ಸೂರ್ಯ ನಟಿಸಿ, ನಿರ್ಮಿಸಿರುವ ‘ಜೈ ಭೀಮ್’ ತಮಿಳು/ತೆಲುಗು ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ತೊಂಬತ್ತರ ದಶಕದ ನೈಜ ಘಟನೆಯೊದನ್ನು ಆಧರಿಸಿದ ಚಿತ್ರವಿದು. ನವೆಂಬರ್ 2ರಂದು ಅಮೇಜಾನ್ ಪ್ರೈಮ್ನಲ್ಲಿ ಸಿನಿಮಾ ಸ್ಟ್ರೀಮ್ ಆಗಲಿದೆ.
“ಇಂತಹ ಕತೆಗಳು ಸಮಾಜದಲ್ಲಿ ಬದಲಾವಣೆ ತರುತ್ತವೆ. ಈ ಸಿನಿಮಾ ನನ್ನ ಹೃದಯಕ್ಕೆ ಆಪ್ತವಾದುದು” ಎನ್ನುವ ಸಂದೇಶದೊಂದಿಗೆ ನಟ ಸೂರ್ಯ ‘ಜೈ ಭೀಮ್’ ಟೀಸರ್ ಟ್ವೀಟ್ ಮಾಡಿದ್ದಾರೆ. ತೊಂಬತ್ತರ ದಶಕದ ನೈಜ ಘಟನೆಯೊಂದರ ಪ್ರೇರಣೆ ಈ ಚಿತ್ರಕ್ಕಿದೆ ಎನ್ನಲಾಗಿದೆ. ತನಗಾದ ಅವಮಾನವನ್ನು ನಿರ್ಭಿಡೆಯಿಂದ ಹೇಳಿಕೊಳ್ಳುವಂತೆ ಅಸಹಾಯಕ ಮಹಿಳೆಗೆ ಸೂರ್ಯ ಹೇಳುವ ವಾಯ್ಸ್ ಓವರ್ನೊಂದಿಗೆ ಟೀಸರ್ ಶುರುವಾಗುತ್ತದೆ. ನಿರ್ದೇಶಕ ಟಿ.ಜೆ.ಜ್ಞಾನವೇಲ್ ಅವರು ಕೂಡ ಯಾವುದೇ ಉತ್ಪ್ರೇಕ್ಷೆಯಿಲ್ಲದ ನೈಜ ಘಟನೆಯನ್ನು ನಿರೂಪಿಸುವುದಾಗಿ ಹೇಳಿದ್ದರು. ಟೀಸರ್ ಅವರ ಉದ್ದೇಶವನ್ನು ಸಾಕ್ಷೀಕರಿಸುವಂತಿದೆ.
ಆದಿವಾಸಿ ಮಹಿಳೆಯೊಬ್ಬರಿಗೆ ನ್ಯಾಯ ಕೊಡಿಸುವ ಸಲುವಾಗಿ ವಕೀಲನ ಪಾತ್ರದ ಹೀರೋ ಸರ್ಕಾರವನ್ನು ಕೋರ್ಟ್ಗೆ ಎಳೆಯುವ ಸನ್ನಿವೇಶ ಕಾಣಿಸುತ್ತದೆ. ಆದಿವಾಸಿ ಸಮುದಾಯದ ವಿರುದ್ಧದ ಇಂತಹ ಹಲವು ಪ್ರಕರಣಗಳು ಬೆಳಕಿಗೆ ಬರುತ್ತವೆ. ಮೇಲ್ನೋಟಕ್ಕೆ ಅನುಕಂಪ ಸೂಚಿಸುವುದಕ್ಕೆ ಸೀಮಿತನಾಗದೆ ನಾಯಕನಟ ದಿಟ್ಟ ಹೋರಾಟ ನಡೆಸುತ್ತಾನೆ. ಈ ಸಿನಿಮಾ ಹೈವೋಲ್ಟೇಜ್ ಸೋಷಿಯಲ್ ಮತ್ತು ಪೊಲಿಟಿಕಲ್ ಡ್ರಾಮಾ ಆಗಿ ತೋರುತ್ತದೆ. ಪ್ರಮುಖ ಪಾತ್ರಗಳಲ್ಲಿ ರಜೀಶಾ ವಿಜಯನ್ ಮತ್ತು ಪ್ರಕಾಶ್ ರೈ ಪಾತ್ರಗಳ ಪರಿಚಯವೂ ಸಿಗುತ್ತದೆ. ಚಿತ್ರದ ನಿರ್ಮಾಪಕರೂ ಆದ ಸೂರ್ಯ ತಮ್ಮ 2D ಎಂಟರ್ಟೇನ್ಮೆಂಟ್ ಬ್ಯಾನರ್ನಡಿ ಸಿನಿಮಾ ನಿರ್ಮಿಸಿದ್ದಾರೆ. ನವೆಂಬರ್ 2ರಂದು ಸಿನಿಮಾ ಅಮೇಜಾನ್ ಪ್ರೈಂನಲ್ಲಿ ಸ್ಟ್ರೀಮ್ ಆಗಲಿದೆ.










