ಸಿನಿಮಾ ಮಂದಿಗೂ ರಾಜಕೀಯದವರಿಗೂ ವಿವಿಧ ಸ್ಥರದಲ್ಲಿ ಸಂಬಂಧಗಳಿರುವುದು ಗೊತ್ತಿರದ ವಿಚಾರವಲ್ಲ. ದೊಡ್ಡವರ ಆಟದಲ್ಲಿ‌ ಸಿಲುಕಿ ಬಲಿಯಾದ ಸಿನಿ ತಾರೆಯರ ಸುದ್ದಿಯೂ ಹೊಸತಲ್ಲ. ಆದರೆ ಕೀರ್ತಿಯ ತುತ್ತ ತುದಿಗೆ ಏರಿ, ತಿರುಗಿದರೂ ಸುದ್ದಿ, ನಕ್ಕರಂತೂ ಹಬ್ಬ ಎಂಬ ಮಟ್ಟಿಗೆ ಸುದ್ದಿ ಮಾಧ್ಯಮಗಳ ಉಜ್ಜಾಟಕ್ಕೆ ಸಿಲುಕಿ, ಕೊನೆಗೆ ನಿಗೂಢವಾಗಿ ಸಾವಿನ ಮನೆ ಸೇರಿದ ಮೊದಲಿಗಳು ಮರ್ಲಿನ್‌ ಮನ್ರೋ. ಅವಳ ಬದುಕು‌ ಮತ್ತು ಸಾವಿನ ಕುರಿತಾದ ಡಾಕ್ಯುಮೆಂಟರಿ ‘ದ ಮಿಸ್ಟ್ರಿ ಆಫ್ ಮರ್ಲಿನ್‌ ಮನ್ರೋ: ದ ಅನ್ ಹರ್ಡ್ ಟೇಪ್ಸ್’ ನೆಟ್‌‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ಆಕೆ ಅಪೂರ್ವ ಸುಂದರಿ, ಜೀವಂತಿಕೆಯ ಬುಗ್ಗೆ, ಹರೆಯದ ಹುಡುಗರ ಕನಸಿನ ರಾಣಿ, ಅವಳೊಬ್ಬ ಅತ್ಯದ್ಭುತ ‌ಚಿತ್ರನಟಿ, ಅವಳು ಬಣ್ಣದ ಚಿಟ್ಟೆ, ಚಿಟ್ಟೆಯಂತೆಯೇ ಆಯಸ್ಸೂ ಪಾಪ‌ ಅಷ್ಟೇ. ಹಾಲಿವುಡ್‌ನ ಬಣ್ಣದ ಲೋಕವನ್ನು ತನ್ನ ಸುತ್ತಲೇ ಗಿರಗಿರ ಸುತ್ತುವಂತೆ ಮಾಡಿ, ಇಗೋ ಇಲ್ಲೇ ಸ್ವಲ್ಪ ಬಂದೆ ಎಂದು ಹೋದವಳು ಹಾಗೆ ಹೋಗಿಯೇ ಬಿಟ್ಟಳು. ಅವಳು ಮರ್ಲಿನ್‌ ಮನ್ರೋ.

ಮೇಲಿನ ಆ ಸಾಲುಗಳಲ್ಲಿ ಹಾಲಿವುಡ್ ತೆಗೆದು ಬೇರೊಂದು ಚಿತ್ರರಂಗದ ಹೆಸರು ಹಾಕಿ, ಮರ್ಲಿನ್‌ ಮನ್ರೋ ಬದಲು ಮತ್ತೊಂದು ನಟಿಯ ಹೆಸರು ಬರೆದರೆ ಅದು ಅವಳಿಗೂ ಹೊಂದುತ್ತದೆ. ಇದ್ದ ಮೂರು ದಿನದಲ್ಲಿ ಪಟಪಟನೆ ಬಣ್ಣದ ರೆಕ್ಕೆ ಬಡಿದು, ಎಷ್ಟೇ ಹೂವಿಗೆ ಹಾರಿದರೂ ತನ್ನ ಮೇಲೊಮ್ಮೆ ಬಂದು ಕೂರಲಿ ಎಂದು ಹೂವಿಗೂ ಆಸೆ ಹುಟ್ಟಿಸಿ, ನೋಡ ನೋಡುತ್ತಿದ್ದಂತೆಯೇ‌‌ ಮರೆಯಾದ ಅವೆಷ್ಟು ಪಾತರಗಿತ್ತಿಯರನ್ನು ಚಿತ್ರರಂಗ ಕಂಡಿದೆಯೋ! ಆದರೂ ಹೊಸ‌ ಹೊಸ ಪಾತ್ರದಲ್ಲಿ ಮತ್ತೊಂದು ಪಾತರಗಿತ್ತಿ ಬಂದೇ ಬರುತ್ತದೆ, ಆ ಹೊತ್ತಿಗೆ ಅಷ್ಟೇ ಬೆರಗೂ ಮೂಡಿಸುತ್ತದೆ.

