ಕನ್ನಡ ಚಿತ್ರರಂಗ ಕಂಡ ಪ್ರಮುಖ ನಾಯಕನಟಿ ಸುಧಾರಾಣಿ ಅವರಿಗೆ ಡಾಕ್ಟರೇಟ್ ಗೌರವ ಸಂದಿದೆ. ಚಿತ್ರರಂಗಕ್ಕೆ ಮೂರು ದಶಕಗಳ ಕಾಲ ಸಂದ ಅವರ ಸೇವೆ ಪರಿಗಣಿಸಿ ಇಂಡಿಯನ್ ಎಂಪೈರ್ ವಿವಿ ಸಹಯೋಗದೊಂದಿಗೆ ಯೂನಿವರ್ಸಲ್ ಡೆವಲಪ್‌ಮೆಂಟ್ ಕೌನ್ಸಿಲ್ ಈ ಗೌರವ ನೀಡಿದೆ.
ಬಾಲನಟಿಯಾಗಿ ಬೆಳ್ಳಿತೆರೆಗೆ ಪರಿಚಯವಾದ ನಟಿ ಸುಧಾರಾಣಿ ‘ಆನಂದ್’ (1986) ಚಿತ್ರದೊಂದಿಗೆ ನಾಯಕನಟಿಯಾದರು. 80, 90ರ ದಶಕಗಳಲ್ಲಿ ನಾಯಕನಟಿಯಾಗಿ ವೈವಿಧ್ಯಮಯ ಪಾತ್ರಗಳನ್ನು ಪೋಷಿಸಿದ್ದಾರೆ. ಉತ್ತಮ ಪಾತ್ರಪೋಷಣೆಗೆ ಎರಡು ಬಾರಿ ರಾಜ್ಯಪ್ರಶಸ್ತಿ, ಮೂರು ಫಿಲ್ಮ್’ಫೇರ್ ಪ್ರಶಸ್ತಿ ಸಂದಿವೆ. ಚಲನಚಿತ್ರರಂಗಕ್ಕೆ ಸುಮಾರು ಮೂರು ದಶಕಗಳ ಕಾಲ ಸಂದ ಅವರ ಸೇವೆ ಪರಿಗಣಿಸಿ ಇಂಡಿಯನ್ ಎಂಪೈರ್ ವಿವಿ ಸಹಯೋಗದೊಂದಿಗೆ ಯೂನಿವರ್ಸಲ್ ಡೆವಲಪ್‌ಮೆಂಟ್ ಕೌನ್ಸಿಲ್ ನಟಿಗೆ ಗೌರವ ಡಾಕ್ಟರೇಟ್ ನೀಡಿದೆ. ಮೊನ್ನೆ ಹೊಸೂರಿನಲ್ಲಿ ನಡೆದ ಸಮಾರಂಭದಲ್ಲಿ ಸುಧಾರಾಣಿ ಅವರಿಗೆ ಗೌರವ ಪ್ರದಾನ ಮಾಡಲಾಗಿದೆ. ನಟಿ ಈ ಸಂತಸವನ್ನು ತಮ್ಮ ಇನ್‌ಸ್ಟಾಗ್ರಾಮ್’ನಲ್ಲಿ ಹಂಚಿಕೊಂಡಿದ್ದಾರೆ.
“ಈ ಗೌರವದ ನಿರೀಕ್ಷೆ ಇರದ ನನಗೆ ಇದು ನನಗೆ ಅಚ್ಚರಿಯ ವಿಷಯ. ಅವರದ್ದೇ ನಿರ್ದಿಷ್ಟ ಮಾನದಂಡ ಆಧರಿಸಿ ಅವರು ಈ ಗೌರವಕ್ಕೆ ನನ್ನನ್ನು ಆಯ್ಕೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ನನ್ನನ್ನು ನಾಯಕಿಯಾಗಿ ಪರಿಚಯಸಿದ ಡಾ.ರಾಜಕುಮಾರ್ ಅಪ್ಪಾಜಿ ಮತ್ತು ಪಾರ್ವತಮ್ಮ ರಾಜಕುಮಾರ್ ಅವರನ್ನು ಹಾಗೂ ತೆರೆ ಮೇಲೆ ನನ್ನನ್ನು ನೋಡುತ್ತಾ ಮೆಚ್ಚಿ ಆಶೀರ್ವದಿಸಿದ ಕನ್ನಡಿಗರನ್ನು ಸ್ಮರಿಸುತ್ತೇನೆ” ಎನ್ನುತ್ತಾರೆ ನಟಿ. ಕನ್ನಡ ಚಿತ್ರರಂಗದ ಸಂದರ್ಭದಲ್ಲಿ ಹಿರಿಯ ನಟಿಯರಾದ ಬಿ.ಸರೋಜಾದೇವಿ, ಜಯಂತಿ, ಭಾರತಿ, ನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ಸಂದಿದೆ. ಎಂಬತ್ತರ ದಶಕದಲ್ಲಿ ನಾಯಕಿಯಾಗಿ ಪರಿಚಯವಾದ ನಟಿಯರ ಪೈಕಿ ಸುಧಾರಾಣಿ ಅವರಿಗೆ ಈ ಗೌರವ ಸಿಕ್ಕಿರುವುದು ವಿಶೇಷ. ಸದ್ಯ ಸುಧಾರಾಣಿ ‘ಕ್ಷತ್ರಿಯ’ ಹಾಗೂ ಹೆಸರಿಡದ ಒಂದು ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಅವರು ಅಭಿನಯಿಸಿರುವ ‘ಅವತಾರ ಪುರುಷ’ ಸಿನಿಮಾ ಸದ್ಯದಲ್ಲೇ ತೆರೆಕಾಣಲಿದೆ. ಮುಂದಿನ ವರ್ಷ ಸಕ್ರಾಂತಿಗೆ ಸೆಟ್ಟೇರಲಿರುವ ಚಿತ್ರವೊಂದರಲ್ಲಿ ಅಪರೂಪದ ಪಾತ್ರದೊಂದಿಗೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದೇನೆ ಎನ್ನುತ್ತಾರೆ ಸುಧಾರಾಣಿ.