ಸಾಹಸ ಸಂಯೋಜಕ ಜಾಲಿ ಬಾಸ್ಟಿನ್ (57 ವರ್ಷ) ನಿನ್ನೆ ತಡರಾತ್ರಿ ಹೃದಯಾಘಾತದಿಂದ ಅಗಲಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ, ಬೆಂಗಾಲಿ ಭಾಷೆಗಳ 950ಕ್ಕೂ ಹೆಚ್ಚು ಸಿನಿಮಾಗಳಿಗೆ ಅವರು ಸಾಹಸ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ. ಅವರ ಅಕಾಲಿಕ ನಿಧನಕ್ಕೆ ಚಿತ್ರರಂಗದ ಹಲವರು ಸಂತಾಪ ಸೂಚಿಸಿದ್ದಾರೆ.
ನಾಲ್ಕು ದಶಕದ ಹಿಂದಿನ ಮಾತು. ಬೆಂಗಳೂರಿನ ನೀಲಸಂದ್ರದಲ್ಲಿ ಹದಿನೇಳರ ಹರೆಯದ ಯುವಕನೊಬ್ಬ ಬುಲೆಟ್ ಮೋಟರ್ ಬೈಕ್ ವ್ಹೀಲಿಂಗ್ ಮಾಡುತ್ತಿದ್ದ. ನಟ ರವಿಚಂದ್ರನ್ ಅವರ ಪರ್ಸನಲ್ ಟ್ರೈನರ್ ಮೂರ್ತಿ ಈ ಯುವಕನನ್ನು ನೋಡಿದರು. ಆಗ ರವಿಚಂದ್ರನ್ ‘ಪ್ರೇಮಲೋಕ’ ಸಿನಿಮಾದ ತಯಾರಿಯಲ್ಲಿದ್ದರು. ಮೂರ್ತಿಯವರು ಯುವಕನನ್ನು ರವಿಚಂದ್ರನ್‌ರಿಗೆ ಪರಿಚಯಸಿದರು. ‘ಪ್ರೇಮಲೋಕ’ ಚಿತ್ರದ ಬೈಕ್ ಸ್ಟಂಟ್‌ಗಳಲ್ಲಿ ರವಿಚಂದ್ರನ್‌ರಿಗೆ ಡ್ಯೂಪ್ ಆದ ಆ ಯುವಕನೇ ಜಾಲಿ ಬಾಸ್ಟಿನ್. ‘ಪ್ರೇಮಲೋಕ’ ಸಿನಿಮಾ ಅವರ ಬದುಕಿಗೆ ತಿರುವಾಯ್ತು. ಬೈಕ್ ಮೆಕ್ಯಾನಿಕ್ ಆಗಿದ್ದ ಯುವಕ ಸಿನಿಮಾರಂಗ ಪ್ರವೇಶಿಸಿದರು. ಬೈಕ್ ಸ್ಟಂಟ್‌ಗಳನ್ನು ಮಾಡುತ್ತಾ ಕ್ರಮೇಣ ಸಾಹಸ ನಿರ್ದೇಶಕನಾಗಿ ಗುರುತಿಸಿಕೊಂಡರು.
