ಎಲ್ಲವೂ predicted ಅಥವಾ ಈಗಾಗಲೇ‌ ನೋಡಿದ ಕಥೆಗಳಂತೆಯೇ ಇದೆ ಅನ್ನುವಷ್ಟರ ಹೊತ್ತಿಗೆ ಇವೆಲ್ಲಕ್ಕೂ ಒಂದು ಸೂಕ್ತ ಅಂತ್ಯ ನೀಡಲೆಂದೇ ನವೀನ್‌ ಶಂಕರ್ ಕಥೆಯ ಎರಡನೆಯ‌ ಭಾಗ ಬರುತ್ತದೆ.‌ ಇದೇ ಸಿನಿಮಾದ ಹೈಲೈಟ್! – ‘ಹೊಂದಿಸಿ ಬರೆಯಿರಿ’ ಸಿನಿಮಾ ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ಕಾಲೇಜಿನ ಕಥೆಯಾದರೂ, ಸನ್ನಿವೇಶಗಳು ರಿಪೀಟ್ ಆಗದಂತೆ ನಿರ್ದೇಶಕರು ಜಾಗ್ರತೆ ವಹಿಸಿದ್ದಾರೆ. ಹತ್ತಾರು ಪಾತ್ರಗಳಿದ್ದರೂ ಒಂದಕ್ಕೊಂದು ಸೇಮ್ ಅನ್ನಿಸದಂತೆ ಬೇರೆ ಬೇರೆ ಕಥೆಗಳಿವೆ. ಸೀನಿಯರ್ ಹುಡುಗಿಯೊಬ್ಬಾಕೆ ಹುಡುಗನೊಬ್ಬನ ಪ್ರೀತಿಗೆ ಹಂಬಲಿಸುವುದು, ಟೈಂ ಪಾಸಿಗೆ ಅಂತ ಲವ್ ಮಾಡೋದು, ನಿಜವಾಗಿ ಪ್ರೀತಿಗೆ ಬೀಳೋದು, ಇಷ್ಟವಿಲ್ಲದ ಪ್ರೀತಿಗೆ ಒಪ್ಪಿಕೊಳ್ಳದೆ ಗೆಳೆತನ ಮುಂದುವರೆಸುವುದು ಹೀಗೆ ಬೇರೆ ಬೇರೆ ರೀತಿಯ ವಿಷಯಗಳನ್ನು ಪಾತ್ರಗಳೊಳಗೆ ತುಂಬಲಾಗಿದೆ. ಕಾಲೇಜಿನ‌ ಕಥೆ ಹೇಳುವಾಗ ಬರೀ ತುಂಟಾಟ -ಹುಡುಗಾಟವನ್ನೋ, ಅಥವ ಬರೀ ಪ್ರೀತಿಗೆ ಬೀಳುತ್ತ ಓದನ್ನು ಮರೆಯುವ ಕಥೆಗಳು ಬರುವುದೇ ಹೆಚ್ಚು. ಆದರೆ ಈ ಸಿನಿಮಾದಲ್ಲಿ ಎಲ್ಲವನ್ನೂ ಹದವಾಗಿ‌ ಬೆರೆಸಲಾಗಿದೆ.

ಮೇಲೆ ಹೇಳಿದ ವಿಷಯಗಳೆಲ್ಲ ಒಂದು ಹಂತಕ್ಕಾದರೆ, ಅದನ್ನು ಮುಂದುವರೆಸಿ ‌ನಾವು‌ ನೋಡಿದ ಕಥೆಗಳೇ ತಲೆಕೆಳಗಾಗುವಂತೆ ಚಿತ್ರಕಥೆ ತಿರುವು ಪಡೆಯುತ್ತದೆ. ಉದಾಹರಣೆಗೆ ಪ್ರೀತಿಯಲ್ಲಿ‌ ಬಿದ್ದು ಅದನ್ನು ಗಿಟ್ಟಿಸಿಕೊಳ್ಳುವ ಒಂದು ಜೋಡಿ ಒಂದು ಹಂತದಲ್ಲಿ ಬೇರೆಯಾಗುವ ಯೋಚನೆಗೆ ಬೀಳುವುದು. ಅದೇ ರೀತಿ ಟೈಂಪಾಸಿಗೆ ಅಂತ ಶುರುವಾದ ಲವ್ ತುಂಬಾ ಗಂಭೀರವಾಗಿ ಮಂದುವರೆಯುವುದು. ಅಂದುಕೊಂಡ ಪ್ರೀತಿ ಸಿಗದಿದ್ದಾಗ ಮನೆಯವರು ಹುಡುಕಿದ ಜೋಡಿಯೊಡನೆ ಮದುವೆಯಾಗಿ ಹೊಂದಿಕೆಯಾಗಲು ಒದ್ದಾಡುವುದು. ಹೀಗೆ ನಾವಂದುಕೊಂಡ ಹಾಗೆಯೇ ಎಲ್ಲವೂ ನಡೆಯುವುದಿಲ್ಲ ಅನ್ನುವಂತೆ ಕಥೆ ಒಂದು ಘಟ್ಟ ತಲುಪುತ್ತದೆ.
ಎಲ್ಲವೂ predicted ಅಥವ ಈಗಾಗಲೇ‌ ನೋಡಿದ ಕಥೆಗಳಂತೆಯೇ ಇದೆ ಅನ್ನುವಷ್ಟರ ಹೊತ್ತಿಗೆ ಇವೆಲ್ಲಕ್ಕೂ ಒಂದು ಸೂಕ್ತ ಅಂತ್ಯ ನೀಡಲೆಂದೇ ನವೀನ್‌ ಶಂಕರ್ ಕಥೆಯ ಎರಡನೆಯ‌ ಭಾಗ ಬರುತ್ತದೆ.‌ ಇದೇ ಸಿನಿಮಾದ ಹೈಲೈಟ್!

