ಪಿ.ಸಿ.ಶೇಖರ್ ನಿರ್ದೇಶನದಲ್ಲಿ ಕೃಷ್ಣ ಮತ್ತು ಆಶಿಕಾ ರಂಗನಾಥ್ ನಟಿಸುತ್ತಿರುವ ‘ಲವ್ ಬರ್ಡ್ಸ್‌’ ಸಿನಿಮಾ ಸೆಟ್ಟೇರಿದೆ. ನಟ ಪುನೀತ್ ರಾಜಕುಮಾರ್ ಮೊದಲ ದೃಶ್ಯಕ್ಕೆ ಕ್ಲ್ಯಾಪ್‌ ಮಾಡಿ ಶುಭಕೋರಿದರು.

ಸದಭಿರುಚಿಯ ಚಿತ್ರಗಳ ಮೂಲಕ ಗುರುತಿಸಿಕೊಂಡಿರುವ ನಿರ್ದೇಶಕ ಪಿ.ಸಿ.ಶೇಖರ್ ಇದೀಗ ಪ್ರೇಮಕತೆಯೊಂದನ್ನು ತೆರೆಗೆ ಅಳವಡಿಸುತ್ತಿದ್ದಾರೆ. ಕಡ್ಡಿಪುಡಿ ಚಂದ್ರು ನಿರ್ಮಾಣದ ಈ ಸಿನಿಮಾಗೆ ‘ಲವ್ ಬರ್ಡ್ಸ್‌’ ಎಂದು ನಾಮಕರಣವಾಗಿದೆ. ‘ಲವ್‌ ಮಾಕ್‌ಟೇಲ್‌’ ಖ್ಯಾತಿಯ ಡಾರ್ಲಿಂಗ್ ಕೃಷ್ಣ ಚಿತ್ರದ ಹೀರೋ. ಆ ಚಿತ್ರದ ಪಾತ್ರದಂತೆ ಇಲ್ಲಿಯೂ ಅವರಿಗೆ ಸಾಫ್ಟ್‌ವೇರ್ ಇಂಜಿನಿಯರ್ ಪಾತ್ರ. ಇಬ್ಬರು ನಾಯಕಿಯರು ಇರಲಿದ್ದು, ಸದ್ಯ ಆಶಿಕಾ ರಂಗನಾಥ್ ಆಯ್ಕೆಯಾಗಿದ್ದಾರೆ. ಮತ್ತೊಬ್ಬ ನಾಯಕಿಯ ಹುಡುಕಾಟ ಜಾರಿಯಲ್ಲಿದೆ.

ಪುನೀತ್‌ ರಾಜಕುಮಾರ್ ಅವರಿಂದ ಕ್ಲ್ಯಾಪ್‌

ಚಿತ್ರದ ಮುಹೂರ್ತ ಸಮಾರಂಭ ಧರ್ಮಗಿರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ನೆರವೇರಿತು. ನಟ ಪುನೀತ್ ರಾಜಕುಮಾರ್ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು. ನಿರ್ಮಾಪಕ ರಮೇಶ್ ರೆಡ್ಡಿ ಕ್ಯಾಮೆರಾ ಚಾಲನೆ ಮಾಡಿದರು. ನಟ ಪ್ರಜ್ವಲ್ ದೇವರಾಜ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. “ರೋಮಿಯೋ ಚಿತ್ರದ ನಂತರ ಲವ್ ಸಬ್ಜೆಕ್ಟ್ ಕಥೆ ಸಿದ್ದ ಮಾಡಿಕೊಂಡಿದ್ದೇನೆ. ಈ ಕಥೆಗೆ ಡಾರ್ಲಿಂಗ್ ಕೃಷ್ಣ ಅವರೆ ಸೂಕ್ತ ನಾಯಕ ಅನಿಸಿತು. ಆಶಿಕಾ ರಂಗನಾಥ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇದೊಂದು ಕಾರ್ಪೊರೇಟ್ ಶೈಲಿಯ ಚಿತ್ರ. ಅರ್ಜುನ್ ಜನ್ಯ ಅವರ ರಾಗ ಸಂಯೋಜನೆಯಲ್ಲಿ ಉತ್ತಮ ಹಾಡುಗಳು ಮೂಡಿಬರಲಿವೆ. ಎರಡು -, ಮೂರು ಹಂತದಲ್ಲಿ ಚಿತ್ರೀಕರಣ ನಡೆಯಲಿದೆ. ಮೊದಲ ಹಂತ ಬೆಂಗಳೂರಿನಲ್ಲಿ ನಡೆದರೆ, ಮುಂದಿನ ಹಂತದ ಚಿತ್ರೀಕರಣ ಮಂಡ್ಯ ಮತ್ತಿತರೆಡೆ ನಡೆಯಲಿದೆ” ಎಂದು ನಿರ್ದೇಶಕ ಪಿ.ಸಿ.ಶೇಖರ್ ಮಾಹಿತಿ ನೀಡಿದರು.

