ಕೋವಿಡ್‌ ದಿನಗಳ ನಂತರ ಚಿತ್ರರಂಗ ಮತ್ತೆ ಯಥಾಸ್ಥಿತಿಗೆ ಮರಳುತ್ತಿರುವ ಬಗ್ಗೆ ನಿರ್ದೇಶಕ ದಯಾಳ್ ಪದ್ಮನಾಭನ್‌ ಸಂತಸ ಹಂಚಿಕೊಂಡಿದ್ದಾರೆ. ಕೊರೊನಾ ಸಂಕಷ್ಟಗಳು ಇಲ್ಲಿಗೇ ಮುಗಿಯಲಿ ಎಂದು ಅವರು ಪ್ರಾರ್ಥಿಸುತ್ತಿದ್ದಾರೆ. ದಯಾಳ್ ನಿರ್ದೇಶನದ ‘ಒಂಬತ್ತನೇ ದಿಕ್ಕು’ ಸಿನಿಮಾ ಇದೇ ತಿಂಗಳ ಕೊನೆಯ ವಾರದಲ್ಲಿ ತೆರೆಗೆ ಬರುತ್ತಿದೆ.

ಕಂಟೆಂಟ್ ಬೇಸ್ಡ್‌ ಸಿನಿಮಾಗಳ ನಿರ್ದೇಶಕರ ಪೈಕಿ ತಮ್ಮದೇ ಆದ ಸ್ಥಾನ ಕಂಡುಕೊಂಡಿರುವ ನಿರ್ದೇಶಕ ದಯಾಳ್ ಪದ್ಮನಾಭನ್‌. ಮೂಲತಃ ಅವರು ಬರಹಗಾರರಾಗಿ ಚಿತ್ರರಂಗಕ್ಕೆ ಪರಿಚಯವಾದವರು. ಸದೃಢ ಚಿತ್ರಕಥೆ ಮಾಡಿಕೊಂಡು ಕಡಿಮೆ ಬಜೆಟ್‌ನಲ್ಲಿ ಕತೆಯನ್ನು ಆಕರ್ಷಕವಾಗಿ ತೆರೆ ಮೇಲೆ ನಿರೂಪಿಸುವ ಶೈಲಿ ಅವರಿಗೆ ಸಿದ್ಧಿಸಿದೆ. ಇತ್ತೀಚಿನ ‘ಹಗ್ಗದ ಕೊನೆ’, ‘ಆ ಕರಾಳ ರಾತ್ರಿ’, ‘ರಂಗನಾಯಕಿ’ ಚಿತ್ರಗಳು ಅವರಿಗೆ ಹೆಸರು ತಂದುಕೊಟ್ಟವು. ಈ ಬಾರಿ ‘ಒಂಬತ್ತನೇ ದಿಕ್ಕು’ ಚಿತ್ರದಲ್ಲಿ ತಮ್ಮ ಹಾದಿಯನ್ನು ವಿಸ್ತರಿಸಿದ್ದಾರೆ. ಎಂದಿನ ಬಜೆಟ್‌ಗಿಂತ ಕೊಂಚ ಹೆಚ್ಚಿನ ಬಜೆಟ್‌ನಲ್ಲೇ ಈ ಸಿನಿಮಾ ತಯಾರಾಗಿದೆ. ಇದರ ಜೊತೆಗೆ ಎಂದಿನ ತಮ್ಮ ಫಾರ್ಮುಲಾ ಕಾಯ್ದುಕೊಂಡಿದ್ದಾರವರು. ಕೋವಿಡ್‌ ದಿನಗಳಲ್ಲಿ ತಾವು ಪಟ್ಟ ಕಷ್ಟ, ನಂತರದ ದಿನಗಳ ಈ ಸಂದರ್ಭದ ಬಗ್ಗೆ ಅವರಿಲ್ಲಿ ಮಾತನಾಡಿದ್ದಾರೆ.