ಚಿತ್ರರಂಗದಲ್ಲಿ ‘ಜಾಲಿ ಮಾಸ್ಟರ್’ ಎಂದೇ ಕರೆಸಿಕೊಳ್ಳುತ್ತಿದ್ದ ಜಾಲಿ ಬಾಸ್ಟಿನ್ ನಿನ್ನೆ ತಡರಾತ್ರಿ ಹೃದಯಾಘಾತದಿಂದ ಅಗಲಿದ್ದಾರೆ. ಅವರಿಗೆ 57 ವರ್ಷವಾಗಿತ್ತು. ‘ಪ್ರೇಮಲೋಕ’ ಚಿತ್ರದಿಂದ ಶುರುವಾದ ಅವರ ಸಾಹಸ ಯಾನ ಈಗ ತೆರೆಗೆ ಸಿದ್ಧವಾಗುತ್ತಿರುವ ‘ಭೀಮ’, ’45’, ‘ಮಾಫಿಯಾ’ ಚಿತ್ರಗಳವರೆಗೂ ಸಾಗಿ ಬಂದಿತ್ತು. ಕನ್ನಡ ಮಾತ್ರವಲ್ಲದೆ ತಮಿಳು, ಮಲಯಾಳಂ, ತೆಲುಗು, ಹಿಂದಿ, ಬೆಂಗಾಲಿ ಬಾಷೆಗಳ ಹಲವಾರು ಸಿನಿಮಾಗಳಿಗೆ ಅವರು ಸಾಹಸ ಸಂಯೋಜಿಸಿದ್ದಾರೆ. ಅವರು ಸಾಹಸ ಸಂಯೋಜಿಸಿರುವ ಚಿತ್ರಗಳ ಸಂಖ್ಯೆ ಸಾವಿರದ ಸಮೀಪವಿದೆ. ಕನ್ನಡ ಚಿತ್ರರಂಗದ ಎರಡು ತಲೆಮಾರಿನ ಹೀರೋಗಳ ಸಿನಿಮಾಗಳಿಗೆ ಅವರು ಕೆಲಸ ಮಾಡಿದ್ದಾರೆ. ಇತರೆ ಭಾಷೆಗಳ ಪ್ರಮುಖ ನಾಯಕನಟರ ಸಿನಿಮಾಗಳಿಗೆ ಅವರ ಸಾಹಸ ಸಂಯೋಜನೆಯಿದೆ. ‘ಭಲೇ ಚತುರ’, ‘ಪುಟ್ನಂಜ’ ಸಿನಿಮಾಗಳ ಸಾಹಸ ಸನ್ನಿವೇಶಗಳಲ್ಲಿನ ಆಕಸ್ಮಿಕಗಳಲ್ಲಿ ಅವರಿಗೆ ತೀವ್ರ ಹಾನಿಯಾಗಿತ್ತು.
ಜಾಲಿ ಬಾಸ್ಟಿನ್ ’24 Events’ ಹೆಸರಿನ ಇವೆಂಟ್ ಮ್ಯಾನೇಜ್‌ಮೆಂಟ್ ಕಂಪನಿ ನಡೆಸುತ್ತಿದ್ದರು. ಅವರು ಉತ್ತಮ ಗಾಯಕರೂ ಹೌದು. ’24 Events’ನ ಆರ್ಕೇಸ್ಟ್ರಾಗಳಲ್ಲಿ ಹಾಡುತ್ತಿದ್ದರು. ‘ನಿನಗಾಗಿ ಕಾದಿರುವೆ’ (ಕನ್ನಡ), ‘ಲಾಕ್‌ಡೌನ್ ಡೈರೀಸ್’ (ತಮಿಳು) ಅವರ ನಿರ್ದೇಶನದ ಚಿತ್ರಗಳು. ತಮ್ಮ ನಿರ್ದೇಶನದ ‘ಲಾಕ್‌ಡೌನ್ ಡೈರೀಸ್’ ತಮಿಳು ಚಿತ್ರದ ಮೂಲಕ ಪುತ್ರ ಅಮಿತ್ ಅವರನ್ನು ಜಾಲಿ ಬಾಸ್ಟಿನ್ ಹೀರೋ ಆಗಿ ಚಿತ್ರರಂಗಕ್ಕೆ ಪರಿಚಯಿಸಿದ್ದರು. ಜಾಲಿ ಬಾಸ್ಟಿನ್ ನಿಧನಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಕನ್ನಡ ಚಿತ್ರರಂಗದ ಪ್ರಮುಖರನೇಕರು ಕಂಬನಿ ಮಿಡಿದಿದ್ದಾರೆ. ಇಂದು (ಡಿಸೆಂಬರ್ 27) ಅವರ ಅಂತ್ಯಸಂಸ್ಕಾರ ನೆರವೇರಲಿದೆ.