ಕೆ.ವಿ.ರಾಜು ಒಮ್ಮೆ ಚಲನಚಿತ್ರ ನಿರ್ದೇಶಕರ ಸಂಘದ ಸಭೆಯಲ್ಲಿ ಕೊನೆಯ ಸಾಲಿನಲ್ಲಿ ಪ್ಲಾಸ್ಟಿಕ್ ಚೇರಿನ ಮೇಲೆ ತಮ್ಮದೇ ಲಹರಿಯಲ್ಲಿ ಕುಳಿತಿದ್ದರು. ಅವರನ್ನು ನೋಡಿದ ನಾನು “ನಮಸ್ಕಾರ ಸರ್. ಯಾಕೆ ಇಷ್ಟು ಹಿಂದೆ ಕುಳಿತಿದ್ದೀರಿ. ಮುಂದೆ ಕೂರಬಹುದಿತ್ತಲ್ವಾ?” ಅಂತ ಕ್ಯಾಶುಯಲ್ ಆಗಿ ಅಂದೆ. ಅದಕ್ಕವರು “ಎಲ್ಲಿ ಕೂತ್ರು ಅಷ್ಟೇ ಕಣಾ ಬಾರೋ. ಜನರ ಮನಸಿನಲ್ಲಿ ಕೂತವನಷ್ಟೇ ನಿಜವಾದ ಡೈರೆಕ್ಟರ್” ಎಂದು ಅವರ ಪಕ್ಕದಲ್ಲಿದ್ದ ಕುರ್ಚಿಯಲ್ಲಿ ಕೂರುವಂತೆ ನನಗೆ ಸಂಜ್ಞೆ ಮಾಡಿದರು. – ಅಗಲಿದ ಚಿತ್ರನಿರ್ದೇಶಕ ಕೆ.ವಿ.ರಾಜು ಅವರನ್ನು ಚಿತ್ರಸಾಹಿತಿ – ನಿರ್ದೇಶಕ ಹೃದಯಶಿವ ಸ್ಮರಿಸಿದ್ದಾರೆ.

ಈ ಹೆಮ್ಮೆಯ ನಿರ್ದೇಶಕ ತನ್ನ ನೇರನುಡಿ ಮತ್ತು ಅನನ್ಯ ಚಿತ್ರಗಳ ಮೂಲಕ ತಮ್ಮದೇ ವಿಶಿಷ್ಟ ಸ್ಥಾನವನ್ನು ಅಲಂಕರಿಸಿದ ಮನುಷ್ಯ. ಮೊನಚಾದ ಸಂಭಾಷಣೆ, ಮೈನವಿರೇಳಿಸುವ ದೃಶ್ಯ ಸಂಯೋಜನೆ, ಶಿಸ್ತು, ಸಮಯಪಾಲನೆಗೆ ಹೆಸರಾಗಿದ್ದ ಈ ರೆಬೆಲ್ ನಿರ್ದೇಶಕನ ವೃತ್ತಿ ಬದುಕಿನ ಉತ್ತುಂಗದ ಕಾಲವದು; ಹಿಂದಿಯ ‘ಇಂದ್ರಜೀತ್’ ಚಿತ್ರದ ಚಿತ್ರೀಕರಣದ ಸಂದರ್ಭ. ಎಂದಿನಂತೆ ಚಿತ್ರೀಕರಣಕ್ಕೆ ಸರಿಯಾದ ಸಮಯಕ್ಕೆ ಹಾಜರಾಗಿ ಕೂತಲ್ಲೇ ಕೂತಿದ್ದ ಇವರು, ಆ ಚಿತ್ರದ ನಾಯಕನಟ ಅಮಿತಾಬ್ ಬಚ್ಚನ್ ಎರಡು ಗಂಟೆ ತಡವಾಗಿ ಚಿತ್ರೀಕರಣಕ್ಕೆ ಬಂದೊಡನೆ ಎದ್ದು ‘ಪ್ಯಾಕಪ್’ ಎಂದು ಹೇಳಿ ಸೀದಾ ಕಾರು ಹತ್ತಿ ಹೊರಟಾಗ ಇಡೀ ಚಿತ್ರತಂಡ ಒಮ್ಮೆಲೇ ದಿಗ್ಭ್ರಮೆಗೊಳಗಾದದ್ದು ಈಗ ಇತಿಹಾಸ.

