ಖ್ಯಾತ ಚಿತ್ರನಿರ್ದೇಶಕ ಶ್ಯಾಮ್‌ ಬೆನಗಲ್‌ (90 ವರ್ಷ) ನಿನ್ನೆ (ಡಿಸೆಂಬರ್‌ 23) ಅಗಲಿದ್ದಾರೆ. ಅವರ ಪೂರ್ವಜರು ಕರ್ನಾಟಕ ಮೂಲದವರು. ಗ್ರಾಮೀಣ ಬದುಕು ಮತ್ತು ಇತಿಹಾಸ ಆಧರಿಸಿದ ಅವರ ಹಲವು ಸಿನಿಮಾಗಳು ಮೈಲುಗಲ್ಲು ಎನಿಸಿವೆ. ‘ಭಾರತ್‌ ಏಕ್‌ ಖೋಜ್‌’ ಸರಣಿ ಮೂಲಕ ಕಿರುತೆರೆಯಲ್ಲೂ ಛಾಪು ಮೂಡಿಸಿದ್ದ ಶ್ಯಾಮ್‌ ಬೆನಗಲ್‌ ಪ್ರತಿಷ್ಠಿತ ದಾದಾ ಸಾಹೇಬ್‌ ಫಾಲ್ಕೆ ಪುರಸ್ಕೃತರು.

ಭಾರತದ ಗ್ರಾಮೀಣ ಜೀವನ ಮತ್ತು ಇತಿಹಾಸವನ್ನು ಆಧರಿಸಿ ಜನರ ಬದುಕಿನ ವಿವಿಧ ಮಜಲುಗಳನ್ನು ತೆರೆಯ ಮೇಲೆ ತೋರಿಸಿದ ಸಿನಿಮಾ ನಿರ್ದೇಶಕ ಶ್ಯಾಮ್ ಬೆನಗಲ್. 1934 ಡಿಸೆಂಬರ್ 14ರಂದು ಹೈದರಾಬಾದ್’ನಲ್ಲಿ ಜನಿಸಿದ ಶ್ಯಾಮ್ ಬೆನಗಲ್ ಅವರ ಅಪ್ಪ ಹೆಸರಾಂತ ಛಾಯಾಗ್ರಾಹಕ ಶ್ರೀಧರ್ ಬಿ ಬೆನಗಲ್. ಇವರು ಕರ್ನಾಟಕ ಮೂಲದವರು. ಅಪ್ಪನ ಕ್ಯಾಮೆರಾ ಬಳಸಿ ತನ್ನ 12ನೇ ವಯಸ್ಸಿನಲ್ಲಿ ಮೊದಲ ಸಿನಿಮಾ ಮಾಡಿದ ಶ್ಯಾಮ್ ಬೆನಗಲ್, ಭಾರತೀಯ ಸಿನಿಮಾರಂಗಕ್ಕೆ ನೀಡಿದ ಕೊಡುಗೆ ಅನನ್ಯ.

ಉಸ್ಮಾನಿಯಾ ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ ಶ್ಯಾಮ್ ಬೆನಗಲ್ ನಂತರ ಜಾಹೀರಾತು ಏಜೆನ್ಸಿಯೊಂದರಲ್ಲಿ ಕಾಪಿರೈಟರ್ ಆಗಿ ಕೆಲಸ ಮಾಡಿದ್ದರು. 1962 ರಲ್ಲಿ ಮೊದಲ ಸಾಕ್ಷ್ಯಚಿತ್ರ ಮಾಡಿದ ಅವರು 1973ರಲ್ಲಿ ನಿರ್ದೇಶಿಸಿದ ಮೊದಲ ಸಿನಿಮಾ ಅಂಕುರ್. ಇದಾದ ನಂತರ, ನಿಶಾಂತ್, ಮಂಥನ್ ಮತ್ತು ಭೂಮಿಕಾ ಮೊದಲಾದ ಸಿನಿಮಾಗಳ ಮೂಲಕ ಬೆನಗಲ್ ಮನೆಮಾತಾದರು.

