ಇವತ್ತು ಭಾರಿ ಹೆಸರು ಮಾಡಿರುವ ಮಲಯಾಳಿ ಚಿತ್ರರಂಗ ಬಹುತೇಕ ಇಪ್ಪತ್ತು ವರ್ಷ ಶಕೀಲಾರಂಥ ನಟಿಯರ ಬಿಗಿಮುಷ್ಠಿಯಲ್ಲಿತ್ತು. ಹಾಗಾದರೆ ಅಲ್ಲಿಂದ ಬಿಡಿಸಿಕೊಂಡು ಇಲ್ಲಿಯವರೆಗೆ ಬಂದ ಬಗೆ ಹೇಗೆ?

ಇಲ್ಲ, ಮಲಯಾಳಿ ಚಿತ್ರರಂಗ ಲಾಗಾಯ್ತಿನಿಂದ ಹೀಗಿರಲಿಲ್ಲ. ಪುಟ್ಟ ರಾಜ್ಯದ ಆ ಚಿತ್ರರಂಗ ಇವತ್ತು ದೊಡ್ಡದಾಗಿ ಬೆಳೆದಿದೆ, ನಿಜ. ಆದರೆ ಒಂದು ಕಾಲದಲ್ಲಿ ಅದೇ ಮಲಯಾಳಿ ಚಿತ್ರೋದ್ಯಮ ಎಷ್ಟು ಸಣ್ಣದಾಗಿತ್ತು ಎಂದರೆ ಅಲ್ಲಿನ ಆಗುಹೋಗುಗಳು ಪಕ್ಕದ ರಾಜ್ಯಗಳಿಗೂ ಬೇಗನೆ ತಿಳಿಯುತ್ತಿರಲಿಲ್ಲ.

ರಾಜಕುಮಾರ್ ಅಭಿನಯದ ‘ದಾರಿ ತಪ್ಪಿದ ಮಗ’ ಸಿನಿಮಾವನ್ನು ಡಬ್ಬಿಂಗ್ ರೈಟ್ಸ್‌ಗೆ ಪಡೆದು ರೀಮೇಕ್ ಮಾಡಿತ್ತು ಮಲಯಾಳಿ ಚಿತ್ರೋದ್ಯಮ. 1975ರಲ್ಲಿ ಆ ಸುದ್ದಿಯೂ ಬೆಂಗಳೂರಿಗಾಗಲಿ ಆಗಿನ ಮದ್ರಾಸಿಗಾಗಲಿ ತಕ್ಷಣಕ್ಕೆ ತಲುಪಲಿಲ್ಲ. ವಿತರಕ ಕೆಸಿಎನ್ ಚಂದ್ರಶೇಖರ್ ಯಾವುದೋ ಕಾರಣಕ್ಕಾಗಿ ತಿರುವನಂತಪುರಕ್ಕೆ ಹೋಗಿದ್ದಾಗ ಅಲ್ಲಿದ್ದ ಪೋಸ್ಟರ್ ಕಂಡು ಅನುಮಾನಗೊಂಡು ಥಿಯೇಟರಿನಲ್ಲಿ ಸಿನಿಮಾ ನೋಡಿದಾಗಲೇ ಗೊತ್ತಾದದ್ದು‌ ಅದು ಕದ್ದ ಸರಕು ಎಂದು.

