ಇದು ಭಾವುಕತೆ, ಸಾಮಾಜಿಕ ಕಾಳಜಿ, ಮಾಫಿಯಾ, ಎಲ್ಲದರ ಬ್ಲೆಂಡ್. ಪಕ್ಕಾ ಮನರಂಜನೆ. ಕಮಲ್ ತೆರೆಯ ಮೇಲೆ ವಿಜೃಂಭಿಸಿದ್ದಾರೆ. ಕ್ಲೈಮ್ಯಾಕ್ಸ್ ಪ್ರಕಾರ ‘ವಿಕ್ರಂ’ ಭಾಗ ಎರಡು ಬರಲಿದೆ. ಅಲ್ಲಿ ಕಮಲ್ ಮತ್ತು ಸೂರ್ಯನನ್ನು ತೆರೆಯ ಮೇಲೆ ನೋಡಬಹುದೇನೋ..

ಕಮಲ್ ಹಾಸನ್! ನಮ್ಮ ಜನರೇಷನ್ನಿನ ಬಹುತೇಕರ ಕ್ರಶ್! ಒಂದು ಹಂತದವರೆಗೂ ಆವರಿಸಿಕೊಳ್ಳುವ ಅಭಿವ್ಯಕ್ತಿಯ ಪಾತ್ರಗಳನ್ನು ಮಾಡಿದ ಕಮಲ್, ನಡುವೆ ಒಂದಷ್ಟು ಕಾಲ ಒಂಥರಾ ಬುದ್ಧಿಪೂರ್ವಕವಾಗಿ ನಟಿಸುತ್ತಿದ್ದಾರೆ ಅನಿಸುತ್ತಿತ್ತು. ನಾನು ಕಮಲ್ ಹಾಸನ್, ನಾನೊಬ್ಬ ಅತ್ಯುತ್ತಮ ನಟ ಎಂಬುದನ್ನು ಪ್ರಜ್ಞಾಪೂರ್ವಕವಾಗಿ ತಲೆಯಲ್ಲಿಟ್ಟುಕೊಂಡೇ ಅಭಿನಯಿಸಿದಂತೆ, ಅಲ್ಲಿ ಪಾತ್ರದ ಜೊತೆಗೇ ಕಮಲ್ ಕೂಡ ಕಾಣುತ್ತಿದ್ದರು. ‘ವಿಕ್ರಂ’ ನೋಡಲು ಸುಮ್ಮನೇ ಯಾವ ನಿರೀಕ್ಷೆಯೂ ಇಲ್ಲದೆ ಹೋದಾಗ ಅಲ್ಲಿ ಕಂಡದ್ದು ಅದೇ ಹಳೆಯ ಕಮಲ್. ‘ವಿಕ್ರಂ’ ಸಿನಿಮಾ ನೋಡಿ ಕಮಲ್ ಈಸ್ ಬ್ಯಾಕ್ ಅಂತ ಉದ್ಘರಿಸುವಂತಾಯ್ತು.