ಇಂತಹ ನೇರನುಡಿಯ, ದಿಟ್ಟ ವ್ಯಕ್ತಿತ್ವದ, ಪ್ರತಿಭಾವಂತ ಬರಹಗಾರ, ಹೆಸರಾಂತ ನಿರ್ದೇಶಕ ಕೆ.ವಿ.ರಾಜು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಇಂದು ಬೆಳಗ್ಗೆ ಎಂಟು ಗಂಟೆಗೆ ಬೆಂಗಳೂರಿನ ರಾಜಾಜಿನಗರದ ಅವರ ಮನೆಯಲ್ಲಿ ನಿಧನರಾಗಿದ್ದಾರೆ. ಅಪಾರ ಓದು, ಅಧ್ಯಯನ, ಅಪ್ರತಿಮ ಪ್ರತಿಭೆ ಇದ್ದ ಕೆ.ವಿ.ರಾಜು ಅಸುನೀಗಿದ್ದಾರೆ. ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಿರ್ದೇಶಕರ ಪಟ್ಟಿಯಲ್ಲಿ ಸ್ಥಾನ ಪಡೆಯಬಹುದಾದ ಕೆಲವೇ ಕೆಲವು ನಿರ್ದೇಶಕರಲ್ಲಿ ಇವರೂ ಒಬ್ಬರು. ಆರಂಭದಲ್ಲಿ ಹಿರಿಯ ನಿರ್ದೇಶಕ ಎಂ.ಆರ್.ವಿಠಲ್ ಅವರ ಬಳಿ ಸೌಂಡ್ ಇಂಜಿನಿಯರಾಗಿ ಪಳಗಿದ ಇವರು ಸ್ವಲ್ಪ ಕಾಲ ಮೈಸೂರಿನ ಪ್ರೀಮಿಯರ್ ಸ್ಟುಡಿಯೋದಲ್ಲಿ ಸಂಕಲನಕಾರರಾಗಿ ಕಾರ್ಯನಿರ್ವಹಿಸಿದ ಬಳಿಕ ಒಂದಷ್ಟು ದಿಗ್ಗಜರ ಸಿನಿಮಾಗಳಿಗೆ ಸಂಕಲನ ಕಾರ್ಯ ನಿರ್ವಹಿಸಿದ್ದರು. ಅನಂತರ ತಮ್ಮ ಸಹೋದರ ಕೆ.ವಿ.ಜಯರಾಮ್ ಅವರ ‘ಒಲವೇ ಬದುಕು’, ‘ಬಾಡದ ಹೂವು’, ‘ಮರಳು ಸರಪಣಿ’, ‘ಇಬ್ಬನಿ ಕರಗಿತು’, ‘ಶ್ವೇತ ಗುಲಾಬಿ’ ಮುಂತಾದ ಚಿತ್ರಗಳಿಗೆ ಬರವಣಿಗೆ ಜೊತೆಗೆ ನಿರ್ದೇಶನ ವಿಭಾಗದಲ್ಲಿಯೂ ಸಹಾಯಕರಾಗಿ ಕೆಲಸ ಮಾಡಿ ಅನುಭವ ಪಡೆದರು.

