ಬಿಗ್‌ಬಾಸ್‌ ವೀಕೆಂಡ್‌ ಪಂಚಾಯತಿಯಲ್ಲಿ ನಿರೂಪಕ ಸುದೀಪ್‌ ಅವರು ಸ್ಪರ್ಧಿ ತುಕಾಲಿ ಸಂತೋಷ್‌ ಅವರ ನಡೆಯನ್ನು ಖಂಡಿಸಿದರು. ಇದು ಡ್ರೋಣ್‌ ಪ್ರತಾಪ್‌ ಅವರ ಕುರಿತು ಪ್ರಸಂಗ. ಒಂದು ಕತೆಯ ಮೂಲಕ ಘಟನೆಯನ್ನು ಪ್ರಸ್ತಾಪಿಸಿದ ಸುದೀಪ್‌ ತುಕಾಲಿ ಸಂತೋಷ್‌ ಅವರಿಗೆ ತಪ್ಪನ್ನು ಮನವರಿಕೆ ಮಾಡಿಕೊಟ್ಟರು.

Bigg Boss ವೀಕೆಂಡ್‌ ‘ಕಿಚ್ಚನ ಪಂಚಾಯಿತಿ’ಯಲ್ಲಿ ಹ್ಯಾಂಡ್‌ಸಮ್‌ ಲುಕ್‌ನಲ್ಲಿ ಕಾಣಿಸಿಕೊಂಡ ಸುದೀಪ್‌ ನಗುನಗುತ್ತಲೇ ಎಲ್ಲರನ್ನೂ ಮಾತನಾಡಿಸಿ, ಕಾಲೆಳೆಯುತ್ತಲೇ ಕಿವಿಮಾತನ್ನೂ ಹೇಳಿದರು. ಎಲ್ಲ ಸ್ಪರ್ಧಿಗಳ ವೀಕ್‌ನೆಸ್‌ನಗಳನ್ನು, ಬಿಗ್‌ಬಾಸ್ ಮನೆಯಲ್ಲಿ ನಡೆದ ತಪ್ಪುಗಳನ್ನು, ಸಮರ್ಥರು, ಅಸಮರ್ಥರ ನಡುವಿನ ವ್ಯತ್ಯಾಸಗಳನ್ನು ಸೂಚ್ಯವಾಗಿ ಹೇಳಿದರು. ಬಿಗ್‌ಬಾಸ್‌ ರೂಲ್ಸ್‌ ಬಗ್ಗೆ ಎಚ್ಚರಿಸಿದರು. ಶನಿವಾರದ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್‌ ಅವರು ಎಲ್ಲ ಸ್ಪರ್ಧಿಗಳನ್ನು ಮಾತನಾಡಿಸಿ, ಅವರ ಅನುಭಗಳನ್ನು ಹಂಚಿಕೊಂಡರು. ಮನೆಯೊಳಗಿನ ಸ್ಪರ್ಧಿಗಳಿಂದಲೇ ಅವರ ವರ್ತನೆಯ ಕುರಿತು ವಿಶ್ಲೇಷಣೆ ನಡೆಸಿದರು.

