ರಾಷ್ಟ್ರಪ್ರಶಸ್ತಿ ಪುರಸ್ಕೃತ ‘ಕಾಕಮುಟ್ಟೈ’ ಸಿನಿಮಾ ಖ್ಯಾತಿಯ ಮಣಿಕಂಠನ್‌ ನಿರ್ದೇಶನದ ‘ಕಡೈಸಿ ವಿವಸಾಯಿ’ ತಮಿಳು ಸಿನಿಮಾ ಫೆಬ್ರವರಿ 11ಕ್ಕೆ ತೆರೆಕಾಣಲಿದೆ. ಈ ಚಿತ್ರದ ನಿರ್ಮಾಣದಲ್ಲಿ ಕೈಜೋಡಿಸಿರುವ ವಿಜಯ್‌ ಸೇತುಪತಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಪ್ರತಿಭಾವಂತ ತಮಿಳು ಚಿತ್ರನಿರ್ದೇಶಕ ಎಂ.ಮಣಿಕಂಠನ್‌ ಅವರ ‘ಕಡೈಸಿ ವಿವಸಾಯಿ’ ತಮಿಳು ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಚಿತ್ರದ ನಿರ್ಮಾಪಕರಲ್ಲೊಬ್ಬರಾದ ಮತ್ತು ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿರುವ ನಟ ವಿಜಯ್‌ ಸೇತುಪತಿ ಫೆಬ್ರವರಿ 11ರಂದು ಸಿನಿಮಾ ರಿಲೀಸ್‌ ಎಂದು ಟ್ವೀಟ್‌ ಮಾಡಿದ್ದಾರೆ. ರಾಷ್ಟ್ರಪ್ರಶಸ್ತಿ ಪುರಸ್ಕೃತ ‘ಕಾಕಮುಟ್ಟೈ’ ಸಿನಿಮಾದ ನಿರ್ದೇಶಕ ಮಣಿಕಂಠನ್‌ ಚಿತ್ರಕಥೆ ರಚಿಸಿ ನಿರ್ದೇಶಿಸಿದ್ದು, ಅವರು ಚಿತ್ರದ ನಿರ್ಮಾಪಕರಲ್ಲೊಬ್ಬರು. ಚಿತ್ರಕ್ಕೆ ಸಂತೋಷ್‌ ನಾರಾಯಣನ್‌ ಸಂಗೀತ ಸಂಯೋಜನೆ ಮತ್ತು ತೋಟಾ ಥರಣಿ ಕಲಾ ನಿರ್ದೇಶನವಿದೆ. 85 ವರ್ಷದ ರೈತ ನಲ್ಲಂದಿ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಯೋಗಿಬಾಬು ಮಾವುತನಾಗಿ ಮತ್ತೊಂದು ಪ್ರಮುಖ ಪಾತ್ರದಲ್ಲಿದ್ದಾರೆ.

‘ಆಂದವನ್‌ ಕಟ್ಟಲೈ’ (2016) ಚಿತ್ರದ ನಂತರ ನಿರ್ದೇಶಕ ಮಣಿಕಂಠನ್‌ ಮತ್ತು ನಟ ವಿಜಯ್‌ ಸೇತುಪತಿ ಇಲ್ಲಿ ಮತ್ತೊಮ್ಮೆ ಜೊತೆಯಾಗಿದ್ಧಾರೆ. ನಿರ್ದೇಶಕರು ಹೇಳುವಂತೆ ಈ ಸಿನಿಮಾ ತೆರೆಗೆ ಸಿದ್ಧವಾಗಿ ಎರಡು ವರ್ಷಗಳೇ ಆಗಿವೆ. ಕೋವಿಡ್‌ನಿಂದಾಗಿ ಸಿನಿಮಾ ತೀರಾ ವಿಳಂಬವಾಗಿ ತೆರೆಗೆ ಬರುತ್ತಿದೆ. ಖ್ಯಾತ ಸಂಗೀತ ಸಂಯೋಜಕ ಇಳಯರಾಜ ಅವರು ಈ ಚಿತ್ರಕ್ಕೆ ಮೊದಲು ಸಂಗೀತ ಸಂಯೋಜಿಸಿದ್ದರು. ನಿರ್ದೇಶಕ ಮಣಿಕಂಠನ್‌ ಅವರಿಗೆ ಹಿನ್ನೆಲೆ ಸಂಗೀತ ಇಷ್ಟವಾಗಿರಲಿಲ್ಲ. ಮತ್ತೊಮ್ಮೆ ಹಿನ್ನೆಲೆ ಸಂಗೀತ ಕೊಡಲು ಇಳಯರಾಜ ಅವರಿಗೆ ಮನವಿ ಮಾಡಿದ್ದರು. ಇಳಯರಾಜ ಒಪ್ಪದ ಕಾರಣ ನಿರ್ದೇಶಕರು ಸಂತೋಷ್‌ ನಾರಾಯಣನ್‌ ಅವರಿಂದ ಚಿತ್ರಕ್ಕೆ ಹಿನ್ನೆಲೆ ಸಂಗೀತ ಮಾಡಿಸಿಕೊಂಡಿದ್ದರು. ಬದಲಾದ ಹಿನ್ನೆಲೆ ಸಂಗೀತದೊಂದಿಗೆ ಟ್ರೈಲರ್‌ ಕೂಡ ಬಿಡುಗಡೆಯಾಯ್ತು. ತಮ್ಮ ಅನುಮತಿ ಇಲ್ಲದೆ ಚಿತ್ರದ ಹಿನ್ನೆಲೆ ಸಂಗೀತವನ್ನು ಬದಲಿಸಿದ್ದಾರೆ ಎಂದು ಇಳಯರಾಜ 2021ರ ಡಿಸೆಂಬರ್‌ನಲ್ಲಿ ಸಂಗೀತ ಸಂಯೋಜಕರ ಸಂಘಟನೆಗೆ ದೂರು ನೀಡಿದ್ದರು. ಈಗ ವಿವಾದ ಇತ್ಯರ್ಥವಾದಂತಿದೆ.

Previous articleವಿಶಿಷ್ಟ ಅನುಭವ ಕಟ್ಟಿಕೊಡುವ ಕ್ರೈಂ ಡ್ರಾಮಾ ‘BORDER TOWN MURAL MURDERS’
Next articleವೀಡಿಯೋ ಸಾಂಗ್‌ | ಸಲ್ಮಾನ್‌ ಗೀತೆ ರಚಿಸಿ, ಸಂಗೀತ ಸಂಯೋಜಿಸಿ ಹಾಡಿದ ‘ಡ್ಯಾನ್ಸ್‌ ವಿಥ್‌ ಮಿ’

LEAVE A REPLY

Connect with

Please enter your comment!
Please enter your name here