70-80ರ ದಶಕದಲ್ಲಿ ಒಂದೆಡೆ ಸೂಕ್ಷ್ಮ ಸಂವೇದಿ ನಿರ್ದೇಶಕರಾದ ಅಡೂರ್ ಗೋಪಾಲಕೃಷ್ಣ, ಜಾನ್ ಅಬ್ರಹಾಮ್‌ರಂಥವರು ಕಲಾತ್ಮಕ ಚಿತ್ರಗಳನ್ನು ಮಾಡುತ್ತಿದ್ದರು. ಮತ್ತೊಂದೆಡೆ ಲಾಭ ತರುವ ಕಮರ್ಷಿಯಲ್ ವರ್ಗ ಹೆಚ್ಚಾಗಿ ಡಬ್ಬಿಂಗನ್ನು ನೆಚ್ಚಿಕೊಂಡಿತ್ತು. ಇದೇ ವೇಳೆ ವಾಣಿಜ್ಯಿಕ ಸಿನಿಮಾ ನಿರ್ಮಾಣ ಮಾಡುವ ಮಂದಿ ಹೊಸ ದಾರಿ ಹಿಡಿದರು. ಗ್ರಾಮೀಣ ಕತೆ ಆಯ್ದು ಅದಕ್ಕೊಂದಷ್ಟು ಹಾಸ್ಯದ ಲೇಪನ ಕೊಟ್ಟು ತನ್ನ ಪುಟ್ಟ ಮಾರುಕಟ್ಟೆಗೆ ಸಣ್ಣ ಬಜೆಟ್ಟಿನಲ್ಲಿ ಸಿನಿಮಾ ಮಾಡಿಬಿಡುವುದು ಅವರು ಕಂಡುಕೊಂಡ ಫಾರ್ಮುಲಾ. ಒಂದರಿಂದ ಎರಡು ವಾರದ ಒಳಗೆ ಪೂರ್ತಿ ಸಿನಿಮಾದ ಶೂಟಿಂಗ್ ಮುಗಿಸುತ್ತಿದ್ದರು. ಆ ಕಾರಣಕ್ಕಾಗಿಯೇ ಮೋಹನ್‌ ಲಾಲ್‌ ಬಹುತೇಕ 400 ಸಿನಿಮಾಗಳಲ್ಲಿ ಅಭಿನಯಿಸಲು ಸಾಧ್ಯವಾದದ್ದು.

ಮಾದಕ ನಟಿಯರ ಆಳ್ವಿಕೆ: ಆದರೆ ತೊಂಭತ್ತರ ದಶಕದ ಆರಂಭದಲ್ಲಿ ಹೆಚ್ಚೆಚ್ಚು ಮನೆಗಳನ್ನು ಹೊಕ್ಕಿದ ಟಿವಿ ಮಲಯಾಳಿ ಸಿನಿಮಾಗಳಿಗೆ ಅದಾಗಲೇ ಇದ್ದ ಸೀಮಿತ ಮಾರುಕಟ್ಟೆಯನ್ನು ಕಸಿದುಕೊಂಡಿತು. ಅಲ್ಲಿಂದ ನಂತರ ಚಿತ್ರರಂಗವನ್ನು ಆಳಿದ್ದು ಮೋಹನ್‌ಲಾಲ್ ಮಮ್ಮುಟ್ಟಿ, ದಿಲೀಪ್ ಬದಲಾಗಿ ರೇಷ್ಮಾ, ಶಕೀಲಾ, ಮರಿಯಾರಂಥ ಮಾದಕ ನಟಿಯರು. ಮುಂದಿನ ಬಹುತೇಕ ಇಪ್ಪತ್ತು ವರ್ಷಗಳ ಕಾಲ ಇವರ ದರ್ಬಾರು ಅದೆಷ್ಟು ಪ್ರಬಲವಾಗಿತ್ತು ಎಂದರೆ ಸ್ಟಾರ್ ನಟರ ಸಿನಿಮಾಗಳೂ ಈ ನಟಿಯರ ಸಿನಿಮಾಗಳ ಎದುರು ತೆರೆಗೆ ಬರಲು ಹಿಂದೇಟು ಹಾಕುತ್ತಿದ್ದವು. 2001ರಲ್ಲಿ ಬಿಡುಗಡೆಯಾದ ಮಲಯಾಳಿ ಸಿನಿಮಾಗಳ ಪೈಕಿ ಹತ್ತರಲ್ಲಿ ಏಳು ಬಿ ಗ್ರೇಡ್ ಎಂದು ಕರೆಸಿಕೊಳ್ಳುವ ಎ ಸರ್ಟಿಫಿಕೇಟ್ ಸಿನಿಮಾಗಳು ಎಂದರೆ ಅವುಗಳ ಪ್ರಭಾವ ಮಲಯಾಳಿ ಚಿತ್ರಜಗತ್ತಿನಲ್ಲಿ ಅದೆಷ್ಟು ದಟ್ಟವಾಗಿತ್ತು ಎಂದು ನೀವೇ ಊಹಿಸಬಹುದು.

