ಬಹುನಿರೀಕ್ಷಿತ ‘ಕಲ್ಕಿ 2898 AD’ PAN ಇಂಡಿಯಾ ಸಿನಿಮಾದ ಫೈನಲ್ ಟ್ರೇಲರ್ ರಿಲೀಸ್ ಆಗಿದೆ. ನಿರ್ದೇಶಕ ನಾಗ್ ಅಶ್ವಿನ್ ಸಿನಿಮಾದಲ್ಲಿ ನೆಲದ ಕತೆಯನ್ನು ಮರುವ್ಯಾಖ್ಯಾನಿಸುವ ಪ್ರಯತ್ನ ನಡೆಸಿದ್ದಾರೆ. ಅಮಿತಾಭ್ ಬಚ್ಚನ್, ಕಮಲ ಹಾಸನ್, ಪ್ರಭಾಸ್, ದೀಪಿಕಾ ಪಡುಕೋಣೆ, ದಿಶಾ ಪಟಾನಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
Sci-fi ಜಾನರ್ ಸಿನಿಮಾ ‘ಕಲ್ಕಿ 2898 AD’ ಫೈನಲ್ ಟ್ರೇಲರ್ ಬಿಡುಗಡೆಯಾಗಿದೆ. ಈ ಹಿಂದೆ ರಿಲೀಸ್ ಆಗಿದ್ದ ಟ್ರೇಲರ್ ಭಾರತೀಯ ಪುರಾಣಗಳಲ್ಲಿ ಬೇರೂರಿರುವ ಅಂಶಗಳನ್ನು ಸಿನಿಮ್ಯಾಟಿಕ್ ಆಗಿ ಪರಿಚಯಿಸಿದ್ದರೆ, ಈ ಟ್ರೇಲರ್ ಚಿತ್ರದೊಳಗಿನ ಇನ್ನಷ್ಟು ವಿಷಯಗಳನ್ನು ಪರಿಚಯಿಸಿದೆ. ಇದು ಮಹಾಕಾವ್ಯದ ಇನ್ನೊಂದು ಹಂತದ ಬಗ್ಗೆ ಸುಳಿವು ನೀಡುತ್ತದೆ. ಇಲ್ಲಿ ಪಾತ್ರಗಳ ಚಿತ್ರಣವೇ ಹೈಲೈಟ್. ಅಮಿತಾಬ್ ಬಚ್ಚನ್ ‘ಅಶ್ವತ್ಥಾಮ’ ಆಗಿ ಧೈರ್ಯಶಾಲಿ ಸಾಹಸಗಳನ್ನು ಪ್ರದರ್ಶಿಸುತ್ತಾರೆ. ಉಳಗನಾಯಗನ್ ಕಮಲ ಹಾಸನ್ ‘ಯಾಸ್ಕಿನ್’ ಆಗಿ ಕಾಣಿಸಿಕೊಂಡಿದ್ದಾರೆ. ಪ್ರಭಾಸ್ ‘ಭೈರವ’ನಾಗಿ, ದೀಪಿಕಾ ಪಡುಕೋಣೆ ‘ಸುಮತಿ’ ಪಾತ್ರದಲ್ಲಿದ್ದಾರೆ. ದಿಶಾ ಪಟಾನಿ ಖಡಕ್ ಪಾತ್ರ ‘ರಾಕ್ಸಿ’ಯಾಗಿ ಮಿಂಚು ಹರಿಸಿದ್ದಾರೆ.
ನೂತನ ಟ್ರೇಲರ್‌ನಲ್ಲಿ ದೃಶ್ಯವೈಭವವೇ ಜೀವಾಳ. ಬಗೆಬಗೆಯ ಪ್ರಪಂಚಗಳನ್ನು ಕಾಣಬಹುದು. ಕಾಶಿಯನ್ನು ಉಳಿವಿಗಾಗಿ ಹೋರಾಡುತ್ತಿರುವ, ಕೊನೆಯದಾಗಿ ಉಳಿದ ನಗರವೆಂದು ಬಿಂಬಿಸಲಾಗಿದೆ. ಊಹೆಗೂ ನಿಲುಕದ ಒಂದಷ್ಟು ಅಚ್ಚರಿಗೆ ದೂಡುವ ದೃಶ್ಯಗಳೇ ಇಲ್ಲಿನ ಹೈಲೈಟ್. ಅತ್ಯುತ್ತಮ ಹಿನ್ನೆಲೆ ಸಂಗೀತ, ಹೈ ಕ್ಲಾಸ್ VFX ಮತ್ತು ರೋಮಾಂಚನಗೊಳಿಸುವ ದೃಶ್ಯಗಳೊಂದಿಗೆ ಸಿನಿಮಾ ಮೂಡಿಬಂದಿದೆ. ತೆಲುಗು, ಹಿಂದಿ, ತಮಿಳು, ಮಲಯಾಳಂ, ಕನ್ನಡ ಮತ್ತು ಇಂಗ್ಲಿಷ್ ಸೇರಿದಂತೆ ಬಹು ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ. ನಿರ್ದೇಶಕ ನಾಗ್ ಅಶ್ವಿನ್ ನಮ್ಮ ನೆಲದ ಕತೆ ಹೇಳುವ ಮೂಲಕ, ನೆಲದ ಕತೆಗಳನ್ನು ಮರುವ್ಯಾಖ್ಯಾನಿಸುವ ಪ್ರಯತ್ನ ನಡೆಸಿದ್ದಾರೆ. ವೈಜಯಂತಿ ಮೂವೀಸ್ ನಿರ್ಮಾಣದ ಸಿನಿಮಾ ಇದೇ ಜೂನ್ 27ರಂದು ರಿಲೀಸ್ ಆಗುತ್ತಿದೆ.