ಇತಿಹಾಸದಲ್ಲಿ ಮರ್ಲಿನ್‌ ಮನ್ರೋ ಮುಖ್ಯವಾಗಲು ಒಂದು ಕಾರಣವಿದೆ. ಐವತ್ತರ ದಶಕ ಅಮೆರಿಕದ ಪಾಲಿಗೆ ಸಾಮಾಜಿಕ ಪಲ್ಲಟಕ್ಕೆ ಕಾರಣವಾದ ದಶಕ. ಸಂಬಂಧಗಳ ಕುರಿತು ಅದುವರೆಗೆ ಇದ್ದ ಪಾರಂಪರಿಕ ಕಟ್ಟುಪಾಡು ಮತ್ತು ಮಡಿವಂತಿಕೆಗಳನ್ನು ಮೀರಿ ಮುಕ್ತ ಲೈಂಗಿಕತೆಯ ಸೆಕ್ಷುವಲ್ ರೆವೆಲ್ಯೂಷನ್ ಆರಂಭವಾದದ್ದು ಐವತ್ತರ ದಶಕದಲ್ಲಿ. ಗರ್ಭನಿರೋಧಕಗಳು ಬಂದು, ನಗ್ನತೆಯೆಡೆಗಿನ ಕಟ್ಟುಪಾಡುಗಳು ಸರಿದು, ಗರ್ಭಪಾತ ಕಾನೂನು ಸಮ್ಮತವಾದದ್ದಲ್ಲದೆ ಸಲಿಂಗ ಕಾಮಕ್ಕೆ ಒಪ್ಪಿಗೆ ಸಿಕ್ಕಿದ್ದೂ ಐವತ್ತರ ದಶಕದ ಲೈಂಗಿಕ ಕ್ರಾಂತಿಯ ವೇಳೆಗೆ. ಅದೇ ಸಮಯದಲ್ಲಿ ಬೆಳ್ಳಿತೆರೆಗೆ ಬಂದ ಬೆಳ್ಳಗಿನ ಚೆಲುವೆ ಮರ್ಲಿನ್‌ ಮನ್ರೋ. ಸೆಲೆಬ್ರಿಟಿ ಹೀರೋಯಿನ್‌ಗಳ ಮಟ್ಟಿಗೆ ಆಕೆ ಆದಿಗುರು.

ಆಕೆಯೊಂದು ವೇದಿಕೆಯಲ್ಲಿ ಕಾರ್ಯಕ್ರಮ ನೀಡುತ್ತಾಳೆ ಎಂದರೆ ಸಾಗರೋಪಾದಿಯಲ್ಲಿ ಜನ ಸೇರುತ್ತಿದ್ದರು. ಚಿತ್ರೀಕರಣ ವೇಳೆ ಅವಳನ್ನು ಕಣ್ತುಂಬಿಕೊಳ್ಳಲು, ಅವಳದೊಂದು ಹಸ್ತಾಕ್ಷರ ಪಡೆಯಲು ನೂಕುನುಗ್ಗಲು. ಮರ್ಲಿನ್‌ ಮನ್ರೋಳ ವೈಯಕ್ತಿಕ ಜೀವನವೂ ಬಣ್ಣದ ಬದುಕಿನಷ್ಟೇ ವರ್ಣರಂಜಿತ. ಹಲವು ಉದ್ಯಮಿಗಳು, ನಿರ್ಮಾಪಕರು, ಬರಹಗಾರರ ಜತೆಗಷ್ಟೇ ಅಲ್ಲದೆ ಅಮೆರಿಕ ಅಧ್ಯಕ್ಷ ಜಾನ್ ಕೆನಡಿ ಮತ್ತು ಸಹೋದರರ ಜತೆಗೂ ಅವಳಿಗೆ ತೆರೆ‌ಮರೆಯ ಸಂಬಂಧವಿತ್ತು. ಖಾಸಗಿ ಗೂಢಚಾರರು ಅವಳ ಹಿಂದೆ ಬಿದ್ದಿದ್ದರು. ಹಾಗಾಗಿಯೇ ಅವಳ ಅಕಾಲಿಕ ಸಾವು ಹಲವು ಪ್ರಶ್ನೆಗಳಿಗೆ ಕಾರಣ. ಮರ್ಲಿನ್‌ ಮನ್ರೋ ಸತ್ತು ಇಪ್ಪತ್ತು ವರ್ಷಗಳ ನಂತರವೂ ಆ ಆತ್ಮಹತ್ಯೆ ಪ್ರಕರಣವನ್ನು ನ್ಯಾಯಾಲಯ ಮತ್ತೆ ವಿಚಾರಣೆ ನಡೆಸಿತು. ಅವಳ ಬದುಕಿನ ಈ ಎಲ್ಲಾ ಮಜಲುಗಳನ್ನೂ ಮುಟ್ಟುವ ಡಾಕ್ಯುಮೆಂಟರಿ ‘ದ ಮಿಸ್ಟ್ರಿ ಆಫ್ ಮರ್ಲಿನ್‌ ಮನ್ರೋ: ದ ಅನ್ ಹರ್ಡ್ ಟೇಪ್ಸ್’