ಈಗ ಅದೇ ಮಲಯಾಳಿ ಚಿತ್ರರಂಗ ಕ್ರಿಯಾಶೀಲತೆಗೆ ಸಾಕಷ್ಟು ಹೆಸರು ಮಾಡಿದೆ. ಕಥಾವಸ್ತು, ಚಿತ್ರಕತೆಯಲ್ಲಿನ ವೈಶಿಷ್ಟ್ಯ ಹಾಗೂ ಸ್ಟಾರ್ ಕಲಾವಿದರ ಪಾತ್ರಗಳ ಆಯ್ಕೆಯ ವಿಚಾರಗಳು ಧನಾತ್ಮಕ ಚರ್ಚೆಗೆ ಒಳಪಡುತ್ತಿವೆ. ಕನ್ನಡದಲ್ಲೂ ಯಾಕೆ ಹೀಗಿಲ್ಲ ಎಂದು ಮಲಯಾಳ ಸಿನಿಮಾ ವೀಕ್ಷಿಸುವ ಕನ್ನಡ ಚಿತ್ರಪ್ರೇಮಿಗಳು ಆನ್‌ಲೈನ್ ವೇದಿಕೆಗಳಲ್ಲಿ ಬೇಸರ ವ್ಯಕ್ತಪಡಿಸುತ್ತಾರೆ.

ಇಲ್ಲಿ ಗಮನಾರ್ಹ ವಿಚಾರವೊಂದಿದೆ. ಮಲಯಾಳ ಚಿತ್ರರಂಗಕ್ಕೆ ತನ್ನ ನೀಲಿ ಬಣ್ಣ ತೊಳೆದುಕೊಳ್ಳಲು ಸಹಾಯ ಮಾಡಿದ್ದು ಕತೆಗಳಲ್ಲ, ಚಿತ್ರಕತೆ ಬರಹಗಾರರಲ್ಲ, ಅಥವಾ ಸ್ಟಾರ್ ನಟರೂ ಅಲ್ಲ. ಕೇರಳದಲ್ಲಿ ಮೊದಲಿನಿಂದಲೇ ಕತೆ ಹೆಣೆಯುವ ಸಂಸ್ಕೃತಿ ಹೆಚ್ಚು. ಕತೆಗಳಿಗೇ ಮೀಸಲಿರುವ ವಾರಪತ್ರಿಕೆಗಳು ಇಂದಿಗೂ ಅಲ್ಲಿನ ಮಾರುಕಟ್ಟೆಗಳಲ್ಲಿ ಬಿಕರಿಯಾಗುತ್ತವೆ. ಸಣ್ಣ ಬಜೆಟ್ಟಿನ ದಿನಗಳಲ್ಲೂ ಉತ್ತಮ ಚಿತ್ರಕತೆಯುಳ್ಳ ಸಿನಿಮಾಗಳಿದ್ದವು. ಸ್ಟಾರ್ ನಟರೂ ಇದ್ದರು. ಆದರೆ ಬದಲಾವಣೆಗೆ ಕಾರಣವಾದದ್ದು ತಂತ್ರಜ್ಞಾನ.

