ತಮಿಳು ಸಿನಿಮಾ | ರೈಟರ್‌

ಫ್ರಾಂಕ್ಲಿನ್‌ ಜಾಕೋಬ್‌ ಚೊಚ್ಚಲ ನಿರ್ದೇಶನದ ಸಿನಿಮಾ ‘ರೈಟರ್‌’. ನಿರ್ದೇಶಕ ಪಾ.ರಂಜಿತ್‌ ಸಮಾನ ಮನಸ್ಕರ ಜೊತೆಗೂಡಿ ಈ ಚಿತ್ರ ನಿರ್ಮಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ತಮಿಳಿನಲ್ಲಿ ಬಂದಂತಹ ಅಸುರನ್‌, ವಿಸಾರಣೈ, ಕರ್ಣನ್‌, ಜೈಭೀಮ್‌… ಚಿತ್ರಗಳಂತೆ ಇದು ಕೂಡ ಪ್ರಯೋಗಾತ್ಮಕ ಚಿತ್ರಗಳಲ್ಲಿ ಒಂದು ಎಂದರೆ ಅತಿಶಯೋಕ್ತಿಯಾಗದು.

ಆರಂಭದಲ್ಲಿ ಚಿತ್ರದಲ್ಲಿನ ಸಂಭಾಷಣೆಯೊಂದು ಹೀಗಿದೆ – “ಬ್ರಿಟೀಷರು ತಮ್ನನ್ನು ತಾವು ಜನರಿಂದ ರಕ್ಷಿಸಿಕೊಳ್ಳಲು ಪೊಲೀಸ್‌ ವ್ಯವಸ್ಥೆ ಸೃಷ್ಟಿಸಿದರು. ಅದು ಇವತ್ತಿಗೂ ಅಧಿಕಾರಸ್ಥರ ಸುತ್ತ ಸುತ್ತುತ್ತಾ, ಅವರನ್ನು ರಕ್ಷಿಸುವ ವ್ಯವಸ್ಥೆಯಾಗಿ ಮುಂದುವರೆದಿದೆ ಎನ್ನುವುದು ದುರಂತ”. ಇಡೀ ಸಿನಿಮಾ ಪೊಲೀಸ್‌ ವ್ಯವಸ್ಥೆಯ ನೈಜ ಚಿತ್ರಣ ಕಟ್ಟಿಕೊಡುತ್ತದೆ. ಅಲ್ಲಿನ ಕೆಳವರ್ಗದ ನೌಕರರ ಸಂಕಷ್ಟ, ಭ್ರಷ್ಟಾಚಾರ, ಅಧಿಕಾರಶಾಹಿ ವ್ಯವಸ್ಥೆ, ಪೊಲೀಸ್‌ ಠಾಣೆಯ ದಿನನಿತ್ಯದ ಚಟುವಟಿಕೆಗಳೆಲ್ಲವೂ ಮನನವಾಗುತ್ತವೆ.