ಈ ಸಾಕ್ಷ್ಯಚಿತ್ರದ ವಿಶೇಷವಾಗುವುದು ಅದರ ವಸ್ತುವಿನ ಕಾರಣ ಮಾತ್ರದಿಂದಲ್ಲ. ನಿರೂಪಣೆ ಬೇರೆಲ್ಲಾ ಡಾಕ್ಯುಮೆಂಟರಿಗಿಂತ ವಿಭಿನ್ನವಾಗಿದೆ. ಹೆಸರೇ ಸೂಚಿಸುವಂತೆ ಇದುವರೆಗೂ ಕೇಳದಿದ್ದ ಟೇಪುಗಳ ಸಂಕಲನವಿದು. ಆದರೆ ಧ್ವನಿ ಮಾತ್ರವಿದ್ದರೆ ನೋಡುವವರಿಗೇನೂ ಕೆಲಸವಿಲ್ಲ. ಹಾಗಾಗಿ ನಟ-ನಟಿಯರನ್ನು ಬಳಸಿ, ಆಯಾ ಪಾತ್ರಗಳೇ ಮಾತನಾಡುವಂತೆ ಸನ್ನಿವೇಶವನ್ನು ಮರು ಸೃಷ್ಟಿಸಲಾಗಿದೆ. ಆದಾಗ್ಯೂ ಕೇಳುವ‌ ಧ್ವನಿಗಳೆಲ್ಲ ಮೂಲ ಟೇಪಿನದ್ದೇ.

ಆ ಟೇಪುಗಳದ್ದೇ ಒಂದು ಕತೆ. ಆ್ಯಂಟನಿ ಸಮ್ಮರ್ಸ್ ಎಂಬ ಲೇಖಕ ಅದಕ್ಕಾಗಿ ತನ್ನ ಮೂರು ವರ್ಷಗಳನ್ನು ಸವೆಸಿದ್ದಾನೆ. 1985ರಲ್ಲಿ ಮರ್ಲಿನ್‌ ಮನ್ರೋ ಸಾವಿನ ಕೇಸನ್ನು ಮರು ವಿಚಾರಣೆಗೆ ಒಳಪಡಿಸಲಾಗುತ್ತಿದೆ‌ ಎಂದು ತಿಳಿದಾಗ ಸಮ್ಮರ್ಸ್ ಆ ಬಗೆಗೆ ಒಂದು ಲೇಖನ ಬರೆಯಲು ಅನುವಾಗುತ್ತಾನೆ. ಏಳೆಂಟು ದಿನ ಅದಕ್ಕಾಗಿ ಓಡಾಡಬೇಕಾದೀತು ಎಂದು ಆತ ನಿಶ್ಚಯಿಸಿ ಹೊರಟದ್ದು. ಆದರೆ ಸಾಕ್ಷ್ಯ ಸಂಗ್ರಹಿಸುತ್ತಾ ವಾರ ಎರಡಾಯಿತು, ನಾಲ್ಕಾಯಿತು, ತಿಂಗಳುಗಳು ಉರುಳಿ ಕೊನೆಗೆ ವರ್ಷ ಮೂರಾಯಿತು. ಆ ಮೂರು ವರ್ಷಗಳಲ್ಲಿ ಮರ್ಲಿನ್‌ ಮನ್ರೋ ಆಪ್ತ ವಲಯದಲ್ಲಿ ಇದ್ದವರನ್ನು ಆ್ಯಂಟನಿ‌ ಸಮ್ಮರ್ಸ್ ಮಾತನಾಡಿಸಿ ರೆಕಾರ್ಡು ಮಾಡಿಕೊಂಡ ಕ್ಯಾಸೆಟ್ಟುಗಳು ಬರೋಬ್ಬರಿ 650!

