ಸೂರಿ ನಿರ್ದೇಶನದ ಬಹುನಿರೀಕ್ಷಿತ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ‘ಅಮರ್‌’ ನಂತರ ಅಭಿಷೇಕ್‌ ಅಂಬರೀಶ್‌ ತೆರೆಗೆ ಮರಳುತ್ತಿರುವ ಚಿತ್ರವಿದು. ನಟ ದರ್ಶನ್‌ ಟ್ರೇಲರ್‌ ರಿಲೀಸ್‌ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಇದೇ ನವೆಂಬರ್‌ 24ರಂದು ಸಿನಿಮಾ ಬಿಡುಗಡೆಯಾಗುತ್ತಿದೆ.

ಅಭಿಷೇಕ್ ಅಂಬರೀಶ್ ಮತ್ತು ರಚಿತಾ ರಾಮ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಬ್ಯಾಡ್ ಮ್ಯಾನರ್ಸ್’ ಚಿತ್ರದ ಟ್ರೇಲರ್ ದರ್ಶನ್ ಅವರಿಂದ ಬಿಡುಗಡೆಯಾಗಿದೆ. ‘ದುನಿಯಾ’ ಸೂರಿ ನಿರ್ದೇಶನದ ಬಹುನಿರೀಕ್ಷಿತ ಚಿತ್ರವಿದು. ಸಮಾರಂಭದಲ್ಲಿ ಸುಮಲತಾ ಅಂಬರೀಶ್, ರಾಕ್‌ಲೈನ್ ವೆಂಕಟೇಶ್, ಅವಿವಾ ಅಭಿಷೇಕ್, ವಿನೋದ್ ಪ್ರಭಾಕರ್, ವಿಕ್ರಮ್ ರವಿಚಂದ್ರನ್, ಧನ್ವೀರ್ ಭಾಗವಹಿಸಿ ಚಿತ್ರಕ್ಕೆ ಶುಭ ಕೋರಿದರು. ಟ್ರೇಲರ್‌ ಬಿಡುಗಡೆ ಮಾಡಿ ಮಾತನಾಡಿದ ದರ್ಶನ್‌, ‘ನೀವೆಲ್ಲಾ ಟ್ರೇಲರ್ ನೋಡಿದ್ದೀರಿ. ನಾನು ಸಿನಿಮಾ ನೋಡಿದ್ದೇನೆ. ಸೂರಿ ಅವರ ನಿರ್ದೇಶನದಲ್ಲಿ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಅಭಿಷೇಕ್ ಬಹಳ ಮುದ್ದಾಗಿ ಕಾಣುತ್ತಾರೆ’ ಎಂದರು.

‘ಈ ಸಂದರ್ಭದಲ್ಲಿ ನಾನು ಅಂಬರೀಶ್ ಹಾಗೂ ಪುನೀತ್ ರಾಜಕುಮಾರ್ ಅವರನ್ನು ನೆನಪಿಸಿಕೊಳ್ಳುತ್ತೇನೆ. ನಮ್ಮ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ದರ್ಶನ್ ಅವರಿಗೆ ಧನ್ಯವಾದ. ನನ್ನ ಚಿತ್ರತಂಡದ ಸಹಕಾರದಿಂದ ಈ ಚಿತ್ರ ಚೆನ್ನಾಗಿ ಬಂದಿದೆ. ಅಭಿಷೇಕ್ ಅವರ ಪಾತ್ರ ಚಿತ್ರದಲ್ಲಿ ವಿಭಿನ್ನವಾಗಿದೆ’ ಎಂದರು ನಿರ್ದೇಶಕ ಸೂರಿ. ನಟ ಅಭಿಷೇಕ್‌ ಅಂಬರೀಶ್‌ ತಮ್ಮ ಸಿನಿಮಾ ಕುರಿತು ಮಾತನಾಡಿ, ‘ಬ್ಯಾಡ್ ಮಾನರ್ಸ್ ನನ್ನ ಅಭಿನಯದ ಎರಡನೇ ಚಿತ್ರ. ನಿರ್ಮಾಪಕ ಸುಧೀರ್, ನಿರ್ದೇಶಕ ಸೂರಿ ಅವರಿಗೆ ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ನನ್ನ ಅಣ್ಣ ದರ್ಶನ್ ಅವರಿಗೆ ಹಾಗೂ ಅಗಮಿಸಿರುವ ಪ್ರತಿಯೊಬ್ಬ ಸ್ನೇಹಿತರಿಗೆ ಈ ಸಂದರ್ಭದಲ್ಲಿ ಧನ್ಯವಾದ ತಿಳಿಸುತ್ತೇನೆ’ ಎಂದರು. ಕೆ ಎಂ ಸುಧೀರ್‌ ನಿರ್ಮಾಣದ ಚತ್ರದಲ್ಲಿ ತಾರಾ, ದತ್ತಣ್ಣ, ಶರತ್ ಲೋಹಿತಾಶ್ವ, ಕುರಿ ಪ್ರತಾಪ್, ಮಿತ್ರ, ಮೋಹನ್ ಜುನೇಜಾ, ಅರಸು, ಬ್ಯಾಂಕಾಕ್ ದಿಲೀಪ್, ತಾವರೆಕೆರೆ ರಘು, ರೋಚಿತ್, ತ್ರಿವಿಕ್ರಮ್, ಕಾರ್ತಿ ಸೌಂದರಂ, ಪ್ರಿಯಾಂಕಾ ಕುಮಾರ್, ಸಚ್ಚಿದಾನಂದ್, ಬಿ ಆರ್ ಶ್ರೀನಿವಾಸ, ಪೂರ್ಣಚಂದ್ರ ಮೈಸೂರು, ರಾಜು ಹಿರೇಮಠ, ವಿಜಯ್ ಬೆಳಗಾಂ, ಪಂಕಜ್ ಬಾಬು ಮುಂತಾದವರು ಅಭಿನಯಿಸಿದ್ದಾರೆ.

LEAVE A REPLY

Connect with

Please enter your comment!
Please enter your name here