’83 ಬರೀ, 1983ರಲ್ಲಿ ಭಾರತವು ಏಕದಿನ ಕ್ರಿಕೆಟ್ ಆಟದ ವಿಶ್ವಕಪ್ ಗೆದ್ದದ್ದರ ಕುರಿತ ಸಹಜ ಕಥನಾ ನಿರೂಪಣೆಯಲ್ಲ. ಆ ಗೆಲುವಿಗೆ, ಶಿಥಿಲವಾಗಿ ಛಿದ್ರಗೊಳ್ಳುತ್ತಿದ್ದ ದೇಶದ ಮತೀಯ ಸಾಮರಾಸ್ಯವನ್ನು ಪುನರುಜ್ಜೀವನಗೊಳಿಸಬಲ್ಲ ಕಸುವಿತ್ತು ಎಂದು ಬಿಂಬಿಸುವ ರಮ್ಯಕಥನ.

ಸಿನೆಮಾ ಒಂದು ತಂತ್ರಬಲದ ದೃಶ್ಯ ಮಾಧ್ಯಮವಾಗಿ, ಮನುಷ್ಯರ ಮನಪಟಲದ ಭಾವಚಿತ್ರಗಳ ಜೊತೆ ಆಟವಾಡುವ ಮಾಧ್ಯಮ. ಅದು ಸಹಜ ಮನುಷ್ಯನ ‘ಅಹಂ’ನ ಭಾವಚಿತ್ರಗಳನ್ನು ರಮ್ಯಗೊಳಿಸಬಲ್ಲುದು. ವೈಭವೀಕರಿಸಿ, ಮನುಷ್ಯರು ಹಂಬಲಿಸುವ ‘ಅತಿ ಅಹಂ’ನ ಭಾವಗಳನ್ನು ಪುಳಕಿತರಾಗಿ ನೆಕ್ಕುವಂತೆ ಮಾಡಬಲ್ಲುದು. ನಿತ್ಯ ಬದುಕಿನಲ್ಲಿ ಈಡೇರದೆ ಇವೆರಡನ್ನೂ ಮನದ ಕತ್ತಲ ಉಗ್ರಾಣದಲ್ಲಿ ಒತ್ತಿ ತುಂಬಿದ ಭಾವಗಳನ್ನು ಹೊರಗೆಳೆದು ರಜತ ಪರದೆಯ ಮೇಲೆ ವಿರಾಟ್ ಬಿಂಬವಾಗಿ ತೋರಬಲ್ಲುದು. ಇಂತಾಗಿ ಸಿನೆಮಾವು ಒಂದು ‘ವಿಲಕ್ಷಣ ಕಲೆ’.

ಮನುಷ್ಯ ಜಗತ್ತು ರೂಢಿಸಿಕೊಂಡಿರುವ ಹಲವು ಬಗೆಯ ದೈಹಿಕ ಆಟಗಳೂ, ಇದೇ ಮೂರು ಬಗೆಯ ಭಾವದಾಟಗಳ ಬಹಿರಂಗ ಮೈದಾನ ಪ್ರದರ್ಶನವಾಗಿದ್ದು, ಸಮುದಾಯ ಮನದಾಟದ ವೇದಿಕೆಯಾಗಿಯೂ ಇದೆ. ಇಂಥಾ ಆಟಗಳನ್ನು ವಸ್ತುವಾಗಿಟ್ಟುಕೊಂಡ ‘ಆಟದ ಕುರಿತ ಸಿನೆಮಾ’ಗಳು, ಸಮುದಾಯವಾದ ದೇಹಗಳ ಸಾಮೂಹಿಕ ಮನೋಸ್ಥಿತಿಯನ್ನು ಚೋದಿಸುವ ದೃಶ್ಯದಾಟವಾಗಿಬಿಡುತ್ತವೆ.