ತಿರುವರೆಂಬೂರ್‌ ಪೊಲೀಸ್‌ ಸ್ಟೇಷನ್‌ನಲ್ಲಿ ರೈಟರ್‌ ಆಗಿ ಕೆಲಸ ಮಾಡುವ ತಂಗರಾಜ್‌ ಪ್ರಾಮಾಣಿಕ ವ್ಯಕ್ತಿ. ತನ್ನ ಇಡೀ ಸರ್ವೀಸ್‌ನಲ್ಲಿ ಆತ ಆರೋಪಿಗಳಿಗೆ ಜೋರು ದನಿಯಲ್ಲಿ ನಿಂದಿಸಿದ್ದು, ಹೊಡೆದ ಉದಾಹರಣೆಯಿಲ್ಲ. ದೇವಕುಮಾರ್ ಎನ್ನುವ ಪಾತ್ರದ ಮೂಲಕ ತಂಗರಾಜ್ ಎಂಬ ಪ್ರಾಮಾಣಿಕನಿಗೆ ಪೊಲೀಸ್‌ ವ್ಯವಸ್ಥೆ ಏನೇನೆಲ್ಲಾ ಮಾಡಿಸುತ್ತದೆ ಎನ್ನುವುದನ್ನು ಚಿತ್ರದ ಕಥಾವಸ್ತು. ಬಹುಪಾಲು ಸಿನಿಮಾ ಸ್ಟೇಷನ್‌, ಪೊಲೀಸರ ಸುತ್ತಲೇ, ನಡೆಯುವುದರಿಂದ ಇನ್ನಷ್ಟು ಬಿಗಿಯಾದ ಚಿತ್ರಕಥೆ ಅವಶ್ಯಕತೆಯಿತ್ತು. ಮೊದಲರ್ಧವನ್ನು ಕುತೂಹಲದಿಂದ ಕಟ್ಟಿರುವ ನಿರ್ದೇಶಕರು ಸೆಕೆಂಡ್ ಹಾಪ್ ನಲ್ಲಿ ಇನಿಯಾಳ ಪಾತ್ರವನ್ನು ಅನಗತ್ಯವಾಗ ತಂದು ಹಳಿ ತಪ್ಪಿದ್ದಾರೆ ಎನಿಸುತ್ತದೆ.

ಶೀರ್ಷಿಕೆಯೆ ‘ರೈಟರ್‌’ ಆದ್ದರಿಂದ ಇದು ಆತನ ಹುದ್ದೆಯ ಬಗ್ಗೆ ಹೇಳುತ್ತದಾ? ಹೌದು ಹೇಳುತ್ತದೆ, ಆದರೆ ತುಂಬಾ ಸಟಲ್ಡ್‌ ಆಗಿ ಹೇಳುತ್ತದೆ. ಒಂದು ಕ್ರೈಂ ಸೀನ್‌ ಬರೆಯುವುದರಿಂದ ಹಿಡಿದು FIR, ಪೋಲಿಸ್ ಠಾಣೆಯ ನಿತ್ಯ ಬರಹಗಳನ್ನೂ ಹೇಗೆ ಒಬ್ಬ ರೈಟರ್‌ ಹೇಗೆ ಬರೆಯುತ್ತಾನೆ ಎನ್ನುವುದರ ವಿವರಗಳನ್ನು ಸಾಮಾನ್ಯ ಪ್ರೇಕ್ಷಕರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ. ಕಳ್ಳನೊಬ್ಬ ಪರಿವರ್ತನೆಗೊಳಗಾಗುವ ಪಾತ್ರವನ್ನು ನಿರ್ದೇಶಕರು ಚೆನ್ನಾಗಿ ಕಟ್ಟಿದ್ದಾರೆ.

ಪೊಲೀಸ್‌ ಠಾಣೆಯಲ್ಲಿನ ಭ್ರಷ್ಟಾಚಾರ, ಆರೋಪಿ ಅಲ್ಲದವನೊಬ್ಬನ ಮೇಲೆ ಆರೋಪ ಹೊರಿಸಿ ಕರೆತರುವುದು, ಆತನ ತಿಂಡಿ – ಊಟದ ಖರ್ಚಿಗೆ ಹಣ ಪಡೆಯುವುದು, ಇಂಟರಾಗೇಷನ್‌ ಸಂದರ್ಭದಲ್ಲಿ ಮೇಲಧಿಕಾರಿಯೊಬ್ಬ ಕಾನ್‌ಸ್ಟೇಬಲ್‌ಗಳ ಜೊತೆ ಕೀಳಾಗಿ ವರ್ತಿಸುವುದು, ಪೊಲೀಸರು ತಮ್ಮ ಮೇಲಿನವರಿಗೆ ಐನೂರು ರೂಪಾಯಿ ದಾಟಿಸುವುದು, ಅಧಿಕಾರಿ ಕೆನ್ನೆಗೆ ಹೊಡೆದರೂ, ಉಗುಳಿದರು ಪ್ರತಿರೋಧ ತೋರದ ಪೊಲೀಸ್‌… ಇವೆಲ್ಲವೂ ಪೊಲೀಸ್‌ ವ್ಯವಸ್ಥೆಯಲ್ಲಿ ಸಹಜವಾಗಿ ನಡೆಯುವ ಸನ್ನಿವೇಶಗಳು ಎನ್ನುವಂತೆ, ಅಲ್ಲಿನ ಕ್ರೂರ ವಾಸ್ತವಗಳನ್ನು ನಿರ್ದೇಶಕರು ಕಟ್ಟಿಕೊಟ್ಟಿದ್ದಾರೆ.

