ Ahaದಲ್ಲಿ ತೆಲುಗು ಅವತರಣಿಕೆಯಲ್ಲೂ ಇದೆ.