1966ರಿಂದ 1973ರವರೆಗೆ ಪುಣೆ ಫಿಲ್ಮ್ ಇನ್ಸ್ಟಿಟ್ಯೂಟ್’ನಲ್ಲಿ ಉಪನ್ಯಾಸರಾಗಿದ್ದ ಅವರು ಎರಡು ಬಾರಿ ಸಂಸ್ಥೆಯ ಅಧ್ಯಕ್ಷರಾಗಿದ್ದರು. ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದ ನಿರ್ದೇಶಕರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ. ಬೆನಗಲ್ ಅವರ ಸಿನಿಮಾಗಳು ಕೇನ್ಸ್ ಮತ್ತು ಬರ್ಲಿನ್ ಸೇರಿದಂತೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪುರಸ್ಕಾರಗಳನ್ನು ಪಡೆದಿವೆ. ಅಮರೀಶ್ ಪುರಿ, ಓಂ ಪುರಿ, ಅನಂತನಾಗ್, ನಾಸಿರುದ್ದೀನ್ ಶಾ, ಶಬಾನಾ ಅಜ್ಮಿ, ಸ್ಮಿತಾ ಪಾಟೀಲ್ ಸೇರಿದಂತೆ ಅನೇಕ ಕಲಾವಿದರು ಬೆನಗಲ್ ಚಿತ್ರಗಳ ಮೂಲಕ ಗುರುತಿಸಿಕೊಂಡವರಾಗಿದ್ದಾರೆ.

ಅಂಕುರ್, ನಿಶಾಂತ್, ಮಂಥನ್, ಭೂಮಿಕಾ, ಸರ್ದಾರಿ ಬೇಗಂ, ಜುನೂನ್, ಕಲಿಯುಗ್, ಜುಬೈದಾ, ವೆಲ್ಕಂ ಟು ಸಜ್ಜನ್ ಪುರ್, Netaji Subhas Chandra Bose: The Forgotten hero… ಇವು ಬೆನಗಲ್ ನಿರ್ದೇಶನದ ಪ್ರಮುಖ ಚಿತ್ರಗಳು. ಕಿರುಚಿತ್ರ ವಿಭಾಗದಲ್ಲೂ ಕೆಲಸ ಮಾಡಿರುವ ಶ್ಯಾಮ್‌ ಬೆನಗಲ್‌ ಹಿಂದಿ ಕಿರುತೆರೆಯಲ್ಲಿ ದೊಡ್ಡ ಹೆಸರು. ಮಾಜಿ ಪ್ರಧಾನಿ ಜವಾಹರಲಾಲ್‌ ನೆಹರೂ ರಚನೆಯ ‘ಡಿಸ್ಕವರಿ ಆಫ್‌ ಇಂಡಿಯಾ’ ಆಧರಿಸಿ ಅವರು ನಿರ್ದೇಶಿಸಿದ್ದ ‘ಭಾರತ್‌ ಏಕ್‌ ಖೋಜ್‌’ ಸರಣಿ ಅಪಾರ ಜನಮನ್ನಣೆ ಗಳಿಸಿತ್ತು. ‘ಯಾತ್ರಾ’, ‘ಕಥಾ ಸಾಗರ್‌’, ‘ಅಮರಾವತಿ ಕಿ ಕಥಾಯೇ’, ‘ಸಂಕ್ರಾಂತಿ’, ‘ಸಂವಿಧಾನ್‌’ ಅವರ ನಿರ್ದೇಶನದ ಇತರೆ ಕಿರುತೆರೆ ಸರಣಿಗಳು.

18 ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, 1976ರಲ್ಲಿ ಪದ್ಮಶ್ರೀ, 1991ರಲ್ಲಿ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾದ ಶ್ಯಾಮ್ ಬೆನಗಲ್ ಸಿನಿಮಾ ಕ್ಷೇತ್ರಕ್ಕೆ ನೀಡಿದ ಅತ್ಯುತ್ತಮ ಕೊಡುಗೆಗಾಗಿ 2005ರಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಶ್ಯಾಮ್ ಬೆನಗಲ್ 2006ರಿಂದ 2012ರವರೆಗೆ ರಾಜ್ಯಸಭಾ ಸದಸ್ಯರಾಗಿದ್ದರು. ಡಿಸೆಂಬರ್ 23ರಂದು ಸಂಜೆ ಶ್ಯಾಮ್ ಬೆನಗಲ್ ವಿಧಿವಶರಾದರು.

LEAVE A REPLY

Connect with

Please enter your comment!
Please enter your name here