ನಿರ್ಮಾಪಕ ರಮೇಶ್ ರೆಡ್ಡಿ ಅವರಿಂದ ಕ್ಯಾಮರಾ ಚಾಲನೆ

ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿರುವ ನಟ ಡಾರ್ಲಿಂಗ್ ಕೃಷ್ಣ, “ನಾನು ‘ಜಾಕಿ’ ಚಿತ್ರದ ಸಮಯದಿಂದಲೂ ಕಡ್ಡಿಪುಡಿ ಚಂದ್ರು ಅವರನ್ನು ಬಲ್ಲೆ. ಒಟ್ಟಾಗಿ ಅಭಿನಯ ಕೂಡ ಮಾಡಿದ್ದೇವೆ. ಆಗ ಅವರು ಒಂದು ಚಿತ್ರ ಮಾಡೋಣ ಅನ್ನುತ್ತಿದ್ದರು. ಈಗ ಸಮಯ ಕೂಡಿ ಬಂದಿದೆ. ನಿರ್ದೇಶಕ ಪಿ.ಸಿ.ಶೇಖರ್ ಹೇಳಿದ ಕಥೆ ಇಷ್ಟವಾಯಿತು. ನನಗೆ ಅವರ ನಿರ್ದೇಶನದ ‘ರೋಮಿಯೋ’ ಮೆಚ್ಚಿನ ಚಿತ್ರ. ನಿರ್ದೇಶಕರು ಹೇಳಿದಂತೆ ಇದೊಂದು ಕಾರ್ಪೊರೇಟ್ ಶೈಲಿಯ ಚಿತ್ರ” ಎಂದರು. ಚಿತ್ರದಲ್ಲಿ  ರಂಗಾಯಣ ರಘು ಅವರು ಒಂದು ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಾಧುಕೋಕಿಲ, ತಾರಾ, ಅವಿನಾಶ್ ಮತ್ತಿತರರು ತಾರಾಬಳಗದಲ್ಲಿದ್ದಾರೆ.

ಪಿ.ಸಿ.ಶೇಖರ್‌, ಪ್ರಜ್ವಲ್ ದೇವರಾಜ್‌, ಪುನೀತ್ ರಾಜಕುಮಾರ್‌, ರಮೇಶ್ ರೆಡ್ಡಿ, ಕಡ್ಡಿಪುಡಿ ಚಂದ್ರು, ಕೃಷ್ಣ
Previous articleಭೀಮ್ ತೀರದಲ್ಲಿ ಸೂರ್ಯ; ಜೋರಾಗಿದೆ ಮೋಷನ್ ಪೋಸ್ಟರ್ ಸೌಂಡ್
Next articleಫೋರ್ಬ್ಸ್ ಮ್ಯಾಗಜಿನ್ ಕವರ್ ಪೇಜ್‌ನಲ್ಲಿ ಯಶ್; ಈ ಗೌರವ ಪಡೆದ ಮೊದಲ ಕನ್ನಡ ನಟ

LEAVE A REPLY

Connect withPlease enter your comment!
Please enter your name here