ಸ್ಟೇಷನ್‌ನಲ್ಲಿನ ನಿತ್ಯದ ವಿದ್ಯಮಾನಗಳು, ಅಧಿಕಾರಿಗಳ ದರ್ಪದ ನಡೆವಳಿಕೆಗಳ ಪರಿಚಯ ಸಿಗುತ್ತದೆ. ಕೊನೆಯಲ್ಲಿ… ಈ ಸಿನಿಮಾ ರೈಟರ್‌ ವೃತ್ತಿಯ ಬಗ್ಗೆ ಹೇಳುತ್ತದಾ? ಆತನ ಸಾಂಸಾರಿಕ ಬದುಕು, ಮಾನವೀಯ ಮೌಲ್ಯಗಳ ಬಗ್ಗೆ ಹೇಳುತ್ತದಾ? ಇಲ್ಲವೇ ಪಾ.ರಂಜಿತ್‌ ಅವರ ಚಿತ್ರಗಳಂತೆ ಜಾತೀಯತೆ ಬಗ್ಗೆ ಹೇಳುತ್ತದಾ? ಎನ್ನವ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಸಿಗುವುದಿಲ್ಲ. ಈ ಮಿತಿಗಳಿದ್ದಾಗ್ಯೂ ಸಿನಿಮಾ ಮುಖ್ಯವಾಗುತ್ತದೆ.

ಚಿತ್ರದಲ್ಲಿ ಸಮುದ್ರಖನಿ ಅವರ ಉತ್ತಮ ಪಾತ್ರಪೋಷಣೆ ಜೊತೆಗೆ ಕಳ್ಳ, ನ್ಯಾಯಾಧೀಶ, ಮೇಲಧಿಕಾರಿ, ಪೋಲೀಸ್ ಡಿ.ಸಿ ಪಾತ್ರಗಳ ಅಭಿನಯ ಮತ್ತು ಇತರ ಪಾತ್ರಧಾರಿಗಳ ಅಭಿನಯ ಉತ್ತಮವಾಗಿದೆ. ದೇವಕುಮಾರ ಮತ್ತು ತಂಗರಾಜ್ ಪಾತ್ರಗಳ ವೈಯಕ್ತಿಕ ವಿರವಗಳಿಗೆ ಹೆಚ್ಚು ಒತ್ತು ಕೊಟ್ಟಿರುವುದು ಸಿನಿಮಾದ ವೇಗಕ್ಕೆ ತೊಡಕಾಗಿದೆ. ಹತ್ತಿಪ್ಪತ್ತು ಪ್ಲಾಟ್ ಇರುವ ಅಪಾರ್ಟ್‌ಮೆಂಟ್‌ ಸಮುಚ್ಛಯಕ್ಕೆ ಒಂದು ಅಸೋಸಿಯೇಶನ್ ಇರುವಾಗ, ಸಾವಿರಾರು ಕಾನ್‌ಸ್ಟೇಬಲ್ ಮತ್ತು ಮೇಲಿನ ದರ್ಜೆಯ ಪೋಲಿಸರಿಗೆ ಯಾಕೆ ಒಂದು ಯೂನಿಯನ್ ಇರಬಾರದು ಅನ್ನುವ ಪ್ರಶ್ನೆಯೊಂದಿಗೆ ಚಿತ್ರ ಮುಕ್ತಾಯವಾಗುತ್ತದೆ.