ನವೀನ್ ಶಂಕರ್ ಮತ್ತು ಅರ್ಚನಾ ಜೋಯಿಸ್ ಕೊನೆಯ ಭಾಗದಲ್ಲಿ ಇಡೀ ಸಿನಿಮಾಗೆ ಬೇರೊಂದು ಫೀಲ್ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ನನಗನ್ನಿಸಿದ್ದು ಮಂತ್ರಮಾಂಗಲ್ಯ ದೃಶ್ಯದಲ್ಲಿ ಸಿನಿಮಾ ಮುಗಿಯಬೇಕಿತ್ತು ಅಂತ. ಆಗ positive noteನಲ್ಲಿ ಸಿನಿಮಾ ಮುಗಿಯುತ್ತಿತ್ತು ಅಂತ‌. ಕಥೆಗೆ ಇನ್ನೆರಡು ದೃಶ್ಯ ಸೇರಿಸಿ ಕೊಂಚ ಆರ್ದ್ರ ಮನಸ್ಸಿನೊಂದಿಗೆ… ಬದುಕೂ ಅಷ್ಟೇ, ಸಿನಿಮಾ ಕೂಡ ಅಷ್ಟೇ. ಅವುಗಳನ್ನು ‘ಬಂದಂತೆ ಸ್ವೀಕರಿಸಿ’ ಅನ್ನುವ ಸಂದೇಶದೊಂದಿಗೆ ಸಿನಿಮಾ ಮುಗಿಸುತ್ತಾರೆ.

Green initiative, ಪುಸ್ತಕ ಓದುವಿಕೆ, ಮಂತ್ರ ಮಾಂಗಲ್ಯ ಹೀಗೆ ಅನೇಕ ವಿಷಯಗಳನ್ನು ಕಥೆಗೆ ಸಂದರ್ಭಕ್ಕೆ ತಕ್ಕಂತೆ ಬಳಸಿಕೊಂಡ ನಿರ್ದೇಶಕರನ್ನು ಅಭಿನಂದಿಸಬೇಕು. ಪಾತ್ರವರ್ಗ ದೊಡ್ಡದಿದೆ. ಟೈಗರ್ ಪಾತ್ರದ ಹಾಸ್ಯನಟ ಸೇರಿದಂತೆ ಎಲ್ಲರೂ ನಟನೆ ಚೆನ್ನಾಗಿದೆ. ಸಂಭಾಷಣೆ ಅರ್ಥಪೂರ್ಣವಾಗಿದೆ. ಮನಸ್ಸಿಗಿಷ್ಟವಾಗುವ ಮಿತವಾದ ಸಂಗೀತದ ಸಾವಧಾನದ ಧಾಟಿಯ ಹಾಡುಗಳು ವಿಭಿನ್ನವಾಗಿ ಸಿನಿಮಾದ ಭಾಗವಾಗಿವೆ. ಕಾಲೇಜಿನ ಕಥೆಯಾದರೂ ಎಲ್ಲರೂ ಕೂತು ನೋಡಬಹುದಾದ ಡೀಸೆಂಟ್ ಸಿನಿಮಾ ‘ಹೊಂದಿಸಿ ಬರೆಯಿರಿ’. ಸಿನಿಮಾ Convey ಮಾಡುವ ಆಶಯ – ‘ಬದುಕು ಬಂದಂತೆ ಸ್ವೀಕರಿಸಿ’.

LEAVE A REPLY

Connect with

Please enter your comment!
Please enter your name here