’83’ ಬರೀ, 1983ರಲ್ಲಿ ಭಾರತವು ಏಕದಿನ ಕ್ರಿಕೆಟ್ ಆಟದ ವಿಶ್ವಕಪ್ ಗೆದ್ದದ್ದರ ಕುರಿತ ಸಹಜ ಕಥನಾ ನಿರೂಪಣೆಯಲ್ಲ. ಆ ಗೆಲುವಿಗೆ, ಶಿಥಿಲವಾಗಿ ಛಿದ್ರಗೊಳ್ಳುತ್ತಿದ್ದ ದೇಶದ ಮತೀಯ ಸಾಮರಾಸ್ಯವನ್ನು ಪುನರುಜ್ಜೀವನಗೊಳಿಸಬಲ್ಲ ಕಸುವಿತ್ತು ಎಂದು ಬಿಂಬಿಸುವ ರಮ್ಯಕಥನ. ‘ಗೊಡ್ಡಾಗುತ್ತಿರುವ ಸಾರ್ವಜನಿಕ ವಲಯದ ಆರ್ಥ ವ್ಯವಸ್ಥೆ’ಯನ್ನು ಕೊನೆಗಾಣಿಸಿ, ವ್ಯಕ್ತಿಸಾಹಸ ಸಂಕಲ್ಪನ ಚೇತನವನ್ನು ಉದ್ದೀಪಿಸುವ ‘ಖಾಸಗಿ ವಲಯ ಪಾರಮ್ಯದ ಅರ್ಥ ನೀತಿ’ಗೆ ಹೊರಳಬೇಕು ಎಂಬ ನೀತಿ ಕಥನ. ಈ ಎರಡರ ನಡುವೆ ತಾರ್ಕಿಕ ಸಂಬಂಧವೇನಾದರೂ ಇದೆಯಾ ಎನ್ನುವುದರ ಬಗ್ಗೆ ಒಂಚೂರು ತಲೆ ಕೆಡಿಸಿಕೊಳ್ಳದೆ, ಗೆದ್ದ ಆಟವೇ ಇವೆರಡನ್ನೂ ಸಾರುತ್ತದೆ ಎಂಬಂತೆ, ಆ ಸರಣಿಯಲ್ಲಿ ಭಾರತದ ಕ್ರಿಕೆಟ್ ತಂಡವು ಆಡಿದ ಪ್ರತಿ ಆಟವನ್ನೂ ನಾಟಕೀಯವಾಗಿ ನಿರೂಪಿಸುವ ಕಸುಬುದಾರಿಕೆಯ ದೃಶ್ಯ ಕಥನ.

1983ರ ಕಾಲದ ದೇಶದ ಸಾಮಾಜಿಕ-ರಾಜಕೀಯ ಸ್ಥಿತಿಗತಿಯ ಗೋಜಲು ಮತ್ತು ಭಾರತದ ಕ್ರಿಕೆಟ್ ತಂಡದ ಖ್ಯಾತರೆಲ್ಲ ನಿವೃತ್ತರಾಗಿ, ಇದ್ದಬದ್ಧಷ್ಟು ಪ್ರತಿಭವಂತರನ್ನು ಕಲೆ ಹಾಕಿ ಕಟ್ಟಿದ 1980ರ ಹೊಸ ಕ್ರಿಕೆಟ್ ತಂಡದ ಸಾಮರ್ಥ್ಯದ ಬಗ್ಗೆ ಕ್ರಿಕೆಟ್ ಬಲ್ಲ ಯಾರಿಗೂ ವಿಶ್ವಾಸವಿರದ ಸ್ಥಿತಿ-ಎರಡನ್ನೂ ’83’ ಬಹಳ ಜಾಣ್ಮೆಯಿಂದ ಹೆಣೆದಿದೆ. 1980ರ ನಂತರ ದೇಶದ ಮತೀಯ ಸಾಮರಸ್ಯವು ಚಿಂದಿ ಚಿಂದಿಯಾಗುತ್ತಾ ನಡೆದಿದ್ದು ಮತ್ತೂ ‘ಖಾಸಗಿಕರಣದ ಅರ್ಥ ನೀತಿ’ಯ ಪರಿಣಾಮವಾಗಿ ಇಲ್ಲದವರು ಮತ್ತಷ್ಟೂ ಸೊರಗಿ ಉಳ್ಳವರು ಮತ್ತಷ್ಟು ಕೊಬ್ಬಿದ್ದು-ಇವೆರಡೂ ವಿದ್ಯಮಾನಗಳನ್ನೂ ಮರೆಸುವ ‘ಮೃದು ದೇಶಪ್ರೇಮ’ದ ಭ್ರಮೆಯನ್ನು ಹೆಣೆಯುವಲ್ಲಿ ನಿರ್ದೇಶಕ ಕಬೀರ್ ಖಾನ್ ಯಶಸ್ವಿಯಾಗಿದ್ದಾರೆ.

