ಪ್ರೇಮಕಥೆಗಳಲ್ಲಿನ ಸಾಹಿತಿ ಜಯಂತ್ ಕಾಯ್ಕಿಣಿ ಗೀತೆಗಳು ಮುದನೀಡುತ್ತವೆ. ‘ಚಿಗುರಿದ ಕನಸು’ ಚಿತ್ರದಿಂದ ಶುರುವಾದ ಅವರ ಬರವಣಿಗೆಯ ಝರಿ ‘ಮುಂಗಾರು ಮಳೆ’ ಸುರಿಸಿದ ದಿನದಿಂದಲೂ ಕನ್ನಡಿಗರು ಆಲಿಸಿ ಆನಂದಿಸುತ್ತಿದ್ದಾರೆ. ಈಗ ಕಾಯ್ಕಿಣಿ ರಚಿತ ಮತ್ತೊಂದು ಲವ್ ಸಾಂಗ್ ಪ್ರೇಕ್ಷಕರ ಮನಸೂರೆಗೊಳ್ಳಲು ರೆಡಿಯಾಗಿದೆ.

ಜಯಂತ್ ಕಾಯ್ಕಿಣಿ ಅವರು ಬರೆದ ‘ಪ್ರೇಮಕ್ಕೆ ಕಣ್ಣಿಲ್ಲ’ ಎಂಬ ಹಾಡನ್ನು ಈಗ ‘ಸಖತ್’ ಚಿತ್ರತಂಡ ಬಿಡುಗಡೆ ಮಾಡಿದೆ. ನಿರ್ದೇಶಕ ಸಿಂಪಲ್ ಸುನಿ, ಗೋಲ್ಡನ್ ಸ್ಟಾರ್ ಗಣೇಶ್ ಕಾಂಬಿನೇಶನ್‌ನಲ್ಲಿ ಬರುತ್ತಿರುವ ಎರಡನೇ ಸಿನಿಮಾ ‘ಸಖತ್’. ಈ ಮುಂಚೆ ‘ಚಮಕ್’ ಸಿನಿಮಾ ಮಾಡಿ ಸುನಿ ಮತ್ತು ಗಣೇಶ್ ಯಶಸ್ಸು ಕಂಡಿದ್ದರು. ಹಾಗಾಗಿ ಈಗ ‘ಸಖತ್’ ಚಿತ್ರದಲ್ಲಿ ಅವರ ಕಾಂಬೇನೇಷನ್ ಮತ್ತೆ ಮುಂದುವರಿದಿದೆ. ಟೈಟಲ್‌ನಂತೆ ಸಖತ್ ನಿರೀಕ್ಷೆ ಹುಟ್ಟು ಹಾಕಿರುವ ಸಿನಿಮಾ ‘ಸಖತ್’. ಸದ್ಯಕ್ಕೆ ಚಿತ್ರದ ಪ್ರಚಾರ ಕಾರ್ಯ ಆರಂಭಿಸಿರುವ ಚಿತ್ರತಂಡ ಮೊದಲ ಹಾಡು ‘ಪ್ರೇಮಕ್ಕೆ ಕಣ್ಣಿಲ್ಲ’ ಬಿಡುಗಡೆ ಮಾಡಿದೆ. ಜ್ಯೂಡಾ ಸ್ಯಾಂಡಿ ಸಂಗೀತ ಸಂಯೋಜನೆಯ ಈ ಗೀತೆಗೆ ಪಂಚಮ್‌ ಜೀವ ಮತ್ತು ಶ್ರೇಯಾ ಅಯ್ಯರ್ ಧ್ವನಿಯಾಗಿದ್ದಾರೆ.

ರೊಮ್ಯಾಂಟಿಕ್ ಕಾಮಿಡಿ ಜೊತೆ ಥ್ರಿಲ್ಲರ್ ಅಂಶವನ್ನೊಳಗೊಂಡ ‘ಸಖತ್’. ಟೀವಿ ರಿಯಾಲಿಟಿ ಶೋ ಹಾಗೂ ಕೋರ್ಟ್ ಕೇಸ್ ಸುತ್ತ ಸಿನಿಮಾ ಕಥೆ ಹೆಣೆಯಲಾಗಿದೆ. ಇಲ್ಲಿವರೆಗೆ ಭಿನ್ನ ಪಾತ್ರಗಳ ಮೂಲಕ ರಂಜಿಸುತ್ತಿದ್ದ ಗೋಲ್ಡನ್ ಸ್ಟಾರ್  ಈ ಚಿತ್ರದಲ್ಲಿ ಚಾಲೆಂಜಿಂಗ್ ರೋಲ್‌ನಲ್ಲಿ ಅಭಿನಯಿಸುತ್ತಿದ್ದಾರಂತೆ. ಅಂಧ ಗಾಯಕನ ಪಾತ್ರಕ್ಕೆ ಜೀವ ತುಂಬಿರುವ ಗೋಲ್ಡನ್ ಸ್ಟಾರ್ ಈ ಚಿತ್ರದಲ್ಲಿ ರಿಯಾಲಿಟಿ ಶೋ ಸ್ವರ್ಧಿಯಾಗಿ ಕಾಣಸಿಗಲಿದ್ದಾರೆ. ನಿಶ್ವಿಕಾ ನಾಯ್ಡು ಹಾಗೂ ಹೊಸ ಪ್ರತಿಭೆ ಸುರಭಿ ಚಿತ್ರದಲ್ಲಿ ನಾಯಕಿಯರಾಗಿ ನಟಿಸಿದ್ದಾರೆ. ಚಿತ್ರಕ್ಕೆ ನಿಶಾ ವೆಂಕಟ್ ಕೋನನ್ಕಿ, ‘ಭರಾಟೆ’ ಸಿನಿಮಾ ಖ್ಯಾತಿಯ ಸುಪ್ರೀತ್ ಬಂಡವಾಳ ಹೂಡಿದ್ದು, ಜ್ಯೂಡಾ ಸ್ಯಾಂಡಿ ಸಂಗೀತ ನಿರ್ದೇಶನ, ಸಂತೋಷ್ ರೈ ಪಾತಾಜೆ ಛಾಯಾಗ್ರಹಣವಿದೆ. ಚಿತ್ರೀಕರಣ ಕಂಪ್ಲೀಟ್ ಮಾಡಿ ಪೋಸ್ಟ್ ಪ್ರೊಡಕ್ಷನ್ ಕೆಲಸಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಪ್ರಚಾರ ಕಾರ್ಯ ಆರಂಭಿಸಿದೆ. ನವೆಂಬರ್ ಅಂತ್ಯದಲ್ಲಿ ಸಿನಿಮಾ ತೆರೆಗೆ ಬರಲಿದೆ.

Previous articleತಿಳಿಯಾದ ‘ಕೋಟಿಗೊಬ್ಬ 3’ ಸಮಸ್ಯೆ, ನಾಳೆ ಬಿಡುಗಡೆ; ಸುದೀಪ್ ವೀಡಿಯೋ ಟ್ವೀಟ್
Next articleಎಷ್ಟೋ ಜನ ನಡೆದಿರುವ ಅದೇ ಹಾದಿ; ಆದಿ ಎಲ್ಲೋ, ಅಂತ್ಯ ಎಲ್ಲೋ

LEAVE A REPLY

Connect with

Please enter your comment!
Please enter your name here