ರಾಜ್ಯ ಪುಟ್ಟದಾದರೂ ಮಾರುಕಟ್ಟೆ ದೊಡ್ಡದು : ಮಲಯಾಳಿ ಸಿನಿ ಜಗತ್ತಿಗೆ ಹೊಸ ಉಸಿರು ತಂದುಕೊಟ್ಟ ಸಿನಿಮಾ 2006ರಲ್ಲಿ ಬಿಡುಗಡೆಯಾದ ‘ಮೂನಾಮತ್ತೊರಳ್’. ಕನ್ನಡದಲ್ಲಿ ಹೇಳುವುದಿದ್ದರೆ ಮೂರನೆಯವಳು. ಹಾರರ್ ಸಿನಿಮಾವಾದ ಇದು ಕಥಾವಿಮರ್ಶೆ ಅಥವಾ ಗಳಿಕೆಗಿಂತ ಹೆಚ್ಚು ಉದ್ಯಮ ವಲಯದಲ್ಲಿ ಸುದ್ದಿಯಾದದ್ದು ಹೊಸ‌ ತಂತ್ರಜ್ಞಾನಕ್ಕೆ. ಮೊಟ್ಟ ಮೊದಲ ಬಾರಿಗೆ ಫಿಲ್ಮ್ ರೋಲ್‌ಗಳನ್ನು ಬದಿಗೊತ್ತಿ ಉಪಗ್ರಹ ಆಧಾರಿತ ಬಿತ್ತರ ವ್ಯವಸ್ಥೆ ಅರ್ಥಾತ್ ಡಿಜಿಟಲ್ ಪ್ರೊಜೆಕ್ಷನ್ ಮೂಲಕ ಪ್ರದರ್ಶನಗೊಂಡ ಸಿನಿಮಾ ‘ಮೂನಾಮತ್ತೊರಳ್’.

ಕೇರಳ ಅತ್ಯಂತ ಜನನಿಬಿಡ ಪ್ರದೇಶ. ಸಣ್ಣ ಆರ್ಥಿಕತೆಯ ಜತೆಗೆ ರಾಜಕೀಯ ನೀತಿಗಳ ಕಾರಣದಿಂದ ದೊಡ್ಡ ಮಟ್ಟಿನ ಔದ್ಯೋಗಿಕ ಅವಕಾಶಗಳೂ ಅಲ್ಲಿ ಕಡಿಮೆ. ಹಾಗಾಗಿ ದುಡಿಯುವ ಮನಸ್ಸಿದ್ದವ ಹೊರ ರಾಜ್ಯಕ್ಕೋ, ಹೊರದೇಶಕ್ಕೋ ಹೋಗುತ್ತಾನೆ. ದಡ್ಡ ಅಥವಾ ಅವಕಾಶವಂಚಿತ ಮಾತ್ರ ಮನೆಯಲ್ಲೇ ಉಳಿಯುತ್ತಾನೆ ಎಂಬ ಪ್ರತೀತಿ ತೊಂಭತ್ತರ ದಶಕದಲ್ಲಿ ಗಾಢವಾಗಿತ್ತು. ಇದರೊಂದಿಗೆ ಮದ್ಯವ್ಯಸನದ ವಿಚಾರದಲ್ಲೂ ಕೇರಳ ಮುಂದೆ. ನಮ್ಮಲ್ಲಿ ರಾತ್ರಿ ಏಳರ ನಂತರ ಅಲುಗಾಡದೆ ನೆಟ್ಟಗೆ ನಿಂತಿರುವುದು ಗಾಂಧಿ ಪ್ರತಿಮೆ ಮಾತ್ರ ಎಂಬುದು ಮಲಯಾಳದ ಹಳೇ ಜೋಕು.

