ಚಿತ್ರಸಾಹಿತಿ ಹೃದಯಶಿವ ಅವರು ರೈತರ ಸಮಸ್ಯೆಗಳ ಸುತ್ತ ಬೆಳಕು ಚೆಲ್ಲುವ ‘ಬಿಸಿಲು ಕುದುರೆ’ ಸಿನಿಮಾ ನಿರ್ಮಿಸಿ, ನಿರ್ದೇಶಿಸಿದ್ದಾರೆ. ಸರ್ಕಾರಿ ಇಲಾಖೆಗಳ ಮಧ್ಯೆಯ ಭಿನ್ನಾಭಿಪ್ರಾಯದಿಂದಾಗಿ ಸಾಮಾನ್ಯ ರೈತನೊಬ್ಬ ಎದುರಿಸುವ ಸಂಕಷ್ಟ, ಸವಾಲುಗಳು ಚಿತ್ರದ ಕಥಾವಸ್ತು.

ರೈತ ಕುಟುಂಬದ ಹೃದಯಶಿವ ಅವರಿಗೆ ಗ್ರಾಮೀಣ ಬದುಕು, ರೈತರ ಕಷ್ಟ-ಸುಖಗಳ ಸ್ಪಷ್ಟ ಅರಿವಿದೆ. ಈ ಹಿನ್ನೆಲೆಯಲ್ಲಿ ತಮ್ಮ ಗಮನಕ್ಕೆ ಬಂದ ರೈತ ಸಮಸ್ಯೆಯೊಂದನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ಮಾಡಿದ್ದಾರೆ. ಕತೆ, ಚಿತ್ರಕಥೆ, ಸಂಭಾಷಣೆ ಬರೆದು ‘ಬಿಸಿಲು ಕುದುರೆ’ ಸಿನಿಮಾ ನಿರ್ಮಿಸಿ, ನಿರ್ದೇಶಿಸಿದ್ದಾರೆ. ಇಂತಹ ವಿಷಯಗಳನ್ನು ಜನರು ಹಾಗೂ ಸರ್ಕಾರದ ಮುಂದಿಡುವುದು ಇಂದಿನ ತುರ್ತು ಕೂಡ ಹೌದು. “ಒಂದೇ ಸರ್ಕಾರದಡಿಯಲ್ಲಿ ಕೆಲಸ ನಿರ್ವಹಿಸುವ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆಯ ನಡುವಿನ ಭಿನ್ನಾಭಿಪ್ರಾಯಗಳಿಂದ, ಆಡಳಿತ ವ್ಯವಸ್ಥೆಯಲ್ಲಿನ ದ್ವಂದ್ವ ನೀತಿಗಳಿಂದ ಸಾಮಾನ್ಯ ರೈತನೊಬ್ಬ ಎದುರಿಸುವ ಸಂಕಷ್ಟಗಳೇ ಸಿನಿಮಾದ ವಸ್ತು. ಅರಣ್ಯದಂಚಿನ ಬಗರ್‌ ಹುಕುಂ ಸಾಗುವಳಿದಾರರ ತಲ್ಲಣಗಳನ್ನು ಚಿತ್ರಿಸುವ ಪ್ರಯತ್ನ ಮಾಡಿದ್ದೇವೆ. ಮುಗ್ಧ ರೈತ ಸರ್ಕಾರಿ ಭೂಮಿಯನ್ನು ಪಡೆಯಲು ನಡೆಸುವ ಹೋರಾಟ, ಆ ಭೂಮಿಯನ್ನು ಪಡೆದ ನಂತರ ಎದುರಾಗುವ ಸಂಕಷ್ಟಗಳು, ಮಧ್ಯವರ್ತಿಗಳ ದೆಸೆಯಿಂದ ಆತ ಎದುರಿಸುವ ಆಘಾತವನ್ನು ನಿರೂಪಿಸಿದ್ದೇವೆ” ಎನ್ನುತ್ತಾರೆ ಹೃದಯಶಿವ.