ಆ ಕ್ರಿಕೆಟ್ ತಂಡದಲ್ಲಿ ಇದ್ದ ಪ್ರತಿಯೊಬ್ಬ ಆಟಗಾರರ ವ್ಯಕ್ತಿಚಿತ್ರಗಳು, ಅವರ ಆಟದ ಶೈಲಿ, ಪ್ರತಿ ಪಂದ್ಯದ ವಿವರಗಳು, ಆಟದ ಮೈದಾನದ ಒಳಗೆ ಹೊರಗೆ ನಡೆಯುವ ಘಟನೆಗಳು – ಈ ಎಲ್ಲಾ ವಾಸ್ತವಿಕ ಮಾಹಿತಿಗಳನ್ನು ಕಲೆ ಹಾಕಿ, ಆಟಗಾರರ ಪಾತ್ರ ವಹಿಸಿದ ನಟರಿಗೆ ನಿಜ ಆಟಗಾರರ ಪ್ರತಿರೂಪವಾಗುವಂತೆ ತರಬೇತುಗೊಳಿಸಿ ಕಟ್ಟಿರುವ ಈ ಸಿನೆಮಾವು ಒಂದು ‘ಸಾಕ್ಷ್ಯ ಕಥನ’ವಾಗದೆ, ‘ಮೃದು ದೇಶಪ್ರೇಮ’ದ ನಾಟಕೀಯ ಕಥನವಾಗುವಂತೆ ಕಟ್ಟುವುದಕ್ಕೆ ಬೇಕಾದ ಕಸುಬುದಾರಿಕೆಗಾಗಿಯೇ ಈ ಸಿನೆಮಾ ಕುತೂಹಲಕರವಾಗಿದೆ.

ಇದು ‘ಚಕ್ ದೇ’ಯಂತೆ ಅಥವಾ ‘,ಲಗಾನ್’ನಂತೆ ಆಟ ಗೊತ್ತಿಲ್ಲದವರಲ್ಲೂ ನಾಟಕೀಯ ದೇಶಪ್ರೇಮ ಉಕ್ಕುವಂತೆ ಮಾಡುವ ಕಥನಾ ಸಿನೆಮಾವಲ್ಲ; ‘ಫೈರ್ ಇನ್ ಬೆಬಿಲಾನ್’ ಅಥವಾ ‘ದಿ ಟೆಸ್ಟ್’ಗಳಂತೆ ಆಟದ ವಾಸ್ತವಿಕ ವಿವರಗಳನ್ನು ಸವಿವರವಾಗಿ ನಿರೂಪಿಸಿ, (ಭಿನ್ನ) ವಿಚಾರಗಳನ್ನು ಮಂಡಿಸುವ ಸಾಕ್ಷ್ಯ ಚಿತ್ರವೂ ಅಲ್ಲ. ’83’ ನೋಡಲು ಪ್ರೇಕ್ಷಕನಿಗೆ ಕ್ರಿಕೆಟ್ ಆಟ, ಭಾರತದ ಕ್ರಿಕೆಟ್ ತಂಡ ಹಾಗು 1983ರ ಏಕದಿನ ವಿಶ್ಚಕಪ್ ನ ಕುರಿತ ಸಾಮಾನ್ಯ ಜ್ಞಾನವಿರಬೇಕು. ಸಿನೆಮಾವು ಆ ಎಲ್ಲವನ್ನು ವಿವರಿಸುವ ಗೋಜಿಗೆ ಹೋಗುವುದಿಲ್ಲ; ಇಷ್ಟು ಸಾಧಾರಣ ಜ್ಞಾನ ಇರುವ ಪ್ರೇಕ್ಷಕರು ನಗರ ಪ್ರದೇಶಗಳ ಮಧ್ಯಮ ಹಾಗು ಮೇಲ್ವರ್ಗಗಳ ಸುಶಿಕ್ಷಿತ ಗಂಡಸರು; ಕ್ರಿಕೆಟನ್ನು ಮನೋರಂಜನೆಯ ಸರಕಾಗಿಸಿರುವ IPL ಉದ್ಯಮದ ಗಿರಾಕಿಗಳು ಮತ್ತು ‘ತೀವ್ರ ಬಲಪಂಥದ ಮತೀಯ ದೇಶಭಕ್ತಿ’ಯ ಪರಿಣಾಮಗಳ ಬಗ್ಗೆ ಹೆಚ್ಚು ತಲೆಕೊಡದವರು. ಇಂಥವರಿಗೆ ಈ ಸಿನೆಮಾವು ಹೆಚ್ಚು ಕಿರಿಕಿರಿ ಉಂಟು ಮಾಡದಂತೆ ‘ದೇಶಪ್ರೇಮ’ದ ಭ್ರಮೆ’ ಹೆಣೆದುಕೊಡುತ್ತದೆ; ಅರ್ಥಾತ್‌ ಇಂಥವರ ‘ಅಹಂ’ ಅನ್ನು ‘ಅತಿ ಅಹಂ’ ಮಟ್ಟಕ್ಕೆ ಏರಿಸುತ್ತದೆ. ಸಿನೆಮಾ ಕಲೆಯ ಇಂಥ ರಾಜಕೀಯ ಪಾಠವು ಕುತೂಹಲಕರವಾದದ್ದು.

LEAVE A REPLY

Connect with

Please enter your comment!
Please enter your name here