ಈ ಪರಿಸ್ಥಿತಿಯಲ್ಲಿ ಅಲ್ಲಿದ್ದ ಚಿತ್ರಮಂದಿರಗಳ ಸಂಖ್ಯೆಯೂ ಕಡಿಮೆ. ಜತೆಗೆ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳ ಪರಿಣಾಮ ಥಿಯೇಟರಿಗೆ ಹೋಗುವ ವರ್ಗವೇ ಕ್ಷೀಣಿಸಿ ವಯಸ್ಕರ ಚಿತ್ರಗಳೇ ಚಿತ್ರೋದ್ಯಮವನ್ನು ಎರಡು ದಶಕ ಆಳಿದ್ದಾಗ ಡಿಜಿಟಲ್ ವಿತರಣಾ ವ್ಯವಸ್ಥೆ ಉದ್ಯಮಕ್ಕೆ ಆಶಾ ಕಿರಣವಾಯಿತು. ಹೊಸ ವ್ಯವಸ್ಥೆಯ ಕಾರಣದಿಂದ ಜಗತ್ತಿನಾದ್ಯಂತ ಇರುವ ಮಲಯಾಳಿಗಳಿಗೆ ಸಿನಿಮಾ ತಲುಪಿಸಲು ಸಾಧ್ಯವಾಯಿತು. ಮಲಯಾಳಿಗಳೂ ಜಗತ್ತಿನಾದ್ಯಂತ ಇರುವುದು ಇದ್ದಕ್ಕಿದ್ದಂತೆ ಒಂದು ದೊಡ್ಡ ಮಾರುಕಟ್ಟೆ ಒದಗಿಸಿತು. ಶಕೀಲಾ ಏರಿದ್ದ ಸಿಂಹಾಸನದ ಮೇಲೆ ಈಗ ಪಾಳಿಯಲ್ಲಿ ಪುರುಷ ಸ್ಟಾರುಗಳು ಕೂತರು.

ಬದಲಾವಣೆ ತಂದ ಹೊಸ ಅಲೆಯ ಚಿತ್ರಗಳ ಸರಣಿ : ಆದರೆ ಹೆಚ್ಚು ಕಾಲ ಆ ಸಂಪ್ರದಾಯವೂ ಉಳಿಯಲಿಲ್ಲ. 2011ರಲ್ಲಿ ‘ಟ್ರಾಫಿಕ್‌’‌ನಿಂದ ಆರಂಭವಾದ ಹೊಸ ಅಲೆಯ ಸಿನಿಮಾಗಳು ಸಾಲ್ಟ್ ಆ್ಯಂಡ್ ಪೆಪ್ಪರ್, ಪ್ರೈಡೇ, ಉಸ್ತಾದ್ ಹೋಟೆಲ್, ಬ್ಯಾಂಗಲೋರ್ ಡೇಸ್ – ಹೀಗೆ ಒಂದರ ನಂತರ ಒಂದು ಗಲ್ಲಾ ಪೆಟ್ಟಿಗೆ ಕೊಳ್ಳೆ ಹೊಡೆದವು.

ಹೊಸ ತಲೆಮಾರಿನ ನಿರ್ದೇಶಕರು ತಂತ್ರಜ್ಞಾನ ಮತ್ತು ಕತೆಗಾರಿಕೆಯಲ್ಲಿ ಜಾಗತಿಕ ಮಟ್ಟುಗಳನ್ನು ಅನುಸರಿಸಿದರು. ಆದರೆ ಕಥಾವಸ್ತು ತನ್ನ ಸಂಸ್ಕೃತಿಯ ಒಳಗಿನದ್ದೇ. ‘ಬ್ಯಾಂಗಲೂರ್ ಡೇಸ್‌’ ಸಿನಿಮಾವನ್ನು ನೋಡಿದ ಕನ್ನಡಿಗರು ಬೆಂಗಳೂರನ್ನು ಸಿಂಗಾಪುರದ ರೀತಿ ತೋರಿಸಿದ್ದಾರೆ ಎಂದು ಉದ್ಗರಿಸಿದ್ದರು. ಅದು ಹಾಗೆ ಏಕೆಂದರೆ ಮಲಯಾಳಿಯ ಪಾಲಿಗೆ ಬೆಂಗಳೂರು ಸಿಂಗಾಪುರವೇ – ಐಟಿ ಉದ್ಯೋಗಿಯಿಂದ ಹಿಡಿದು ಮೂಲೆ ಅಂಗಡಿಯಲ್ಲಿ ಬೇಕರಿ ತೆರೆಯುವವನ ವರೆಗೆ ಬೆಂಗಳೂರೆಂಬ ಮಹಾನಗರ ಕಾಸ್ಮೋಪಾಲಿಟನ್ ಕರ್ಮಭೂಮಿ. ತನ್ನದೇ ಊರು ಮಲಯಾಳಿಗೆ ಹೇಗೆ ಕಾಣುತ್ತದೆ‌ ಎಂಬುದನ್ನು ಅರಿಯಲು ನೀವು ‘ಉಸ್ತಾದ್ ಹೋಟೆಲ್’ ನೋಡಿ. ಸಿನಿಮಾದ ಹಿಂದಿನ ಸಾಂಸ್ಕೃತಿಕ ಸೂಕ್ಷ್ಮ ಅರಿಯದೆ ರೀಮೇಕ್ ಮಾಡಿದರೆ ಹೇಗೆ ಸೋಲಬಹುದು ಎಂಬುದನ್ನು ಕನ್ನಡದ ‘ಗೌಡ್ರು ಹೋಟೆಲ್’ ತೋರಿಸುತ್ತದೆ.

