ಪ್ರಭಾಕರ್‌ ಶೇರ್‌ ಮಾನೆ ನಿರ್ದೇಶನದಲ್ಲಿ ಅರ್ಜುನ್‌ ರಮೇಶ್‌ ಮತ್ತು ಪ್ರಿಯಾಂಕಾ ಚಿಂಚೋಳಿ ನಟನೆಯ ‘ಕೌಟಿಲ್ಯ’ ಸಿನಿಮಾದ ಆಡಿಯೋ ಬಿಡುಗಡೆಯಾಗಿದೆ.

‘ಶನಿ’ ಧಾರಾವಾಹಿಯಲ್ಲಿ ಶಿವನ ಪಾತ್ರದ ಮೂಲಕ ಗಮನ ಸೆಳೆದಿದ್ದ, ‘ಜಂಟಲ್ ಮ್ಯಾನ್’ ಚಿತ್ರದಲ್ಲಿ ಖಳನಾಯಕನಾಗಿ ಚಿರಪರಿಚಿತರಾಗಿದ್ದ ಅರ್ಜುನ್ ರಮೇಶ್ ಮತ್ತು ‘ಮನಸಾರೆ’ ಧಾರಾವಾಹಿ ಖ್ಯಾತಿಯ ಪ್ರಿಯಾಂಕ ಚಿಂಚೋಳಿ ಜೋಡಿಯ ‘ಕೌಟಿಲ್ಯ’ ಚಿತ್ರದ ಹಾಡುಗಳು ಬಿಡುಗಡೆಯಾಗಿವೆ. ಚಿತ್ರನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ‘ಮುಂಗಾರು ಮಳೆ’ ಚಿತ್ರದ ನಿರ್ಮಾಪಕ ಇ.ಕೃಷ್ಣಪ್ಪ, ಭಾ.ಮ.ಹರೀಶ್, ‘ಪ್ರೇಮಪೂಜ್ಯಂ’ ಚಿತ್ರದ ಬೃಂದಾ ಆಚಾರ್ಯ ಮುಖ್ಯ ಅತಿಥಿಗಳಾಗಿ ಆಗಮಿಸಿ ಆಡಿಯೋ ರಿಲೀಸ್‌ ಮಾಡಿ ಶುಭಕೋರಿದರು. ಚಿತ್ರದ ನಿರ್ದೇಶಕ ಪ್ರಭಾಕರ್‌ ಶೇರ್‌ ಮಾನೆ ಅವರು ತಮ್ಮ ಸಿನಿಮಾ ಕುರಿತು ಮಾಹಿತಿ ನೀಡಿ, “ನಾನು ಮೊದಲು ದುನಿಯಾ ಸೂರಿ ಅವರ ಜೊತೆ ಕೆಲಸ ಮಾಡಿದ್ದೆ. ಇದು ಮೊದಲ ನಿರ್ದೇಶನದ ಚಿತ್ರ. ತುಂಬಾ ಇಷ್ಟಪಟ್ಟು, ಕಷ್ಟಪಟ್ಟು ಸಿನಿಮಾ ಮಾಡಿದ್ದೇವೆ. ‘ಕೌಟಿಲ್ಯ’ ಅಂದರೆ ಅರ್ಥಶಾಸ್ತ್ರದ ಪಿತಾಮಹ. ಒಬ್ಬ ಚಂದು ಎಂಬ ಹುಡುಗನನ್ನು ಚಂದ್ರಗುಪ್ತ ಮೌರ್ಯನನ್ನಾಗಿ ಮಾಡಿದ್ದಾತ. ನಮ್ಮ ಚಿತ್ರದ ಕಥೆಯು ಇದೇ ದಿಕ್ಕಿನಲ್ಲಿ ಸಾಗುವುದರಿಂದ ‘ಕೌಟಿಲ್ಯ’ ಎಂದು ಹೆಸರಿಡಲಾಗಿದೆ” ಎಂದರು.

“ನನ್ನ ಜೀವನದಲ್ಲಿ ‘ಶನಿ’ ಹಾಗೂ ‘ಮಹಾಕಾಳಿ’ ಧಾರಾವಾಹಿಗಳನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಆ ಧಾರಾವಾಹಿಗಳ ಜನಪ್ರಿಯತೆಯಿಂದ ನಾನು ಪುರಸಭಾ ಸದಸ್ಯ ಕೂಡ ಆದೆ. ಚಿತ್ರದ ನಿರ್ದೇಶಕರು ಬಂದು ಕಥೆ ಹೇಳಿದಾಗ ನಾನು ಒಂದು ಮಾತು ಹೇಳಿದ್ದೆ. ನೀವು ಅಂದುಕೊಂಡ ಹಾಗೆ ಸಿನಿಮಾ ಮಾಡಿದರೆ, ಈ ಚಿತ್ರ ಒಂದು ಒಳ್ಳೆಯ ಸಿನಿಮಾ ಆಗುವುದರಲ್ಲಿ ಸಂದೇಹವಿಲ್ಲ ಎಂದು. ನಾನು ಈ ಚಿತ್ರದಲ್ಲಿ ಆರ್ಕಿಟೆಕ್ ಎಂಜಿನಿಯರ್ ಪಾತ್ರ ಮಾಡಿದ್ದೀನಿ” ಎಂದರು ನಾಯಕ ಅರ್ಜುನ್ ರಮೇಶ್. ನಾಯಕಿ ಪ್ರಿಯಾಂಕಾ ಈ ಚಿತ್ರದಲ್ಲಿ ಘಾಟಿ ಹುಡುಗಿ ಪಾತ್ರ ಮಾಡಿರುವುದಾಗಿ ಹೇಳಿದರು. ಚಿತ್ರದ ನಿರ್ಮಾಪಕ ವಿಜೇಂದ್ರ ಅವರು ಹನುಮನ ಭಕ್ತರು. ಮುಂದಿನ ದಿನಗಳಲ್ಲಿ ‘ಹನುಮ ಚರಿತೆ’ ಸಿನಿಮಾ ಮಾಡುವುದು ಅವರ ಗುರಿ. ‘ಕೌಟಿಲ್ಯ’ ಚಿತ್ರಕ್ಕೆ ಕಿರಣ್ ಕೃಷ್ಣಮೂರ್ತಿ ಸಂಗೀತ ಸಂಯೋಜಿಸಿದ್ದಾರೆ.

Previous articleಸರಳ – ನೇರ ನಿರೂಪಣೆ, ಪರಿಣಾಮಕಾರಿ ಸಂದೇಶ
Next articleಯುಕ್ರೇನ್ ಅಧ್ಯಕ್ಷ ನಟಿಸಿದ ವೆಬ್ ಸರಣಿ ‘ಸರ್ವೆಂಟ್ ಆಫ್ ದ ಪೀಪಲ್’ ಇದೋ ಹೀಗಿದೆ

LEAVE A REPLY

Connect withPlease enter your comment!
Please enter your name here