ಸರ್ವೇಶ್ ಮೇವಾರಾ ನಿರ್ದೇಶನದ ‘ತೇಜಸ್’ ಹಿಂದಿ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದೆ. ಭಾರತೀಯ ವಾಯುಪಡೆಯ ಪೈಲಟ್ ತೇಜಸ್ ಗಿಲ್ ಬಯೋಪಿಕ್ ಚಿತ್ರವಿದು. ಕಂಗನಾ ರನಾವತ್ ಶೀರ್ಷಿಕೆ ಪಾತ್ರದಲ್ಲಿ ನಟಿಸಿರುವ ಸಿನಿಮಾ ಅಕ್ಟೋಬರ್ 27ರಂದು ತೆರೆಕಾಣಲಿದೆ.
ಕಂಗನಾ ರನಾವತ್ ನಟನೆಯ ‘ತೇಜಸ್’ ಸಿನಿಮಾದ ಮೊದಲ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಈ ಚಲನಚಿತ್ರವನ್ನು ಸರ್ವೇಶ್ ಮೇವಾರಾ ನಿರ್ದೇಶಿಸಿದ್ದಾರೆ. ‘ಜಾನ್ ದಾ’ ಶೀರ್ಷಿಕೆಯ ಈ ಹಾಡು ಅರಿಜಿತ್ ಸಿಂಗ್ ಮತ್ತು ಶಾಶ್ವತ್ ಸಚ್‌ದೇವ್ ಅವರ ಮಧುರ ಕಂಠದಲ್ಲಿ ಮೂಡಿಬಂದಿದೆ. ಈ ಹಾಡಿನಲ್ಲಿ ತೇಜಸ್ ಗಿಲ್ ವಾಯುಪಡೆ ಪೈಲೆಟ್ ಆಗುವ ಕನಸು ಈಡೇರಿಸಿಕೊಳ್ಳುವ ಚಿತ್ರಣವಿದೆ. ಈ ಸಿನಿಮಾವನ್ನು ಭಾರತದ ಮೊದಲ ವಾಯುಪಡೆಯ ಆಕ್ಷನ್ ಚಿತ್ರ ಎಂದು ಪ್ರಚಾರ ಮಾಡಲಾಗುತ್ತಿದೆ. ಈ ಹಾಡನ್ನು ತಮ್ಮ Instagram ಖಾತೆಯಲ್ಲಿ ಹಂಚಿಕೊಂಡ ಕಂಗನಾ ‘ನಾನು ಆಕಾಶವನ್ನು ಪ್ರೀತಿಸುವಂತೆ ಕಾಣುತ್ತಿದೆ’ ಎಂದು ಬರೆದುಕೊಂಡಿದ್ದಾರೆ. ಈ ಹಾಡಿನಲ್ಲಿ ಶಾಲಾ ದಿನಗಳ ಕನಸು, ಪೈಲಟ್ ಆಗಿ ತರಬೇತಿ ಪಡೆಯುವ ಸಂದರ್ಭದಲ್ಲಿ ಕಂಗನಾ ಹೇಗೆ ಆಗಸವನ್ನು ಪ್ರೀತಿಸುತ್ತಾರೆ ಎಂದು ತೋರಿಸಲಾಗಿದೆ.
ತೇಜಸ್ ಗಿಲ್ ಎಂಬ ಭಾರತೀಯ ವಾಯುಪಡೆಯ ಪೈಲಟ್ ಅವರ ಆಕಾಶಯಾನದ ಕಥೆಯೇ ‘ತೇಜಸ್’ ಸಿನಿಮಾದ ಕಥಾಹಂದರ. ಅವರ ದೇಶಭಕ್ತಿ, ಸಾಹಸ ಇತ್ಯಾದಿಗಳನ್ನು ಈ ಚಿತ್ರ ಬಿಚ್ಚಿಡಲಿದೆ. IAF ಪೈಲೆಟ್ ಆಗಲು ಅವರು ಪಟ್ಟ ಕಷ್ಟ, ಪರಿಶ್ರಮ ಮತ್ತು ಪೈಲೆಟ್ ಆದ ಬಳಿಕ ದೇಶಕ್ಕಾಗಿ ಅವರು ಸಲ್ಲಿಸಿದ ಸೇವೆಯ ಕಥೆಯನ್ನು ಹೊಂದಿದೆ. ಭಾರತೀಯ ವಾಯುಪಡೆಯಲ್ಲಿ ಮಹಿಳೆಯರಿಗೂ ಪೈಲೆಟ್ ಆಗುವ ಅವಕಾಶ ದೊರೆತಿದ್ದು ಕಥೆಯ ಪ್ರಮುಖಾಂಶವಾಗಿದೆ. ಸಿನಿಮಾಗೆ ಶಾಶ್ವತ್ ಸಚ್‌ದೇವ್ ಸಂಗೀತ ಸಂಯೋಜಿಸಿದ್ದು, ಕುಮಾರ್ ಸಾಹಿತ್ಯ ಬರೆದಿದ್ದಾರೆ. ಚಿತ್ರದಲ್ಲಿ ಅನ್ಶುಲ್ ಚೌಹಾಣ್, ವರುಣ್ ಮಿತ್ರ, ವೀಣಾ ನಾಯರ್, ಮಿರ್ಕೊ ಕ್ವೈನಿ, ರೋಹೆದ್ ಖಾನ್ ಮತ್ತು ಅನುಜ್ ಖುರಾನಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾ ಇದೇ ಅಕ್ಟೋಬರ್ 27ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.