ಮೊದಲಿಗೆ ಈ ಡಾಕ್ಯುಮೆಂಟರಿ ಮರ್ಲಿನ್‌ ಮನ್ರೋಳ ಬದುಕನ್ನು ಕಟ್ಟಿಕೊಡುತ್ತದೆ, ಅವೂ ಟೇಪುಗಳ ಮೂಲಕವೇ. ನಟಿಯಾಗಬೇಕು ಎಂದು ಆಕೆಗಿದ್ದ ಅತೀವ ಹಂಬಲ, ಸಿನಿಲೋಕದ ಪಯಣ, ಅವಳ ಜನಪ್ರಿಯತೆಯ ಅಗಾಧತೆಯನ್ನೆಲ್ಲ ಅವಳ ಸಿನಿ ಬದುಕಿನ ಆರಂಭದ ಒಡನಾಡಿಗಳು, ಜತೆಗೆ ಅಭಿನಯಿಸಿದ ಸಹನಟಿ ಹಾಗೂ ಆಕೆಯ ಸಿನಿಮಾಗಳ ನಿರ್ದೇಶಕನ ಸಂದರ್ಶನ ಕಟ್ಟಿಕೊಡುತ್ತದೆ. ಅವಳು ಸದಾ ಭೇಟಿಯಾಗುತ್ತಿದ್ದ ಮನೋರೋಗ ತಜ್ಞ ಗ್ರೀನ್‌ಸನ್‌ನ ಪತ್ನಿ ಮತ್ತು ಮಕ್ಕಳ ಮೂಲಕ ಮರ್ಲಿನ್‌ಳ ಒಳ ಮನಸ್ಸು ತೆರೆದುಕೊಳ್ಳುತ್ತದೆ. ಅವಳಿಗಿದ್ದ ಅನಾಥ ಪ್ರಜ್ಞೆ, ತನ್ನನ್ನು ಹತ್ತಿರದಿಂದ ಬಲ್ಲವರು ಬೇಕು ಎಂದಿದ್ದ ಹಂಬಲ, ತಾಯಿಯಾಗುವ ಬಯಕೆಗಳಲ್ಲಿ ನಮಗೆ ನಟಿಯ ಅಂತರಂಗ ಪರಿಚಯವಾಗುತ್ತದೆ. ಮೂರು ಬಾರಿ ಮದುವೆಯಾಗಿದ್ದ ಅವಳ ಯಾವ ವೈವಾಹಿಕ ಸಂಬಂಧವೂ ದೀರ್ಘ ಕಾಲ ಬಾಳಲಿಲ್ಲ.

ಮರ್ಲಿನ್‌ ಮನ್ರೋ ಹದಿನಾರಕ್ಕೇ ಆದ ಮೊದಲ ಮದುವೆ ಹದಿನೆಂಟರವರೆಗೆ ಬಾಳಿತಷ್ಟೆ. ಹಾಲಿವುಡ್‌ನಲ್ಲಿ ಜನಪ್ರಿಯತೆಯ ತುತ್ತತುದಿಗೆ ತಲುಪಿದಾಗ ಬೇಸ್ ಬಾಲ್ ಆಟಗಾರ ಜೇಮ್ಸ್ ಡಿ’ಮಾಗ್ಗಿಯೋ ಜತೆಗಿನ ವೈವಾಹಿಕ ಸಂಬಂಧ ಹನಿಮೂನಿಗಷ್ಟೇ ಮೀಸಲು. ರೈಲು ನಿಲ್ದಾಣದಲ್ಲಿ ಗಾಳಿಗೆ ಆಕೆಯ ಸ್ಕರ್ಟ್ ಹಾರುವ ಸಾರ್ವಕಾಲಿಕ ಜನಪ್ರಿಯ ಪೋಟೋ ಆ ವಿವಾಹದ ಗೋಪುರ ಕೆಡವಿತ್ತು. ‘ಸೆವೆನ್ ಇಯರ್ ಇಚ್’ ಸಿನಿಮಾದ ಚಿತ್ರೀಕರಣದ ಆ ಸಂದರ್ಭವನ್ನು ಡಾಕ್ಯುಮೆಂಟರಿಯಲ್ಲಿ ಅವಳ ಕೇಶ ವಿನ್ಯಾಸಗಾರ್ತಿ ಕಟ್ಟಿಕೊಡುತ್ತಾಳೆ. ಆ ರಾತ್ರಿ ಮರ್ಲಿನ್‌ ಮನ್ರೋ ಮತ್ತು ಜೇಮ್ಸ್ ನಡುವೆ ಹೊಯ್ ಕೈ ನಡೆದು ಮೈ ಮೇಲೆ ಗಾಯದ ಗುರುತುಗಳಾಗಿದ್ದವಂತೆ. ಮರುದಿನ ಮೇಕಪ್‌ನಲ್ಲಿ ಅದನ್ನು ಸರಿಮಾಡಿ ಶೂಟಿಂಗ್ ನಡೆಸಿದೆವು ಎಂದು ಅವಳು ಹೇಳುವುದನ್ನು ಕೇಳಲು ತುಸು ಕಷ್ಟವಾಗುತ್ತದೆ. ಮರ್ಲಿನ್‌ ಮನ್ರೋ ವೈವಾಹಿಕ ಜೀವನ ಪಂಚವಾರ್ಷಿಕ ಯೋಜನೆಯಾಗಿ ಯಶಸ್ವಿಯಾದುದು ಸಾಹಿತಿ ಆರ್ಥರ್ ಮಿಲ್ಲರ್ ಜತೆಗೆ ಮಾತ್ರ. 1961 ಆ ವಿವಾಹವೂ ಮುರಿದುಬಿತ್ತು. 1962ರ ನಂತರ ಮರ್ಲಿನ್‌ ಮನ್ರೋಳೇ ಉಳಿಯಲಿಲ್ಲ.

ಆಕೆಯ ಸಾವಿನ ಹಿಂದೆ ಹಲವು ಪ್ರಶ್ನೆಗಳಿವೆ. ಅದಕ್ಕೆ ಕಾರಣ ಪ್ರೆಝ್ ಮತ್ತು ಜನರಲ್ ಎಂಬ ಅವಳ ಬಾಯ್‌ಫ್ರೆಂಡುಗಳು. ಫ್ರೆಝ್ ಎಂದು ಆಕೆ ಕರೆಯುತ್ತಿದ್ದದ್ದು ಅಮೆರಿಕದ ಪ್ರೆಸಿಡೆಂಟ್ ಜಾನ್ ಎಫ್ ಕೆನೆಡಿಯಾದರೆ, ಜನರಲ್ ಎಂದು ಕರೆಸಿಕೊಳ್ಳುತ್ತಿದ್ದವ ಅಟಾರ್ನಿ ಜನರಲ್ ರಾಬರ್ಟ್ ಎಫ್ ಕೆನೆಡಿ. ಮರ್ಲಿನ್‌ ಮನ್ರೋ ಜತೆ ಕೆನಡಿ ಸಹೋದರರು ಮುಕ್ತ ಸಂಬಂಧ ಇರಿಸಿಕೊಂಡಿದ್ದ ವಿಚಾರ ರಹಸ್ಯವೇನಲ್ಲ. ಅವರ ಸಂಬಂಧದ ನಡುವೆ ಬಿರುಕು ಉಂಟಾದದ್ದು ಅಮೆರಿಕ-ರಷ್ಯಾ‌ ಶೀತಲ ಸಮರದ ಪರಾಕಾಷ್ಠೆಯ ಸಂದರ್ಭದಲ್ಲಿ. ಮನ್ರೋ ಜತೆಗೆ ಕುಶಲೋಪರಿಯ ಮಾತುಕತೆ ವೇಳೆ ಜಾನ್ ಕೆನಡಿ ಹಂಚಿಕೊಂಡಿದ್ದ ಅಣ್ವಸ್ತ್ರ ಬಗೆಗಿನ ವಿವರಗಳು ಹೊರಬಿದ್ದರೆ ಸರ್ಕಾರದ ಪ್ರತಿಷ್ಠೆಗೆ ಧಕ್ಕೆ ಬರಬಹುದು ಎಂದು ಎಫ್‌ಬಿಐ ಅಧಿಕಾರಿ ಉಲ್ಲೇಖಿಸಿದ ದಾಖಲೆಯನ್ನು ಆಂಟನಿ ಸಮ್ಮರ್ಸ್ ವೀಕ್ಷಕರ ಮುಂದೆ ಇಡುತ್ತಾರೆ.

