ಜಾಹೀರಾತು ನಿರ್ದೇಶಕ ರಾಜೇಶ್ ರಾಮಸ್ವಾಮಿ ಹದಿನೇಳು ನಿಮಿಷಗಳ ‘ಇರುವೆ’ ಕಿರುಚಿತ್ರ ನಿರ್ದೇಶಿಸಿದ್ದಾರೆ. ದತ್ತಣ್ಣ ಮತ್ತು ಮಹಾಂತೇಶ್ ಪ್ರಮುಕ ಪಾತ್ರಗಳಲ್ಲಿ ನಟಿಸಿರುವ ಇದು ಕೆಂಪು ಇರುವೆಗಳು ಸುತ್ತ ಸಾಗುವ ಕಥೆ. ‘ದಿ ಸ್ಕ್ರಿಪ್ಟ್ ರೂಮ್’ನ ಚೊಚ್ಚಲ ನಿರ್ಮಾಣ.
‘ನಾನು ಮಾಲ್ಗುಡಿ ಡೇಸ್ ಸರಣಿಯ ದೊಡ್ಡ ಅಭಿಮಾನಿ. ಆರ್ ಕೆ ನಾರಾಯಣ್ ಅವರ ಕತೆಗಳನ್ನು ಶಂಕರ್‌ನಾಗ್ ಅವರು ಅಳವಡಿಸಿರುವ ರೀತಿ ನನ್ನನ್ನು ಪ್ರಭಾವಿಸಿದೆ. ಸಾಮಾನ್ಯ ಜನರ ಸರಳ ನಿರೂಪಣಾ ಶೈಲಿ, ಸೂಕ್ಷ್ಮವಾದ ಅವಲೋಕನವನ್ನು ಆನಂದಿಸುತ್ತೇನೆ. ನನ್ನ ಕಿರುಚಿತ್ರಕ್ಕೆ ಈ ಸರಣಿಗಳೇ ಪ್ರೇರಣೆ. ಸರಳವಾಗಿ ಹೇಳುವುದಾದರೆ, ಇದು ಸಾಮಾನ್ಯ ಜನರ ಅಸಾಮಾನ್ಯ ಕಥೆ’ ಎನ್ನುತ್ತಾರೆ ‘ಇರುವೆ’ ಕಿರುಚಿತ್ರದ ನಿರ್ದೇಶಕ ರಾಜೇಶ್ ರಾಮಸ್ವಾಮಿ. ಅವರು ನಿರ್ದೇಶಿಸಿರುವ ಹದಿನೇಳು ನಿಮಿಷಗಳ ಈ ಕಿರುಚಿತ್ರ ಇದೀಗ ನೋಡುಗರಿಗೆ ಲಭ್ಯವಿದೆ. ಈ ಕಿರುಚಿತ್ರದ ಪ್ರಮುಖ ಪಾತ್ರಗಳಲ್ಲಿ ದತ್ತಣ್ಣ ಮತ್ತು ಮಹಾಂತೇಶ್ ನಟಿಸಿದ್ದಾರೆ. ಪ್ರಕಾಶ್ ತುಮಿನಾಡ್, ರೋಹಿತ್ ಶ್ರೀನಾಥ್, ಸೋನು ವೇಣುಗೋಪಾಲ್ ಮತ್ತು ಅನಿರುದ್ಧ್ ಆಚಾರ್ಯ ಇತರೆ ಕಲಾವಿದರು.
ಇರುವೆ 70 ವರ್ಷ ವಯಸ್ಸಿನ ಗೋವಿಂದಯ್ಯನವರ ಕುರಿತಾದ್ದು. ಅವರ ಮನೆಯಲ್ಲಿನ ಕೆಂಪು ಇರುವೆಗಳು ಸುತ್ತ ಸಾಗುವ ಕಥೆ. ಇದು ದಿ ಸ್ಕ್ರಿಪ್ಟ್ ರೂಮ್‌ನ ಚೊಚ್ಚಲ ನಿರ್ಮಾಣ. ಇರುವೆ ಕಿರುಚಿತ್ರದ ಬಗ್ಗೆ ಮಾತನಾಡುವ ರಾಜೇಶ್ ರಾಮಸ್ವಾಮಿ, ‘ನಾವು ಮೊದಲ ಬಾರಿಗೆ ಕಥೆಯೊಂದಿಗೆ ದತ್ತಣ್ಣ ಅವರನ್ನು ಸಂಪರ್ಕಿಸಿದಾಗ, ಅವರು ‘ನನಗೆ ಕತೆ ಇಷ್ಟವಾಯಿತು. ಆದರೆ ಈ ಸಿನಿಮಾ ಮಾಡಲು ನಿಮ್ಮ ಮುಖ್ಯ ಉದ್ದೇಶ ಯಾವುದು? ಎಂದಿದ್ದರು. ಅವರ ಈ ಪ್ರಶ್ನೆ ನನ್ನನ್ನೂ ಕಾಡಲು ಪ್ರಾರಂಭವಾಯ್ತು. ಆದರೆ ಪ್ರಾಮಾಣಿಕವಾಗಿ ಉತ್ತರಿಸಿ, ತಮಾಷೆಗಾಗಿ ಎಂದು ಉತ್ತರಿಸಿದ್ದೆ. ಇದು ಖಂಡಿತಾ ಹೌದು. ನಾವು ಅದನ್ನು ಶೂಟ್ ಮಾಡುವಾಗ ಬಹಳಷ್ಟು ಆನಂದಿಸಿದ್ದೇವೆ’ ಎನ್ನುತ್ತಾರೆ. ‘ಇರುವೆ’ ಕಿರುಚಿತ್ರವನ್ನು ಅವರು ತಮ್ಮ The Script Room ಯೂಟ್ಯೂಬ್ ಚಾನೆಲ್‌ನಲ್ಲಿ ರಿಲೀಸ್ ಮಾಡಿದ್ದಾರೆ.