ಡ್ರೋಣ್ ಪ್ರತಾಪ್ ಅವರ ಘಟನೆಯನ್ನು ಸುದೀಪ್‌ ಪ್ರಸ್ತಾಪಿಸಿದ್ದು ಒಂದು ಕಥೆಯ ಮೂಲಕ. ‘ಒಬ್ಬ ತಪ್ಪಿತಸ್ಥ ತಪ್ಪು ಮಾಡಿದಾನೆ. ಭಗವಂತ ಅವನಿಗೆ ಶಿಕ್ಷೆ ಕೊಟ್ಟು ನಂತರ ಕ್ಷಮಿಸುತ್ತಾನೆ. ಆದರೆ ತಪ್ಪಿತಸ್ಥ ಹೊರಗೆ ಹೋದಮೇಲೆ ಸಮಾಜ ಅವನನ್ನು ಕಳ್ಳ ಸುಳ್ಳ ಎಂದೇ ಗುರುತಿಸುತ್ತದೆ. ಭಗವಂತ ಕ್ಷಮಿಸಿದವನನ್ನು ಸಮಾಜ ದೂಷಿಸುತ್ತದೆ. ಅದೊಂದು ರೀತಿಯ ವ್ಯಕ್ತಿಯ ಕೊಲೆ’ ಎಂದರು ಸುದೀಪ್‌. ‘ಈ ಕಥೆಯಲ್ಲಿ ಭಗವಂತ ಯಾರು? ತಪ್ಪಿತಸ್ಥ ಯಾರು? ಸಮಾಜ ಯಾರು?’ ಎಂಬ ಪ್ರಶ್ನೆ ಕಿಚ್ಚನ ಬಾಯಿಯಿಂದ ಹೊರಬೀಳುತ್ತಿದ್ದಂತೆಯೇ ಸ್ಪರ್ಧಿಗಳಿಗೆ ಅವರು ಯಾವುದರ ಬಗ್ಗೆ ಮಾತಾಡುತ್ತಿದ್ದಾರೆ ಎಂದು ತಿಳಿದುಬಿಟ್ಟಿತು.

https://www.jiocinema.com/videos/first-panchayati-with-kichcha-sudeep/3831325

ಕಿಚ್ಚ ಈ ಕಥೆಯನ್ನು ಹೇಳಿದ್ದು ಡ್ರೋಣ್ ಪ್ರತಾಪ್ ವಿಷಯಕ್ಕೆ. ಅವರ ಬಗ್ಗೆ ವಾರವಿಡೀ, ಸಮಯ ಸಿಕ್ಕಾಗೆಲ್ಲ, ಅವಕಾಶವಾದಾಗಲೆಲ್ಲ ಆಡಿಕೊಂಡು ನಗುತ್ತಿದ್ದ, ವ್ಯಂಗ್ಯ ಮಾಡುತ್ತಿದ್ದ ತುಕಾಲಿ ಸಂತೋಷ್ ಅವರನ್ನು ಸುದೀಪ್ ಕ್ಲಾಸ್ ತೆಗೆದುಕೊಂಡರು. ‘ಒಬ್ಬ ವ್ಯಕ್ತಿಯನ್ನು ಆಡಿಕೊಂಡು ಉಳಿದವರನ್ನು ನಗಿಸುವ ವ್ಯಕ್ತಿ ಗುಡ್ ಜೋಕರ್ ಅಲ್ಲ!’ ಎಂದು ಎಚ್ಚರಿಸಿದರು. ‘ಪ್ರತಿಯೊಬ್ಬ ವ್ಯಕ್ತಿಯೊಳಗೂ ಅವನ ಸತ್ಯ ಅವನ ನೋವು ಅವನಲ್ಲಿ ಇರುತ್ತದೆ. ಅದನ್ನು ನಾವು ಒಪ್ಪಿಕೊಳ್ಳಬೇಕು ಅಂತೇನಿಲ್ಲ. ಆದರೆ ಕನಿಷ್ಠ ನಾವು ಮಾಡಬಹುದಾದದ್ದು ಎಂದರೆ ಸುಮ್ಮನಿರುವುದು. ತಪ್ಪು ಮಾಡಿದ ವ್ಯಕ್ತಿ ಶಿಕ್ಷೆ ಅನುಭವಿಸುತ್ತಾನೆ. ಆದರೆ ಆ ಶಿಕ್ಷೆ ನೀಡುವುದಕ್ಕೆ ನೀವ್ಯಾರು? ಇನ್ನೊಬ್ಬ ವ್ಯಕ್ತಿಯನ್ನು ತಮಾಷೆ ಮಾಡಿ ಬೇರೆಯವರನ್ನು ನಗಿಸುವುದು ಎಷ್ಟು ಸರಿ? ಒಬ್ಬ ವ್ಯಕ್ತಿಯ ಅಳು ಹೇಗೆ ನಗುವಾಗುತ್ತದೆ?’ ಕಿಚ್ಚ ಒಂದರ ಹಿಂದೊಂದು ಪ್ರಶ್ನೆ ಕೇಳುತ್ತಿದ್ದ ಹಾಗೆಯೇ ತುಕಾಲಿ ಸಂತೋಷ್ ಮುಖದಲ್ಲಿ ಪಶ್ಚಾತ್ತಾಪ ಕಾಣಿಸಿಕೊಂಡಿತು. ಡ್ರೋಣ್ ಪ್ರತಾಪ್ ಕಣ್ಣುಗಳಲ್ಲಿ ನೀರು ತುಂಬಿಕೊಂಡಿತು. ತುಕಾಲಿ ಅವರು ಸುದೀಪ್ ಎದುರಿನಲ್ಲಿಯೇ ಪ್ರತಾಪ್‌ಗೆ ಕ್ಷಮೆಯನ್ನೂ ಕೇಳಿದರು.