ಕ್ರಮೇಣ ಅನಂತ ನಾಗ್- ಶಂಕರ್ ನಾಗ್ ಜೋಡಿ ಅಭಿನಯದ ‘ಕೂಗು’ ಚಿತ್ರದ ಮುಖಾಂತರ ಸ್ವತಂತ್ರ ನಿರ್ದೇಶಕರಾದರೂ ಕಾರಣಾಂತರಗಳಿಂದ ಆ ಸಿನಿಮಾ ತೆರೆ ಕಾಣಲಿಲ್ಲ. ಬಳಿಕ ‘ಸಂಗ್ರಾಮ’, ‘ಇಂದ್ರಜಿತ್’, ‘ಯುದ್ಧಕಾಂಡ’, ‘ಹುಲಿಯ’, ‘ಬೆಳ್ಳಿ ಕಾಲುಂಗುರ’, ‘ನವಭಾರತ’, ‘ಪೊಲೀಸ್ ಲಾಕಪ್’, ‘ಕದನ’… ಮುಂತಾದ ಸಿನಿಮಾಗಳನ್ನು ಬರೆದು, ನಿರ್ದೇಶಿಸುವುದರ ಮೂಲಕ ತಮ್ಮದೇ ವಿಭಿನ್ನ, ವಿನೂತನ ದಿಕ್ಕಿನಲ್ಲಿ ಹೆಜ್ಜೆ ಹಾಕಿದರು. ಚಲನಚಿತ್ರಗಳ ಮೂಲಕ ಸಮಾಜದಲ್ಲಿ ಪರಿವರ್ತನೆ ಉಂಟು ಮಾಡುವುದರ ಬಗ್ಗೆ ಭರವಸೆ ಇಟ್ಟರು. ಇಂತಹ ಉದಾತ್ತ ಆಶಯಗಳ ಮೂಲಕ ಕನ್ನಡ ಚಿತ್ರರಂಗಕ್ಕೆ ಹೊಸ ಹುರುಪನ್ನು ಮೂಡಿಸಿದ್ದಲ್ಲದೆ ಎಂಭತ್ತು, ತೊಂಭತ್ತರ ಕಾಲಘಟ್ಟದ ವಿಶ್ಲೇಷಣೆ, ಇವರ ಚಿತ್ರಗಳ ನಿರೂಪಣೆಯಲ್ಲಿ ಕಾಣಸಿಗುತ್ತಿತ್ತು.

ಹಾಗೆಯೇ, ಕೆ.ವಿ.ರಾಜು ಅವರ ಪ್ರತಿಭೆಯ ಬಗ್ಗೆ ಬರೆಯಲು, ಚಿಂತಿಸಲು, ಧ್ಯಾನಿಸಲು, ಇವರು ಸಾಗಿ ಬಂದ ಹಾದಿಯನ್ನು ನೆನೆಯಲು ಇನ್ನೂ ಕಾರಣಗಳಿವೆ. ಇವರು ಹೊಸ ಆಯಾಮದ ತಾಂತ್ರಿಕತೆಯನ್ನು ತಮ್ಮ ನಿರ್ದೇಶನದ ಚಿತ್ರಗಳಲ್ಲಿ ಪ್ರಯೋಗಿಸಿ ಸಫಲರಾದುದರ ಜೊತೆಗೆ ‘ಸಾಂಗ್ಲಿಯಾನ’, ‘ಸಿಬಿಐ ಶಂಕರ್’ ಮುಂತಾದ ಚಿತ್ರಗಳಿಗೆ ಚಿತ್ರಕತೆ ಬರೆದದ್ದಲ್ಲದೆ, ‘ಗಜ’, ‘ಟೈಗರ್ ಗಲ್ಲಿ’, ‘ರಾಜಧಾನಿ’ಯಂತಹ ಸಿನಿಮಾಗಳಿಗೆ ಕನ್ನಡ ಭಾಷೆಯ ಧ್ವನಿಪೂರ್ಣ ಸಂಭಾಷಣೆಯನ್ನು ನೀಡಿದ್ದಲ್ಲದೆ ‘ಬೆಳ್ಳಿ ರಥದಲ್ಲಿ ಸೂರ್ಯ ತಂದ ಕಿರಣ’ ಗೀತೆ ಸೇರಿದಂತೆ ಅನೇಕ ಹಾಡುಗಳನ್ನು ಬರೆದದ್ದನ್ನು ಇಲ್ಲಿ ದಾಖಲಿಸಬೇಕಾಗುತ್ತದೆ, ಪ್ರಶಂಸಿಸಬೇಕಾಗುತ್ತದೆ. ಹಾಗೆಯೇ ಬಾಲಿವುಡ್‌ನಲ್ಲಿ ಅಮಿತಾಭ್ ಬಚ್ಚನ್-ಜಯಪ್ರದ ಅಭಿನಯದ ‘ಇಂದ್ರಜೀತ್’ ಮತ್ತು ಜೀತೇಂದ್ರ-ಕಾಜೋಲ್ ಅಭಿನಯದ ‘ಉಧಾರ್ ಕಿ ಜಿಂದಗಿ’ ಚಿತ್ರಗಳನ್ನು ಇವರು ನಿರ್ದೇಶಿಸಿದ್ದನ್ನು ಹೆಮ್ಮೆಯಾಗಿ ಪರಿಗಣಿಸಬೇಕಾಗುತ್ತದೆ.

ʼಬಾಡದ ಹೂ’ ಸಿನಿಮಾ ಚಿತ್ರೀಕರಣದಲ್ಲಿ ಕೆ.ವಿ.ರಾಜು, ಕೆ.ವಿ.ಜಯರಾಂ, ಛಾಯಾಗ್ರಾಹಕ ಬಿ.ಎಸ್‌.ಬಸವರಾಜು (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

ಹೀಗೆ ತಾವು ಎಷ್ಟೇ ಸಾಧಿಸಿದ್ದರೂ, ಎಷ್ಟೇ ಎತ್ತರಕ್ಕೆ ಏರಿದ್ದರೂ, ಬಾಕ್ಸ್ ಆಫೀಸಿನಲ್ಲಿ ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟಿದ್ದರೂ ಇವರು ಚಿತ್ರದಿಂದ ಚಿತ್ರಕ್ಕೆ ಕ್ರಿಯಾಶೀಲತೆ, ಪ್ರಯೋಗ, ತಂತ್ರಗಾರಿಕೆ ಇತ್ಯಾದಿಗಳ ಲೋಕದಲ್ಲಿ ಮುಳುಗಿರುತ್ತಿದ್ದರೆ ವಿನಃ ಯಾವತ್ತೂ ಪ್ರಶಸ್ತಿ, ಸನ್ಮಾನ, ಹಾರ ತುರಾಯಿ, ಕೊಂಬು ಕಿರೀಟಗಳ ಹಿಂದೆ ಬಿದ್ದವರಲ್ಲ. ಹಾಗಂತ ಯಾಕೆ ತಮಗಿನ್ನೂ ಪ್ರಶಸ್ತಿ ಬಂದಿಲ್ಲ ಎನ್ನುವ ಸಿಟ್ಟು ಅವರಲ್ಲಿ ಇಲ್ಲವೆಂದಲ್ಲ. ಯೋಗ್ಯತೆ ಇಲ್ಲದ ಎಷ್ಟೋ ಮಂದಿ ಪ್ರಶಸ್ತಿ ಗಿಟ್ಟಿಸಿಕೊಳ್ಳಲು ಪಡುವ ಪರಿಪಾಟಲುಗಳು, ಮಾಡುವ ಲಾಬಿಗಳು ಮುಂತಾದವುಗಳ ಬಗ್ಗೆ ಇವರಿಗೆ ಆಕ್ರೋಶ ಇಲ್ಲವೆಂದಲ್ಲ. ಎಲ್ಲವೂ ಉಂಟು. ಪ್ರಶಸ್ತಿಗಳ ಬಗ್ಗೆ ಕೆ.