ಢಂ ಢಂ ಸದ್ದಿನ, ಹೊಡೆದಾಟದ, ಕೊಲೆಗಳ ಸಾಲು ಸಾಲು ಸಿನಿಮಾಗಳು ಬರುತ್ತಿವೆ. ಇದರ ನಡುವೆಯೂ ‘ವಿಕ್ರಂ’ ಭರ್ಜರಿ ಯಶಸ್ಸು ಕಾಣಲು ಎರಡು ಕಾರಣ. ಒಂದು ಘಟಾನುಘಟಿ ನಟರ ಸಂಗಮ. ಕಮಲ್, ವಿಜಯ್ ಸೇತುಪತಿ, ಫಹಾದ್ ಫಾಸಿಲ್, ಕಡೆಯಲ್ಲಿ ಅಬ್ಬರಿಸುವ ಸೂರ್ಯ! ಯಾರನ್ನ ನೋಡೋದು, ಯಾರನ್ನ ಬಿಡೋದು? ಯಾರು ಹೆಚ್ಚಿಲ್ಲ, ಕಡಿಮೆ ಇಲ್ಲ. ಹೀರೋಗಿರಿ ಬ್ಯಾಲೆನ್ಸ್ ಮಾಡಬೇಕಾದ ಅನಿವಾರ್ಯತೆ ಎಲ್ಲೂ ಕಾಣುವುದಿಲ್ಲ. ಇದರಲ್ಲಿರೋದು
ಕ್ಯಾರೆಕ್ಟರುಗಳು ಮತ್ತು ಅದಕ್ಕೆ ನ್ಯಾಯ ಒದಗಿಸಲೇಬೇಕೆಂಬ ಜಿದ್ದು! ಎರಡು: ಕೊಲೆ, ಹೊಡೆದಾಟವೇ ಆದರೂ ಅದರ ಉದ್ದೇಶ, ಕತೆ ಹೇಳುವ ತಂತ್ರ, ಕುತೂಹಲದೊಂದಿದೇ ಸಾಗುವ ನಿರೂಪಣೆ ಅಷ್ಟೇ ಮುಖ್ಯವಾದ ಪಾತ್ರ ವಹಿಸಿದೆ. ಮುಖ್ಯವಾಗಿ ಇಲ್ಲಿ ಕ್ಯಾರೆಕ್ಟರೈಸೇಷನ್ ಎಂಬುದನ್ನು ಚೆನ್ನಾಗಿ ನಿರ್ವಹಿಸಲಾಗಿದೆ. ಸೇತುಪತಿಯ ವಿಚಿತ್ರ ಮ್ಯಾನರಿಸಂನ ಕ್ಯಾರೆಕ್ಟರ್, ಅವನ ನಡಿಗೆ, ಇವುಗಳ ಮೂಲಕ ಮಾಮೂಲಿ ವಿಲನ್ ಪಾತ್ರಕ್ಕೆ ವಿಶೇಷತೆ ತರಲಾಗಿದೆ. ಇಲ್ಲಿನ ಫೈಟಿಂಗ್‍ಗಳು ಕೂಡ ಭಿನ್ನ. ಫಹಾದ್ ಆರಂಭದಲ್ಲಿ ಹೆಚ್ಚೇ ತೆಳ್ಳಗಾಗಿ ಪೇಲವವಾಗಿ ಕಾಣತ್ತಾನೆ. ಆಮೇಲೆ ಸುಧಾರಿಸುತ್ತಾನೆ.

ಸಮಾಜ ಕಂಟಕರ ವಿರುದ್ಧ, ಮಗನನ್ನು ಕಳಕೊಂಡ ತಂದೆಯ ಪರೋಕ್ಷ ಹೋರಾಟ. ಅವನನ್ನು ಕಂಡುಹಿಡಿಯಲು ಬರುವ ಫಹಾದ್, ತಂದೆಯ ಮಿಲಿಟರಿ ಹಿನ್ನೆಲೆ ಕಡೆಗೆ ಎಲ್ಲ ಪಾತ್ರಧಾರಿಗಳೂ ಇವನ ತಂಡದವರೇ ಆಗಿರುವ ಸೀಕ್ವೆನ್ಸುಗಳಲ್ಲಿ ಮಕ್ಕಳಿಗೆ, ಯುವಕರಿಗೆ ಖುಷಿಯಾಗುವ ಅಂಶವಿದೆ. ಮನೆಕೆಲಸದಾಕೆಯ ರೂಪದಲ್ಲಿದ್ದ ಹೆಂಗಸು ಮಾಡುವ ಫೈಟಿಂಗ್ ಮಾತ್ರ ಚಿಂದಿ ಅಂತೀವಲ್ಲ, ಹಾಗಿದೆ. ಒಟ್ಟಾರೆ ಇದು ಭಾವುಕತೆ, ಸಾಮಾಜಿಕ ಕಾಳಜಿ, ಮಾಫಿಯಾ, ಎಲ್ಲದರ ಒಳ್ಳೆಯ ಬ್ಲೆಂಡ್. ಪಕ್ಕಾ ಮನರಂಜನೆ. ಕಮಲ್ ಅಂತೂ ಅಕ್ಷರಶಃ ತೆರೆಯ ಮೇಲೆ ವಿಜೃಂಭಿಸಿಬಿಟ್ಟಿದಾರೆ. ಅವರ ಲುಕ್ಕೇ ಒಂದು ಘರ್ಜನೆಯ ಹಾಗಿದೆ. ಲೋಕೇಶ್ ಕನಕರಾಜ್ ಎಂಬ ನಿರ್ದೇಶಕನನ್ನು ಅಭಿನಂದಿಸಬೇಕು. ಕ್ಲೈಮ್ಯಾಕ್ಸ್ ಪ್ರಕಾರ ‘ವಿಕ್ರಂ’ ಭಾಗ ಎರಡು ಬರಲಿದೆ. ಅಲ್ಲಿ ಕಮಲ್ ಮತ್ತು ಸೂರ್ಯನನ್ನು ತೆರೆಯ ಮೇಲೆ ನೋಡುವುದೇ ಒಂಥರಾ ಪೈಸಾ ವಸೂಲ್.

LEAVE A REPLY

Connect with

Please enter your comment!
Please enter your name here