ಕೊನೆಯಲ್ಲಿ, ‘ಒಳ್ಳೆಯ ರೀತಿಯಿಂದಲೇ ಎಲ್ಲರನ್ನೂ ನಗಿಸಬಹುದು. ಅದನ್ನು ನೀವು ಚೆನ್ನಾಗಿಯೇ ಮಾಡುತ್ತೀರಿ. ಅದನ್ನು ಮುಂದುವರಿಸಿ. ಆದರೆ ಇನ್ನೊಬ್ಬ ವ್ಯಕ್ತಿಯನ್ನು ಎದುರಿಟ್ಟುಕೊಂಡು, ಅವರನ್ನು ತಮಾಷೆ ಮಾಡಿಕೊಂಡು ಉಳಿದ ಹತ್ತು ವ್ಯಕ್ತಿಗಳನ್ನು ನಗಿಸುವುದರಲ್ಲಿ ಯಾವ ದೊಡ್ಡತನವೂ ಇಲ್ಲ’ ಎಂಬ ಹಿತವಚನ ಹೇಳಿದರು. ನಂತರ ಪ್ರತಾಪ್‌ ಅವರಿಗೆ ಮಾತನಾಡಲು ಅವಕಾಶ ಕೊಟ್ಟರು. ‘ಮೊದಲ ದಿನ ಬಂದಾಗ ನನ್ನ ಮನಸಲ್ಲಿ ಏನೂ ಇರಲಿಲ್ಲ. ಆದರೆ ಎಲ್ಲರೂ ಒಟ್ಟಿಗೇ ಸೇರಿದಾಗ ನನ್ನನ್ನು ನಾನು ನಿರೂಪಿಸಿಕೊಳ್ಳಬೇಕು ಎಂದು ಅನಿಸಿತು’ ಎಂದರು ಪ್ರತಾಪ್. ‘ನಮ್ಮ ತಪ್ಪುಗಳು ನಮಗೆ ಮಾತ್ರ ಗೊತ್ತಿರುತ್ತದೆ. ನಿಮ್ಮ ಒಳಗಡೆ ಒಂದು ಕಾನ್ಪ್ಲಿಕ್ಟ್ ಇರಬಹುದು, ಅದನ್ನು ಸರಿಯಾಗಿ ಫೇಸ್ ಮಾಡಿ. ಆ ಧೈರ್ಯ ನಿಮಗೆ ಸಿಗಲಿ. ಅದು ನಿಮಗೆ ಬಿಗ್‌ಬಾಸ್ ಮನೆಯೊಳಗೆ ಸಿಗಲಿ’ ಎಂದು ಕಿಚ್ಚ, ಪ್ರತಾಪ್‌ಗೆ ಕಿವಿಮಾತು ಹೇಳಿದರು.

LEAVE A REPLY

Connect with

Please enter your comment!
Please enter your name here