ಪೊಲೀಸ್‌ ಇಲಾಖೆಯಲ್ಲಿ ಕೆಳವರ್ಗದ ನೌಕರರಿಗೆ ರಜೆ ಕೊಡದಿರುವುದು, ಅಮಾನವೀಯವಾಗಿ ನಡೆಸಿಕೊಳ್ಳುವುದು, ರಾಜಕೀಯ ನಾಯಕರ ಓಲೈಕೆ, ಮೇಲಧಿಕಾರಿಗಳ ಕಿರುಕುಳದಿಂದ ಬೇಸತ್ತು ಕೆಳವರ್ಗದ ನೌಕರರು ರಾಜೀನಾಮೆ ನೀಡುವುದು, ಆತ್ಮಹತ್ಯೆ ಮಾಡಿಕೊಳ್ಳುವ ವಿದ್ಯಮಾನಗಳು ಇತ್ತೀಚೆಗೆ ವರದಿಯಾಗುತ್ತಲೇ ಇರುತ್ತವೆ. ಈ ವ್ಯವಸ್ಥೆಯಲ್ಲಿ ಬದಲಾವಣೆ ಆಗಬೇಕಾಗಿರುವುದು ಇಂದಿನ ತುರ್ತು. ಬಹುಶಃ ಚಿತ್ರ ಮಾಡಿರುವ ನಿರ್ಮಾಪಕ, ನಿರ್ದೇಶಕರ ಆಶಯವೂ ಇದೇ ಇರಬಹುದು. ಇಂತಹ ಕತೆಗಳನ್ನು ತೆರೆಗೆ ತರಲು ಕಾರಣರಾದ ಪಾ.ರಂಜಿತ್‌ ಮತ್ತು ಟಿಂ ಅಭಿನಂದನಾರ್ಹರು. ಈ ಸಿನಿಮಾ ನೋಡಿದ ನಂತರ ನಮ್ಮ ಪುನೀತ್‌ ರಾಜಕುಮಾರ್‌ ನೆನಪಿಗೆ ಬಂದರು. ನಟನಾಗಿ ಅಲ್ಲ, ನಿರ್ಮಾಪಕರಾಗಿ. ಕನ್ನಡದಲ್ಲಿ ಇಂತಹ ಹೊಸ ರೀತಿಯ ಚಿತ್ರಗಳನ್ನು ತೆರೆಗೆ ತರುವ ಕನಸು ಅವರಿಗಿತ್ತು. ಪುನೀತ್‌ ಅವರಿಗಿದ್ದ ಆಶಯಗಳು ಇತರೆ ನಟರು, ತಂತ್ರಜ್ಞರಲ್ಲೂ ಚಿಗುರಲಿ ಎಂದು ಆಶಿಸೋಣ.

ನಿರ್ದೇಶನ : ಫ್ರಾಂಕ್ಲಿನ್‌ ಜಾಕೋಬ್‌ | ನಿರ್ಮಾಣ : ಪಾ.ರಂಜಿತ್‌, ಅಭಯಾನಂದ್‌ ಸಿಂಗ್‌, ಪಿಯೂಷ್‌ ಸಿಂಗ್‌, ಅದಿತಿ ಆನಂದ್‌ | ಸಂಗೀತ : ಗೋವಿಂದ್‌ ವಸಂತ | ಛಾಯಾಗ್ರಹಣ : ಪ್ರದೀಪ್‌ ಕಲಿರಾಜ | ತಾರಾಬಳಗ : ಸಮುದ್ರಖನಿ, ದಿಲೀಪನ್‌, ಇನಿಯಾ

LEAVE A REPLY

Connect with

Please enter your comment!
Please enter your name here