ಕ್ರಿಕೆಟರ್‌ ಕೆ.ಎಲ್‌.ರಾಹುಲ್ ಮತ್ತು ನಟಿ ಅಥಿಯಾ ಶೆಟ್ಟಿ ಲವ್‌ಸ್ಟೋರಿ ಇದೀಗ ಅಧಿಕೃತ. ನಟಿಯ ಹುಟ್ಟುಹಬ್ಬವಾದ ಇಂದು ರಾಹುಲ್‌ ಶುಭಾಶಯ ಕೋರಿ ತಾವಿಬ್ಬರೂ ಜೊತೆಯಾಗಿರುವ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಪ್ರತಿಭಾವಂತ ಕ್ರಿಕೆಟರ್‌, ಕನ್ನಡಿಗ ಕೆ.ಎಲ್‌.ರಾಹುಲ್ ಮತ್ತು ಬಾಲಿವುಡ್ ಯುವನಟಿ ಅಥಿಯಾ ಶೆಟ್ಟಿ ಹಲವು ಸಂದರ್ಭಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಇಬ್ಬರ ಮಧ್ಯೆ ಪ್ರೀತಿ ಇದೆಯೇ ಎನ್ನುವ ಪ್ರಶ್ನೆಗೆ ಅವರಿಂದ ಸ್ಪಷ್ಟನೆ ಸಿಕ್ಕಿರಲಿಲ್ಲ. ಇದೀಗ ವದಂತಿಗಳಿಗೆ ಮಂಗಳ ಹಾಡಿರುವ ರಾಹುಲ್‌ ತಾವು ಪ್ರೇಮಿಗಳು ಎಂದು ಅಧಿಕೃತವಾಗಿ ಘೋಷಿಸಿದ್ದಾರೆ. ನಟಿ ಅಥಿಯಾರ ಜನ್ಮದಿನವಾದ ಇಂದು ರಾಹುಲ್‌ ಇನ್‌ಸ್ಟಾಗ್ರಾಮ್‌ ಅಕೌಂಟ್‌ನಲ್ಲಿ, ನಟಿಯ  ಜೊತೆಗಿರುವ ಫೋಟೊ ಹಾಕಿ ಶುಭಾಶಯ ಕೋರಿದ್ದಾರೆ. ಅಥಿಯಾ ಕೂಡ ಈ ಫೋಟೊ ಶೇರ್ ಮಾಡಿ ಹಾರ್ಟ್‌ ಎಮೋಜಿ ಹಾಕಿ ತಮ್ಮಿಬ್ಬರ ಪ್ರೀತಿಯನ್ನು ಅನುಮೋದಿಸಿದ್ದಾರೆ.

ಕನ್ನಡ ನೆಲದ ನಂಟಿರುವ ಬಾಲಿವುಡ್ ನಟ ಸುನೀಲ್ ಶೆಟ್ಟಿ ಪುತ್ರಿ ಅಥಿಯಾ. ‘ಹೀರೋ’ (2015) ಹಿಂದಿ ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾದ ಅವರಿಗಿನ್ನೂ ಬಾಲಿವುಡ್‌ನಲ್ಲಿ ದೊಡ್ಡ ಯಶಸ್ಸು ಸಿಕ್ಕಿಲ್ಲ. ಚೊಚ್ಚಲ ಸಿನಿಮಾ ಸೇರಿದಂತೆ ಆನಂತರ ಅವರು ನಟಿಸಿದ ‘ಮುಬಾರಕನ್‌’, ‘ಮೋತಿಚೋರ್ ಚಕ್ನಾಚೋರ್‌’ ಚಿತ್ರಗಳು ಹೇಳಿಕೊಳ್ಳುವಂತಹ ಯಶಸ್ಸು ತಂದುಕೊಡಲಿಲ್ಲ. ಕಳೆದೆರೆಡು ವರ್ಷಗಳಿಂದೀಚೆಗೆ ಅವರು ರಾಹುಲ್ ಜೊತೆಗಿರುವ ಫೋಟೊಗಳಿಂದಲೇ ಹೆಚ್ಚು ಸುದ್ದಿಯಾಗಿದ್ದರು. ಇಂಗ್ಲೆಂಡ್‌ನಲ್ಲಿ ನಡೆದ ವರ್ಲ್ಡ್‌ ಟೆಸ್ಟ್ ಚಾಂಪಿಯನ್‌ಶಿಪ್‌ ತೆರಳಿದ್ದ ರಾಹುಲ್ ಜೊತೆ ಅಥಿಯಾ ಕೂಡ ಇದ್ದರು. ಐವೇರ್ ಬ್ರ್ಯಾಂಡ್‌ನ ಪ್ರೊಮೋಷನ್‌ಗೆ ಇಬ್ಬರು ಬ್ರ್ಯಾಂಡ್ ಅಂಬಾಸಿಡರ್ ಆದಾಗಲೂ ಪ್ರೀತಿಯ ಸುಳಿವು ಬಿಟ್ಟುಕೊಟ್ಟಿರಲಿಲ್ಲ. ಇದೀಗ ಇಬ್ಬರೂ ಪ್ರೀತಿಯನ್ನು ಅಧಿಕೃತಗೊಳಿಸಿದ್ದಾರೆ.

LEAVE A REPLY

Connect with

Please enter your comment!
Please enter your name here