ಕೋವಿಡ್‌, ಲಾಕ್‌ಡೌನ್‌ ದಿನಗಳಲ್ಲಿ ಫಿಲ್ಮ್‌ ಮೇಕರ್‌ಗಳು ತುಂಬಾ ಸಂಕಟಪಡಬೇಕಾಯ್ತು…

ಹೌದು, ಸಿನಿಮಾದಲ್ಲಿ ಕೆಲಸ ಮಾಡುವ ತಂತ್ರಜ್ಞರು ಸದಾ ಚಟುವಟಿಕೆಯಿಂದಿರುತ್ತಾರೆ. ಶೂಟಿಂಗ್, ಹೊರಗೆ ಸುತ್ತಾಟ, ಸಮಾನಮನಸ್ಕರೊಂದಿಗೆ ಚರ್ಚೆ, ಥಿಯೇಟರ್‌ಗಳಲ್ಲಿ ಸಿನಿಮಾ ನೋಡೋದು.. ಹೀಗಿದ್ದರೆ ಚೆಂದ. ಅಂಥವರಿಗೆ ಬ್ರೇಕ್‌ ತೆಗೆದುಕೊಂಡು ಸುಮ್ಮನೆ ಕುಳಿತುಕೊಳ್ಳಿ ಎಂದರೆ ಅದೊಂಥರಾ ಮಾನಸಿಕ ಒತ್ತಡ. ಇನ್ನು ನಮ್ಮಲ್ಲಿ ಫೈನಾನ್ಷಿಯಲೀ ಸೆಟ್ಲ್ಡ್‌ ಆಗಿರುವ ತಂತ್ರಜ್ಞರು ಹಾಗೂ ಕಲಾವಿದರು ತುಂಬಾ ಕಡಿಮೆ. ಫಸ್ಟ್ ಲೇಯರ್‌ನಲ್ಲಿ ಹೆಸರು ಮಾಡಿರುವವರ ಪೈಕಿಯೇ ಸಾಕಷ್ಟು ಜನರ ಆರ್ಥಿಕವಾಗಿ ಸದೃಢವಾಗಿಲ್ಲ. ಹೀಗಿರುವಾಗ ಹೊಸಬರದ್ದು ಇನ್ನೆಷ್ಟು ಕಷ್ಟವಾಗಿರಬೇಕು. ಈಗ ಸಿನಿಮಾರಂಗದ ಚೇತರಿಕೆಯೊಂದಿಗೆ ಪರಿಸ್ಥಿತಿ ಸುಧಾರಿಸುತ್ತಿದೆ.

ನಿಮ್ಮ ಪ್ರಕಾರ ಕೋವಿಡ್‌ ನಂತರದ ಚಿತ್ರರಂಗದ ದಿನಗಳು ಹೇಗಿವೆ?

ಮನೆಯಲ್ಲೇ ಕುಳಿತು ಜನರಿಗೆ ಬೇಸರವಾಗಿದೆ. ಅವರು ಹೊರಗೆ ಬರುತ್ತಿದ್ದಾರೆ. ಥಿಯೇಟರ್‌ಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಿರುವುದು ಆಶಾದಾಯಕ ಬೆಳವಣಿಗೆ. ನಮ್ಮಲ್ಲಷ್ಟೇ ಅಲ್ಲ ಪಕ್ಕದ ತಮಿಳು, ತೆಲುಗಿನಲ್ಲೂ ಇದೇ ಪರಿಸ್ಥಿತಿ ಕಂಡುಬರುತ್ತಿದೆ. ಕೋವಿಡ್‌ನಂತಹ ಏನೇ ಸಂಕಷ್ಟಗಳು ಬಂದರೂ ಜನರಲ್ಲಿ ಸಿನಿಮಾ ಕ್ರೇಝ್ ಹೋಗೋಲ್ಲ. ಎಲ್ಲರೂ ಒಟ್ಟಿಗೆ ಕುಳಿತು ದೊಡ್ಡ ಪರದೆ ಮೇಲೆ ಸಿನಿಮಾ ನೋಡುವ ಅನುಭವ ವಿಶೇಷವಾದದ್ದು. ಕ್ರಮೇಣ ಹಿಂದಿನ ಥಿಯೇಟರ್‌ ವೈಭವ ಮರಳಲಿದೆ ಎನ್ನುವ ಭರವಸೆ ಇದೆ.

ಈಗ ಮತ್ತೆ ಕೊರೊನಾದ ಹೊಸ ತಳಿ ಬರುತ್ತಿದೆ ಎನ್ನುವ ಭೀತಿ ಶುರುವಾಗಿದೆ…

ಮತ್ತೆ ತೊಂದರೆ ಆಗದಿರಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಕೋವಿಡ್ ಮೊದಲ ಅಲೆಯಲ್ಲಿ ಜನರಿಗೆ ತುಂಬಾ ಭಯವಿತ್ತು. ಎರಡನೆಯ ಅಲೆ ಹೊತ್ತಿಗೆ ಈ ಭಯ ಕಡಿಮೆಯಾಗಿತ್ತು. ಈಗ ಸಹಜ ಸ್ಥಿತಿಯಿದೆ. ಚಿತ್ರೋದ್ಯಮ ಮಾತ್ರವಲ್ಲ ಎಲ್ಲರ ಹಿತದೃಷ್ಟಿಯಿಂದ ಈ ಕೋವಿಡ್‌ ಮತ್ತೆ ತೊಂದರೆ ಕೊಡದಿರಲಿ ಎಂದು ಆಶಿಸುತ್ತೇನೆ.