ಸಿನಿಮಾದ ನಾಯಕನಟನಾಗಿ ಪ್ರತಿಭಾವಂತ ಕಲಾವಿದ ಸಂಪತ್‌ ಮೈತ್ರೇಯ ಅಭಿನಯಿಸಿದ್ದಾರೆ. ಅವರು ಸಹ ರೈತಾಪಿ ಕುಟುಂಬದವರೇ. “ನನ್ನ ಕುಟುಂಬವೂ ಸೇರಿದಂತೆ ನನ್ನ ಹಳ್ಳಿಯ ಬಹುಪಾಲು ರೈತರು ಸರ್ಕಾರದ ನೀತಿ, ನಿಯಮಗಳಿಗೆ ಸಂಬಂಧಿಸಿದಂತೆ ಬಗೆಹರಿಯದ ಹತ್ತಾರು ರೀತಿಯ ಸಮಸ್ಯೆಗಳ ಸುಳಿಯಲ್ಲಿ ಬದುಕುತ್ತಿದ್ದೇವೆ. ಈ ಸಿನಿಮಾ ಅಂತಹದ್ದೊಂದು ಸಮಸ್ಯೆಗಳನ್ನು ಅಡ್ರೆಸ್‌ ಮಾಡುತ್ತಿದೆ. ವೈಯಕ್ತಿಕವಾಗಿ ನನಗೆ ಈ ಪಾತ್ರ ನಿರ್ವಹಿಸಿರುವುದು ಖುಷಿ ಜೊತೆಗೆ ಸಮಾಧಾನ ತಂದಿದೆ. ಸಿನಿಮಾದಲ್ಲಿ ನಾವು ಪಸ್ತಾಪಿಸಿರುವ ಸಮಸ್ಯೆಗೆ ಕಿಂಚಿತ್ತಾದರೂ ಪರಿಹಾರ ಸಿಗುವಂತಾದರೆ ನಮ್ಮ ಕೆಲಸ ಸಾರ್ಥಕವಾದಂತೆ” ಎನ್ನುತ್ತಾರೆ ಸಂಪತ್‌. ಚಿತ್ರಕ್ಕಾಗಿ ಹೃದಯಶಿವ ಅವರು ರಚಿಸಿರುವ ಎರಡು ಹಾಡುಗಳು ಅವರಿಗೆ ತುಂಬಾ ಇಷ್ಟವಾಗಿವೆ. ಒಂದು ಹಾಡಂತೂ ರೈತಗೀತೆಯಂತಿದೆ ಎಂದು ನಿರ್ದೇಶಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಅವರ ನಟನೆಯ ನಾಲ್ಕೈದು ಸಿನಿಮಾಗಳು ತೆರೆಗೆ ಸಿದ್ಧವಾಗಿದ್ದು, ಬಿಡುಗಡೆಯನ್ನು ಎದುರು ನೋಡುತ್ತಿದ್ಧಾರವರು.

ಹೃದಯಶಿವ ತಮ್ಮ ಮೆಟಾಫರ್‌ ಮೀಡಿಯಾ ಹೌಸ್‌ ಬ್ಯಾನರ್‌ನಡಿ ‘ಬಿಸಿಲು ಕುದುರೆ’ ಚಿತ್ರ ನಿರ್ಮಿಸಿದ್ದಾರೆ. ಕನಕಪುರ ಸುತ್ತಮುತ್ತಲ ಗ್ರಾಮಗಳಲ್ಲಿ ಚಿತ್ರೀಕರಣ ನಡೆದಿದೆ. ಹೃದಯ ಶಿವ ರಚಿಸಿರುವ ಮೂರು ಹಾಡುಗಳಿಗೆ ಇಮ್ತಿಯಾಝ್‌ ಸುಲ್ತಾನ್‌ ಸಂಗೀತ ಸಂಯೋಜಿಸಿದ್ಧಾರೆ. ಅನೂಪ್‌ ಸಿಳೀನ್‌, ರವೀಂದ್ರ ಸೊರಗಾವಿ, ಮತ್ತು ಇಮ್ತಿಯಾಜ್‌ ಹಾಡಿದ್ದಾರೆ. ಹಿನ್ನೆಲೆ ಸಂಗೀತ ಅರುಣ್‌ ಆಂಡ್ರ್ಯೂ ಅವರದು. ನಾಗಾರ್ಜುನ್‌ ಡಿ. ಛಾಯಾಗ್ರಹಣ, ಸೋಮಶೇಖರ್‌ ಕಲಾನಿರ್ದೇಶನ, ಬಿ.ಎಸ್‌.ಕೆಂಪರಾಜ್‌ ಸಂಕಲನ ಚಿತ್ರಕ್ಕಿದೆ. ಸುನಿತಾ, ಕರಿಸುಬ್ಬು, ಜೋಸೈಮನ್‌, ಮಳವಳ್ಳಿ ಸಾಯಿಕೃಷ್ಣ, ವಿಕ್ಟರಿ ವಾಸು ಇತರರು ತಾರಾಬಳಗದಲ್ಲಿದ್ದಾರೆ. ಚಿತ್ರಕ್ಕೆ ಸೆನ್ಸಾರ್‌ ಆಗಿದ್ದು, ಸೆನ್ಸಾರ್‌ ಅಧಿಕಾರಿಗಳು ಸಿನಿಮಾದ ವಿಷಯವನ್ನು ಬಹುವಾಗಿ ಮೆಚ್ಚಿದ್ದಾರೆ ಎನ್ನುವ ಖುಷಿ ಹೃದಯಶಿವ ಅವರದು. ಸ‌ದ್ಯ ಫಸ್ಟ್‌ ಲುಕ್‌ ಪೋಸ್ಟರ್‌ ಬಿಡುಗಡೆಯಾಗಿದ್ದು, ಸಿನಿಮಾ ರಿಲೀಸ್‌ ಕುರಿತಂತೆ ಮುಂದಿನ ದಿನಗಳಲ್ಲಿ ಮಾಹಿತಿ ಸಿಗಲಿದೆ.

LEAVE A REPLY

Connect with

Please enter your comment!
Please enter your name here