ಕನ್ನಡ ಚಿತ್ರರಂಗದಂತೆ ಇತರ ಚಿತ್ರರಂಗಗಳಲ್ಲೂ ಈಗ ಹೊಸ ಸಿನಿಮಾಗಳ ಹಬ್ಬ. ಹಾಗಾಗಿ ಎಲ್ಲ ಕಡೆ ಈಗ ಹೊಸ ಸಿನಿಮಾಗಳ ಬಿಡುಗಡೆಯ ದಿನಾಂಕಗಳ ಘೋಷಣೆ ನಡೆಯುತ್ತಿದೆ. ನಟಿ ಕಂಗನಾ ರನಾವತ್‌ ಮಾತ್ರ ಎಂದಿನಂತೆ ಚಕಾರ ಎತ್ತಿದ್ದಾರೆ.

‘ತಲೈವಿ’ ಚಿತ್ರದ ನಟಿ ಕಂಗನಾ ರನಾವತ್ ಮತ್ತೆ ಸುದ್ದಿಯಲ್ಲಿದ್ಧಾರೆ. ಬಿಡುಗಡೆ ದಿನಾಂಕಗಳನ್ನು ಘೋಷಿಸಿರುವ ಹಿಂದಿ ಚಿತ್ರಗಳ ಬಗ್ಗೆ ಅವರ ಅಸಮಾಧಾನ ಹೊರಬಿದ್ದಿದೆ. ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಇನ್‌ಸ್ಟಾಗ್ರಾಮ್‌ ಮೊರೆ ಹೋಗಿದ್ದಾರೆ. ಅಕ್ಟೋಬರ್ 22ರಿಂದ ಮಹಾರಾಷ್ಟ್ರದಲ್ಲಿ ಚಿತ್ರಮಂದಿರಗಳು ಪುನರಾರಂಭಗೊಳ್ಳಲಿವೆ ಹಾಗಾಗಿ ಅನೇಕ ಬಾಲಿವುಡ್ ಚಲನಚಿತ್ರಗಳು ತಮ್ಮಬಿಡುಗಡೆ ದಿನಾಂಕಗಳನ್ನು ಘೋಷಿಸಿವೆ.

ಕಂಗನಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಷಯ ಹಂಚಿಕೊಂಡಿದ್ದಾರೆ, “ದಡ್ಡ ಬಾಲಿವುಡ್‌ ಜನ ತಿಂಗಳುಗಟ್ಟಲೆ ನಿದ್ರೆ ಮಾಡುತ್ತಿದ್ದರು, ಈಗ ಇದ್ದಕ್ಕಿದ್ದಂತೆ ಬಿಡುಗಡೆ ದಿನಾಂಕಗಳನ್ನು ಘೋಷಿಸುತ್ತಿದ್ದಾರೆ. ಜನರಿಗೆ ಇವರ ಸ್ಕ್ರ್ಯಾಪ್ ಚಿತ್ರಗಳನ್ನು ನೋಡೋದು ಬಿಟ್ಟು ಬೇರೆ ಕೆಲಸ ಇಲ್ಲವೇ” ಎಂದು ಜರಿದಿದ್ದಾರೆ. ಆ ಮೂಲಕ ತಮ್ಮ ಚಿತ್ರ ಮಾತ್ರ ಅದ್ಭುತ, ಇತರರ ಚಿತ್ರಗಳು ಕೀಳು ಎಂದು ಅವರು ಅಭಿಪ್ರಾಯ ಪಟ್ಟಂತಿದೆ. ಅಥವಾ ಚಿತ್ರಮಂದಿರಗಳಲ್ಲಿ ಹೊಸ ಸಿನಿಮಾ ಬಿಡುಗಡೆ ಆದರೆ ಇವರ ‘ತಲೈವಿ’ ಚಿತ್ರಕ್ಕೆ ಮಾರ್ಕೆಟ್ ಕಡಿಮೆ ಆಗುತ್ತೆ ಅನ್ನೋ ಭಯವೂ ಅವರಿಗೆ ಇದ್ದಂತಿದೆ. ಹಾಗೆ ನೋಡಿದರೆ ನೆಟ್‌ ಫ್ಲಿಕ್ಸ್‌ನಲ್ಲಿ ಸ್ಟ್ರೀಮ್‌ ಆಗುತ್ತಿರುವ ಅವರ ‘ತಲೈವಿ’ ಚಿತ್ರ ಅಷ್ಟೇನೂ ಸದ್ದು ಮಾಡುತ್ತಿಲ್ಲ.

‘ತಲೈವಿ’ ಸೆಪ್ಟೆಂಬರ್ 10ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಕೆಲವೇ ದಿನಗಳಲ್ಲಿ ಸಿನಿಮಾ OTTಗೆ ಬಂದಿತು. ಹಾಗಾಗಿ ಮಲ್ಟಿಪ್ಲೆಕ್ಸ್‌ ಗಳಲ್ಲಿ ಚಿತ್ರ ಪ್ರದರ್ಶನಗೊಳ್ಳಲಿಲ್ಲ. ಹಾಗಾಗಿ ಕಂಗನಾ ಡಿಸ್ಟರ್ಬ್ ಆದಂತಿದೆ. “ನಮ್ಮಂತಹ ಜನರಿಗೆ ಇದು ಒಳ್ಳೆಯ ಸಮಯ. ಆದರೆ, ನಮಗೆ ಸಾಕಷ್ಟು ಪ್ರದರ್ಶನಗಳು ಸಿಗುವುದಿಲ್ಲ. ದೊಡ್ಡ ಸ್ಟುಡಿಯೋಗಳು ಮತ್ತು ಪ್ರದರ್ಶಕರ ಮಾಫಿಯಾಗಳು ಮಲ್ಟಿಪ್ಲೆಕ್ಸ್‌ಗಳ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿವೆ. ಆದರೂ ಒಳ್ಳೆಯ ಸಿನಿಮಾ ಮಾತ್ರ ಉಳಿಯುತ್ತದೆ” ಎಂದು ಕಂಗನಾ ಉಲ್ಲೇಖಿಸಿದ್ದಾರೆ. “ಇದು ಚಲನಚಿತ್ರೋದ್ಯಮಕ್ಕೆ ಪರಿವರ್ತನೆಯ ಸಮಯ, ವಾಸ್ತವವಾಗಿ ಇದು ಕೆಟ್ಟ ಸಮಯವಲ್ಲ. ಇದು ಸಾಮಾಜಿಕ ಶುದ್ಧೀಕರಣದ ಸಮಯ. ಹಳೆಯ ಸಾಮ್ರಾಜ್ಯಗಳು ಕುಸಿಯುತ್ತವೆ ಮತ್ತು ಹೊಸ ಸಾಮ್ರಾಜ್ಯಗಳು ಹುಟ್ಟಿಕೊಳ್ಳುತ್ತವೆ” ಎಂದು ಎಂದಿನಂತೆ ಬಾಲಿವುಡ್‌ ನ ದೊಡ್ಡ ಮಂದಿ ಬಗ್ಗೆ ಕಂಗನಾ ಕಟಕಿಯಾಡಿದ್ದಾರೆ.

LEAVE A REPLY

Connect with

Please enter your comment!
Please enter your name here