ದಯಾಳ್ ನಿರ್ದೇಶನದ ‘ಆ ಕರಾಳ ರಾತ್ರಿ’ ಚಿತ್ರದ ದೃಶ್ಯ

ನಿಮ್ಮ ನಿರ್ದೇಶನದ ‘ಒಂಬತ್ತನೇ ದಿಕ್ಕು’ ಸಿನಿಮಾ ತೆರೆಗೆ ಸಿದ್ಧವಾಗಿದೆ…

‘ಒಂಬತ್ತನೇ ದಿಕ್ಕು’ ಸಿದ್ಧವಾಗಿ ಆಲ್‌ಮೋಸ್ಟ್ ಒಂದು ವರ್ಷವಾಯ್ತು. ಈ ಸಿನಿಮಾದ ರಿಸಲ್ಟ್ ನನಗೆ ತುಂಬಾ ಇಂಪಾರ್ಟೆಂಟ್‌. ನನ್ನ ನಿರ್ದೇಶನದ ‘ರಂಗನಾಯಕಿ’ ತೆರೆಕಂಡು ಎರಡು ವರ್ಷಗಳ ನಂತರ ಈ ಸಿನಿಮಾ ತೆರೆಗೆ ಬರುತ್ತಿದೆ. ಇದೊಂದು ಆಕ್ಷನ್‌ – ಥ್ರಿಲ್ಲರ್‌ ಕತೆ. ಈ ಬಾರಿ ಕೊಂಚ ಹೆಚ್ಚಿನ ಬಜೆಟ್‌ನಲ್ಲೇ ನನ್ನ ಶೈಲಿಯ ನಿರೂಪಣೆಯೊಂದಿಗೆ ಥಿಯೇಟರ್‌ಗೆ ಬರುತ್ತಿದ್ದೇನೆ. ಮಲ್ಟಿಪ್ಲೆಕ್ಸ್‌ ಜೊತೆಗೆ ಸಿಂಗಲ್ ಸ್ಕ್ರೀನ್‌ಗೂ ಒಗ್ಗುವಂತಹ ಕಂಟೆಂಟ್‌ ಇದು ಎನ್ನುವುದು ನನ್ನ ಅಭಿಪ್ರಾಯ.

ಕಡಿಮೆ ಬಜೆಟ್‌ನಲ್ಲಿ ಕಂಟೆಂಟ್‌ ಬೇಸ್ಡ್‌ ಸಿನಿಮಾ ಮಾಡುವ ನಿಮ್ಮ ಫಾರ್ಮುಲಾ ಹುಟ್ಟಿದ್ದು ಹೇಗೆ?

ನನಗೆ ನಿರ್ಮಾಪಕರ ಕಷ್ಟಗಳು ಗೊತ್ತಿದೆ. ಹಾಗಾಗಿ ಮೊದಲಿನಿಂದಲೂ ಸಾಧ್ಯವಾದಷ್ಟೂ ಅಚ್ಚುಕಟ್ಟಾಗಿ ಸಿನಿಮಾ ಮಾಡುವ ಶೈಲಿಯನ್ನು ರೂಢಿಸಿಕೊಂಡಿದ್ದೇನೆ. 2014ರಲ್ಲಿ ನಾನೇ ಸ್ವತಃ ನಿರ್ಮಾಪಕನಾದಾಗ ಅಲ್ಲಿನ ತಾಪತ್ರಯಗಳು ಚೆನ್ನಾಗಿ ಅರಿವಾದವು. ಚಿತ್ರನಿರ್ಮಾಣದ ಕಷ್ಟಗಳನ್ನು ಅರಿತು ಜವಾಬ್ದಾರಿಯಿಂದ ಸಿನಿಮಾ ಮಾಡಬೇಕು ಎಂದುಕೊಂಡಾಗ ಈ ಫಾರ್ಮುಲಾ ಗಟ್ಟಿಯಾಯ್ತು. ಮೂಲತಃ ಬರಹಗಾರನಾಗಿ ಚಿತ್ರರಂಗಕ್ಕೆ ಬಂದವನು ನಾನು. ಬರವಣಿಗೆಗೆ ಹೆಚ್ಚು ಸಮಯ ವಿನಿಯೋಗಿಸಿದಾಗ ಮೇಕಿಂಗ್‌ನಲ್ಲಿ ಬಜೆಟ್‌ ಕಡಿತಗೊಳಿಸಬಹುದು.