ವಿ.ರಾಜು ಇಲ್ಲೊಂದು ಮಾತು ಹೇಳಿದ್ದಾರೆ ನೋಡಿ : “ಏಯ್ ಹೋಗ್ರೋ.. ನಂಗೂ ಅವಾರ್ಡ್ ಕೊಡ್ತಾರೆ. ಹಿಪಾಕ್ರೈಟ್ ಗಳಿಗೂ ಅವಾರ್ಡ್ ಕೊಡ್ತಾರೆ. ಅವಾರ್ಡಿಗೆ ಮರ್ಯಾದೆ ಇಲ್ಲದಿದ್ದರೂ ನನಗೆ ಮರ್ಯಾದೆ ಇಲ್ವಾ. ಶಾಲು ಸನ್ಮಾನಗಳು ಅಂದ್ರೆ ನನಗೆ ಅಲರ್ಜಿ. ಅದಕ್ಕಾಗಿ ತಪಸ್ಸು ಮಾಡುವವರ ದಂಡೇ ಇದೆ. ಅಂಥವರಿಗೆ ನೀಡಲಿ” ಅಂತ ತಮ್ಮ ಶಿಷ್ಯಬಳಗದಲ್ಲಿ ಹೇಳಿಕೊಳ್ಳುತ್ತಾರೆ. ಆ ಮೂಲಕ ಪ್ರಶಸ್ತಿಗಳ ಬಗ್ಗೆ ಅವರೊಳಗೆ ಕುದಿಯುತ್ತಿರುವ ಜ್ವಾಲೆ ಕೊನೆಗೂ ಸ್ಪೋಟವಾಗುತ್ತದೆ.

ಇನ್ನು ಯಶಸ್ವೀ ನಿರ್ದೇಶಕರಿಗೆ ನೀಡಲ್ಪಡುವ ಪ್ರತಿಷ್ಠಿತ ‘ಪುಟ್ಟಣ್ಣ ಕಣಗಾಲ್ ಪ್ರಶಸ್ತಿ’ಗೆ ಇವರು ಆಯ್ಕೆಯಾದಾಗ “ಪ್ರಶಸ್ತಿಯನ್ನು ನಿರಾಕರಿಸುವ ಮಾತೇ ಇಲ್ಲ. ಖಂಡಿತ ಪ್ರಶಸ್ತಿ ಸ್ವೀಕರಿಸುತ್ತೇನೆ. ಸುಮಾರು ಮೂವತ್ತೈದು ವರ್ಷಗಳ ಹಿಂದೆ ಒಂದು ಚಿತ್ರಕ್ಕೆ ನಿನಗೆ ಪ್ರಶಸ್ತಿ ಬಂದೇ ಬರುತ್ತೆ ಕಣಯ್ಯಾ…” ಎಂದಿದ್ದರು ಪುಟ್ಟಣ್ಣ ಕಣಗಾಲ್. ಆದರೆ ಪ್ರಶಸ್ತಿ ಬರಲಿಲ್ಲ. ಯಾಕೆ ಪ್ರಶಸ್ತಿ ಬರಲಿಲ್ಲ ಅಂತಲೂ ಗೊತ್ತಾಗಲಿಲ್ಲ. ಈಗ ಪುಟ್ಟಣ್ಣನವರೇ ಪ್ರಶಸ್ತಿಯಾಗಿ ಬಂದಿದ್ದಾರೆ. ಪವಾಡದ ತರಹ. ಎಲ್ಲ ಸರಿ ಹೋಗಿದ್ದರೆ ನಾನು ಅವರ ಚಿತ್ರಗಳಿಗೆ ಅಸೋಸಿಯೇಟ್ ಆಗಿ ಕೆಲಸ ಮಾಡಬೇಕಿತ್ತು. ಸಂಭಾಷಣೆ ಸಹ ಬರೆಯಬೇಕಿತ್ತು. ಅದ್ಯಾಕೋ ಅವರ ಜೊತೆ ಕೆಲಸ ಮಾಡಲು ಆಗಲೇ ಇಲ್ಲ. ಈಗ ಅವರ ಹೆಸರಿನ ಪ್ರಶಸ್ತಿ ಸಿಕ್ಕಿದೆ. ನಿರಾಕರಿಸುವುದಿಲ್ಲ. ಖಂಡಿತಾ ಸ್ವೀಕರಿಸುತ್ತೇನೆ” ಎಂದು ಪತ್ರಿಕೆಗಳಿಗೆ ಹೇಳಿಕೆ ನೀಡಿದಾಗ “ಹಿಂದೊಮ್ಮೆ ಕರ್ನಾಟಕ ಚಲನಚಿತ್ರ ಅಕಾಡೆಮಿಯು ನಿಮಗೆ ನೀಡಬಯಸಿದ ಬಿ.ಆರ್.ಪಂತುಲು ಪ್ರಶಸ್ತಿಯನ್ನೇಕೆ ನೀವು ಸ್ವೀಕರಿಸಲಿಲ್ಲ?” ಅನ್ನುವ ಪತ್ರಕರ್ತರೊಬ್ಬರ ಮರುಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ “ಪುಟ್ಟಣ್ಣನವರ ಗುರು ಬಿ.ಆರ್.ಪಂತುಲು ಹೆಸರಿನಲ್ಲಿ ನೀಡುವ ಪ್ರಶಸ್ತಿಯನ್ನು ಜೀವಮಾನ ಸಾಧನೆಗಾಗಿ ಕೊಡಲಾಗುವುದರಿಂದ, ನಾನಿನ್ನೂ ಚಿತ್ರರಂಗದಿಂದ ನಿವೃತ್ತನಾಗಿರದ ಕಾರಣ ಆ ಪ್ರಶಸ್ತಿಯನ್ನು ನಿರಾಕರಿಸಿದೆನಷ್ಟೇ. ಈಗ ಖುದ್ದು ಪುಟ್ಟಣ್ಣನವರೇ ಪ್ರಶಸ್ತಿಯಾಗಿ ಪ್ರತ್ಯಕ್ಷರಾಗಿದ್ದಾರೆ. ಅದಕ್ಕಾಗಿ ಈ ಪ್ರಶಸ್ತಿಯನ್ನು ಸ್ವೀಕರಿಸುತ್ತೇನೆ” ಎಂದಿದ್ದರು ಕೆ.ವಿ.ರಾಜು.

ಇಷ್ಟಕ್ಕೂ ಕನ್ನಡ ಸಿನಿಮಾ ನೋಡುವ ಎಲ್ಲರ ಮನಸಿನಲ್ಲಿ ನೆಲೆಸಿರುವ ಹೆಸರುವಾಸಿ ನಿರ್ದೇಶಕ, ಯಶಸ್ವಿ ಚಿತ್ರಕಥೆಗಾರ, ಅದ್ಭುತ ಸಂಭಾಷಣಾಕಾರ, ಪ್ರತಿಭಾವಂತ ಗೀತರಚನಾಕಾರ… ಮಿಗಿಲಾಗಿ ನೇರನುಡಿಯ, ದಿಟ್ಟ ವ್ಯಕ್ತಿತ್ವದ ಮನುಷ್ಯ ಅನ್ನಿಸಿಕೊಂಡಿದ್ದ ಕೆ.ವಿ.ರಾಜು ಒಮ್ಮೆ ಚಲನಚಿತ್ರ ನಿರ್ದೇಶಕರ ಸಂಘದ ಸಭೆಯಲ್ಲಿ ಕೊನೆಯ ಸಾಲಿನಲ್ಲಿ ಪ್ಲಾಸ್ಟಿಕ್ ಚೇರಿನ ಮೇಲೆ ತಮ್ಮದೇ ಲಹರಿಯಲ್ಲಿ ಕುಳಿತಿದ್ದರು. ಅವರನ್ನು ನೋಡಿದ ನಾನು “ನಮಸ್ಕಾರ ಸರ್. ಯಾಕೆ ಇಷ್ಟು ಹಿಂದೆ ಕುಳಿತಿದ್ದೀರಿ. ಮುಂದೆ ಕೂರಬಹುದಿತ್ತಲ್ವಾ?” ಅಂತ ಕ್ಯಾಶುಯಲ್ ಆಗಿ ಅಂದೆ. ಅದಕ್ಕವರು “ಎಲ್ಲಿ ಕೂತ್ರು ಅಷ್ಟೇ ಕಣಾ ಬಾರೋ. ಜನರ ಮನಸಿನಲ್ಲಿ ಕೂತವನಷ್ಟೇ ನಿಜವಾದ ಡೈರೆಕ್ಟರ್” ಎಂದು ಅವರ ಪಕ್ಕದಲ್ಲಿದ್ದ ಕುರ್ಚಿಯಲ್ಲಿ ಕೂರುವಂತೆ ನನಗೆ ಸಂಜ್ಞೆ ಮಾಡಿದರು. ನಾನು ಚೇರೆಳೆದುಕೊಂಡು ಅವರ ಹಿಂದೆ ಕೂತೆ. ಅವರು ಆ ದಿನ ಹೇಳಿದ್ದ ಮಾತು ಇಂದಿಗೂ ನನ್ನ ಕಿವಿಯಲ್ಲಿ ಪ್ರತಿಧ್ವನಿಸುತ್ತಿದೆ. ಹಾಗಯೇ ಅಪರೂಪಕ್ಕೊಮ್ಮೆ ಅವರನ್ನು ಭೇಟಿಯಾದಾಗ ಅವರು ಹೇಳುತ್ತಿದ್ದ ಮಾತುಗಳು, ಸಿನಿಮಾ ಬಗ್ಗೆ ಇದ್ದಂಥ ಅರಿವು, ಮುಂದಾಲೋಚನೆ, ಪ್ರೀತಿ… ಇವುಗಳನ್ನು ಯಾವ ಯೂನಿವರ್ಸಿಟಿಯೂ ಹೇಳಿಕೊಡಲು ಸಾಧ್ಯವಿಲ್ಲವೆಂದು ಭಾವಿಸುತ್ತೇನೆ. ಇವರ ಕಣ್ಣುಗಳಲ್ಲಿದ್ದ ಪ್ರಬುದ್ಧ ಹೊಳಪು, ದಿವ್ಯ ಗಾಂಭೀರ್ಯತೆಯನ್ನು ಎದುರಿಸುವ ಶಕ್ತಿ ಅಸಾಧ್ಯವಾದದ್ದು ಅಂತ ಹೇಳುತ್ತೇನೆ. ಕೆ.ವಿ.ರಾಜು ಅಂತಹ ಅರಿವು ಮೂಡಿಸುವ ದಾರ್ಶನಿಕನಂತೆ, ಗುರಿ ತೋರಿಸುವ ಗುರುವಿನಂತೆ ಯುವ ಪೀಳಿಗೆಗೆ ಸ್ಫೂರ್ತಿಯಾಗಿದ್ದ ಮನುಷ್ಯ. ಇವರ ಸಾವಿನಿಂದ ಇವರ ವ್ಯಕ್ತಿತ್ವ, ಮಾತು, ಬರವಣಿಗೆ, ಸಿನಿಮಾಗಳನ್ನು ಇಷ್ಟ ಪಡುತ್ತಿದ್ದ, ಅವುಗಳಿಂದ ಕಲಿಯುತ್ತಿದ್ದ ಅನೇಕರಲ್ಲಿ ತಬ್ಬಲಿತನ ಆವರಿಸಿರುವುದಂತೂ ಸುಳ್ಳಲ್ಲ.

LEAVE A REPLY

Connect with

Please enter your comment!
Please enter your name here