ಆ ವಿಚಾರ ಬಹು ಮುಖ್ಯವಾಗುವುದು ಮರ್ಲಿನ್‌ ಮನ್ರೋಳ ಎಡಪಂಥೀಯ ಸಿದ್ಧಾಂತಗಳ ಕಡೆಗಿನ ಒಲವಿನ ಕಾರಣದಿಂದ. ಮನ್ರೋ ಮತ್ತು ಆಕೆಯ ಕೊನೆಯ ಗಂಡ ಆರ್ಥರ್ ಮಿಲ್ಲರ್‌ಗೆ ಕಮ್ಯುನಿಸ್ಟ್ ಒಲವು ಹಚ್ಚಿದ್ದ ಕಾರಣ ಎಡಪಂಥೀಯ ರಾಜಕಾರಣಿಗಳ ಸಂಪರ್ಕವೂ ಅಧಿಕವೇ ಇತ್ತು. ಕ್ಯೂಬಾದ ಕ್ಷಿಪಣಿ ಬಿಕ್ಕಟ್ಟಿನ ವೇಳೆಗೆ ಮನ್ರೋಗೆ ಕೆನಡಿ ಮೂಲಕ ತಿಳಿದಿದ್ದ ಮಾಹಿತಿ ಅತಿ ಸೂಕ್ಷ್ಮವಾದದ್ದು ಎಂದು ಹೇಳಲಾಗುತ್ತದೆ. ಅವಳ ಸಾವಿನ ದಿನ ಎಫ್‌ಬಿಐ ಏಜೆಂಟರು ಸ್ಥಳದಲ್ಲಿದ್ದರು ಎಂಬ ಮಾಹಿತಿ ಮನ್ರೋಳ ಪರಿಚಾರಕಿ ನೀಡುತ್ತಾಳೆ. ಆಗಸ್ಟ್ 15 1962ರ ಮುಂಜಾನೆ ಮರ್ಲಿನ್‌ ಮನ್ರೋ ಶವವಾಗಿ ಪತ್ತೆಯಾದಳು ಎಂದು ಅಧಿಕೃತ ದಾಖಲೆಗಳು ಹೇಳುತ್ತವೆ. ಅವಳು ಆಗಸ್ಟ್ ನಾಲ್ಕರ ರಾತ್ರಿಯೇ ಜೀವನ್ಮರಣದ ಸ್ಥಿತಿಯಲ್ಲಿದ್ದಳು, ಮತ್ತು ಆ್ಯಂಬುಲೆನ್ಸ್‌ನಲ್ಲಿ ದಾರಿ‌ ಮಧ್ಯೆ ಕೊನೆಯುಸಿರೆಳೆದಳು ಎಂಬ ಮಾಹಿತಿಯನ್ನು ಡಾಕ್ಯುಮೆಂಟರಿಯಲ್ಲಿ ಆ್ಯಂಬುಲೆನ್ಸ್ ಚಾಲಕ ನೀಡುತ್ತಾ‌ನೆ.

ಸಿನಿಮಾ ಮಂದಿಗೂ ರಾಜಕೀಯದವರಿಗೂ ವಿವಿಧ ಸ್ಥರದಲ್ಲಿ ಸಂಬಂಧಗಳಿರುವುದು ನಮಗೆ ಹೊಸತಲ್ಲ. ದೊಡ್ಡವರ ಆಟದಲ್ಲಿ‌ ಸಿಲುಕಿ ಬಲಿಯಾದ ಸಿನಿ ತಾರೆಯರೂ ನಮ್ಮಲ್ಲಿದ್ದಾರೆ. ಆದರೆ ಕೀರ್ತಿಯ ತುತ್ತ ತುದಿಗೆ ಏರಿ, ತಿರುಗಿದರೂ ಸುದ್ದಿ, ನಕ್ಕರೆ ಹಬ್ಬ ಎಂಬ ಮಟ್ಟಿಗೆ ಸುದ್ದಿ ಮಾಧ್ಯಮಗಳ ಉಜ್ಜಾಟಕ್ಕೆ ಸಿಲುಕಿ, ನಿಗೂಢವಾಗಿ ಸಾವಿನ ಮನೆ ಸೇರಿದ ಮೊದಲಿಗಳು ಮರ್ಲಿನ್‌ ಮನ್ರೋ.

LEAVE A REPLY

Connect with

Please enter your comment!
Please enter your name here