ಮಲಯಾಳಿ ಚಿತ್ರೋದ್ಯಮ ಹೊಸ ರೂಪ ಪಡೆಯಲು ಹೊಸ ಉಸಿರಾಗಿ ತಂತ್ರಜ್ಞಾನ ನೆರವಾದರೂ ಬಹುಬೇಗ ಚಿತ್ರಕತೆ ಹಾಗೂ ತಾಂತ್ರಿಕತೆಯಲ್ಲಿ ಜಾಗತಿಕ ಮಟ್ಟುಗಳನ್ನು ಅಳವಡಿಸಿಕೊಂಡಿತು. ಕಥಾ ವಸ್ತು ಸ್ಟಾರ್ ಕೇಂದ್ರಿತವಾಗುವ ಬದಲು ತನ್ನೊಳಗಿನ ಕತೆಗಳೇ ವಸ್ತುವಾದವು, ನಮ್ಮ ನಿಮ್ಮ ನಡುವಿನ ಜನಸಾಮಾನ್ಯರೇ ಪ್ರಮುಖ ಪಾತ್ರಧಾರಿಗಳಾದರು. ಇಷ್ಟಾಗುವ ವೇಳೆಗೆ ಸ್ಟಾರ್‌ಗಳಿಗೂ ಹೊಸ ಪ್ರಯೋಗಕ್ಕೆ ಒಗ್ಗಿಕೊಳ್ಳದೆ ವಿಧಿಯಿಲ್ಲ. ಈ ಕಾರಣದಿಂದ ಓಟಿಟಿಗೂ ಇದು ಆಪ್ತವಾಗಿದೆ. ಅಮೆಝಾನ್‌‌ ಪ್ರೈಮ್‌ನಲ್ಲಿ ಬೆಂಗಳೂರಿನಲ್ಲೇ ಕನ್ನಡಕ್ಕಿಂತ ಹೆಚ್ಚು ಮಂದಿ ಮಲಯಾಳ ನೋಡುತ್ತಾರೆ ಎಂದು ಅಲ್ಲಿನ ತಂತ್ರಜ್ಞರು ಪಿಸುಮಾತಿನಲ್ಲಿ ಒಪ್ಪಿಕೊಳ್ಳುತ್ತಾರೆ.

ಕನ್ನಡದಲ್ಲೂ ‘ಕೋಟಿಗೊಬ್ಬ’ – ‘ಸಲಗ’ನಿಗೆ ಸಾಲುಗಟ್ಟಿ ನಿಂತ ಪ್ರೇಕ್ಷಕ ಒಂದೆಡೆಯಾದರೆ ತನ್ನದೇ ಪ್ರಪಂಚದಲ್ಲಿ ಪುರುಸೊತ್ತಿನಲ್ಲಿ ‘ರತ್ನನ್ ಪ್ರಪಂಚ’ ನೋಡುವ ಮಂದಿಗೇನೂ ಕಡಿಮೆಯಿಲ್ಲ. ಇರುವುದು ಅವರನ್ನು ತಲುಪಬಹುದಾದ ಕಥಾವಸ್ತುವಿನ ಕೊರತೆಯಷ್ಟೆ.

‘ಸಾಲ್ಟ್‌ ಅಂಡ್‌ ಪೆಪ್ಪರ್‌’

1 COMMENT

LEAVE A REPLY

Connect with

Please enter your comment!
Please enter your name here