ವಿತರಕರು ಮತ್ತು ನಿರ್ಮಾಪಕರ ಮಧ್ಯೆಯ ತೊಡಕಿನಿಂದಾಗಿ ‘ಕೋಟಿಗೊಬ್ಬ 3’ ಬಿಡುಗಡೆಗೆ ಇಂದು ಅಡ್ಡಿಯಾಗಿತ್ತು. ಇದೀಗ ಸಮಸ್ಯೆ ಬಗೆಹರಿದಿದ್ದು, ನಾಳೆ ಸಿನಿಮಾ ಬಿಡುಗಡೆಯಾಗಲಿದೆ.

‘ಕೋಟಿಗೊಬ್ಬ 3’ ಬಿಡುಗಡೆಗೆ ತೊಡಕಾಗಿದ್ದ ಚಿತ್ರದ ವಿತರಕರೇ ಬದಲಾಗಿದ್ದಾರೆ. ಚಿತ್ರದ ಹೀರೋ ಸುದೀಪ್‌ ಮಧ್ಯಸ್ಥಿಕೆ ವಹಿಸಿ ಸಮಸ್ಯೆಗಳನ್ನು ತಿಳಿಗೊಳಿಸಿದ್ದು, ಸಿನಿಮಾ ಬಿಡುಗಡೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಚಿತ್ರದ ನಿರ್ಮಾಪಕರು ಹಾಗೂ ವಿತರಕರ ಮಧ್ಯೆಯ ಹಣಕಾಸಿನ ವ್ಯವಹಾರದಲ್ಲಿನ ಏರುಪೇರಿನಿಂದಾಗಿ ಇಂದು ‘ಕೋಟಿಗೊಬ್ಬ 3’ ಸಿನಿಮಾ ಬಿಡುಗಡೆಯಾಗದೆ ಅಭಿಮಾನಿಗಳಿಗೆ ನಿರಾಸೆಯಾಗಿತ್ತು. ಮತ್ತೊಂದೆಡೆ ದೊಡ್ಡ ಚಿತ್ರವನ್ನು ತಮ್ಮ ಥಿಯೇಟರ್‌ನಲ್ಲಿ ಹಾಕಿದ್ದ ಥಿಯೇಟರ್ ಮಾಲೀಕರು ನೊಂದುಕೊಂಡಿದ್ದರು. ಕೋವಿಡ್‌ ನಂತರದ ದಿನಗಳಲ್ಲಿ ಚಿತ್ರರಂಗದಲ್ಲಿನ ಈ ಬೆಳವಣಿಗೆ ಸ್ಯಾಂಡಲ್‌ವುಡ್‌ಗೆ ಅಚ್ಚರಿ ತಂದಿತ್ತು.

ಇದೀಗ ಸುದೀಪ್ ಮಧ್ಯಪ್ರವೇಶದಿಂದ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ಫೈನಾನ್ಶಿಯರ್‌ಗೆ ಸಂದಾಯವಾಗಬೇಕಿದ್ದ ಹಣ ಚುಕ್ತಾ ಆಗಿದೆ. ಚಿತ್ರದ ವಿತರಕರು ಬದಲಾಗಿದ್ದು, ನಾಳೆ ಬೆಳಗ್ಗೆ 6ಗಂಟೆಗೆ ‘ಫ್ಯಾನ್‌ ಶೋ’ನೊಂದಿಗೆ ಸಿನಿಮಾಗೆ ಚಾಲನೆ ಸಿಗಲಿದೆ. ಸುದೀಪ್‌ ಈ ಬಗ್ಗೆ ಸಿನಿಮಾ ಪೋಸ್ಟರ್ ಹಾಕಿ ಟ್ವೀಟ್ ಮಾಡಿದ್ದಾರೆ. ಅಲ್ಲದೆ ವೀಡಿಯೋವೊಂದನ್ನು ಟ್ವೀಟ್ ಮಾಡಿ, “ನಿರ್ಮಾಪಕ ಸೂರಪ್ಪ ಬಾಬು ಅವರಿಗೆ ಯಾರಿಂದ ತೊಂದರೆಯಾಗಿದೆ ಎನ್ನುವುದು ನಮಗೆ ಗೊತ್ತು. ಇದಕ್ಕೆ ಕಾಲವೇ ಉತ್ತರಿಸಲಿದೆ. ನಾವೆಲ್ಲರೂ ಅವರೊಂದಿಗೆ ಇದ್ದೇವೆ. ದಯವಿಟ್ಟು ಅಭಿಮಾನಿಗಳು ಸಹಕರಿಸಿ. ಥಿಯೇಟರ್‌ಗಳಿಗೆ ಹಾನಿ ಮಾಡಬೇಡಿ. ನಾಳೆ ಸಿನಿಮಾ ಬಿಡುಗಡೆಯಾಗುತ್ತಿದ್ದು, ಎಂದಿನಂತೆ ನಿಮ್ಮ ಬೆಂಬಲವಿರಲಿ” ಎಂದಿದ್ದಾರೆ.

LEAVE A REPLY

Connect with

Please enter your comment!
Please enter your name here