ದಯಾಳ್ ನಿರ್ದೇಶನದ ‘ರಂಗನಾಯಕಿ’ ಚಿತ್ರದಲ್ಲಿ ಅದಿತಿ ಪ್ರಭುದೇವ

ನಿಮ್ಮ ನಿರ್ದೇಶನದ ‘ಆ ಕರಾಳ ರಾತ್ರಿ’ ಸಿನಿಮಾ ‘ಅನಗನಗ ಓ ಅತಿಥಿ’ ಶೀರ್ಷಿಕೆಯಡಿ ತೆಲುಗಿಗೆ ರೀಮೇಕಾಯ್ತು. ಇದು ‘ಆಹಾ!’ ತೆಲುಗು ಓಟಿಟಿಯಲ್ಲಿ ನೇರವಾಗಿ ಸ್ಟ್ರೀಮ್ ಆಯ್ತು. ಓಟಿಟಿ ಪ್ಲಾಟ್‌ಫಾರ್ಮ್‌ ಕುರಿತು ನೀವೇನು ಹೇಳುತ್ತೀರಿ?

‘ಅನಗನಗ ಓ ಅತಿಥಿ’ ಸಿನಿಮಾ ಓಟಿಟಿಯಲ್ಲಿ ಚೆನ್ನಾಗಿ ಹೋಯ್ತು. ನನ್ನ ಪ್ರಕಾರ ವಿಶ್ಯುಯಲ್‌ ಟ್ರೀಟ್ ಸಿನಿಮಾ ಓಟಿಟಿಯಲ್ಲಿ ವರ್ಕ್ ಆಗಲ್ಲ. ಕಂಟೆಂಟ್ ಬೇಸ್ಡ್ ಸಿನಿಮಾ, ಸಿನಿಮಾ ಮಾಡಲಾಗದ ವೆಬ್‌ ಸೀರೀಸ್‌ನ ದೊಡ್ಡ ಕತೆಗಳು ಓಟಿಟಿಗೆ ಹೊಂದಿಕೆಯಾಗುತ್ತವೆ. ಇತರೆ ಭಾಷೆಗಳ ವೀಕ್ಷಕರನ್ನೂ ತಲುಪಬಹುದು ಎನ್ನುವುದು ಓಟಿಟಿಯಲ್ಲಿನ ಅಡ್ವಾಂಟೇಜ್‌. ನನ್ನಲ್ಲೂ ಓಟಿಟಿಗೆ ಹೊಂದುವಂತಹ ಕಂಟೆಂಟ್‌ ಇದೆ. ನನಗೆ ಅನುಕೂಲವಾಗುವ ಬಜೆಟ್‌ ಸಿಕ್ಕರೆ ಖಂಡಿತಾ ಮಾಡುತ್ತೇನೆ.

‘ಗಾಳಿಪಟ’ ಚಿತ್ರದಲ್ಲಿ ಡ್ರ್ಯಾಕುಲಾ ಪಾತ್ರದಲ್ಲಿ ನಟಿಸಿದ್ದಿರಿ. ಮತ್ತೆ ನಟನಾಗಿ ನಿಮ್ಮನ್ನು ನೋಡೋದು ಯಾವಾಗ?

ಪ್ರಸ್ತುತ ಚಿತ್ರೀಕರಣದಲ್ಲಿರುವ ಸಿನಿಮಾವೊಂದರಲ್ಲಿ ಪಾತ್ರ ನಿರ್ವಹಿಸಲಿದ್ದೇನೆ. ಈಗಲೇ ಈ ಸುದ್ದಿಯನ್ನು ರಿವೀಲ್ ಮಾಡುವಂತಿಲ್ಲ. ಮುಂದಿನ ದಿನಗಳಲ್ಲಿ ಹೇಳುತ್ತೇನೆ.

ಈ ತಿಂಗಳಲ್ಲಿ ತೆರೆಕಾಣಲಿರುವ ‘ಒಂಬತ್ತನೇ ದಿಕ್ಕು’ ಸಿನಿಮಾ

LEAVE A REPLY

Connect with

Please enter your comment!
Please enter your name here